ಬಿಜೆಪಿಯು ಭಾರತದ ಸಂವಿಧಾನ ಬದಲಾಯಿಸಲು ಪ್ರಯತ್ನಿಸುತ್ತಿದೆ ಎಂಬ ವಿಪಕ್ಷಗಳ ಆರೋಪವನ್ನು ತಳ್ಳಿಹಾಕಿದ ಪ್ರಧಾನಿ ನರೇಂದ್ರ ಮೋದಿ “ಶೇ.90ರಷ್ಟು ಸಂವಿಧಾನ ಸಭೆ ಸದಸ್ಯರು ಸನಾತನಿಗಳು ಆಗಿದ್ದರು, ಸಂವಿಧಾನವನ್ನು ರಚಿಸಿದ ಬಾಬಾ ಸಾಹೇಬ್ ಬಿಆರ್ ಅಂಬೇಡ್ಕರ್ ಅವರು ಕೂಡಾ ಸಂವಿಧಾನವನ್ನು ಬದಲಿಸಲು ಸಾಧ್ಯವಿಲ್ಲ” ಎಂದು ಹೇಳಿದರು.
ಬಿಹಾರದ ಗಯಾದಲ್ಲಿ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು, “ಬಿಜೆಪಿ ಸತತ ಮೂರನೇ ಅವಧಿಗೆ ಅಧಿಕಾರಕ್ಕೆ ಬಂದರೆ ಸಂವಿಧಾನವನ್ನು ಬದಲಾಯಿಸುತ್ತದೆ ಎಂದು ಸುಳ್ಳುಗಳನ್ನು ಹರಡುವ ಮೂಲಕ ಸಂವಿಧಾನವನ್ನು ರಾಜಕೀಯ ಅಸ್ತ್ರವಾಗಿ ಬಳಸುತ್ತಿದ್ದಾರೆ” ಎಂದು ಆರೋಪಿಸಿದರು.
ಇದನ್ನು ಓದಿದ್ದೀರಾ? ರಾಜಸ್ಥಾನ | ಕೆಲವು ಕಠಿಣ ನಿರ್ಧಾರ ತಳೆಯಬೇಕಿದೆ: ಸಂವಿಧಾನ ಬದಲಾವಣೆ ಬಗ್ಗೆ ಮಾತನಾಡಿದ ಬಿಜೆಪಿ ಅಭ್ಯರ್ಥಿ!
“ಡಾ ರಾಜೇಂದ್ರ ಪ್ರಸಾದ್ ಅವರು ಸಂವಿಧಾನ ರಚನಾ ಸಭೆಯ ನೇತೃತ್ವ ವಹಿಸಿದ್ದರು. ಸನಾತನಿಗಳು ಬೆಂಬಲಿಸಿದರು” ಎಂದು ಇದೇ ಸಂದರ್ಭದಲ್ಲಿ ಮೋದಿ ಹೇಳಿದ್ದಾರೆ. “ಸಂವಿಧಾನ ಸಭೆಯಲ್ಲಿ, 80-90 ಪ್ರತಿಶತಕ್ಕೂ ಹೆಚ್ಚು ಸದಸ್ಯರು ಸನಾತನಿಗಳು, ಅವರು ಅಂಬೇಡ್ಕರ್ ಅವರಿಗೆ ಭಾರತದ ಅಂತಹ ಶ್ರೇಷ್ಠ ಸಂವಿಧಾನವನ್ನು ರಚಿಸಲು ತಮ್ಮ ಬೆಂಬಲವನ್ನು ನೀಡಿದರು” ಎಂದು ಪ್ರಧಾನಿ ಮೋದಿ ಹೇಳಿಕೊಂಡಿದ್ದಾರೆ.
“ಸಂವಿಧಾನವನ್ನು ರಾಜಕೀಯ ಶಕ್ತಿಯನ್ನಾಗಿ ಬಳಸಿಕೊಳ್ಳುವವರು ಸುಳ್ಳುಗಳನ್ನು ಹರಡುವುದನ್ನು ನಿಲ್ಲಿಸಿ. ಸಂವಿಧಾನವನ್ನು ರಚಿಸಿದ ಡಾ.ಬಿ.ಆರ್. ಅಂಬೇಡ್ಕರ್ ಕೂಡ ಭಾರತದ ಸಂವಿಧಾನವನ್ನು ಬದಲಾಯಿಸಲು ಸಾಧ್ಯವಿಲ್ಲ. ಸಂವಿಧಾನವನ್ನು ಅವಮಾನಿಸುವವರಿಗೆ ಸಾರ್ವಜನಿಕ ಜೀವನದಲ್ಲಿ ಉಳಿಯುವ ಹಕ್ಕಿಲ್ಲ” ಎಂದಿದ್ದಾರೆ.
ಇದನ್ನು ಓದಿದ್ದೀರಾ? ಅನಂತ ಕುಮಾರ್‌ರವರ ಸಂವಿಧಾನ ಬದಲಾವಣೆ ಹೇಳಿಕೆ ಮನುಸ್ಮೃತಿ ಜಾರಿಯ ಆಲೋಚನೆ: ಸಿಎಂ ಸಿದ್ದರಾಮಯ್ಯ
ಈ ಹಿಂದೆ ಉತ್ತರ ಕನ್ನಡ ಸಂಸದ ಅನಂತ್ ಕುಮಾರ್ ಹೆಗಡೆ ಮತ್ತು ಬಿಜೆಪಿ ನಾಯಕಿ ಜ್ಯೋತಿ ಮಿರ್ಧಾ ಸಂವಿಧಾನ ಬದಲಾವಣೆಯ ಬಗ್ಗೆ ಹೇಳಿಕೆಯನ್ನು ನೀಡಿದ್ದರು. “ಸಂವಿಧಾನ ಬದಲಾವಣೆ ಮಾಡಬೇಕಾದರೆ 400 ಸ್ಥಾನವನ್ನು ನಾವು ಗೆಲ್ಲಬೇಕು” ಎಂದು ಅನಂತ್ ಕುಮಾರ್ ಹೆಗಡೆ ಹೇಳಿಕೆ ನೀಡಿದ್ದರು. ಇದೀಗ ಬಿಜೆಪಿಯ ಫೈಜಾಬಾದ್ ಸಂಸದ ಲಲ್ಲು ಸಿಂಗ್ ಅವರು “ಸಂವಿಧಾನದ ಬದಲಾವಣೆಗೆ ಬಿಜೆಪಿಗೆ ಮೂರನೇ ಎರಡರಷ್ಟು ಬಹುಮತದ ಅಗತ್ಯವಿದೆ” ಎಂದು ಹೇಳಿದ್ದಾರೆ.
ಎಪ್ರಿಲ್ 13 ರಂದು ಅಯೋಧ್ಯೆಯ ಮಿಲ್ಕಿಪುರ್ ತೆಹಸಿಲ್‌ನಲ್ಲಿ ಮಾತನಾಡಿದ ಲಲ್ಲು ಸಿಂಗ್ ಈ ಹೇಳಿಕೆ ನೀಡಿದ್ದು ಇದರ ವಿಡಿಯೋ ಈಗ ವೈರಲ್ ಆಗಿದೆ. “ಲೋಕಸಭೆ ಚುನಾವಣೆಯಲ್ಲಿ 272 ಸಂಸದರಿದ್ದರೆ ಸರ್ಕಾರ ರಚಿಸಬಹುದು, ಆದರೆ ಸಂವಿಧಾನಕ್ಕೆ ತಿದ್ದುಪಡಿ ಮಾಡಲು ಅಥವಾ ಹೊಸ ಸಂವಿಧಾನವನ್ನು ಪಡೆಯಬೇಕಿದ್ದರೆ ನಮಗೆ ಮೂರನೇ ಎರಡರಷ್ಟು ಬಹುಮತ ಬೇಕು” ಎಂದು ಬಿಜೆಪಿ ಸಂಸದ ಹೇಳಿದ್ದಾರೆ.