ಬಿರು ಬಿಸಿಲಿನ ನಡುವೆ ದೇಶದೆಲ್ಲೆಡೆ ಚುನಾವಣೆ ಕಾವು ಜೋರಾಗಿದೆ. ಏಪ್ರಿಲ್ 19ರಂದು ಮೊದಲ ಹಂತದ ಚುನಾವಣೆ ನಡೆಯಲಿದೆ. ಈ ಹಿನ್ನೆಲೆ, ಏಪ್ರಿಲ್ 17ರಂದು ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ.
ಈ ಬಾರಿ ಲೋಕಸಭಾ ಚುನಾವಣೆಯು ಒಟ್ಟು 7 ಹಂತಗಳಲ್ಲಿ ನಡೆಯಲಿದ್ದು, ಏಪ್ರಿಲ್ 19ರಿಂದ ಮತದಾನ ನಡೆಯಲಿದೆ. ಜೂನ್ 4 ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.
ಏ.19ರಂದು (ಶುಕ್ರವಾರ) ಮತದಾನ ನಡೆಯಲಿದ್ದು, ಗುರುವಾರ ಸಂಜೆವರೆಗೆ ಅಭ್ಯರ್ಥಿಗಳು ಮತ್ತು ಕಾರ್ಯಕರ್ತರು ಮತದಾರರ ಮನೆಮನೆಗೆ ತೆರಳಿ ಪ್ರಚಾರ ನಡೆಸಬಹುದಾಗಿದೆ. ಈ ಮೊದಲ ಹಂತದ ಚುನಾವಣೆಗಳು 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡಂತೆ ಒಟ್ಟು 102 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಜೂ.4ರಂದು ಎಲ್ಲ 7 ಹಂತದ ಚುನಾವಣೆ ಮುಗಿದ ಬಳಿಕ ಒಟ್ಟಿಗೆ ಫಲಿತಾಂಶ ಪ್ರಕಟವಾಗಲಿದೆ.
ಮೊದಲ ಹಂತದಲ್ಲಿ ತಮಿಳುನಾಡಿನ 39 ಕ್ಷೇತ್ರಗಳು, ರಾಜಸ್ಥಾನದ 12 ಲೋಕಸಭಾ ಕ್ಷೇತ್ರಗಳು, ಉತ್ತರ ಪ್ರದೇಶದ 8 ಕ್ಷೇತ್ರಗಳು, ಮಧ್ಯ ಪ್ರದೇಶದ 6 ಕ್ಷೇತ್ರಗಳು, ಉತ್ತರಾಖಂಡ ಮತ್ತು ಮಹಾರಾಷ್ಟ್ರ, ಅಸ್ಸಾಂನ ತಲಾ 5 ಕ್ಷೇತ್ರಗಳು, ಬಿಹಾರದ 4 ಕ್ಷೇತ್ರ, ಪಶ್ಚಿಮ ಬಂಗಾಳದ 3 ಕ್ಷೇತ್ರ, ಮಣಿಪುರ, ಅರುಣಾಚಲ ಪ್ರದೇಶ, ಮೇಘಾಲಯ ತಲಾ 2 ಕ್ಷೇತ್ರಗಳು, ಪುದುಚೆರಿ, ಅರುಣಾಚಲ ಪ್ರದೇಶ, ಛತ್ತೀಸ್ಘಡ, ಜಮ್ಮು ಕಾಶ್ಮೀರ, ಲಡಾಕ್, ಲಕ್ಷದೀಪ, ಮಿಜೋರಾಮ್, ನಾಗಾಲ್ಯಾಂಡ್, ಸಿಕ್ಕಿಂ ಮತ್ತು ತ್ರಿಪುರದ ತಲಾ 1 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.
ಈ ಸುದ್ದಿ ಓದಿದ್ದೀರಾ? ವಲಸೆ ಕಾರ್ಮಿಕರ ಮಕ್ಕಳ ಮಾರ್ಗದರ್ಶಿಯಾಗಿದ್ದ ಬೆಂಗಳೂರು ಎಸ್ಐ ಈಗ ಐಎಎಸ್ ಅಧಿಕಾರಿ
ಮೊದಲ ಹಂತದ ಚುನಾವಣೆಗೆ 20 ರಾಜ್ಯಗಳಲ್ಲಿ ಮಾ.20 ರಂದು ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಮಾ.27ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿತ್ತು. ಬಿಹಾರದಲ್ಲಿ ಮಾತ್ರ ಹಬ್ಬದ ಕಾರಣಕ್ಕೆ ಮೊದಲ ಹಂತದ ಚುನಾವಣೆ ನಡೆಯುವ ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಕೆಗೆ ಮಾರ್ಚ್ 28 ಕೊನೆಯ ದಿನವಾಗಿತ್ತು. ಬಿಹಾರದಲ್ಲಿ ಮಾರ್ಚ್ 30ರಂದು ನಾಮಪತ್ರಗಳ ಪರಿಶೀಲನೆ ನಡೆಸಿ, ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆಯಲು ಏಪ್ರಿಲ್ 2 ಕೊನೆಯ ದಿನವಾಗಿತ್ತು.