ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನ ಮೇಲೆ 50ಕ್ಕೂ ಹೆಚ್ಚು ಸಿಸಿಬಿ ಅಧಿಕಾರಿಗಳು ಮಂಗಳವಾರ ದಾಳಿ ನಡೆಸಿ, ಪರಿಶೀಲನೆ ನಡೆಸಿದ್ದಾರೆ.
ಲೋಕಸಭಾ ಚುನಾವಣೆ ಆರಂಭಕ್ಕೂ ಕೆಲವೇ ದಿನಗಳ ಮುಂಚೆ ಈ ದಾಳಿ ನಡೆದಿದೆ. ಚುನಾವಣೆ ಹಿನ್ನೆಲೆ, ಮತದಾರರ ಮೇಲೆ ಪ್ರಭಾವ ಬೀರಲು ಜೈಲಿನಿಂದಲೇ ಸಂಚು ಹೂಡಲಾಗಿದೆ ಎಂಬ ಸುಳಿವಿನ ಮೇರೆಗೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಮಂಗಳವಾರ ಬೆಳಿಗ್ಗೆ 8ಗಂಟೆ ಸುಮಾರು 50ಕ್ಕೂ ಹೆಚ್ಚು ಸಿಸಿಬಿ ಅಧಿಕಾರಿಗಳ ತಂಡ ಜೈಲಿನ ಎಲ್ಲ ಬ್ಯಾರಕ್ಗಳ ಮೇಲೆ ದಾಳಿ ನಡೆಸಿದ್ದಾರೆ. ಬ್ಯಾರಕ್ನಲ್ಲಿದ್ದ ಕೈದಿಗಳ ಬಳಿಯಿಂದ ₹40 ಸಾವಿರ ನಗದು, ಮೂರು ಚಾಕು ಹಾಗೂ ತಂಬಾಕು ಉತ್ಪನ್ನಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮುಂದಿನ ಕೆಲ ದಿನಗಳಲ್ಲಿ ಲೋಕಸಭಾ ಚುನಾವಣೆ ಆರಂಭವಾಗಿದೆ. ಈ ಬೆನ್ನಲ್ಲೇ ಜೈಲಿನಲ್ಲಿರುವ ಕೆಲ ರೌಡಿಶೀಟರ್ಗಳು, ತಮ್ಮ ಸಹಚರರ ಮೂಲಕ ಮತದಾರರ ಮೇಲೆ ಪ್ರಭಾವ ಬೀರುವ ಮಾಹಿತಿ ಇತ್ತು. ಹೀಗಾಗಿ, ಚುನಾವಣೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು, ಕಾನೂನು ಬಾಹಿರ ಚಟುವಟಿಕೆಗಳು ನಡೆಯ ಬಾರದು, ಮತದಾರರಿಗೆ ಯಾವುದೇ ತೊಂದರೆ ಉಂಟಾಗಬಾರದು ಎಂಬ ಉದ್ದೇಶದಿಂದ ದಾಳಿ ನಡೆಸಲಾಗಿದೆ.
ಜೈಲಿನಲ್ಲಿ ಮೂರು ಚಾಕು ಹಾಗೂ ನಗದು ಪತ್ತೆಯಾಗಿದ್ದು, ಪರಪ್ಪನ ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಸುದ್ದಿ ಓದಿದ್ದೀರಾ? ಮೊದಲ ಹಂತದ ಚುನಾವಣೆ | ಏಪ್ರಿಲ್ 17ರಂದು ಬಹಿರಂಗ ಪ್ರಚಾರಕ್ಕೆ ತೆರೆ
ಜೈಲಿನ ಒಳಗಿನಿಂದಲೇ ಚುನಾವಣೆ ಮೇಲೆ ಪ್ರಭಾವ ಬೀರಲು ಪಿತೂರಿ, ಅಕ್ರಮ ಚಟುವಟಿಕೆಗಳು, ಡ್ರಗ್ಸ್ ಬಳಕೆ, ಪೂರೈಕೆ ಹಾಗೂ ಮೊಬೈಲ್ ಬಳಕೆಯನ್ನು ಪರಿಶೀಲನೆ ನಡೆಸಲು ಈ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಗದು, ತಂಬಾಕು ಉತ್ಪನ್ನಗಳು ಮತ್ತು ಚಾಕುಗಳನ್ನು ವಶಪಡಿಸಿಕೊಳ್ಳಲಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ ಎಂದೂ ಮೂಲಗಳು ತಿಳಿಸಿವೆ.