ಲೋಕಸಭಾ ಚುನಾವಣೆ 2024ರಲ್ಲಿ ‘ಮೋದಿ ಅಲೆ ಇಲ್ಲ’. ಮೋದಿ ಹೆಸರಿನಲ್ಲಿ ಚುನಾವಣೆ ಗೆಲ್ಲುವುದು ಸಾಧ್ಯವಿಲ್ಲ ಎಂದು ಆಂಧ್ರಪ್ರದೇಶದ ಅಮರಾವತಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನವನೀತ್ ರಾಣಾ ಹೇಳಿದ್ದಾರೆ.
“ನಾವು ಈ ಚುನಾವಣೆಯನ್ನು ಗ್ರಾಮ ಪಂಚಾಯತಿ ಚುನಾವಣೆಯಂತೆ ಎದುರಿಸಬೇಕಾಗುತ್ತದೆ. ಮಧ್ಯಾಹ್ನದ ವೇಳೆಗೆ ಎಲ್ಲ ಮತದಾರರನ್ನು ಬೂತ್‌ಗೆ ಕರೆತಂದು ಮತ ಹಾಕುವಂತೆ ಹೇಳಬೇಕಿದೆ. ಮೋದಿ ಅಲೆ ಇದೆ ಎಂಬ ಭ್ರಮೆಯಲ್ಲಿ ಚುನಾವಣೆ ಎದುರಿಸಲಾಗದು” ಎಂದು ರಾಣಾ ಹೇಳಿದ್ದಾರೆ.
“ಕಳೆದ ಚುನಾವಣೆಯಲ್ಲಿ ಮೋದಿ ಅಲೆಯ ನಡುವೆಯೂ ನಾನು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದೆ” ಎಂದು ಅವರು ಹೇಳಿಕೊಂಡಿದ್ದಾರೆ. ಅವರು ಇತ್ತೀಚೆಗೆ ಬಿಜೆಪಿ ಸೇರಿದ್ದು, ಕೇಸರಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ.
ಲೋಕಸಭಾ ಚುನಾವಣೆಯು 7 ಹಂತಗಳಲ್ಲಿ ನಡೆಯಲಿದೆ. ಏಪ್ರಿಲ್ 19ರಂದು ಮೊದಲ ಹಂತದ ಚುನಾವಣೆ ಆರಂಭವಾಗಲಿದೆ. ಜೂನ್ 4ರಂದು ಮತ ಎಣಿಕೆ ನಡೆಯಲಿದೆ.