ಯುನೈಟೆಡ್ ಅರಬ್ ಎಮಿರೆಟ್ಸ್ (ಯುಎಇ)ನಲ್ಲಿ ಮಂಗಳವಾರ ಸುರಿದ ಧಾರಾಕಾರ ಮಳೆಗೆ ದುಬೈ ಸೇರಿದಂತೆ ಹಲವಾರು ನಗರದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಇತ್ತೀಚಿನ ದಿನಗಳಲ್ಲಿ ಒಮಾನ್‌ನಲ್ಲಿ ಭಾರೀ ಮಳೆಯಿಂದ ಪ್ರವಾಹ ಉಂಟಾಗಿ 18 ಜನರು ಸಾವನ್ನಪ್ಪಿದ್ದಾರೆ. ಇವರಲ್ಲಿ 10 ಶಾಲಾ ಮಕ್ಕಳ ವಾಹನ ಪ್ರವಾಹದಲ್ಲಿ ಕೊಚ್ಚಿ ಹೋಗಿದೆ.
ದುಬೈನಲ್ಲಿ ಕಳೆದ 24 ಗಂಟೆಗಳಿಂದ ಭಾರೀ ಮಳೆಯಾಗುತ್ತಿದೆ. ವಿಶ್ವದ ಅತ್ಯಂತ ಜನದಟ್ಟಣೆಯ ವಿಮಾನ ನಿಲ್ದಾಣವೆಂದೇ ಹೆಸರಾಗಿರುವ ದುಬೈನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಹೈವೆಗಳು ಹಾಗೂ ಹಲವಾರು ರಸ್ತೆಗಳು ಸಂಪೂರ್ಣ ಜಲಾವೃತವಾಗಿವೆ. ಮಳೆ ಬುಧವಾರವೂ ಮುಂದುವರಿಯುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರೀ ಮಳೆಯ ಹಿನ್ನೆಲೆ, ಜನರು ತಮ್ಮ ಮನೆಗಳಲ್ಲಿ ಇರುವಂತೆ ಯುಎಇ ಆಡಳಿತವು ಮಂಗಳವಾರ ವಿನಂತಿಸಿದೆ. ಶಾಲೆಗಳು ಆನ್‌ಲೈನ್‌ನಲ್ಲಿ ತರಗತಿಗಳನ್ನು ನಡೆಸುತ್ತಿವೆ. ಸರ್ಕಾರಿ ನೌಕರರಿಗೂ ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಲಾಗಿದೆ. ಹೆದ್ದಾರಿಗಳು ಮತ್ತು ರಸ್ತೆಗಳಿಂದ ನೀರನ್ನು ತೆಗೆದುಹಾಕಲು ಆಡಳಿತವು ಬೃಹತ್ ಪಂಪ್‌ಗಳನ್ನು ಅಳವಡಿಸಬೇಕಾಗಿದೆ.
The Dubai flood ain’t joke. pic.twitter.com/VzKUpFgOoN
— Chude Nnamdi (@chude__) April 16, 2024
ದುಬೈನಲ್ಲಿ ಸಾಮಾನ್ಯವಾಗಿ ಒಂದು ವರ್ಷದಲ್ಲಿ 12.7 ಸೇಂ.ಮೀ (ಐದು ಇಂಚು)ನಷ್ಟು ಮಳೆಯಾಗುತ್ತದೆ. ಆದರೆ, ಮಂಗಳವಾರ ಸುರಿದ ಈ ಮಳೆ ಆ ಮೊತ್ತದ ಸಮನಾಗಿದೆ. ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಸುರಿದ ಮಳೆ 75 ವರ್ಷಗಳಲ್ಲಿ ಅತಿದೊಡ್ಡ ಮಳೆಯಾಗಿದೆ ಎಂದು ದೇಶದ ರಾಷ್ಟ್ರೀಯ ಹವಾಮಾನ ಕೇಂದ್ರ ಮತ್ತು ಸರ್ಕಾರ ಸಾಮಾಜಿಕ ಜಾಲತಾಣದಲ್ಲಿ ಘೋಷಿಸಿವೆ.
ತೀವ್ರವಾದ ಚಂಡಮಾರುತದ ಕಾರಣ ಮಂಗಳವಾರ ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ವಿಮಾನಗಳನ್ನು ಹಿಂತಿರುಗಿಸಲಾಗಿದೆ. ಅಲ್ಲದೇ, ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ವಿಮಾನ ನಿಲ್ದಾಣಕ್ಕೆ ತೆರಳುವ ರಸ್ತೆಗಳಲ್ಲಿ ಪ್ರವಾಹ ಸ್ಥಿತಿ ಉಂಟಾಗಿದೆ ಎಂದು ವಿಮಾನ ನಿಲ್ದಾಣವು ತಿಳಿಸಿದೆ.
“ದುಬೈನಲ್ಲಿ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್‌ನಾದ್ಯಂತ ಬುಧವಾರದವರೆಗೆ ರಾತ್ರಿಯಿಡೀ ಬಲವಾದ ಗಾಳಿ ಮತ್ತು ಆಲಿಕಲ್ಲುಗಳೊಂದಿಗೆ ಭಾರೀ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ” ಎಂದು ಹವಾಮಾನ ಇಲಾಖೆ ತಿಳಿಸಿದೆ.
The torrents in Oman are worse than in Dubai. No jokes..pic.twitter.com/O6DGA8sFMe
— Henry Kabogo 💧 ❄ 🇰🇪 (@Kabogo_Henry) April 17, 2024
“ಯುಎಇ ಗಡಿಯಲ್ಲಿರುವ ಓಮನ್‌ನಲ್ಲಿ ಮಳೆಯ ಪ್ರವಾಹದಿಂದ ಕನಿಷ್ಠ 18 ಜನರು ಸಾವನ್ನಪ್ಪಿದ್ದಾರೆ. ಅಲ್ಲದೇ, 10 ಶಾಲಾ ಮಕ್ಕಳು ವಯಸ್ಕರೊಂದಿಗೆ ವಾಹನದಲ್ಲಿ ಕೊಚ್ಚಿಹೋಗಿದ್ದಾರೆ” ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.
ಈ ಸುದ್ದಿ ಓದಿದ್ದೀರಾ? ಐಪಿಎಲ್ | ವಿರಾಟ್ ಕೊಹ್ಲಿ ಬಳಿಕ ಅತಿ ಹೆಚ್ಚು ಶತಕ ಸಿಡಿಸಿದ ಬ್ಯಾಟರ್ ಜೋಸ್ ಬಟ್ಲರ್
ದುಬೈನಲ್ಲಿ ಹಲವೆಡೆ ರಾತ್ರಿಯಿಂದ ಪ್ರಾರಂಭವಾದ ಭಾರೀ ಮಳೆಯು ಪ್ರಮುಖ ಹೆದ್ದಾರಿಗಳನ್ನು ಜಲಾವೃತಗೊಳಿಸಿದೆ. ಇದರಿಂದ ಚಾಲಕರು ತಮ್ಮ ವಾಹನಗಳನ್ನು ರಸ್ತೆಮಾರ್ಗಗಳಲ್ಲಿ ಬಿಟ್ಟು ತೆರಳಿದ್ದಾರೆ ಎಂದು ಎಪಿ ವರದಿ ಮಾಡಿದೆ.
ಶುಷ್ಕ ಮರುಭೂಮಿಯ ಹವಾಮಾನವನ್ನು ಹೊಂದಿರುವ ಯುಎಇನಲ್ಲಿ ಮಳೆಯು ಅಪರೂಪವಾಗಿದೆ. ಬುಧವಾರದವರೆಗೆ ರಾತ್ರಿಯಿಡೀ ಬಲವಾದ ಗಾಳಿ ಮತ್ತು ಆಲಿಕಲ್ಲುಗಳೊಂದಿಗೆ ಭಾರೀ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ.