ಕಳೆದ ಬಾರಿ ಕೇವಲ ಮೂರು ಅಂಕಗಳಿಂದ ಯುಪಿಎಸ್‌ಸಿ ರ್‍ಯಾಂಕ್ ತಪ್ಪಿಸಿಕೊಂಡಿದ್ದ ಆಕಾಂಕ್ಷಿಯೊಬ್ಬರು ಈಬಾರಿ ನಿತ್ಯ ಅಭ್ಯಾಸದಿಂದ 101ನೇ ರ್‍ಯಾಂಕ್ ಪಡೆದು ಸಾಧನೆ ಮಾಡಿದ್ದಾರೆ.
ದಾವಣಗೆರೆಯ ಸೌಭಾಗ್ಯ ಎಸ್. ಬೀಳಗಿಮಠ ಅವರು ಯುಪಿಎಸ್‌ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿರುವ ಸೌಭಾಗ್ಯ ಅವರು 101ನೇ ರ್ಯಾಂಕ್ ಪಡೆಯುವ ಮೂಲಕ ಜಿಲ್ಲೆಗೆ ಹಾಗೂ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
ನಿತ್ಯವೂ ಆರರಿಂದ ಏಳು ಗಂಟೆ ಓದುತ್ತಿದ್ದ, ಪರೀಕ್ಷೆ ಹತ್ತಿರ ಅಂದರೆ ಎರಡು ತಿಂಗಳು ಇದ್ದ ವೇಳೆ ದಿನಕ್ಕೆ 10ರಿಂದ 11 ಗಂಟೆ ಅಭ್ಯಾಸ ಮಾಡುತ್ತಿದ್ದ ಸೌಭಾಗ್ಯ ಬೀಳಗಿಮಠ, ಯುಪಿಎಸ್‌ಸಿ ಪರೀಕ್ಷೆ ಮೊದಲ ಬಾರಿ ಬರೆದಿದ್ದಾಗ ಕೇವಲ ಮೂರು ಅಂಕಗಳಿಂದ ವಂಚಿತಳಾಗಿದ್ದರು. ಆದ್ರೆ, ಈ ಬಾರಿ ಆ ರೀತಿ ಆಗಿಲ್ಲ. ಹೆಚ್ಚಿನ ಅಂಕಗಳೇ ಬಂದಿವೆ.
ದಾವಣಗೆರೆ ನಗರದ ಆಂಜನೇಯ ಬಡಾವಣೆಯ ವಾಸಿಯಾದ ಶರಣಯ್ಯ ಸ್ವಾಮಿ ಹಾಗೂ ಶರಣಮ್ಮ ಅವರ ಪುತ್ರಿಯಾದ ಸೌಭಾಗ್ಯ ಎಸ್. ಬೀಳಗಿಮಠ ಅವರು, ರಾಜ್ಯಕ್ಕೆ 101ನೇ ರ್‍ಯಾಂಕ್ ಪಡೆದು ಟಾಪರ್ ಎನಿಸಿಕೊಂಡಿದ್ದಾರೆ.
ತಂದೆ ಶರಣಯ್ಯ ಸ್ವಾಮಿ ಅವರು ನರ್ಸರಿ ನಡೆಸುತ್ತಿದ್ದರೆ, ತಾಯಿ ಶರಣಮ್ಮ ಗೃಹಿಣಿಯಾಗಿದ್ದಾರೆ. ಯಾವುದೇ ಕೋಚಿಂಗ್ ಸೆಂಟರ್ ಮೊರೆ ಹೋಗದೇ ಸಾಧನೆ ಮಾಡಿರುವ ಸೌಭಾಗ್ಯ ಅವರಿಗೆ ಸ್ನೇಹಿತರು ಬಂಧುಗಳ ಶುಭಾಶಯಗಳ ಸುರಿಮಳೆ ಸುರಿಸಿದ್ದಾರೆ.
ದಾವಣಗೆರೆಯಲ್ಲಿ ಪಿಯುಸಿ ಓದಿದ್ದ ಸೌಭಾಗ್ಯ ಎಸ್. ಬೀಳಗಿಮಠ ಅವರು, 2018 ರಲ್ಲಿ ಪದವಿ ವ್ಯಾಸಂಗಕ್ಕೆ ಧಾರವಾಡಕ್ಕೆ ಹೋಗಿದ್ದರು. ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಬಿ.ಎಸ್ಸಿ ಅಗ್ರಿ ಪದವಿ ಪಡೆಯುತ್ತಿರುವ ಸೌಭಾಗ್ಯ ಎಸ್. ಬೀಳಗಿಮಠ ಅವರಿಗೆ ಯುಪಿಎಸ್ ಸಿ ಪರೀಕ್ಷೆ ತೇರ್ಗಡೆಯಾಗಬೇಕೆಂಬ ಕನಸಿತ್ತು. ಇನ್ನು ಯಾವುದೇ ಐಎಎಸ್ ಕೋಚಿಂಗ್ ಸೆಂಟರ್ ಗೆ ಹೋಗದೇ ಕಷ್ಟಪಟ್ಟು ಈಗ 101ನೇ ರ್ಯಾಂಕ್ ಪಡೆಯುವ ಮೂಲಕ ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿದ್ದಾರೆ.
ಯಾವುದೇ ತರಬೇತಿ ಸಂಸ್ಥೆಗೆ ಹೋಗಿ ತರಬೇತಿ ಪಡೆಯದೆ ಪ್ರಾಧ್ಯಾಪಕಿಯೊಬ್ಬರ ಮನೆಯಲ್ಲೇ ಉಳಿದು ಅವರದೇ ಮಾರ್ಗದರ್ಶನದಲ್ಲಿ ಯಶಸ್ಸು ಕಂಡಿರುವುದು ವಿಶೇಷ. ಈಬಗ್ಗೆ ಪ್ರತಿಕ್ರಿಯಿಸಿರುವ ಸೌಭಾಗ್ಯ, ತನ್ನ ಈ ಸಾಧನೆ ಹಿಂದೆ ಡಾ. ಅಶ್ವಿನಿ ಅವರು ಇದ್ದಾರೆ. ಅವರ ಬಳಿಯೇ ಮಾರ್ಗದರ್ಶನ ಪಡೆದಿದ್ದೆ. ಅಪ್ಪ, ಅಮ್ಮ, ಸ್ನೇಹಿತರು ತುಂಬಾ ಸಹಕಾರ ನೀಡಿದರು ಎಂದಿದ್ದಾರೆ.
ಸೌಭಾಗ್ಯ ಅವರನ್ನು ತಮ್ಮ ಮನೆಯಲ್ಲೇ ಇಟ್ಟುಕೊಂಡು ಅವರಿಗೆ ತರಬೇತಿ ನೀಡಿದ ಪ್ರಾಧ್ಯಾಪಕಿ ಡಾ.ಅಶ್ವಿನಿ ಅವರೂ ಸಹ ತನ್ನ ವಿದ್ಯಾರ್ಥಿನಿ ಮಾಡಿದ ಸಾಧನೆಗೆ ಸಂತಸ ವ್ಯಕ್ತಪಡಿಸಿದ್ದಾರೆ.
ಅವರೇ ಹೇಳುವಂತೆ ಅವರು ಪರೀಕ್ಷೆಗೆ ಮುನ್ನ 6ರಿಂದ 7ಗಂಟೆ ಓದುತ್ತಿದ್ದರು. ಪರೀಕ್ಷೆ ಹತ್ತಿರ ಬರುತ್ತಿದ್ದಂತೆ ಕನಿಷ್ಠ ಎಂದರೂ 10 ರಿಂದ 11 ಗಂಟೆಗಳ ಕಾಲ ವ್ಯಾಸಂಗ ಮಾಡುತ್ತಿದ್ದರು. ಸತತ ಪರಿಶ್ರಮ, ನಿರಂತರ ಓದು ಈ ಸಾಧನೆಗೆ ಸಹಾಯವಾಯಿತು ಎನ್ನುತ್ತಾರೆ ಸೌಭಾಗ್ಯ ಎಸ್. ಬೀಳಗಿಮಠ.
ಇವರಿಗೆ ಮೊದಲಿನಿಂದಲೂ ಪುಸ್ತಕ ಓದುವ ಹವ್ಯಾಸ ಇತ್ತು. ಅದೇ ರೀತಿಯಲ್ಲಿ ಚರ್ಚಾ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತಿದ್ದೆ. ರಾಜ್ಯ ಮಾತ್ರವಲ್ಲ, ರಾಷ್ಟ್ರಮಟ್ಟದಲ್ಲಿಯೂ ಪ್ರತಿನಿಧಿಸಿ ಸೈ ಎನಿಸಿಕೊಂಡವರು. ಎರಡು ಬಾರಿ ರಾಜ್ಯ ಪ್ರಶಸ್ತಿ ಪಡೆದಿರುವ ಹೆಗ್ಗಳಿಕೆಯನ್ನೂ ಹೊಂದಿದ್ದಾರೆ. ಪುಸ್ತಕಗಳನ್ನು ತುಂಬಾ ಓದುವ ಗೀಳು ಹೊಂದಿದ್ದ ಸೌಭಾಗ್ಯ ಎಸ್. ಬೀಳಗಿಮಠ ಅವರು, ಕೇವಲ ಓದಿನಲ್ಲಿ ತಲ್ಲೀನರಾಗದೇ ಪಠ್ಯೇತರ ಚಟುವಟಿಕೆಗಳಲ್ಲಿಯೂ ಆಸಕ್ತಿ ಹೊಂದಿದ್ದರು. ಇವೆಲ್ಲಾ ಅಂಶಗಳು ಈ ಸಾಧನೆಗೆ ಕಾರಣ ಎಂದು ಹೇಳಿದ್ದಾರೆ.
ಅವರು ಅಂಕಗಳು ಎಷ್ಟು ಬಂದಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. 101 ನೇ ರ್ಯಾಂಕ್ ಬಂದಿರುವುದಷ್ಟೇ ಗೊತ್ತಾಗಿದೆ. ಯಾವ ಸೀಟ್ ಸಿಗುತ್ತೆ ಕಾದು ನೋಡಬೇಕಿದೆ. ಆ ನಂತರ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.
