ಲೋಕಸಭೆ ಚುನಾವಣೆಗೆ ಮಹಾರಾಷ್ಟ್ರದ ಅಕೋಲಾ ಕ್ಷೇತ್ರದಲ್ಲಿ ಕಣಕ್ಕಿಳಿದಿರುವ ವಂಚಿತ್ ಬಹುಜನ ಅಘಾಡಿ (ವಿಬಿಎ) ನಾಯಕ ಪ್ರಕಾಶ್ ಅಂಬೇಡ್ಕರ್‌ಗೆ ಎಐಎಂಐಎಂ ಬೆಂಬಲ ನೀಡಲಿದೆ ಎಂದು ಪಕ್ಷದ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಘೋಷಿಸಿದ್ದಾರೆ.
ಡಾ. ಬಿ ಆರ್ ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಅವರು ವಿಬಿಎ ಪಕ್ಷವನ್ನು ಮುನ್ನಡೆಸುತ್ತಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿಯೂ ಎಐಎಂಐಎಂ ಮತ್ತು ವಿಬಿಎ ಪಕ್ಷಗಳು ಮೈತ್ರಿ ಮಾಡಿಕೊಂಡಿದ್ದವು. ಆದರೆ, 2020ರಲ್ಲಿ ನಡೆದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಮೈತ್ರಿ ಮುರಿದುಬಿದ್ದಿತ್ತು. ಇದೀಗ, ಉಭಯ ಪಕ್ಷಗಳು ಮತ್ತೆ ಮೈತ್ರಿಗೆ ಮುಂದಾಗಿವೆ.
“ದಲಿತರ ನಾಯಕತ್ವ ಬರಬೇಕು ಎಂದು ನಾವು ನಂಬುತ್ತೇವೆ. ಪ್ರಕಾಶ್ ಅಂಬೇಡ್ಕರ್ ಅವರಿಗೆ ಮತ ನೀಡುವಂತೆ ಮತ್ತು ಪ್ರಚಾರ ಮಾಡುವಂತೆ ನಾನು ಅಕೋಲಾದ ಎಐಎಂಐಎಂ ಕಾರ್ಯಕರ್ತರಿಗೆ ಮನವಿ ಮಾಡುತ್ತೇನೆ” ಎಂದು ಓವೈಸಿ ಹೇಳಿದ್ದಾರೆ.
ಪುಣೆ ಕ್ಷೇತ್ರದಲ್ಲಿ ಎಐಎಂಐಎಂ ಸ್ಪರ್ಧಿಸಲಿದೆ. ಅನಿಸ್ ಸುಂಡ್ಕೆ ಅವರು ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಾರೆ ಎಂದು ಓವೈಸಿ ತಿಳಿಸಿದ್ದಾರೆ.