ಬಿಜೆಪಿ ಸರ್ಕಾರ ತನ್ನ ಆಧಿಕಾರವನ್ನು ಬಳಸಿಕೊಂಡು ಇಡಿ, ಸಿಬಿಐ ಅವರ ಮೇಲೆ ಒತ್ತಡ ಹಾಕಿ ವಿರೋಧ ಪಕ್ಷದವರನ್ನು ಬೆದರಿಸುವ ತಂತ್ರಗಾರಿಕೆ ಮಾಡುತ್ತಿದ್ದಾರೆ ಎಂದು ಎಐಸಿಸಿ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ಮಯೂರ ಜಯಕುಮಾರ್ ಆರೋಪಿಸಿದರು.
ಚಿತ್ರದುರ್ಗದಲ್ಲಿ ಇಂಡಿ ಒಕ್ಕೂಟದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಅಧಿಕಾರವನ್ನು ಸಂಪೂರ್ಣವಾಗಿ ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿದ್ದು, ಚುನಾವಣೆಯಲ್ಲಿ ಬೆದರಿಸಿ ಮತಗಳಿಸುವ ತಂತ್ರಗಾರಿಕೆಯನ್ನು ಬಳಸುತ್ತಿದ್ದಾರೆ. ಆದರೆ, ಇದ್ಯಾವುದು ಫಲಪ್ರದ ಆಗುವುದಿಲ್ಲ. ರಾಜ್ಯದಲ್ಲಿ 5 ಗ್ಯಾರೆಂಟಿಗಳ ಯೋಜನೆಗಳ ಮೂಲಕ ರಾಜ್ಯದ ಜನತೆಯನ್ನು ಕಾಂಗ್ರೆಸ್ ಸರ್ಕಾರ ತಲುಪಿದೆ. ಇದೇ ರೀತಿಯಲ್ಲಿ ದೇಶದೆಲ್ಲೆಡೆ ಕಾಂಗ್ರೆಸ್ ಗ್ಯಾರೆಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದು, ನುಡಿದಂತೆ ನಡೆಯಲಿದ್ದೆವೆ ಎಂದು ಹೇಳಿದರು.
ಬಿ.ಎನ್.ಚಂದ್ರಪ್ಪ ಒಳ್ಳೆಯ ವ್ಯಕ್ತಿ. ಇಲ್ಲಿನ ಜನತೆಗೆ ಇದೊಂದು ಒಳ್ಳೆಯ ಅವಕಾಶವಾಗಿದೆ. ಸಜ್ಜನ ವ್ಯಕ್ತಿಯನ್ನು ಗೆಲ್ಲಿಸಲು ಇಂಡಿಯಾ ಒಕ್ಕೂಟದ ವ್ಯಕ್ತಿಯನ್ನು ಗೆಲ್ಲಿಸಿ ದೇಶಕ್ಕೆ ಒಳ್ಳೆಯ ಸರ್ಕಾರವನ್ನು ಅಧಿಕಾರಕ್ಕೆ ತರಬೇಕೆಂದು ಮನವಿ ಮಾಡಿದರು.
ಅಭ್ಯರ್ಥಿ ಬಿ.ಎನ್. ಚಂದ್ರಪ್ಪ ಮಾತನಾಡಿ, ಸರ್ವಾಧಿಕಾರ ಮತ್ತು ಸಂವಿಧಾನದ ರಕ್ಷಣೆ ಮಧ್ಯೆ ನಡೆಯುತ್ತಿರುವ ಚುನಾವಣೆ ಇದಾಗಿದೆ. ಸಂವಿಧಾನ ಇದ್ದರೆ ಮಾತ್ರ ನಾವು ಬದುಕುತ್ತೇವೆ ಎಂಬ ಸ್ಪಷ್ಟ ನಿಲುವಿನೊಂದಿಗೆ ಇಂಡಿಯಾ ಒಕ್ಕೂಟದ ಮಿತ್ರ ಪಕ್ಷಗಳು ಒಗ್ಗೂಡಿವೆ. ಮಂತ್ರಿಯಾದವರು ಸಂವಿಧಾನವನ್ನು ಬದಲಾಯಿಸುತ್ತೇವೆ ಎಂದು ಹೇಳುತ್ತಾರೆ ಎಂದರೆ ಹೇಗೆ? ಇದಕ್ಕೆ ಮೋದಿ ಅವರು ಯಾವುದೇ ಕ್ರಮ ಕೈಗೊಳ್ಳದೆ ಇರುವುದು ಬೆಂಬಲ ಸೂಚಿಸಿದಂತಾಗಿದ್ದು, ಇದಕ್ಕೆಲ್ಲ ತಕ್ಕ ಪ್ರತ್ಯುತ್ತರ ಚುನಾವಣೆಯಲ್ಲಿ ಜನತೆ ಕೊಡಲಿದ್ದಾರೆ ಎಂದು ಹೇಳಿದರು.
ಮೋದಿ ಅವರಿಂದ ಯಾವ ಕುಟುಂಬಕ್ಕೆ ಸಹಕಾರ ಆಗಿದೆ ಎಂಬುದನ್ನು ಹೇಳಲಿ ? ಇದನ್ನು ಕುಮಾರಸ್ವಾಮಿ ಅವರು ಕೂಡ ಸಾಬೀತು ಪಡಿಸಲಿ ಎಂದು ಸವಾಲು ಹಾಕಿದರು.
ಬಿಜೆಪಿ ಮೊದಲಿನಿಂದಲೂ ಭಾವನೆಗಳನ್ನು ಕೆರಳಿಸುವ ಕೆಲಸ ಮಾಡುತ್ತಿದ್ದಾರೆ. ಧರ್ಮ ಜಾತಿಗಳ ಮೇಲೆ ಬಿತ್ತುವ ಕೆಲಸ ಮಾಡುತ್ತಿವೆ. ಈ ರೀತಿಯಿಂದಲೇ 2 ಬಾರಿ ಗೆದ್ದಿದ್ದಾರೆ. ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿಲ್ಲ. ಜನತೆ ಉದ್ಯೋಗ ಇಲ್ಲದೆ ಕೇವಲ ಕೋಮುಗಲಭೆ ಮಾಡುತ್ತಾ ಹೋದರೆ ಜೀವನ ನಡೆಸುವುದು ಹೇಗೆ ಎಂದು ಚಿಂತೆಯಲ್ಲಿ ಮುಳುಗಿ, ಜನರು ಕಂಗಾಲಾಗಿದ್ದಾರೆ. ಆದ್ದರಿಂದಲೇ ಈ ಚುನಾವಣೆಯಲ್ಲಿ ವ್ಯತಿರಿಕ್ತ ಫಲಿತಾಂಶ ಹೊರಬರಲಿದ್ದು, ಸರ್ವ ಜನಾಂಗದವರಿಗಾಗಿ ದುಡಿಯುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಕು. ನನ್ನ ಹಾಗೂ ಕಾಂಗ್ರೆಸ್ ನಂಬಿ ಮತ ನೀಡಬೇಕು ಎಂದು ಮನವಿ ಮಾಡಿದರು.
ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಬಿ.ಇ.ಜಗದೀಶ್ ಮಾತನಾಡಿ, ಕೋರ್ಟ್ ನ್ಯಾಯಾಧೀಶರು ಸುಪ್ರೀಂ ಮೊದಲೇ ಹೇಳಿದ್ದರು. ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದರೆ ದೇಶಕ್ಕೆ ಕಂಠಕ ಎಂದು. ಆದರೆ, ನಾವು ಎಚ್ಚೆತ್ತುಕೊಳ್ಳಲಿಲ್ಲ. ಈಗಲಾದರೂ ನಾವುಗಳು ಎಚ್ಚೆತ್ತುಕೊಳ್ಳಬೇಕಿದೆ ಎಂದರು.
ಸಂವಿಧಾನದ ಕಗ್ಗೊಲೆಯಾಗಿದೆ. ಸಂವಿಧಾನ ಬದಲಾವಣೆ ಮಾಡಲು ಹೊರಟಿರುವುದು ವಿನಾಶದ ಸಂಗತಿ. ಅದೇ ರೀತಿ ಅಭಿವೃದ್ಧಿಯನ್ನು ಸಹಿಸದೆ ಕೇಜಿವಾಲ್ ಅವರನ್ನು ಬಂಧಿಸಲಾಗಿದೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.
ಧರ್ಮದ ಹೆಸರು ಹೇಳಿಕೊಂಡು ಚುನಾವಣೆ ಮಾಡುವ ಬಿಜೆಪಿ ಗೆದ್ದರೆ, ಸಂವಿಧಾನವನ್ನು ಧೂಳಿಪಟ ಮಾಡುತ್ತಾರೆ. ಕಾಂಗ್ರೆಸ್ ಇಷ್ಟು ವರ್ಷಗಳು ಆಡಳಿತ ಮಾಡಿದರೂ, ಇಷ್ಟೊಂದು ಹಗರಣ ಭ್ರಷ್ಟಾಚಾರ ನಡೆಸಿರಲಿಲ್ಲ. ಆದರೆ, ಬಿಜೆಪಿ ಎಲೆಕ್ಟ್ರೋ ಬಾಂಡ್ ಹಗರಣ ನಡೆದಿದೆ. ಬಿಜೆಪಿಯನ್ನು ಅಧಿಕಾರಕ್ಕೆ ಬರಲು ಬಿಟ್ಟರೆ ಒಬ್ಬರಿಗೊಬ್ಬರಿಗೆ ಜಗಳವಿಡುತ್ತಾರೆ. ಆದ್ದರಿಂದ ಮಿತ್ರ ಪಕ್ಷಗಳ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್. ಚಂದ್ರಪ್ಪ ಅವರಿಗೆ ಅತೀ ಹೆಚ್ಚು ಮತ ಕೊಟ್ಟು ಗೆಲ್ಲಿಸಬೇಕು ಎಂದರು.
ಸಮಾಜವಾದಿ ಪಕ್ಷದ ರಾಜ್ಯಾಧ್ಯಕ್ಷ ಮಂಜಪ್ಪ ಮಾತನಾಡಿ, ಬರಗಾಲದ ಹಣ ಬಿಡುಗಡೆ ಮಾಡಿಲ್ಲ. ರಾಜ್ಯದ ಸಂಸದರು ಬರಗಾಲದ ಸಮಯದಲ್ಲೂ ಲೋಕಸಭೆಯಲ್ಲಿ ಧ್ವನಿ ಎತ್ತಲಿಲ್ಲ ಎಂದರೆ, ಯಾವ ರೀತಿ ಅಧಿಕಾರ ನಡೆಸುತ್ತಿದ್ದಾರೆ ಎಂಬುದು ತಿಳಿಯುತ್ತದೆ ಎಂದು ಹೇಳಿದರು. ದೇಶದ ಸಂವಿಧಾನ ರಕ್ಷಣೆ ಮಾಡುವ ನಿಟ್ಟಿನಲ್ಲಿ ಇಂಡಿಯಾ ಒಕ್ಕೂಟದ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಕಮ್ಯುನಿಸ್ಟ್ ಪಕ್ಷದ ಜಿಲ್ಲಾಧ್ಯಕ್ಷ ಸುರೇಶ್ ಬಾಬು ಮಾತನಾಡಿ, ಬೇಟಿ ಪಡಾವೋ ಬೇಟಿ ಬಚಾವೋ ಎಂದು ಹೇಳಿದ ಮೋದಿ ಅಂಗನವಾಡಿ ಕಾರ್ಯಕರ್ತರಿಗೆ ಅನುಧಾನ ಕಡಿಮೆ ಮಾಡಿದರು. ದೇಶದಲ್ಲಿ ನೀರಿನ ಹಾಹಾಕಾರ ಹೆಚ್ಚಿದ್ದರೂ ಕೂಡ ಬಿಜೆಪಿ ಪ್ರಣಾಳಿಕೆಯಲ್ಲಿ ಹೇಳಿದ ನದಿ ಜೋಡಣೆ ಬಗ್ಗೆ ಒಂದು ಮಾತನಾಡಿಲ್ಲ ಇಂತಹವರನ್ನು ಅಧಿಕಾರದಿಂದ ದೂರ ಇಟ್ಟು ಇಂಡಿಯಾ ಒಕ್ಕೂಟದ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೇಸ್ ಜಿಲ್ಲಾಧ್ಯಕ್ಷ ಎಂ.ಕೆ. ತಾಜ್ ಪೀರ್, ಮಲ್ಲಿಕಾರ್ಜುನ್ ಹಾಜರಿದ್ದರು. ಬಿ.ತಿಪ್ಪೇಸ್ವಾಮಿ, ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಜೆ.ಜೆ. ಹಟ್ಟಿ ತಿಪ್ಪೇಸ್ವಾಮಿ, ಸೇರಿದಂತೆ ಇತರರು ಹಾಜರಿದ್ದರು.