ಸರ್ಕಾರ ಸುಸಜ್ಜಿತ ಆರೋಗ್ಯ ಉಪಕೇಂದ್ರಗಳನ್ನು ನಿರ್ಮಿಸಿದ್ದರೂ, ವೈದ್ಯರು ಲಭ್ಯವಿಲ್ಲದ ಕಾರಣ ಹುಣಶ್ಯಾಳ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಬಂಗಾರಮ್ಮ ಮಾನಪ್ಪ ದೊಡ್ಡಮನಿ ವಿಜಯಪುರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
“ಸರ್ಕಾರ ಸುಸಜ್ಜಿತವಾದ ಆಸ್ಪತ್ರೆ ಕಟ್ಟಡಗಳನ್ನು ನಿರ್ಮಿಸಿದೆ. ದೇವರ ಹಿಪ್ಪರಗಿ ಭಾಗದ ಆಲಗೂರು, ಬಿ ಬಿ ಇಂಗಳಗಿ, ಅಸಂತಾಪುರ, ಕೆರೂಟಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರೇ ಇಲ್ಲದೆ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಬಾಗಿಲು ಹಾಕಿದ ಸ್ಥಿತಿಯಲ್ಲಿವೆ. ಗ್ರಾಮೀಣ ಪ್ರದೇಶವೆಂದರೆ ಕರ್ತವ್ಯ ನಿರ್ವಹಿಸಲು ವೈದ್ಯರು ಹಿಂದೇಟು ಹಾಕುತ್ತಿದ್ದಾರೆಂದು ಆರೋಗ್ಯ ಇಲಾಖೆ ಅಧಿಕಾರಿಗಳು ಸಬೂಬು ಹೇಳುತ್ತಿದ್ದಾರೆ” ಎಂದು ಮನವಿಯಲ್ಲಿ ತಿಳಿಸಿದ್ದಾರೆ.
“ಆಸ್ಪತ್ರೆಗೆ ಬಂದವರು ನಿಟ್ಟುಸಿರಿಸುತ್ತ ಹೋಗುವಂತಾಗುತ್ತಿದೆ. ಮಹಿಳೆಯರು, ಮಕ್ಕಳು, ಹಿರಿಯ ನಾಗರಿಕರಿಗೆ ಈ ಬೇಸಿಗೆಯಲ್ಲಿ ಆರೋಗ್ಯ ಸಮಸ್ಯೆಗಳಿಂದ ತೀವ್ರ ತೊಂದರೆಯಾಗುತ್ತಿದೆ. ದೈನಂದಿನ ದುಡಿಮೆಯ ಹಣವನ್ನು ಖಾಸಗಿ ಆಸ್ಪತ್ರೆಗಳಲ್ಲಿ ವ್ಯಯಿಸುವಂತಾಗಿದೆ” ಎಂದರು.
“ಉತ್ತಮವಾದ ಆಸ್ಪತ್ರೆ, ಸಮರ್ಪಕ ಸೌಲಭ್ಯಗಳನ್ನು ಒದಗಿಸುತ್ತಿದೆಯಾದರೂ, ಗ್ರಾಮೀಣ ಆರೋಗ್ಯ ಉಪಕೇಂದ್ರಗಳು, ವೈದ್ಯರ ಕೊರತೆ ಒಂದೆಡೆಯಾದರೆ, ಇನ್ನೂ ಕೆಲವೆಡೆ ಶುಚಿತ್ವದ ಕೊರತೆಯೂ ಎದುರಾಗಿದೆ. ಗುತ್ತಿಗೆಯಾದಾರಲ್ಲಿ ವೈದ್ಯರನ್ನು ನೇಮಕ ಮಾಡಿಕೊಂಡಿದ್ದರೂ ಅವರು ಗ್ರಾಮೀಣ ಪ್ರದೇಶಗಳಿಗೆ ಬರುತ್ತಿಲ್ಲ” ಎಂದು ಹೇಳಿದರು.
“ಪ್ರಾಥಮಿಕ ಕೇಂದ್ರಗಳಲ್ಲಿ ಆರೈಕೆ, ಕುಟುಂಬ ಯೋಜನೆ, ತಾಯಿ-ಮಗುವಿನ ಆರೋಗ್ಯ, ಸುರಕ್ಷಿತ ನೀರು ಸರಬರಾಜು ಮತ್ತು ನೈರ್ಮಲ್ಯ, ಸ್ಥಳೀಯ ರೋಗಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣ, ಜಾಗೃತಿ ಕೆಲಸ ಮಾಡಲು ವೈದ್ಯರ ಕೊರತೆ ಕಾಡುತ್ತಿದೆ. ಈ ಕೊರತೆಯು ಸಮುದಾಯದಲ್ಲಿ ಆರೋಗ್ಯ ಕಾಪಾಡಲು ಸವಾಲಾಗಿದೆ” ಎಂದರು.
“ರಾಷ್ಟ್ರೀಯ ಆರೋಗ್ಯ ಮಿಷನ್ ಯೋಜನೆ ಪ್ರಕಾರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಒಬ್ಬರು ವೈದ್ಯರು, ಮಹಿಳಾ ವೈದ್ಯರು, ಆಯುರ್ವೇದ, ಯೋಗ, ಹೋಮಿಯೋಪತಿ ವೈದ್ಯರು, ಒಬ್ಬರು ಔಷಧ ವಿತರಕರು, ನರ್ಸ್‌ಗಳು, ಹಿರಿಯ ಮಹಿಳಾ ಆರೋಗ್ಯ ಕಾರ್ಯಕರ್ತೆಯರು, ಮಹಿಳಾ ಮತ್ತು ಪುರುಷ ಆರೋಗ್ಯ ಸಹಾಯಕರು, ಆರೋಗ್ಯ ಶಿಕ್ಷಕರು, ಪ್ರಯೋಗಾಲಯ ಸಿಬ್ಬಂದಿ, ಲೆಕ್ಕಪತ್ರ ನಿರ್ವಾಹಕರು, ಗುಮಾಸ್ತರು, ವಾಹನ ಚಾಲಕರು ಹಾಗೂ ಆಶಾ ಕಾರ್ಯಕರ್ತೆಯರು ಇರಬೇಕು ಎಂದಿದೆ. ಆದರೆ, ಈ ಕೊರತೆ ಗ್ರಾಮೀಣ ಆರೋಗ್ಯ ಕೇಂದ್ರಗಳು, ಉಪಕೇಂದ್ರಗಳಲ್ಲಿ ಹೆಚ್ಚಾಗಿದೆ” ಎಂದು ದೂರಿದರು.
“ಗ್ರಾಮೀಣ ಪ್ರದೇಶಗಳಲ್ಲಿ ಜನರ ಆರೋಗ್ಯ ಕಾಪಾಡುವುದು ಜಿಲ್ಲಾ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಡಬೇಕಿದೆ. ಸೂಕ್ಷ್ಮ ಮತ್ತು ಅಪರೂಪದ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಹಾಗೂ ಈಗ ಬೇಸಿಗೆಯಲ್ಲಿ ಗ್ರಾಮೀಣ ಭಾಗದಲ್ಲಿ ಇನ್ನಷ್ಟು ಆರೋಗ್ಯ ಸಮಸ್ಯೆಗಳು ಎದುರಾಗುವಲ್ಲಿ ಮುಂಚಿತವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು, ಉಪ ಆರೋಗ್ಯ ಕೇಂದ್ರಗಳನ್ನು ಸುಧಾರಿಸುವುದು ಅಗತ್ಯವಿದೆ” ಎಂದರು.
“ಗ್ರಾಮೀಣ ಆಸ್ಪತ್ರೆಗಳಲ್ಲಿ ಅಸಹಾಯಕ ಮಹಿಳೆಯರು, ವಿಧವೆಯರು, ವಿಚ್ಛೇದಿತರನ್ನು ‘ಆಶಾ’ಗಳಾಗಿ ನೇಮಿಸಿ ಸ್ವಾಸ್ಥ್ಯ ಸಮಾಜದ ಜತೆಗೆ ಅವರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡಲಾಗುವುದಾಗಿ ಸರ್ಕಾರ ಹೇಳುತ್ತದೆಯಾದರೂ, ಆಶಾಗಳ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕುತ್ತಿಲ್ಲ ಎನ್ನುವುದು ವಾಸ್ತವವಾಗಿದೆ. ಇವರಿಗೆ ನಿಗದಿತ ವೇತನ ಇಲ್ಲ. ತಿಂಗಳಿಡಿ ದುಡಿದರೂ ನಿಗದಿತ ವೇತನ ಬರುತ್ತದೆ ಎನ್ನುವ ವಿಶ್ವಾಸವು ಇರಲಾರದ ಪರಿಸ್ಥಿತಿ ಆಶಾಗಳದ್ದಾಗಿದೆ” ಎಂದರು.
“ಮಾಸಿಕ ಪ್ರೋತ್ಸಾಹಧನವನ್ನು ನಿಗದಿತ ದಿನದಂದು ನೀಡದೆ ಉಳಿಸಿಕೊಂಡರೆ ಜಿಲ್ಲೆಯ ವೈದ್ಯಾಧಿಕಾರಿಗಳು ಜವಾಬ್ದಾರರಾಗುತ್ತಾರೆ. ಗೌರವಧನಕ್ಕಾಗಿ ಪರದಾಡುತ್ತ ದುಡಿಯುವ ಶ್ರಮ ಜೀವಿಗಳಾಗಿದ್ದಾರೆ. ಈ ಎಲ್ಲ ಸಮಸ್ಯೆಗಳನ್ನು ಕೂಡಲೇ ಸರಿಪಡಿಸಬೇಕು” ಎಂದು ಜಿಲ್ಲಾಧಿಕಾರಿಯವರಿಗೆ ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಗ್ಯಾರಂಟಿ ಯೋಜನೆ ಟೀಕಿಸುವ ಬಿಜೆಯವರಿಗೆ ಜನರ ಕಷ್ಟಗಳ ಅರಿವಿಲ್ಲ: ಸಚಿವ ಪ್ರಿಯಾಂಕ್ ಖರ್ಗೆ
ಈ ಸಂದರ್ಭದಲ್ಲಿ ಶರಣಮ್ಮ, ವಿನಾಯಕ್, ಗಿರಿಜಾ, ಯಾಸಿನ್, ಮೊಮ್ಮದ್ ರಫೀಕ್, ಚನ್ನು, ಮೋಹನ್, ಕಿರಣ್ ಸೇರಿದಂತೆ ಇತರರು ಇದ್ದರು.