ಗದಗ ಜಿಲ್ಲೆಯ ರೋಣ ತಾಲೂಕಿನ ಸಮೀಪದ ಜಕ್ಕಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 5ನೇ ವಾರ್ಡಿನ ಜನತಾ ಪ್ಲಾಟ್ ನಿವಾಸಿಗಳು ಕುಡಿಯುವ ನೀರು ಪೂರೈಕೆ ಮಾಡುವಂತೆ ಆಗ್ರಹಿಸಿ ಖಾಲಿ ಕೊಡ ಹಿಡಿದು ಗ್ರಾಮ ಪಂಚಾಯ್ತಿಗೆ ಮಂಗಳವಾರ (ಏ.16) ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ನಿರತ ಮಹಿಳೆಯರು ಸ್ಥಳೀಯ ಪಿಡಿಒ ಎಸ್.ಎಸ್ ರಿತ್ತಿ ಹಾಗೂ ಸಿಬ್ಬಂದಿ ಮತ್ತು ಚುನಾಯಿತ ಸದಸ್ಯರ ವಿರುದ್ಧ ಧಿಕ್ಕಾರ ಕೂಗಿದರು. ಪಂಚಾಯತಿಯವರುವ ಪೈಪ್ ಲೈನ್ ತಗ್ಗು ಅಗೆದು ಪೈಪ್ ಒಡೆದಿದ್ದಾರೆ, ಎರಡು ತಿಂಗಳು ಕಳೆದರೂ ದುರಸ್ತಿ ಮಾಡಿಲ್ಲ ಎಂದು ಆಕ್ರೋಶ ಹೊರಹಾಕಿದರು.
ಸ್ಥಳೀಯ ನಿವಾಸಿ ಕುಬೇರಪ್ಪ ಕೊಡಗಾನೂರ ಮಾತನಾಡಿ, 5ನೇ ವಾರ್ಡಿನಲ್ಲಿ ಆರು ತಿಂಗಳಿಂದ ಕುಡಿಯುವ ನೀರಿಗಾಗಿ ಪರದಾಡುತ್ತಿದ್ದೇವೆ. ಅನೇಕ ಬಾರಿ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ. ಆರೋಗ್ಯಕ್ಕೂ ಸಮಸ್ಯೆ ಆಗುತ್ತಿದೆ. ತಕ್ಷಣವೇ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.
5ನೇ ವಾರ್ಡಿನಲ್ಲಿ ದುರ್ವಾಸನೆಯಿಂದ ಕೂಡಿರುವ ಚರಂಡಿ, ಅದರಲ್ಲಿನ ಹೂಳು ಹಾಗೂ ಸೊಳ್ಳೆಗಳ ಕಾಟ ಮಿತಿಮೀರಿದೆ ಎಂದು ಫಾತಿಮಾ ಬಾಲೇಸಾಬನವರ ಹೇಳಿದರು.
5ನೇ ವಾರ್ಡ್‌ನಲ್ಲಿ ಪರಿಶೀಲನೆ ನಡೆಸಿದ ಪಿಡಿಒ, ಒಂದೇ ದಿನದಲ್ಲಿ ದುರಸ್ತಿಗೊಳಿಸಿ ಪೈಪ್ ಲೈನ್ ಸರಿಪಡಿಸಿ ನೀರು ಪೂರೈಕೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಬಸವ್ವ ಕೊಡಗಾನೂರ, ಸಜನಾ ಜಕ್ಕಲಿ, ಯಲ್ಲಮ್ಮ ಡಂಬಳ, ಮಮ್ಮಸಾಬ ಬಾಲೇಸಾಬನವರ, ಮಾಬಮ್ಮ ಕಳಕಾಪೂರ, ಮಮತಮ್ಮ ಬಾಲೇಸಾಬನವರ, ಖಾಶಿಂಬಿ ಜಾಲಿಹಾಳ, ದಾವಲಮ್ಮ ಗಡಾದ, ಮಮ್ಮಸಲೀಂ ಜಕ್ಕಲಿ, ಉಮೇಶ ಕೊಡಗಾನೂರ, ಇಸ್ಮಾಯಿಲ್ ಗಡಾದ, ಹನುಮಂತ ಕೊಡಗಾನೂರ, ಮೌಲುಸಾಬ ನದಾಫ್, ಆನಂದ ಬಾರಕೇರ, ಯಲ್ಲಪ್ಪ ಮುಕ್ಕಣ್ಣವರ, ಯಮನೂರ ಮಾದರ, ಯಲ್ಲಪ್ಪ ಬಾರಕೇರ ಪ್ರತಿಭಟನೆಯಲ್ಲಿ ಇದ್ದರು.
