ಮುಕ್ತ ಹಾಗೂ ನ್ಯಾಯ ಸಮ್ಮತ ಮತದಾನ ನಡೆಸಲು ಚುನಾವಣೆ ಪ್ರಕ್ರಿಯೆಯಲ್ಲಿ ಪಾವಿತ್ರತೆ ಹೊಂದಿರಬೇಕು ಎಂದು ಚುನಾವಣಾ ಆಯೋಗ ಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.
“ಇದೊಂದು ಚುನಾವಣಾ ಪ್ರಕ್ರಿಯೆ. ಇಲ್ಲಿ ಪಾವಿತ್ರ್ಯತೆ ಇರಬೇಕು. ಇಲ್ಲಿ ಏನೋ ನಡೆಯುತ್ತಿದೆ ಎಂಬ ಆತಂಕ ಯಾರೊಬ್ಬರಿಗೂ ಅನಿಸಬಾರದು” ಎಂದು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಹಾಗೂ ದೀಪಂಕರ್ ದತ್ತಾ ನೇತೃತ್ವದ ಪೀಠ ಚುನಾವಣಾ ಆಯೋಗಕ್ಕೆ ಸೂಚನೆ ನೀಡಿತು.
ಇವಿಎಂಗಳಲ್ಲಿ ಮತದಾನ ಮಾಡುವ ಸಂದರ್ಭದಲ್ಲಿ ವಿವಿಪ್ಯಾಟ್ ಮೂಲಕ ಗುರುತಿನ ಚೀಟಿ ನೀಡುವ ಅರ್ಜಿಗಳ ವಿಚಾರಣೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿತು. ಚುನಾವಣಾ ಆಯೋಗದ ಹಿರಿಯ ನ್ಯಾಯವಾದಿ ಮಣೀಂದರ್ ಸಿಂಗ್ ಹಾಗೂ ಚುನಾವಣಾ ಅಧಿಕಾರಿಗಳು ನ್ಯಾಯಾಲಯ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮೋದಿ ಅಹಮಿಕೆಯೇ ಬಿಜೆಪಿ ಪ್ರಣಾಳಿಕೆ- ಬಡಜನತೆಯ ಕಷ್ಟ ಕಣ್ಣೀರು ಲೆಕ್ಕಕ್ಕಿಲ್ಲ
ಮತದಾರರು ತಮ್ಮ ಮತದಾನದ ನಂತರ ಗುರುತಿನ ಚೀಟಿ ಪಡೆಯುವ ಸಾಧ್ಯತೆ ಇದೆಯೆ ಎಂದು ನ್ಯಾಯಾಲಯವು ಚುನಾವಣಾ ಆಯೋಗವನ್ನು ಪ್ರಶ್ನಿಸಿತು. ಇದಕ್ಕೆ ಉತ್ತರಿಸಿದ ಆಯೋಗದ ಪರ ವಕೀಲರು ಮತದಾನದ ನಂತರ ಗುರುತಿನ ಚೀಟಿ ನೀಡಿದರೆ ಮತದ ಗೌಪ್ಯತೆಗೆ ಧಕ್ಕೆ ತರುತ್ತದೆಯಲ್ಲದೆ ಮತಗಟ್ಟೆಯ ಹೊರಗೆ ಇದು ದುರ್ಬಳಕೆಯಾಗುವ ಸಾಧ್ಯತೆಯಿದೆ. ಅಲ್ಲದೆ ಗುರುತಿನ ಚೀಟಿಯನ್ನು ಇತರರು ಹೇಗೆ ಬಳಸುತ್ತಾರೆ ಎಂಬುದನ್ನು ನಾವು ಹೇಳಲು ಸಾಧ್ಯವಿಲ್ಲ. ಎಣಿಕೆ ಪ್ರಕ್ರಿಯೆಯಲ್ಲೂ ಹಲವು ಸಮಸ್ಯೆಗಳಾಗುತ್ತವೆ ಎಂದು ಉತ್ತರ ನೀಡಿದರು.
ಮತದಾನದ ಪ್ರಕ್ರಿಯೆಯಲ್ಲಿ ಇವಿಎಂನಲ್ಲಿ ಮತದಾರರು ಮತ ಚಲಾಯಿಸಿದ ನಂತರ ವಿವಿಪ್ಯಾಟ್‌ನಲ್ಲಿ ಮತಚೀಟಿಯ ಚಿಹ್ನೆ ಕಾಣಿಸಿಕೊಳ್ಳುತ್ತದೆ. ಈ ಯಂತ್ರಗಳನ್ನು ಇಂಜಿನಿಯರ್‌ಗಳ ಉಪಸ್ಥಿತಿಯಲ್ಲಿ ಮತದಾನಕ್ಕೂ ಮುನ್ನ ಪರಿಶೀಲಿಸಲಾಗುತ್ತದೆ ಎಂದು ಆಯೋಗದ ವಕೀಲರು ಸುಪ್ರೀಂ ಕೋರ್ಟ್ ಕೇಳಿದ ಪ್ರಶ್ನೆಗೆ ಉತ್ತರಿಸಿದರು.
ಅರ್ಜಿದಾರರು ಹೇಳಿದಂತೆ ನಾವು ಯಾವುದನ್ನು ಮುಚ್ಚಿಡುತ್ತಿಲ್ಲ ಎಂದು ಆಯೋಗದ ಪರ ವಕೀಲರು ಕೋರ್ಟ್‌ಗೆ ಮನವರಿಕೆ ಮಾಡಿದರು.
ಮತದಾರರ ನಂಬಿಕೆಯಂತೆ ನಿರ್ವಹಿಸಬೇಕು ಹಾಗೂ ಸುರಕ್ಷಿತಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್ ಚುನಾವಣಾ ಆಯೋಗಕ್ಕೆ ನಿರ್ದೇಶಿಸಿತು.
