ಈ ದಿನ ಸಂಪಾದಕೀಯ | ಮೋದಿ ಅಹಮಿಕೆಯೇ ಬಿಜೆಪಿ ಪ್ರಣಾಳಿಕೆ- ಬಡಜನತೆಯ ಕಷ್ಟ ಕಣ್ಣೀರು ಲೆಕ್ಕಕ್ಕಿಲ್ಲ

Date:

ಪ್ರಣಾಳಿಕೆಯಲ್ಲೂ ಅಡಿಯೂ ಮೋದಿಯೇ, ಮುಡಿಯೂ ಮೋದಿಯೇ. ಆದಿಯೂ ಮೋದಿಯೇ, ಅಂತ್ಯವೂ ಮೋದಿಯೇ. ಬಿಜೆಪಿಯು ಏಕವ್ಯಕ್ತಿ ಕೇಂದ್ರಿತ ಪಕ್ಷವಾಗಿ ದಶಕವೇ ಉರುಳಿದೆ. ಒಂದರಿಂದ ಆರಂಭಿಸಿ ನೂರು ಸ್ಥಾನಗಳಲ್ಲೂ ರಾರಾಜಿಸಿರುವುದು ನರೇಂದ್ರ ಮೋದಿ ಮಾತ್ರವೇ. ಪಕ್ಷಕ್ಕೇ ಅಂತಹ ಶೋಚನೀಯ ಸ್ಥಿತಿ ಒದಗಿರುವಾಗ ಪ್ರಣಾಳಿಕೆಯ ಪಾಡೇನು?

 

ಜಗತ್ತಿನ ಅತಿ ದೊಡ್ಡ ರಾಜಕೀಯ ಪಕ್ಷವೆಂದು ತನ್ನನ್ನು ಬಣ್ಣಿಸಿಕೊಳ್ಳುವ ಬಿಜೆಪಿ ಕಡೆಗೂ ಮೊನ್ನೆ ತನ್ನ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿತು. ಮೂರನೆಯ ಅವಧಿಗೆ ಜನಾದೇಶವನ್ನು ಕೋರಿತು. ಕಾಂಗ್ರೆಸ್ಸು ತನ್ನ ಪ್ರಣಾಳಿಕೆಯನ್ನು ನ್ಯಾಯಪತ್ರವೆಂದು ಕರೆದುಕೊಂಡರೆ, ಬಿಜೆಪಿ ತನ್ನದನ್ನು ಸಂಕಲ್ಪ ಪತ್ರವೆಂದು ಸಾರಿತು. ಆದರೆ ಅದರ ಮುಖಪುಟದಲ್ಲಿ ಅಚ್ಚಾಗಿರುವ ಶೀರ್ಷಿಕೆ ‘ಮೋದೀ ಕಾ ಗ್ಯಾರಂಟಿ’. ನ್ಯಾಯ ಅಥವಾ ಸಾಮಾಜಿಕ ನ್ಯಾಯದ ಪರಿಕಲ್ಪನೆಗೂ ಬಿಜೆಪಿಗೂ ಭಾರೀ ದೂರ. ರೂಪದಲ್ಲಿ ನ್ಯಾಯವನ್ನು ಪಾಲಿಸಿದಂತೆ ತೋರುವ ಕೇಸರಿ ಪಕ್ಷ, ಸಾರದಲ್ಲಿ ಅಪ್ಪಟ ಯಥಾಸ್ಥಿತಿವಾದಿ. ಬಿಜೆಪಿಯು ಏಕವ್ಯಕ್ತಿ ಕೇಂದ್ರಿತ ಪಕ್ಷವಾಗಿ ದಶಕವೇ ಉರುಳಿದೆ. ಒಂದರಿಂದ ಆರಂಭಿಸಿ ನೂರು ಸ್ಥಾನಗಳಲ್ಲೂ ರಾರಾಜಿಸಿರುವುದು ನರೇಂದ್ರ ಮೋದಿ ಮಾತ್ರವೇ. ಪಕ್ಷಕ್ಕೇ ಅಂತಹ ಶೋಚನೀಯ ಸ್ಥಿತಿ ಒದಗಿರುವಾಗ ಪ್ರಣಾಳಿಕೆಯ ಪಾಡೇನು?

ಪ್ರಣಾಳಿಕೆಯಲ್ಲೂ ಅಡಿಯೂ ಮೋದಿಯೇ ಮುಡಿಯೂ ಮೋದಿಯೇ. ಆದಿಯೂ ಮೋದಿಯೇ, ಅಂತ್ಯವೂ ಮೋದಿಯೇ. ಜನಕೋಟಿಯ ಬದುಕಿನ ಅನುದಿನದ ಬವಣೆಗಳನ್ನು ನೀಗಿಸುವುದರತ್ತ ಪರಮ ನಿರ್ಲಕ್ಷ್ಯ. ಗಾಳಿಗೋಪುರಗಳನ್ನು ತೂಗುಬಿಡುವ, ಅಂಗೈಯಲ್ಲಿ ಅರಮನೆ ನಿರ್ಮಿಸುವ, ಆಕಾಶಕ್ಕೆ ಏಣಿ ಇಕ್ಕುವ, ಧರ್ಮಗಳು ಸಮುದಾಯಗಳನ್ನು ಪರಸ್ಪರ ಎತ್ತಿ ಕಟ್ಟಿ, ಅವುಗಳ ನಡುವೆ ದ್ವೇಷವನ್ನು ಬಿತ್ತಿ ಭುಗಿಲೆಬ್ಬಿಸಿ ತನ್ನ ಮತ್ತು ತನ್ನವರ ಬೇಳೆ ಬೇಯಿಸಿಕೊಳ್ಳುವುದೇ ಈ ಮಹಾನಾಯಕನ ಪರಮ ಕಾರ್ಯಸೂಚಿ. ಮುಸಲ್ಮಾನ ದ್ವೇಷವನ್ನು ತರ್ಕದ ತುದಿ ಮುಟ್ಟಿಸಿ, ಹಿಂದೂ ಬಹುಸಂಖ್ಯಾತವಾದದ ಅಹಮಿಕೆಯ ಹೆಡೆ ನೇವರಿಸುವ ಸಲುವಾಗಿ ಸಮಾನ ನಾಗರಿಕ ಸಂಹಿತೆಯನ್ನು ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಲಾಗಿದೆ. ಮುಸಲ್ಮಾನರು ಹಲವು ಹೆಂಡಿರನ್ನು ಕಟ್ಟಿಕೊಳ್ಳುತ್ತಾರೆಂಬ ಅಪಪ್ರಚಾರವನ್ನು ಅವಿರತವಾಗಿ ನಡೆಸಲಾಗುತ್ತಿದೆ. ಸಮಾನ ನಾಗರಿಕ ಸಂಹಿತೆಯ ನಗಾರಿಯನ್ನು ಬಾರಿಸಲಾಗಿದೆ. ಅಂತಾರಾಷ್ಟ್ರೀಯ ಜನಸಂಖ್ಯಾ ವಿಜ್ಞಾನಗಳ ಸಂಸ್ಥೆಯ 2022ರ ಅಧ್ಯಯನವೊಂದರ ಪ್ರಕಾರ ದೇಶದಲ್ಲಿ ಬಹುಪತ್ನಿತ್ವವನ್ನು ಪಾಲಿಸುತ್ತಿರುವ ಮುಸಲ್ಮಾನರ ಪ್ರಮಾಣ ಶೇ.1.9. ಹಿಂದೂಗಳಲ್ಲಿ ಈ ಪ್ರಮಾಣ 1.3ರಷ್ಟು.

ರಾಮಮಂದಿರ ನಿರ್ಮಾಣ, ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ್ದು ಮಹಾನ್ ಸಾಧನೆಗಳೆಂದು ಬಿಂಬಿಸಿಕೊಳ್ಳಲಾಗಿದೆ. ದೇಶದ ಉದ್ದಗಲಕ್ಕೆ ಕಿಚ್ಚಿನಂತೆ ವ್ಯಾಪಿಸಿ ಕಾಡುತ್ತಿರುವ ನಿರುದ್ಯೋಗ, ಬೆಲೆ ಏರಿಕೆ, ಹಣದುಬ್ಬರದ ಸಮಸ್ಯೆಗಳಿಗೆ ಮೋದಿ ಪ್ರಣಾಳಿಕೆಯಲ್ಲಿ ಜಾಗವಿಲ್ಲ. ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡುವ ಮನಸ್ಸು ಅಸಲೇ ಇಲ್ಲ. ಮಣ್ಣಿನ ಮಕ್ಕಳ ಸರಣಿ ಸರಣಿ ಆತ್ಮಹತ್ಯೆಗಳ ಕುರಿತು ಕಾಳಜಿಯಿಲ್ಲ. ರೈತರ ಆದಾಯವನ್ನು ದುಪ್ಪಟ್ಟು ಮಾಡುವ ಭರವಸೆ ಯಾವ ಗಾಳಿಯಲ್ಲಿ ಹಾರಿ ಹೋಯಿತು. ಅದರ ದೂರ  ದೂರದ ಪ್ರಸ್ತಾಪವೂ ಯಾಕೆ ಕೇಳಿ ಬರುತ್ತಿಲ್ಲ? ಜಿಡಿಪಿ ಅಭಿವೃದ್ಧಿ ದರ ಮನಮೋಹನ್ ಸಿಂಗ್ ಆಡಳಿತದ ಹತ್ತು ವರ್ಷಗಳಲ್ಲಿದ್ದ ದರವನ್ನು ದಾಟುವುದಿರಲಿ, ಅದರ ಸಮಕ್ಕೂ ಬಾರದಿರುವುದಕ್ಕೆ ಸಮಜಾಯಿಷಿ ಏನು?

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಆರ್ಥಿಕವಾಗಿ ಹಿಂದುಳಿದ ಬಲಿಷ್ಠ ಜಾತಿಗಳಿಗೆ ಶೇ.10ರ ಮೀಸಲಾತಿಯನ್ನು ಸಮರ್ಥಿಸಿಕೊಂಡಿರುವ ಪ್ರಣಾಳಿಕೆ ಜಾತಿ ಜನಗಣತಿಯ ಕುರಿತು ಬಾಯಿ ಹೊಲಿದುಕೊಂಡಿದೆಯೇಕೆ?

ಧನಿಕರು – ದರಿದ್ರರ ನಡುವೆ ಮುಗಿಲೆತ್ತರಕ್ಕೆ ಬೆಳೆದು ಅಬ್ಬರಿಸತೊಡಗಿರುವ ಅಸಮಾನತೆ ಇವರ ಅಂತಸ್ಸಾಕ್ಷಿಯನ್ನು ಕಾಡುತ್ತಿಲ್ಲ. ಈ ಅಸಮಾನತೆ ಆರ್ಥಸ್ಥಿತಿಯನ್ನೇ ಆಹುತಿ ತೆಗೆದುಕೊಂಡೀತು ಎಂಬ ಎಚ್ಚರಿಕೆಗೆ ಮೋದಿ ಸರ್ಕಾರ ಕಿವುಡಾಗಿ ಹೋಗಿದೆ. ವಂದೇ ಭಾರತ್‌ ರೈಲುಗಾಡಿಯಂತಹ ಆತ್ಮಪ್ರತಿಷ್ಠೆಯ ಅಹಂಕಾರದ ಪೊಳ್ಳು ಯೋಜನೆಗಳು, ತಮ್ಮ ಏಕಚಕ್ರಾಧಿಪತ್ಯದ ಬೇರುಗಳನ್ನು ಇನ್ನಷ್ಟು ಆಳಕ್ಕೆ ಇಳಿಸಲು ಅನುವು ಮಾಡಿಕೊಡುವ ‘ಒಂದು ದೇಶ- ಒಂದು ಚುನಾವಣೆ’ ಮನಮೋಹನ್ ಸಿಂಗ್ ಸರ್ಕಾರದ ಯೋಜನೆಗಳ ಹೆಸರು ಬದಲಿಸಿ ತನ್ನ ಯೋಜನೆಗಳೆಂದು ಸಾರುವ ಮರೆ ಮೋಸವೇ ಮೆರೆದಿದೆ.

ಮೂರು ಕೋಟಿ ಮನೆಗಳನ್ನು ಕಟ್ಟಿಕೊಡುವುದಾಗಿ ಬಡಜನರ ಮೂಗಿಗೆ ತುಪ್ಪ ಸವರಲಾಗಿದೆ. 2015ರಲ್ಲಿ ಮೋದಿಯವರೇ ಉದ್ಘಾಟಿಸಿದ್ದ ಯೋಜನೆಯ ಹೆಸರು- ‘2022ರ ಹೊತ್ತಿಗೆ ಎಲ್ಲರಿಗೂ ಮನೆ’. ಎಲ್ಲ ಬಡವರಿಗೂ ಮನೆಗಳು ದೊರೆತು, ಒಂದೂವರೆ ವರ್ಷಗಳೇ ಆಗಿರಬೇಕಿತ್ತಲ್ಲ? ಈ ಮೂರು ಕೋಟಿ ಮನೆಗಳು ಯಾವ ಬಡವರಿಗೆ? ಹಳೆಯ ಭರವಸೆಗಳು ಯಾಕೆ ಈಡೇರಿಲ್ಲ?

ಎಂಬತ್ತು ಕೋಟಿ ಜನತೆಗೆ ಈಗಾಗಲೇ ಇನ್ನೂ ಐದು ವರ್ಷಗಳ ಕಾಲ ವಿಸ್ತರಿಸಲಾಗಿರುವ ಉಚಿತ ಪಡಿತರ ವಿತರಣೆಯನ್ನು ಪುನಃ ಪ್ರಣಾಳಿಕೆಯಲ್ಲಿ ಪ್ರಕಟಿಸುವ ಔಚಿತ್ಯವೇನು?

ಸುಳ್ಳುಗಳನ್ನೇ ಸತ್ಯವೆಂದು ಸಾವಿರ ಬಾರಿ ಸಾರಿ ಸಾರಿ ಹೇಳುವ ದೈತ್ಯ ಸಂವಹನ ಯಂತ್ರ, ಅಪಾರ ಧನಸಂಪನ್ಮೂಲ ಬಿಜೆಪಿಯ ಹಸ್ತಗತವಾಗಿ ಹೋಗಿದೆ. ಸಾಂವಿಧಾನಿಕ ಸಂಸ್ಥೆಗಳನ್ನು ನಿಸ್ತೇಜಗೊಳಿಸಿ ಮುಷ್ಠಿಯಲ್ಲಿ ಇಟ್ಟುಕೊಳ್ಳಲಾಗಿದೆ. ಸತ್ಯ ಎದ್ದು ಚಪ್ಪಲಿ ಧರಿಸುವುದರ ಒಳಗಾಗಿ ಸುಳ್ಳು ಮೂರು ಸಲ ವಿಶ್ವಪ್ರದಕ್ಷಿಣೆ ಮಾಡಿ ಬಂದಿರುತ್ತದೆಂಬ ಮಾತು ನಿಜವಾಗಿ ಹೋಗಿದೆ.

ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ರಾಜ್ಯವನ್ನು ತಲ್ಲಣಿಸಿದ ಹೆಣ್ಣುಮಕ್ಕಳ ಸರಣಿ ಹತ್ಯೆಗಳು ಕೊಡುತ್ತಿರುವ ಸಂದೇಶವೇನು?

ಒಂದು ತಿಂಗಳಲ್ಲಿ ಮೂರ್ನಾಲ್ಕು ಘಟನೆಗಳು ನಡೆದಾಗ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಮಹಿಳೆಯರಿಗೆ...

ಈ ದಿನ ಸಂಪಾದಕೀಯ | ಮುಸ್ಲಿಮರು, ಮಾಧ್ಯಮಗಳು ಮತ್ತು ಮೂರು ಕೊಲೆಗಳು

ನೇಹಾ ಹತ್ಯೆಯ ವಿರುದ್ಧ ಕಾಣಿಸಿಕೊಂಡ ಜನಾಕ್ರೋಶದ ಹಿಂದೆ ಸುದ್ದಿ ಮಾಧ್ಯಮಗಳ ಪ್ರಚೋದನೆ...

ಈ ದಿನ ಸಂಪಾದಕೀಯ | ಹಿಂದೂ-ಮುಸ್ಲಿಮ್ ರಾಜಕಾರಣ ಮಾಡುವುದಿಲ್ಲವೇ ನಮ್ಮ ಪ್ರಧಾನಿ!

ಪ್ರಸಿದ್ಧ ಇಂಗ್ಲಿಷ್ ನಿಯತಕಾಲಿಕ 'ದಿ ಎಕಾನಮಿಸ್ಟ್‌'ನ 2022ರ ಏಪ್ರಿಲ್ ಸಂಚಿಕೆಯೊಂದರ ಬರೆಹವೊಂದರ...

ಈ ದಿನ ಸಂಪಾದಕೀಯ | ದೇಶ ತನ್ನ ಹಳೆಯ ಲಯಕ್ಕೆ, ಪ್ರಜಾಪ್ರಭುತ್ವಕ್ಕೆ ಹಿಂದಿರುಗುತ್ತಿದೆಯೇ?

'ಬಿಜೆಪಿಯ ಮುಂದಿನ ಪ್ರಧಾನಿ ಅಭ್ಯರ್ಥಿ ಯಾರು' ಎನ್ನುವುದು ಕೇವಲ ಒಂದು ಪೊಲಿಟಿಕಲ್...