ಏಪ್ರಿಲ್ 20ರ ಶನಿವಾರ 3 ಗಂಟೆಗೆ ಚಿಕ್ಕಬಳ್ಳಾಪುರ ತಾಲೂಕಿನ ಚೊಕ್ಕಹಳ್ಳಿ ಬಳಿ ನಡೆಯಲಿರುವ ಪ್ರಚಾರ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದಾರೆ ಎಂದು ಬಿಜೆಪಿ ಮುಖಂಡ ಕೆ ವಿ ನಾಗರಾಜು ತಿಳಿಸಿದರು.
ಚಿಕ್ಕಬಳ್ಳಾಪುರದಲ್ಲಿ ಗುರುವಾರ ನಡೆಸಿದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, “ತಾಲೂಕಿನ ಚೊಕ್ಕಹಳ್ಳಿ ಬಳಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ” ಎಂದು ಹೇಳಿದರು.
“ಎನ್‌ಡಿಎ ಅಭ್ಯರ್ಥಿಗಳಾದ ಡಾ ಕೆ ಸುಧಾಕರ್, ಕೋಲಾರ ಜೆಡಿಎಸ್ ಅಭ್ಯರ್ಥಿ ಮಲ್ಲೇಶ್ ಬಾಬು ಅವರ ಪರ ಉಭಯ ನಾಯಕರು ಮತಯಾಚನೆ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಸುಮಾರು 1.5 ಲಕ್ಷ ಮಂದಿ ಸೇರಲಿದ್ದಾರೆ. ಎಲ್ಲರೂ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು” ಎಂದು ಮನವಿ ಮಾಡಿದರು.
“ಕಾರ್ಯಕ್ರಮಕ್ಕೆ ಬರುವವರಿಗೆ ನೀರಿನ ಬಾಟಲ್ ಇತ್ಯಾದಿ ವಸ್ತುಗಳನ್ನು ತರಲು ಅವಕಾಶ ಇರುವುದಿಲ್ಲ. ಕಾರ್ಯಕ್ರಮದ ಆಯೋಜಕರು ಸಕಲ ವ್ಯವಸ್ಥೆ ಮಾಡಲಿದ್ದಾರೆ” ಎಂದು ತಿಳಿಸಿದರು.
ಜೆಡಿಎಸ್ ಅಧ್ಯಕ್ಷ ಮುನಿಯಪ್ಪ ಮಾತನಾಡಿ, “ಏಪ್ರಿಲ್ 20ರಂದು ಜಿಲ್ಲೆಗೆ ಎರಡನೇ ಬಾರಿಗೆ ನರೇಂದ್ರ ಮೋದಿ ಬರುತ್ತಿದ್ದಾರೆ. ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆ ಸೇರಿ 1.75 ಲಕ್ಷ ಸಂಖ್ಯೆಯಲ್ಲಿ ಜನ ಸೇರಿಸುವ ವ್ಯವಸ್ಥೆಯಾಗಿದೆ. ಬಿಜೆಪಿಯ ಪ್ರಮುಖ ನಾಯಕರು ಕಾರ್ಯಕ್ರಮಕ್ಕೆ ಬರಲಿದ್ದಾರೆ. ದೇಶದಲ್ಲಿ ಬಿಜೆಪಿ ಗೆಲ್ಲುವ ವಾತಾವರಣ ಇದೆ. ಹಾಗಾಗಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು” ಎಂದು ಮನವಿ ಮಾಡಿದರು.
ಬಿಎಂಟಿಸಿ ಉಪಾಧ್ಯಕ್ಷ ನವೀನ್ ಕಿರಣ್ ಮಾತನಾಡಿ, “ಏಪ್ರಿಲ್ 20ರಂದು ಒಂದು ಸುನಾಮಿ ಬರಲಿದೆ. ಮೋದಿಯವರ ಭಾಷಣದ ಕೇಳಲು ಎಲ್ಲರೂ ಉತ್ಸುಕರಾಗಿದ್ದಾರೆ. ನಮ್ಮ ಜಿಲ್ಲೆಗೆ ಮೋದಿಜಿ ಬಂದು ಅಭ್ಯರ್ಥಿಗಳ ಪರ ಮತಯಾಚನೆ ಮಾಡಲಿದ್ದಾರೆ. ಆದ್ದರಿಂದ ಜಿಲ್ಲೆಯ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇಶ ಕಟ್ಟುವ ಮಹಾ ಯಜ್ಞಕ್ಕೆ ಸಹಕಾರ ಕೊಡಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಕಾಂಗ್ರೆಸ್ ಅಭ್ಯರ್ಥಿ ಜಿ ಕುಮಾರ ನಾಯಕರನ್ನು ಭಾರೀ ಅಂತರದಿಂದ ಗೆಲ್ಲಿಸಿ: ಸಚಿವ ಬೋಸರಾಜು
ರಾಮಸ್ವಾಮಿ, ಶ್ರೀನಿವಾಸ್, ಮಂಜುನಾಥ್, ರಾಮು, ಒಬಿಸಿ ನಗರಾಧ್ಯಕ್ಷ ರಾಮಣ್ಣ, ಬಿಜೆಪಿ ಜಿಲ್ಲಾ ವಕ್ತಾರ ರಮೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುರುಳಿ, ಮೆಹಬೂಬ್ ಪಾಷಾ, ನಾರಾಯಣ ಸ್ವಾಮಿ, ಕಾಳೇಗೌಡ, ಜಿಲ್ಲಾ ಉಪಾಧ್ಯಕ್ಷ ಸೋಮಣ್ಣ, ಮಧುಚಂದ್ರ ಸೇರಿದಂತೆ ಬಿಜೆಪಿ-ಜೆಡಿಎಸ್ ಮುಖಂಡರು ಇದ್ದರು.
