ಲೋಕಸಭಾ ಚುನಾವಣೆ ಯ ಮೊದಲ ಹಂತದ ಮತದಾನ ಇಂದು ನಡೆಯಲಿದ್ದು, ದೇಶದ 102 ಕ್ಷೇತ್ರಗಳ 1,600ಕ್ಕೂ ಹೆಚ್ಚು ಅಭ್ಯರ್ಥಿಗಳ ಜನಾದೇಶ ಇಂದು ನಿರ್ಧಾರವಾಗಲಿದೆ. ಮೊದಲ ಹಂತದ ಮತದಾನ ಪ್ರಕ್ರಿಯೆಯಲ್ಲಿ 16.63 ಕೋಟಿಗೂ ಹೆಚ್ಚು ಮಂದಿ ಮತ ಚಲಾಯಿಸಲಿದ್ದಾರೆ.
ಚುನಾವಣೆಗೆ ಸ್ಪರ್ಧಿಸಿದವರಲ್ಲಿ ಎಂಟು ಮಂದಿ ಕೇಂದ್ರ ಸಚಿವರು, ಇಬ್ಬರು ಮಾಜಿ ಮುಖ್ಯಮಂತ್ರಿಗಳು ಹಾಗೂ ಒಬ್ಬರು ಮಾಜಿ ರಾಜ್ಯಪಾಲರು ಕೂಡ ಇದ್ದಾರೆ.
ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ಸರ್ಬಾನಂದ ಸೋನೋವಾಲ್, ಭೂಪೇಂದ್ರ ಯಾದವ್, ಕಾಂಗ್ರೆಸ್‌ನ ಗೌರವ್ ಗೊಗೋಯ್, ಡಿಎಂಕೆಯ ಕನಿಮೋಳಿ ಮತ್ತು ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಕೇಂದ್ರ ಸಚಿವರಾದ ಕಿರಣ್ ರಿಜಿಜು, ಸಂಜೀವ್ ಬಲಿಯಾನ್, ಜಿತೇಂದ್ರ ಸಿಂಗ್, ಅರ್ಜುನ್ ರಾಮ್ ಮೇಘಾ ವಾಲ್, ಎಲ್. ಮುರುಗನ್, ನಿಸಿತ್ ಪ್ರಮಾಣಿಕ್ ಕೂಡ ಕಣದಲ್ಲಿದ್ದಾರೆ.
ಮಾಜಿ ಸಿಎಂ ಬಿಪ್ಲಬ್ ಕುಮಾರ್ ದೇವ್, ನಬಾಮ್ ತುಕಿ ಮತ್ತು ಮಾಜಿ ರಾಜ್ಯಪಾಲೆ ತಮಿಳ್ಸಾಯ್ ಸೌಂದರ್ರಾಜನ್ ಅವರು ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳಾಗಿದ್ದಾರೆ.
ಇದನ್ನು ಓದಿದ್ದೀರಾ?: ಉತ್ತರ ಕನ್ನಡ ಲೋಕಸಭಾ ಕ್ಷೇತ್ರ | ದಿಗ್ಗಜರ ದಿಕ್ಕೆಡಿಸಿದ, ಅವಾಂತರಕಾರಿಗಳಿಗೆ ಮಣೆ ಹಾಕಿದ ಕ್ಷೇತ್ರ
ಏಳು ಹಂತಗಳಲ್ಲಿ ನಡೆಯಲಿರುವ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ, ಶುಕ್ರವಾರ ನಡೆಯಲಿರುವ ಹಂತವು ಅತಿ ದೊಡ್ಡದಾಗಿದೆ. ಅರುಣಾಚಲ ಪ್ರದೇಶ ಹಾಗೂ ಸಿಕ್ಕಿಂ ವಿಧಾನಸಭೆಗಳ ಒಟ್ಟು 92 ಕ್ಷೇತ್ರಗಳಿಗೆ ಕೂಡ ಇಂದೇ ಮತದಾನ ನಡೆಯಲಿದೆ.
ಮತದಾನವು ಬೆಳಿಗ್ಗೆ 7 ಗಂಟೆಗೆ ಶುರುವಾಗಲಿದ್ದು, ಸಂಜೆ 6ಕ್ಕೆ ಮುಕ್ತಾಯವಾಗಲಿದೆ. ಚುನಾವಣಾ ಸಿಬ್ಬಂದಿ ಹಾಗೂ ಭದ್ರತಾ ಸಿಬ್ಬಂದಿಯನ್ನು ಒಂದೆಡೆಯಿಂದ ಇನ್ನೊಂದೆಡೆ ಕರೆದೊಯ್ಯಲು 41 ಹೆಲಿಕಾಪ್ಟರ್‌ಗಳು, 84 ವಿಶೇಷ ರೈಲುಗಳು ಹಾಗೂ ಸರಿಸುಮಾರು ಒಂದು ಲಕ್ಷ ವಾಹನಗಳ ವ್ಯವಸ್ಥೆ ಮಾಡಲಾಗಿದೆ ಎಂದು ಕೇಂದ್ರ ಚುನಾವಣಾ ಆಯೋಗವು ಮಾಹಿತಿ ನೀಡಿದೆ.
ಶೇಕಡ 50ಕ್ಕೂ ಹೆಚ್ಚಿನ ಮತಗಟ್ಟೆ ಗಳಲ್ಲಿ ವೆಬ್‌ಕಾಸ್ಟಿಂಗ್ ವ್ಯವಸ್ಥೆ ಇರಲಿದೆ. ಅಲ್ಲದೆ, ಎಲ್ಲ ಮತಗಟ್ಟೆಗಳಿಗೆ ಸೂಕ್ಷ್ಮ ಪರಿವೀಕ್ಷಕರನ್ನು ನೇಮಿಸಲಾಗುತ್ತದೆ.
ಶುಕ್ರವಾರ ಮತದಾನ ನಡೆಯಲಿರುವ ರಾಜ್ಯಗಳಲ್ಲಿ ಅರುಣಾಚಲ ಪ್ರದೇಶ, ಅಸ್ಸಾಂ, ಬಿಹಾರ, ಛತ್ತೀಸ್‌ಗಢ, ಮಧ್ಯಪ್ರದೇಶ, ಮಹಾರಾಷ್ಟ್ರ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ರಾಜಸ್ಥಾನ, ಸಿಕ್ಕಿಂ, ತಮಿಳುನಾಡು, ತ್ರಿಪುರ, ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಪಶ್ಚಿಮ ಬಂಗಾಳ ಸೇರಿವೆ.
ಕೇಂದ್ರಾಡಳಿತ ಪ್ರದೇಶಗಳಾದ ಅಂಡಮಾನ್ ಮತ್ತು ನಿಕೋಬಾರ್, ಜಮ್ಮು ಮತ್ತು ಕಾಶ್ಮೀರ, ಲಕ್ಷದ್ವೀಪ ಮತ್ತು ಪುದುಚೇರಿಯ ಶುಕ್ರವಾರದಂದು ಚುನಾವಣೆಗಳು ನಡೆಯಲಿವೆ.
ಒಟ್ಟು ರಾಜ್ಯ, ಕೇಂದ್ರಾಡಳಿತ ಪ್ರದೇಶ 21
ಒಟ್ಟು ಲೋಕಸಭಾ ಕ್ಷೇತ್ರಗಳು 102
ಒಟ್ಟು ಅಭ್ಯರ್ಥಿಗಳು 1,625
ಮತದಾನ ಕೇಂದ್ರಗಳು 1.87 ಲಕ್ಷ
ಚುನಾವಣ ಸಿಬಂದಿ 18 ಲಕ್ಷ
ಒಟ್ಟು ಮತದಾರರು 16.63 ಕೋಟಿ
ಪುರುಷ ಮತದಾರರು 8.4 ಕೋಟಿ
ಮಹಿಳಾ ಮತದಾರರು 8.23 ಕೋಟಿ
ಲಿಂಗತ್ವ ಅಲ್ಪಸಂಖ್ಯಾತರು 11,371
ಮೊದಲ ಬಾರಿ ಹಕ್ಕು ಚಲಾಯಿಸುವವರು: 35.67 ಲಕ್ಷ
