ಉತ್ತರ ಕನ್ನಡ ಲೋಕಸಭಾ ಕ್ಷೇತ್ರ | ದಿಗ್ಗಜರ ದಿಕ್ಕೆಡಿಸಿದ, ಅವಾಂತರಕಾರಿಗಳಿಗೆ ಮಣೆ ಹಾಕಿದ ಕ್ಷೇತ್ರ

Date:

ಕೆನರಾ ಕ್ಷೇತ್ರದ ಚುನಾವಣಾ ಇತಿಹಾಸದ ಮೇಲೆ ಕಣ್ಣುಹಾಯಿಸಿದರೆ ಪರಿಚಿತರು, ಪ್ರಸಿದ್ಧರು ತಿರಸ್ಕೃತರಾಗಿರುವ ಮತ್ತು ಅಪರಿಚಿತರು, ಅಯೋಗ್ಯರು ಆಯ್ಕೆಯಾಗಿರುವ ಸ್ವಾರಸ್ಯಕರ ಸಂಗತಿಗಳು ಕಾಣಿಸುತ್ತವೆ. ಸಾಮಾಜಿಕ, ರಾಜಕೀಯ, ಸಿನೆಮಾ, ಸಾಹಿತ್ಯ ವಲಯದ ಸಜ್ಜನರನ್ನು ಮಕಾಡೆ ಮಲಗಿಸಿರುವ ಕೆನರಾ ಮತದಾರರು ಅವಾಂತರಕಾರಿ ಮತ್ತು ಅನಾಹುತಕಾರಿಗಳನ್ನು ಮತ್ತೆ-ಮತ್ತೆ ಗೆಲ್ಲಿಸಿ ಪಶ್ಚಾತ್ತಾಪ ಪಟ್ಟಿದ್ದಾರೆ. 

ಉತ್ತರ ಕನ್ನಡ ಲೋಕಸಭಾ ಕ್ಷೇತ್ರ ವಿಭಿನ್ನತೆ, ವೈವಿದ್ಯತೆ, ವೈಶಿಷ್ಟ್ಯದ ಸೀಮೆ. ಭೋರ್ಗರೆವ ಅರಬ್ಬೀ ಕಡಲ ತಡಿಗೆ ಚಾಚಿಕೊಂಡಿರುವ ಕರಾವಳಿ, ಅದಕ್ಕೆ ಸಮಾನಾಂತರವಾಗಿ ಹಬ್ಬಿರುವ ಪಡುವಣ ಘಟ್ಟ ಸಾಲು, ಮಲೆನಾಡು, ಅರೆಮಲೆನಾಡು ಮತ್ತು ಬಯಲು ಸೀಮೆಗಳ ವಿಭಿನ್ನ ಭೌಗೋಳಿಕ ಪರಿಸರದ ಈ ಸಂಸದೀಯ ಕ್ಷೇತ್ರದಲ್ಲಿ ತರಹೇವಾರಿ ಭಾಷೆ, ಬೆಳೆ, ಸಂಸ್ಕೃತಿ, ಜನಜೀವನ ನೆಲೆಯಾಗಿದೆ.

ಉತ್ತರ ಕನ್ನಡದ ಎಲ್ಲ ಆರೂ ಅಸೆಂಬ್ಲಿ ಕ್ಷೇತ್ರಗಳ ಜತೆ ಬೆಳಗಾವಿ ಜಿಲ್ಲೆಯ ಖಾನಾಪುರ ಮತ್ತು ಕಿತ್ತೂರು ಸೇರಿಸಿ ರಚಿಸಲಾಗಿರುವ ಉತ್ತರ ಕನ್ನಡ ‘ಲೋಕ’ದಲ್ಲಿರುವಷ್ಟು ಜಾತಿ-ಜನಾಂಗ-ಬುಡಕಟ್ಟು-ಭಾಷೆ ಬಹುಶಃ ದೇಶದ ಇನ್ನೆಲ್ಲಿಯೂ ಕಾಣಿಸದು. ಸ್ವಾತಂತ್ರ್ಯ ಚಳವಳಿಯಿಂದ ಪರಿಸರ, ಅರಣ್ಯ ಸಾಗುವಳಿ ಹಕ್ಕಿನ ಹೋರಾಟದವರೆಗೆ ಇಲ್ಲಾಗಿರುವಷ್ಟು ಪ್ರತಿಭಟನೆ ಭಾರತದ ಬೇರೆಲ್ಲೂ ನಡೆದಿಲ್ಲ. ಆದರೆ ಇವತ್ತಿಗೂ ಈ ತೀರಾ ಹಿಂದುಳಿದಿರುವ ನತದೃಷ್ಟ ಕೆನರಾದ ಅಳಲು ಮಾತ್ರ ಸುಮಾರು 400 ಕಿ.ಮೀ. ದೂರದಲ್ಲಿರುವ ಆಡಳಿತ ಶಕ್ತಿ ಕೇಂದ್ರ ಬೆಂಗಳೂರಿನ ವಿಧಾನ ಸೌಧಕ್ಕೆ ಕೇಳಿಸುತ್ತಿಲ್ಲ.

ಉತ್ತರ ಕನ್ನಡದ ದುರಂತಕ್ಕೆ ಮೂಲ ಕಾರಣ- ಇಲ್ಲಿಂದ ಗೆದ್ದು ಸಂಸದರಾದವರ ಅಸಾಮರ್ಥ್ಯ, ರಾಜಕೀಯ ಇಚ್ಛಾಶಕ್ತಿಯ ಕೊರತೆ ಮತ್ತು ಕ್ಷೇತ್ರದ ನಾಡಿಮಿಡಿತ ಅರಿವಾಗದ ಅಯೋಗ್ಯತೆ ಎಂದು ವಿಶ್ಲೇಷಿಸಲಾಗುತ್ತಿದೆ. ಇದಕ್ಕೆ ಕವಿ-ಕರ್ಮಯೋಗಿ ದಿನಕರ ದೇಸಾಯಿ ಮಾತ್ರ ಅಪವಾದ. 1967ರಲ್ಲಿ ಸಂಸದರಾಗಿದ್ದ ಜನಸೇವಕ ದಿನಕರ ದೇಸಾಯಿ ಪೂರ್ಣ ಪ್ರಮಾಣದ ರಾಜಕಾರಣಿಯಾಗಿರಲಿಲ್ಲ. ಕ್ಷೇತ್ರದ ಕಾಳಜಿ-ಕಳಕಳಿಯೇನೋ ದೇಸಾಯಿ ಅವರಲ್ಲಿತ್ತು. ಆದರೆ ಇಂದಿರಾ ಗಾಂಧಿ ಸರಕಾರದ ಕಡು ಟೀಕಾಕಾರ ಸಂಸದರಾಗಿದ್ದರಿಂದ ಅಭಿವೃದ್ಧಿ ಕನಸು ಸಾಕಾರಕ್ಕೆ ಹಲವು ಅಡ್ಡಿ-ಆತಂಕಗಳಿದ್ದವು. ಕಾಡು-ಮೇಡುಗಳಿಂದ ಆವೃತವಾದ ವಿಶಾಲ ದರ್ಗಮ  ಉತ್ತರ ಕನ್ನಡದ ಸಮಸ್ಯೆ-ಸಂಕಟ ಪರಿಹಾರ ಅಂದಿನ ಕಾಲದಲ್ಲಿ ಅಷ್ಟು ಸುಲಭವೂ ಆಗಿರಲಿಲ್ಲ. ದೇಸಾಯಿ ಬಿಟ್ಟರೆ ಉಳಿದೆಲ್ಲ ಸಂಸದರು ಅಭಿವೃದ್ಧಿ ಚಿಂತನೆಗಳಿಲ್ಲದ ಜನದ್ರೋಹಿಗಳೂ ಆಗಿದ್ದರೆಂಬ ಆಕ್ರೋಶ ಜಿಲ್ಲೆಯಲ್ಲಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಉತ್ತರ ಕನ್ನಡ ಲೋಕಸಭಾ ಕ್ಷೇತ್ರ ‘ಕೆನರಾ’ ಎಂದೇ ಚಿರಪರಿಚಿತ. ಬಾಂಬೆ ಪ್ರೆಸಿಡೆನ್ಸಿಯಲ್ಲಿದ್ದ ಉತ್ತರ ಕನ್ನಡ ಜಿಲ್ಲೆಗೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕನ್ನು ಸೇರಿಸಿ ಕೆನರಾ ಕ್ಷೇತ್ರ ರಚಿಸಲಾಗಿತ್ತು. 1973ರಲ್ಲಿ ನಡೆದ ಸಂಸದೀಯ ಕ್ಷೇತ್ರಗಳ ಭೌಗೋಳಿಕ ಪರಿಧಿಯ ಡಿಲಿಮಿಟೇಶನ್ ನಲ್ಲಿ ಸಾಗರವನ್ನು ಬಿಟ್ಟು ಬೆಳಗಾವಿ ಕ್ಷೇತ್ರದಲ್ಲಿದ್ದ ಖಾನಾಪುರ ಮತ್ತು ಕಿತ್ತೂರನ್ನು ಕೆನರಾಕ್ಕೆ ಜೋಡಿಸಲಾಯಿತು. 2007ರ ಲೋಕಸಭಾ ಕ್ಷೇತ್ರಗಳ ಪುನರ್ ರಚನಾ ಪ್ರಕ್ರಿಯೆಯಲ್ಲಿ ಪರಿಧಿಯಲ್ಲೇನೂ ಬದಲಾವಣೆಯಾಗಲಿಲ್ಲ. ಹೆಸರಷ್ಟೇ ಉತ್ತರ ಕನ್ನಡ ಲೋಕಸಭಾ ಕ್ಷೇತ್ರವೆಂದಾಯಿತು. ಕ್ಷೇತ್ರದ ಒಂದು ತುದಿಯಿಂದ ಮತ್ತೊಂದು ತುದಿಗೆ ಒಂದು ದಿನದಲ್ಲಿ ಕ್ರಮಿಸಲಾಗದಷ್ಟು ದೊಡ್ಡದು ಮತ್ತು ದರ್ಗಮ ಕ್ಷೇತ್ರವಿದು!

ಕೆನರಾ ಕ್ಷೇತ್ರದ ಚುನಾವಣಾ ಇತಿಹಾಸದ ಮೇಲೆ ಕಣ್ಣುಹಾಯಿಸಿದರೆ ಪರಿಚಿತರು, ಪ್ರಸಿದ್ಧರು ತಿರಸ್ಕೃತರಾಗಿರುವ ಮತ್ತು ಅಪರಿಚಿತರು, ಅಯೋಗ್ಯರು ಆಯ್ಕೆಯಾಗಿರುವ ಸ್ವಾರಸ್ಯಕರ ಸಂಗತಿಗಳು ಕಾಣಿಸುತ್ತವೆ. ಸಾಮಾಜಿಕ, ರಾಜಕೀಯ, ಸಿನೆಮಾ, ಸಾಹಿತ್ಯ ವಲಯದ ಸಜ್ಜನರನ್ನು ಮಕಾಡೆ ಮಲಗಿಸಿರುವ ಕೆನರಾ ಮತದಾರರು ಅವಾಂತರಕಾರಿ ಮತ್ತು ಅನಾಹುತಕಾರಿಗಳನ್ನು ಮತ್ತೆ-ಮತ್ತೆ ಗೆಲ್ಲಿಸಿ ಪಶ್ಚಾತಾಪ ಪಟ್ಟಿದ್ದಾರೆ! ಸುಪ್ರಸಿದ್ದ ಇಂಗ್ಲಿಷ್ ಕಾದಂಬರಿಕಾರ ಮನೋಹರ ಮಾಳಗಾಂವ್ಕರ್, ಭೂಮಾಲೀಕರ ಶೋಷಣೆ ವಿರುದ್ಧ ಕೆಚ್ಚೆದೆಯ ಹೋರಾಟ ಕಟ್ಟಿದ್ದ ಶಿಕ್ಷಣ ತಜ್ಞ ದಿನಕರ ದೇಸಾಯಿ, ವಿಚಾರ ಸಾಹಿತಿ ಗೌರೀಶ್ ಕಾಯ್ಕಿಣಿ, ಚತುರ ರಾಜಕಾರಣಿ ಎನ್ನಲಾಗುವ ರಾಮಕೃಷ್ಣ ಹೆಗಡೆ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಶಿವರಾಮ ಕಾರಂತ್, ಚಿತ್ರನಟ ಅನಂತ್ ನಾಗ್ ಕೆನರಾದಲ್ಲಿ ಸೋಲು ಅನುಭವಿಸಿದ್ದಾರೆ. ಅನಂತಕುಮಾರ್ ಹೆಗಡೆಯಂಥ ಮತೀಯ ಭಯೊತ್ಪಾದಕ ಸತತವಾಗಿ ಗೆದ್ದು ಗಬ್ಬೆಬ್ಬಿಸಿದ್ದಾರೆ. ಜಿಲ್ಲೆಯ ಒಳಗಿನ ಬೇಕು-ಬೇಡ, ಸಮಸ್ಯೆ-ಸಂಕಟಗಳಿಗಿಂತ ಜಾತಿ ಪ್ರತಿಷ್ಠೆ, ಧರ್ಮೋನ್ಮಾದ, ಇಂದಿರಾ ಗಾಳಿ, ಮೋದಿ ಹವಾದಂಥ ಹೊರಗಿನ ಅಂಶಗಳೇ ಜಿಲ್ಲೆಯ ಮತದಾರರ ಮೇಲೆ ಹೆಚ್ಚು ಪ್ರಭಾವ ಬೀರಿದ್ದು ಸಜ್ಜನರ ಸೋಲಿಗೆ ಪ್ರಮುಖ ಕಾರಣವಾಗಿತ್ತೆನ್ನಲಾಗಿದೆ.

ಉಡುಪಿಯ ವಕೀಲ, ಪತ್ರಕರ್ತ ಜೋಕಿಮ್ ಆಳ್ವ ಮೊದಲ ಮೂರು ಚುನಾವಣೆಯಲ್ಲಿ ಕಾಂಗ್ರೆಸ್ ಅಲೆಯೇರಿ ಕೆನರಾದ ಎಂಪಿಯಾಗಿದ್ದರು. ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ್ದ ಪ್ರಮುಖ ಕ್ರಿಶ್ಚಿಯನ್ ಮುಂದಾಳಾಗಿದ್ದ ಆಳ್ವರಿಗೆ ಎಲ್ಲಿಂದಾದರೂ ಸಂಸದನಾಗಿ ಮಾಡುವ ಅನಿವಾರ್ಯತೆ ಕಾಂಗ್ರೆಸ್ ನಾಯಕರಿಗಿತ್ತು. ಜೋಕಿಮ್ ಆಳ್ವ ಮತ್ತು ವೈಲೆಟ್ ಆಳ್ವ(ರಾಜ್ಯಸಭೆಯ ಮಾಜಿ ಉಪಾಧ್ಯಕ್ಷೆ) ದಂಪತಿಗೆ ನೆಹರು ಕುಟುಂಬದ ನಿಕಟ ಒಡನಾಡವೂ ಇತ್ತು. ಶ್ರೀನಿವಾಸ ಮಲ್ಯ ಮತ್ತು ರಂಗನಾಥ ಶೆಣೈಗೆ ಮಂಗಳೂರು ಮತ್ತು ಉಡುಪಿಯಲ್ಲಿ ಸ್ಥಾನ ಕಲ್ಪಿಸಿದ್ದರಿಂದ ಆಳ್ವರನ್ನು ಕೆನರಾಕ್ಕೆ ಸಾಗಹಾಕಲಾಗಿತ್ತು. 1952ರ ಮೊದಲ ಮಹಾಚುನಾವಣೆಯಲ್ಲಿ ಅಪರಿಚಿತ ಆಳ್ವ ಕಾಂಗ್ರೆಸ್ ನಾಮ ಬಲದಲ್ಲಿ ನಿರಾಯಾಸವಾಗಿ ಚುನಾಯಿತರಾದರು.

1957ರಲ್ಲಿ ವಿಪಕ್ಷಗಳೆಲ್ಲ ಒಂದಾಗಿ ಪ್ರಸಿದ್ಧ ಲೆಕ್ಕಪರಿಶೋಧಕರಾಗಿದ್ದ ಸೋಷಿಲಿಸ್ಟ್ ಸಿದ್ಧಾಂತದ ದಿವೇಕರರನ್ನುಕಾಂಗ್ರೆಸ್ಸಿನ ಆಳ್ವರಿಗೆ ಎದುರಾಗಿ ಅಖಾಡಕ್ಕೆ ಇಳಿಸಿದ್ದರು. ಕಾಂಗ್ರೆಸ್ ಗಾಳಿಯಲ್ಲಿ ದಿವೇಕರ್ ಗೆ ಗೆಲ್ಲಲಾಗಲಿಲ್ಲ. 1962ರ ಚುನಾವಣೆ ಸಂದರ್ಭದಲ್ಲಿ ಖ್ಯಾತ ಇಂಗ್ಲಿಷ್ ಸಾಹಿತಿ, ನಿವೃತ್ತ ಸೈನ್ಯಾಧಿಕಾರಿ ಜೊಯಿಡಾದ ಜಗಲಬೇಟ್ ನ ಮನೋಹರ ಮಾಳಗಾಂವ್ಕರ್ ವಿರೋಧ ಪಕ್ಷಗಳ ಒಮ್ಮತದ ಅಭ್ಯರ್ಥಿಯಾಗಿ ಆಳ್ವರಿಗೆ ಸೆಡ್ಡು ಹೊಡೆದಿದ್ದರು. ಸಣ್ಣ ಅಂತರದಿಂದ ಮಾಳಗಾಂವ್ಕರ್ ಸೋಲುವಂತಾಯಿತು.

1967ರ ಚುನಾವಣೆ ಹೊತ್ತಲ್ಲಿ ಆಳ್ವ  ವಿರುದ್ಧ ಕೂಗೆದ್ದಿತ್ತು. ಕ್ಷೇತ್ರ ಕಡೆಗಣಿಸಿ ಉಡುಪಿ, ಮಂಗಳೂರು ಮತ್ರು ದಿಲ್ಲಿಗಳಲ್ಲೇ ಕಾಲ ಕಳೆಯುತ್ತಿದ್ದ ಆಳ್ವರಿಗೆ ಕಾಂಗ್ರೆಸ್ ನಲ್ಲೂ ವಿರೋಧ ವ್ಯಕ್ತವಾಗಿತ್ತು. ಸೋಲುವ ಭೀತಿಯಲ್ಲಿ ಆಳ್ವರೂ ಹಿಂದೆ ಸರಿದರು. ಶಿರಸಿಯ ಕೊಂಕಣಿ ಸಮುದಾಯದ ಜಿ.ವಿ.ನಾಡಿಗ ಕಾಂಗ್ರೆಸ್ ಹುರಿಯಾಳಾದರು. ಟಿಕೆಟ್  ಭಿನ್ನಮತದ ಬೆಂಕಿ ಕಾಂಗ್ರೆಸನ್ನು ಆವರಿಸಿತ್ತು. ಅದೇ ಹೊತ್ತಿಗೆ ಶ್ರಮ ಸಂಸ್ಕೃತಿಯ ರೈತ-ಕೂಲಿಕಾರರ ಸಂಘಟಿಸಿ ಊಳಿಗಮಾನ್ಯದ ವಿರುದ್ಧ ಹೋರಾಡುತ್ತ, ಹಳ್ಳಿಗಳಲ್ಲಿ ಶಾಲೆ-ಹೈಸ್ಕೂಲುಗಳನ್ನು ಸ್ಥಾಪಿಸಿ ಜನಾನುರಾಗಿಯಾಗಿದ್ದ ಚುಟುಕು ಸಾಹಿತಿ–ಶಿಕ್ಷಣ ತಜ್ಞ ದಿನಕರ ದೇಸಾಯಿ  ಪಕ್ಷೇತರರಾಗಿ ಚುನಾವಣಾ ಅಖಾಡಕ್ಕೆ ಧುಮುಕಿದ್ದರು. ದೇಸಾಯರ ಬೆನ್ನಿಗೆ ಜಿಲ್ಲೆಯಲ್ಲಿ ಪ್ರಭಾವ ಹೊಂದಿದ್ದ ಸಮಾಜವಾದಿ ಪಾರ್ಟಿ ನಿಂತಿತ್ತು. 1,43,287 ಮತ ಪಡೆದಿದ್ದ ದೇಸಾಯಿ ಕಾಂಗ್ರೆಸ್ಸಿನ ನಾಡಿಗರನ್ನು ಮಣಿಸಿ ಲೋಕಸಭೆ ಪ್ರವೇಶಿಸಿದ್ದರು.

ಅನಂತನಾಗ್, ಗೌರೀಶ ಕಾಯ್ಕಿಣಿ, ಮಾಳಗಾಂವ್ಕರ್
ಅನಂತನಾಗ್, ಗೌರೀಶ ಕಾಯ್ಕಿಣಿ, ಮಾಳಗಾಂವ್ಕರ್

ಆದರೆ ಅವಧಿಗೂ ಮೊದಲೆ ಎದುರಾದ 1971ರ ಚುನಾವಣೆಯಲ್ಲಿ ದೇಸಾಯರಿಗೆ ಮತ್ತೆ ಗೆಲ್ಲಲು ಆಗಲಿಲ್ಲ. ಇಂದಿರಾ ಯುಗದಲ್ಲಿ ಸಹಕಾರಿ ಇಲಾಖೆ ಉನ್ನತ ಅಧಿಕಾರಿಯಾಗಿದ್ದ ಗೋಕರ್ಣ ಸೀಮೆಯ ಬಾಳಾಸಾಹೇಬ್ ಯಾನೆ ಬಿ.ವಿ.ನಾಯಕ್ ಅಂದಿನ ಕೆಪಿಸಿಸಿ ಅಧ್ಯಕ್ಷರಾಗಿದ್ದ ಕೆ.ಎಚ್.ಪಾಟೀಲರ ಮೂಲಕ ಕಾಂಗ್ರೆಸ್ ಟಿಕಟ್ ಗಿಟ್ಟಿಸಿದ್ದರು. ಗದಗದಲ್ಲಿ ಹಲವು ಸಹಕಾರಿ ಸಂಘಗಳನ್ನು ನಡೆಸುತ್ತಿದ್ದ ಪಾಟೀಲರನ್ನು ಸಹಕಾರ ಇಲಾಖೆಯ ಆಯಕಟ್ಟಿನ ಅಧಿಕಾರಿ ಬಿ.ವಿ.ನಾಯಕ್ ಪ್ರಕರಣ ಒಂದರಲ್ಲಿ ‘ಬಚಾವ್’ ಮಾಡಿದ್ದರು. ಆ ‘ಋಣ’ ಸಂದಾಯಕ್ಕಾಗಿ ಪಾಟೀಲರು ಕಾಂಗ್ರೆಸ್ಸಿನ ಸಂಸದ ಟಿಕೆಟ್ ಇನಾಮಾಗಿ ನಾಯಕ್ ಗೆ ಕೊಟ್ಟಿದ್ದರೆಂದು ಹಳೆ ತಲೆಮಾರಿನ ರಾಜಕೀಯ ಆಸಕ್ತರು ಹೇಳುತ್ತಾರೆ. ಸಮಾಜವಾದಿ ಪಾರ್ಟಿ, ಮತ್ತಿತರ ವಿರೋಧ ಪಕ್ಷಗಳ ಬೆಂಬಲದ ದೇಸಾಯಿ(64,617) ಅವರನ್ನು ದೊಡ್ಡ ಅಂತರ(96,779)ದಲ್ಲಿ ಪರಾಭವಗೊಳಿಸಿದ ನಾಯಕ್ ಪಾರ್ಲಿಮೆಂಟ್ ಮೆಂಬರ್ ಆಗಿದ್ದರು.

ಮೇಧಾವಿಯಾಗಿದ್ದ ನಾಯಕ್ ಅಂತಾರಾಷ್ಟ್ರೀಯ ವಿಷಯಗಳನ್ನು ಮಾತಾಡಿ ಮೊದಲ ಸಂಸತ್ ಪ್ರವೇಶದಲ್ಲೇ ದೇಶದ ಗಮನ ಸೆಳೆದಿದ್ದರು. ತುರ್ತು ಪರಿಸ್ಥಿತಿ ಧಿಕ್ಕರಿಸಿ ‘ಲಾಂಗ್ ಲಾಂಗ್ ವೇ ಟು ಗೋ’ ಎಂಬ ಪುಸ್ತಕ ಬರೆದು ಇಂದಿರಾ ಕೆಂಗಣ್ಣಿಗೆ ಗುರಿಯಾಗಿದ್ದರು. ಕುಮಟಾ ತಾಲೂಕಿನ ಮಾದನಗೇರಿ ರೈತರ ಪರ ಹೋರಾಟ ನಡೆಸಿ ಅಂದಿನ ಸಿಎಂ ದೇವರಾಜ ಅರಸು ಎದುರು ಹಾಕಿಕೊಂಡಿದ್ದರು. ರೈತರ ದಿರಿಸು(ಬರಿಮೈ-ಲಂಗೋಟಿ) ತೊಟ್ಟುಕೊಂಡು ಪಾರ್ಲಿಮೆಂಟಿಗೆ ಹೋಗಿ ರೈತರಿಗೆ ನ್ಯಾಯ ಕೇಳಿದ್ದರು. ರೆಬೆಲ್ ಬಾಳಾಸಾಹೇಬ ನಾಯಕರಿಗೆ 1977ರಲ್ಲಿ ಕಾಂಗ್ರೆಸ್ ಟಿಕೆಟ್ ನಿರಾಕರಿಸಲಾಯಿತು.

ತುರ್ತು ಪರಿಸ್ಥಿತಿಯಲ್ಲಿ ಜೈಲಿನಲ್ಲಿದ್ದ ಜನತಾ ಪರಿವಾರದ ಮುಂಚೂಣಿ ರಾಜಕಾರಣಿ ರಾಮಕೃಷ್ಣ ಹೆಗಡೆ 1977ರ ಪಾರ್ಲಿಮೆಂಟ್ ಇಲೆಕ್ಷನ್ ನಲ್ಲಿ ಭಾರತೀಯ ಲೋಕದಳದ ಅಭ್ಯರ್ಥಿಯಾಗಿ ಸ್ಫರ್ಧಿಸಿದ್ದರು. ಕಾಂಗ್ರೆಸ್ ವಿಧಾನ ಸಭೆಯ ಮಾಜಿ ಉಪಾಧ್ಯಕ್ಷ-ಕಾರವಾರದ ಕೊಂಕಣ ಮರಾಠ ಸಮುದಾಯದ ಬಿ.ಪಿ.ಕದಮ್ ರನ್ನು ಕಣಕ್ಕಿಳಿಸಿತ್ತು. ಉತ್ತರ ಕನ್ನಡ ಜಿಲ್ಲೆಯಲ್ಲಿ ಹೆಚ್ಚು ಮತಗಳಿಸಿದ್ದ ಹೆಗಡೆಗೆ ಬೆಳಗಾವಿ ಜಿಲ್ಲೆಯ ಖಾನಾಪುರ ಮತ್ತು ಕಿತ್ತೂರಲ್ಲಿ ಕಾಂಗ್ರೆಸ್ಸಿನ ಕದಮ್ ರನ್ನು ಹಿಂದಿಕ್ಕಲಾಗಲಿಲ್ಲ. ಹೆಗಡೆ 34,394 ಮತಗಳಿಂದ ಹಿಮ್ಮೆಟ್ಟಬೇಕಾಯಿತು. 1980ರ ಲೋಕಸಭಾ ಚುನಾವಣೆ ಎದುರಾದಾಗ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸು ಮತ್ತು ಕಾಂಗ್ರೆಸ್ ಅಧಿನಾಯಕಿ ಇಂದಿರಾ ಗಾಂಧಿ ನಡುವೆ ವೈಮನಸ್ಸು ಮೂಡಿತ್ತು. ಅರಸು ಕಾಂಗ್ರೆಸ್(ಅರಸು) ಎಂಬ ಪಾರ್ಟಿ ಕಟ್ಟಿಕೊಂಡು ಇಂದಿರಾ ಕಾಂಗ್ರೆಸಿಗೆ ಸೆಡ್ಡು ಹೊಡೆದಿದ್ದರು. ಅರಸು ನಿರ್ಗಮನದ ಬಳಿಕ ಕೆಪಿಸಿಸಿ ಅಧ್ಯಕ್ಷರಾಗಿದ್ದ ಬಂಗಾರಪ್ಪ ಕಾಂಗ್ರೆಸ್ಸಿನ ಹಿಂದುಳಿದ ವರ್ಗದ ಚಾಂಪಿಯನ್ ಆಗಿ ಅವತರಿಸಿದ್ದರು. ಬಂಗಾರಪ್ಪ ಸ್ವಜಾತಿ(ದೀವರು)ಯ ಯುವಕ ಸಿದ್ದಾಪುರದ ಜಿ.ದೇವರಾಯ ನಾಯ್ಕ್ ಗೆ ಕೆನರಾದ ಕಾಂಗ್ರೆಸ್ ಟಿಕೆಟ್ ಕೊಡಿಸಿದರು. ರಾಮಕೃಷ್ಣ ಹೆಗಡೆ ತಮ್ಮ ಹಿಂಬಾಲಕ ಹಳಿಯಾಳದ ಯುವ ವಕೀಲ ಆರ್.ವಿ.ದೇಶಪಾಂಡೆಗೆ ನೇಗಿಲು ಹೊತ್ತ ರೈತ ಚಿನ್ಹೆಯ ಜನತಾ ಪಕ್ಷದ ಅಭ್ಯರ್ಥಿ ಮಾಡಿಸಿದ್ದರು. 1,16,700 ಓಟುಗಳ ಭರ್ಜರಿ ಅಂತರದಲ್ಲಿ ದೇವರಾಯ ನಾಯ್ಕ್ ಪ್ರಥಮ ಪ್ರಯತ್ನದಲ್ಲೇ ಲೋಕಸಭೆ ಪ್ರವೇಶಿಸಿದರು.

ಆ ನಂತರ ನಿರಂತರವಾಗಿ ದೇವರಾಯ ನಾಯ್ಕ್ ಮತ್ತೆ ಮೂರು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ಆದರೆ ಜಿಲ್ಲೆ ನೆನಪಿಟ್ಟುಕೊಳ್ಳುವಂತಹ ಯಾವ ಕೆಲಸವನ್ನೂ ಮಾಡಲಿಲ್ಲಿ. ಸ್ವಸಮುದಾಯದ ಪ್ರಚಂಡ ರಾಜಕಾರಣಿಯಾಗಿದ್ದ ಬಂಗಾರಪ್ಪ ಜತೆ ಜಗಳ ಕಾದು ದೇವರಾಯ ನಾಯ್ಕ್ ಸುದ್ದಿಯಾಗಿದ್ದೇ ಜಾಸ್ತಿ. 1984ರ ಚುನಾವಣೆಯಲ್ಲಿ ದೇವರಾಯ ನಾಯ್ಕ್ ಜನತಾ ಪಕ್ಷದ ಹುರಿಯಾಳಾಗಿದ್ದ ರಾಮಕೃಷ್ಣ ಹೆಗಡೆ ಶಿಷ್ಯ ಶಿರಸಿಯ ಸಹಕಾರಿ ಧುರೀಣ-ಪತ್ರಕರ್ತ ಜಿ.ಎಸ್.ಹೆಗಡೆ ಅಜ್ಜಿಬಳರನ್ನು ಮಣಿಸಿದರು. 1989ರಲ್ಲಿ ದೇವರಾಯ ನಾಯ್ಕರನ್ನು ಮನೆಗೆ ಕಳಿಸುವ ಹುರುಪಿನಲ್ಲಿ ಸಿನೆಮಾ ರಂಗದ ಸ್ಟಾರ್ ಅನಂತ್ ನಾಗ್ ಕೆನರಾಕ್ಕೆ ಬಂದಿದ್ದರು. ‘ರಾಮಕೃಷ್ಣ ಹೆಗಡೆ ಹೇಳಿದರೆ ಹಾಳು ಬಾವಿಗೆ ಹಾರಲಿಕ್ಕೂ ಸಿದ್ಧ’ ಎನ್ನುತ್ತಿದ್ದ ಹೊನ್ನಾವರದ ಮಲ್ಲಾಪುರ ಮೂಲದ ಸಾರಸ್ವತ ಸಮುದಾಯದ ಅನಂತ್ ನಾಗ್ ಸಿನೆಮಾ ಖ್ಯಾತಿ ಮತ್ತು ಹೆಗಡೆ ನಾಮಬಲ ನೆಚ್ಚಿಕೊಂಡಿದ್ದರು.

ಇದೇ ಚುನಾವಣೆಯಲ್ಲಿ ಬಹುಮುಖ ಪ್ರತಿಭೆಯ ಮೇರು ಸಾಹಿತಿ ಶಿವರಾಮ ಕಾರಂತ್ ಪರಿಸರವಾದಿಗಳ ಒತ್ತಾಸೆಯಿಂದ ಪಕ್ಷೇತರರಾಗಿ ಸ್ಫರ್ಧೆಗಿಳಿದಿದ್ದರು. ಕಾರವಾರ ಬಳಿಯ ಕೈಗಾದಲ್ಲಿ ಸ್ಥಾಪಿಸಲು ಉದ್ದೇಶಿಸಿದ್ದ ಅಣು ಸ್ಥಾವರದ ವಿರುದ್ಧ ಪ್ರತಿಭಟನೆ ಜಿಲ್ಲೆಯಾದ್ಯಂತ ಭುಗಿಲೆದ್ದ ಸಮಯವದು. ಶಿವರಾಮ ಕಾರಂತ್ ಹೋರಾಟದ ಮುಂಚೂಣಿಯಲ್ಲಿದ್ದರು. ಪರಿಸರ ಚಳವಳಿಗಾರರು ಕಾರಂತರನ್ನು ಕಣಕ್ಕಿಳಿಸಿದ್ದರು. ನಾಮಪತ್ರ ಸಲ್ಲಿಸಿದ ಕಾರಂತರು ಒಂದು ದಿನವೂ ಪ್ರಚಾರ ಮಾಡದೆ ವಿದೇಶಕ್ಕೆ ಹೋದರು. ಬಿಜೆಪಿ ಅಭ್ಯರ್ಥಿ ಹೂಡದೆ ಕಾರಂತರಿಗೆ ಬೆಂಬಲ ನೀಡಿತ್ತು. ಕಾರಂತರಿಗೆ 58,902 ಮತಗಳಷ್ಟೇ ಬಂತು. ಹಳಿಯಾಳ-ಕಿತ್ತೂರಲ್ಲಿ ಪ್ರಬಲವಾಗಿದ್ದ ರೈತ ಸಂಘದ ಬಸಣ್ಣ ಪಟ್ಟೇಗಾರ್ ಕಾರಂತರಿಗಿಂತ ಹೆಚ್ಚು ಮತ(80,566) ಪಡೆದಿದ್ದರು. ಜನತಾ ದಳದ ಅನಂತ್ ನಾಗ್ ಕಾಂಗ್ರೆಸ್ಸಿನ ದೇವರಾಯ ನಾಯ್ಕ್ ರಿಗೆ ಪ್ರಬಲ ಸ್ಪರ್ಧೆಯೊಡ್ಡಿ ಬೆವರಿಳಿಸಿದ್ದರಾದರೂ ತೀರಾ ಸಣ್ಣ ಅಂತರ(31,568)ದಲ್ಲಿ ಸೋಲು ಒಪ್ಪಿಕೊಳ್ಳಬೇಕಾಯಿತು.

ದೇವರಾಯ ನಾಯ್ಕ, ಬಿ.ಪಿ. ಕದಮ್. ಬಿ.ವಿ. ನಾಯ್ಕ
ದೇವರಾಯ ನಾಯ್ಕ, ಬಿ.ಪಿ. ಕದಮ್. ಬಿ.ವಿ. ನಾಯ್ಕ

ಮತ್ತೆ 1991ರಲ್ಲಿ ದೇವರಾಯ ನಾಯ್ಕರೇ ಚುನಾಯಿತರಾದರಾದರೂ ಅನಂತರ ಕಾಂಗ್ರೆಸ್ಸಿನಲ್ಲಿ ತಾತ್ಸಾರಕ್ಕೀಡಾದರು. ಕಾಂಗ್ರೆಸ್ ಹೈಕಮಾಂಡಿನಲ್ಲಿ ಪ್ರಭಾವಿಯಾಗಿದ್ದ ಮಾರ್ಗರೆಟ್ ಆಳ್ವ ಕೆನರಾದ ಮೇಲೆ ಕಣ್ಣಿಟ್ಟು ದೇವರಾಯ ನಾಯ್ಕರನ್ನು ಬದಿಗೆ ಸರಿಸಿದ್ದರು. ದೇವರಾಯ ನಾಯ್ಕ್ ತಿವಾರಿ ಕಾಂಗ್ರೆಸ್ ಸೇರಿಕೊಂಡಿದ್ದರು. ಮಾರ್ಗರೆಟ್ ಆಳ್ವರ ಮಾವ(ಪತಿಯ ತಂದೆ) ಜೋಕಿಮ್ ಆಳ್ವ ಮೊದಲ ಮೂರು ಚುನಾವಣೆಯಲ್ಲಿ ಕೆನರಾದ ಸಂಸದರಾಗಿದ್ದರು. ಈ ನಂಟನ್ನೇ ಬಳಸಿಕೊಂಡು ಮಾರ್ಗರೆಟ್ ಆಳ್ವ ತಾನು ಕೆನರಾದ ಸೊಸೆಯೆನ್ನುತ್ತ ಜಿಲ್ಲೆಯಲ್ಲಿ ಚುನಾವಣಾ ರಾಜಕಾರಣ ಶುರುಹಚ್ಚಿಕೊಂಡಿದ್ದರು. ಆದರೆ 1996ರಲ್ಲಿ ಮಾರ್ಗರೆಟ್ ಆಳ್ವರಿಗೆ ಕೈ ಟಿಕೆಟ್ ಪಡೆಯಲಾಗಲಿಲ್ಲ. ಮಾಜಿ ಶಾಸಕ ಆರ್.ಎನ್.ನಾಯ್ಕ್ ಗೆ ಕಾಂಗ್ರೆಸ್ ಟಿಕೆಟ್ ಕೊಡಲಾಗಿತ್ತು. ಬಿಜೆಪಿ ಆ ಚುನಾವಣೆಯಲ್ಲಿ ಭಟ್ಕಳದ ಕೋಮು ಗಲಭೆಯ ‘ಹೀರೋ’ ಎನ್ನಲಾಗುವ ಅನಂತಕುಮಾರ್ ಹೆಗಡೆ ಎಂಬ ಹೈಗರ (ಹವ್ಯಕ ಬ್ರಾಹ್ಮಣ) ಹುಡುಗನನ್ನು ಅಖಾಡಕ್ಕೆ ಇಳಿಸಿತ್ತು. ಚುನಾವಣೆಗೆ ಕೆಲವೇ ದಿನವಿರುವಾಗ ಅನಂತ ಹೆಗಡೆಯ ಗುರು- ಅಂದಿನ ಎಮ್ಮೆಲ್ಲೆ ಡಾ.ಚಿತ್ತರಂಜನ್ ನಿಗೂಢವಾಗಿ ಹತ್ಯೆಗೀಡಾದರು. ಚಿತ್ತರಂಜನ್ ಸಾವಿನ ಹಿನ್ನಲೆಯಲ್ಲಿ ಇಸ್ಲಾಮೋಫೋಬಿಕ್ ತಂತ್ರಗಾರಿಕೆ ಬಿಜೆಪಿ ಹೆಣೆಯಿತು. ಅನಾಮಧೇಯ ಅನಂತ್ ಹೆಗಡೆ ಸಮೀಪದ ಪ್ರತಿಸ್ಫರ್ಧಿ ರಾಕೃ ಹೆಗಡೆ ಶಿಷ್ಯ-ಜಿಲ್ಲಾ ಪರಿಷತ್ತಿನ ಮಾಜಿ ಉಪಾಧ್ಯಕ್ಷ ಪ್ರಮೋದ್ ಹೆಗಡೆಯನ್ನು ಹಿಮ್ಮೆಟ್ಟಿಸಿ ಸಂಸದನಾದರು. ಬಿಜೆಪಿ-ಜನತಾದಳ ನಿಕಟ ಮುಖಾಮುಖಿಯಲ್ಲಿ ದುರ್ಬಲ ಕಾಂಗ್ರೆಸ್ ಕ್ಯಾಂಡಿಡೇಟ್ ಠೇವಣಿ ಕಳೆದುಕೊಂಡರು.

ಎರಡೇ ವರ್ಷದಲ್ಲಿ(1998) ಎದುರಾದ ನಡುಗಾಲ ಚುನಾವಣೆಯಲ್ಲಿ ಮಾರ್ಗರೆಟ್ ಆಳ್ವ ಕಾಂಗ್ರೆಸ್ ಕ್ಯಾಂಡಿಡೇಟ್ ಆಗಿದ್ದರು. ಹಲವು ಬಾರಿ ರಾಜ್ಯಸಭೆ ಸದಸ್ಯೆಯಾಗಿ, ಕೇಂದ್ರದಲ್ಲಿ ಪ್ರಭಾವಿ ಮಂತ್ರಿಣಿಯಾಗಿ, ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಾರತವನ್ನು ಪ್ರತಿನಿಧಿಸುವ ವರ್ಚಸ್ವೀ ನಾಯಕಿಯೆನಿಸಿದ್ದ ಮಾರ್ಗರೆಟ್ ಆಳ್ವ ಬಿಜೆಪಿಯ ಡಾ.ಚಿತ್ತರಂಜನ್ ಹತ್ಯೆಯ ಅನುಕಂಪ ಮತ್ತು ಹಿಂದುತ್ವದ ಚಕ್ರವ್ಯೂಹ ಭೇದಿಸಲಾಗದೇ ದೊಡ್ಡ ಅಂತರದಲ್ಲಿ ಸೋಲನುಭವಿಸಿದರು. ಆದರೆ 1999ರ ಚುನಾವಣೆಯಲ್ಲಿ ಮಾರ್ಗರೆಟ್ ಆಳ್ವ ಹಿಂದುತ್ವದ ಪೋಸ್ಟರ್ ಬಾಯ್ ಅನಂತ್ ಹೆಗಡೆಯನ್ನು ಮಣಿಸಿ ಪಾರ್ಲಿಮೆಂಟ್ ಪ್ರವೇಶಿಸಿದರು.

ಹಿಂದುತ್ವವನ್ನು ಹೊಟ್ಟೆಪಾಡು ಮಾಡಿಕೊಂಡವರೆಂಬ ಪ್ರತೀತಿಯ ಅನಂತಕುಮಾರ್ ಹೆಗಡೆ 2004, 2009, 2014 ಮತ್ತು 2019ರ ಚುನಾವಣೆಯಲ್ಲಿ ಸತತವಾಗಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಹಿಂದುತ್ವದ ಬೆಂಕಿ ಚೆಂಡೆಂದು ‘ಅಭಿಮಾನಿ’ಗಳಿಂದ ಕರೆಸಿಕೊಳ್ಳುವ ಅನಂತ್ ಹೆಗಡೆಯ ಹಿಂಸೋನ್ಮಾದದ ಹಿಂದುತ್ವ ಒಪ್ಪಿಕೊಂಡು ಕೆನರಾ ಕ್ಷೇತ್ರದ ಜನರೆಂದು ಗೆಲ್ಲಿಸಿಲ್ಲ. ಪಕ್ಕದ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವಂಥ ಮತೀಯ ಮೇನಿಯಾ ಉತ್ತರ ಕನ್ನಡದಲ್ಲಿಲ್ಲ. ಕಟ್ಟರ್ ಹಿಂದುತ್ವದ ‘ಐಕಾನ್’ ಎಂದೇನೂ ಅನಂತನನ್ನು ಮತ್ತೆಮತ್ತೆ ಗೆಲ್ಲಿಸಿದ್ದಲ್ಲ. ಮೊದಲ ಎರಡು ಚುನಾವಣೆಯಲ್ಲಿ ಡಾ.ಯು.ಚಿತ್ತರಂಜನ್ ಹತ್ಯೆಯ ಅನುಕಂಪದಿಂದ ಅನಂತ್ ದಿಲ್ಲಿ ಭಾಗ್ಯ ಕಂಡರು. ಮತ್ತೆರಡು ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಮಾರ್ಗರೆಟ್ ಆಳ್ವ ಮತ್ತು ದೇಶಪಾಂಡೆ ಮನೆ ಮುರುಕು ಬಣ ಬಡಿದಾಟ ಗೆಲ್ಲಿಸಿತು. 2014ರಲ್ಲಿ ಮೋದಿ ಮಂಕುಬೂದಿ ರಾಜಕಾರಣದ ಲಾಭ ಸಿಕ್ಕಿತ್ತು. 2019ರಲ್ಲಿ ಮೋದಿಯ ಪುಲ್ವಾಮಾ ಇವೆಂಟ್ ಮ್ಯಾನೇಜ್ಮೆಂಟ್ ನ ಅನುಕೂಲದಿಂದ ಅನಂತ್ ಹೆಗಡೆ ಗೆಲುವು ಸುಲಭವಾಗಿತ್ತು.

ಅನಂತಕುಮಾರ್ ಹೆಗಡೆ
ಅನಂತಕುಮಾರ್ ಹೆಗಡೆ

ಪ್ರತಿಬಾರಿಯೂ ಅನಂತ್ ಸಂಸದನಾದಾಗ ಆಡಬಾರದ್ದು ಆಡಿ, ಮಾಡಬಾರದ್ದು ಮಾಡಿ ಜಿಲ್ಲೆಯ ಜನರು ನಾಚಿ ತಲೆತಗ್ಗಿಸುವಂತೆ ಮಾಡಿದರು. ಅನಂತ್ ಹೆಗಡೆಯ ಹೊಡಿ-ಬಡಿ-ಕಡಿ ಭಾಷಣಗಳಿಂದ ಜಿಲ್ಲೆ ಅದೆಷ್ಟೂ ಸಲ ಕಂಗಾಲಾಗಿ ಕೂತಿತ್ತು. ಆದರೆ ಅಮಾಯಕರ ದಿಕ್ಕು ತಪ್ಪಿಸುವ ಈ ಆಷಾಢಭೂತಿ ಹಿಂದುತ್ವದಿಂದ ಅನಂತ್ ಹೆಗಡೆಯ ದೆಸೆಯೇ ಬದಲಾಗಿದೆ. ವಾರಾನ್ನದ ಆರೆಸೆಸ್ ಮಾಣಿಯಾಗಿದ್ದ ಅನಂತ್ ಹೆಗಡೆ ಅಯೋದ್ಯೋತ್ತರ ಹಿಂದುತ್ವದ ಬಹು ದೊಡ್ಡ ಫಲಾನುಭವಿ ಎಂಬ ಮಾತು ಸಾಮಾನ್ಯವಾಗಿದೆ. 2004ರಲ್ಲಿ 12.6 ಲಕ್ಷವಿದ್ದ ಅನಂತ್ ಹೆಗಡೆಯ ಸಿರಿ ಸಂಪತ್ತು 2019ರಲ್ಲಿ 8.47 ಕೋಟಿ! ಅಂದರೆ ಹದಿನೈದು ವರ್ಷದಲ್ಲಿ ಅನಂತ್ ಹೆಗಡೆಯ ಆಸ್ತಿ ಶೇಕಡಾ 6,928ರಷ್ಟು ಭರ್ಜರಿ ಏರಿಕೆಯಾಗಿದೆಯೆಂದು ಸಮೀಕ್ಷಾ ವರದಿಯೊಂದು ಹೇಳಿದೆ.

ಇಂತಹ ಅನಂತಕುಮಾರ್ ಹೆಗಡೆಯನ್ನು ಬಿಜೆಪಿ ಈ ಬಾರಿ ಮನೆಗೆ ಕಳಿಸಿ, ಆ ಜಾಗಕ್ಕೆ ವಿಶ್ವೇಶ್ವರ ಹೆಗಡೆ ಕಾಗೇರಿಯನ್ನು ತಂದಿದೆ. ಕಾಂಗ್ರೆಸ್ಸಿನಿಂದ ಅಂಜಲಿ ನಿಂಬಾಳ್ಕರ್ ಕಣದಲ್ಲಿದ್ದಾರೆ. ಕೆನರಾ ಕ್ಷೇತ್ರದ ಜನ, ಈಗಲಾದರೂ ಕ್ಷೇತ್ರಕ್ಕೆ ಹೆಸರು ತರುವ ಯೋಗ್ಯರನ್ನು ಆಯ್ಕೆ ಮಾಡಿಕೊಳ್ಳಬೇಕಿದೆ.

-ನಹುಷ

ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಿರ್ಗಮಿಸುವ ಪ್ರಧಾನಿ ತನ್ನನ್ನು ತಾನು ದೇವಮಾನವನೆಂದು ಭಾವಿಸಬಹುದು: ಕಾಂಗ್ರೆಸ್‌

"ನಿರ್ಗಮಿಸುತ್ತಿರುವ ಪ್ರಧಾನಿ ಸೋಲಿನ ವಾಸ್ತವ ತಿಳಿಯುತ್ತಿದ್ದಂತೆ, ಹೆಚ್ಚು ಭ್ರಮೆಯಲ್ಲಿದ್ದಾರೆ. ಅದಕ್ಕೆ ತನ್ನ...

ಲೋಕಸಭಾ ಚುನಾವಣೆ | 6ನೇ ಹಂತದಲ್ಲಿ ಶೇ.59ರಷ್ಟು ಮತದಾನ: ಚುನಾವಣಾ ಆಯೋಗ

ಲೋಕಸಭೆ ಚುನಾವಣೆಯ ಏಳು ಹಂತಗಳ ಪೈಕಿ 6ನೇ ಹಂತದ ಮತದಾನ ಪ್ರಕ್ರಿಯೆ...

ಪಶ್ಚಿಮ ಬಂಗಾಳ | ಬಿಜೆಪಿ ಅಭ್ಯರ್ಥಿಯನ್ನು ಕಲ್ಲೆಸೆದು ಓಡಿಸಿದ ಆಕ್ರೋಶಿತ ಜನರ ಗುಂಪು; ವಿಡಿಯೋ ವೈರಲ್

ಲೋಕಸಭೆ ಚುನಾವಣೆಯ ಆರನೇ ಹಂತದ ಮತದಾನದ ವೇಳೆ ಪಶ್ಚಿಮಬಂಗಾಳದಲ್ಲಿ ಆಕ್ರೋಶಿತ ಜನರ...

ಮಾಜಿ ಶಾಸಕ ಕೆ ರಘುಪತಿ ಭಟ್ ಬಿಜೆಪಿಯಿಂದ ಉಚ್ಚಾಟನೆ

ವಿಧಾನ ಪರಿಷತ್ ಟಿಕೆಟ್ ನೀಡದ ಕಾರಣಕ್ಕಾಗಿ ಬಿಜೆಪಿಯೊಳಗೆ ಬಂಡಾಯ ಎದ್ದು, ನೈಋತ್ಯ...