ರಾಜ್ಯ ಕಾಂಗ್ರೆಸ್ ಸರ್ಕಾರ ಮಹಿಳೆಯರಿಗೆ ಗೃಹ ಲಕ್ಷ್ಮಿ, ಶಕ್ತಿ ಯೋಜನೆ ಕೊಟ್ಟಿದ್ದಾರೆಯೇ ಹೊರತು ಅವರಿಗೆ ರಕ್ಷಣೆ ಒದಗಿಸಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚಾಗಿದೆ ಎಂದು ಬಿಜೆಪಿ ಪ್ರಕೋಷ್ಠಗಳ ರಾಜ್ಯ ಸಂಯೋಜಕ ಎಸ್ ದತ್ತಾತ್ರಯ ಆರೋಪಿಸಿದರು.
ತುಮಕೂರು ನಗರದ ಭದ್ರಮ್ಮ ಛತ್ರ ಸರ್ಕಲ್ ಬಳಿ ಇರುವ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.
“ಮಹಿಳೆಯರನ್ನು ವೋಟಿಗಾಗಿ ಮಾತ್ರ ಕಾಂಗ್ರೆಸ್ ಬಳಸಿಕೊಳ್ಳುತ್ತಿದೆ. ಅದರೆ, ಮೋದಿ ಸರ್ಕಾರ ಮಹಿಳಾ ಸಬಲೀಕರಣಕ್ಕೆ ಮುಂದಾಗಿದೆ. ನಿರ್ಮಲಾ ಸೀತಾರಾಮನ್ ಅಂತಹವರಿಗೆ ಸಚಿವ ಸ್ಥಾನ ನೀಡುವ ಮೂಲಕ ಮಹಿಳೆಯರಿಗೆ ಹೆಚ್ಚು ಶಕ್ತಿ ತುಂಬಲಾಗಿದೆ” ಎಂದು ಹೇಳಿದರು.
ವಿಧಾನಸಭೆ ಹಾಗೂ ಲೋಕಸಭೆಯಲ್ಲಿ ಮಹಿಳೆಯರಿಗೆ ಶೇ.33 ಮೀಸಲಾತಿ ನೀಡುವ ನಿರ್ಣಯ ಮಾಡಲಾಗಿದೆ. ಉಜ್ವಲ ಯೋಜನೆ, ಮಹಿಳೆಯರಿಗೆ ಮನೆ ಒಡೆತನ, ಸುಕನ್ಯ ಸಮೃದ್ಧಿ ಯೋಜನೆ, ಪಿಎಂ ಜನಧನ್ ಖಾತೆ ಸೇರಿದಂತೆ ಹಲವು ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.
ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗಳಲ್ಲಿ ಎಷ್ಟು ಮಂದಿ ಮಹಿಳೆಯರಿಗೆ ಟಿಕೆಟ್ ನೀಡಲಾಗಿದೆ ಎಂಬ ಪತ್ರಕರ್ತರ ಪ್ರಶ್ನೆಗೆ ತಡಬಡಿಸಿದ ರಾಜ್ಯ ಸಂಯೋಜಕ ಸಮರ್ಪಕ ಉತ್ತರ ನೀಡಲಿಲ್ಲ.
ಉತ್ತರಪ್ರದೇಶದಲ್ಲಿ ನಿಮ್ಮದೇ ಸರ್ಕಾರವಿದೆ. ಅಲ್ಲಿ ಮಹಿಳೆಯರಿಗೆ ಸುರಕ್ಷತೆ ಇದೆಯಾ? ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲೆಗೊಳಿಸಿ ಮೆರವಣಿಗೆ ಹಾಗೂ ಅತ್ಯಾಚಾರ ಮಾಡಿದ ಪ್ರಕರಣ ಹಾಗೂ ಕುಸ್ತಿ ಪಟು ಅಸೋಸಿಯೇಶನ್ ಅಧ್ಯಕ್ಷ ಬ್ರಿಜ್ ಭೂಷಣ್ ಅವರಿಂದ ಲೈಂಗಿಕ ಕಿರುಕುಳಕ್ಕೊಳಗಾಗಿ ಬೀದಿಗಿಳಿದು ಪ್ರತಿಭಟಿಸಿದ್ದ ಕ್ರೀಡಾಪಟುಗಳಿಗೆ ಮೋದಿ ಸರ್ಕಾರ ನ್ಯಾಯ ದೊರಕಿಸಿತಾ ಎಂಬ ಪ್ರಶ್ನೆಗಳಿನ್ನು ಕೇಳತೊಡಗುತ್ತಿದ್ದಂತೆ ಅವರು ಬೆವತು ನೀರಾದರು.
ಮಾಜಿ ಸಿಎಂ ಕುಮಾರಸ್ವಾಮಿ ಅವರು ರೋಡ್ ಶೋವೊಂದರಲ್ಲಿ, ಗ್ಯಾರಂಟಿಗಳಿಂದ ಮಹಿಳೆಯರು ದಾರಿ ತಪ್ಪಿದ್ದಾರೆಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇದಕ್ಕೆ ನಿಮ್ಮ ಪ್ರತಿಕ್ರಿಯೆ ಏನು? ಎನ್ನುವ ಪ್ರಶ್ನೆಗೆ ಉತ್ತರಿಸಲಾಗದೆ ಮೌನ ವಹಿಸಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿಯಲ್ಲಿ ಬಿಜೆಪಿಗೆ ಹಿನ್ನಡೆ; ಮಾಲೀಕಯ್ಯ ಗುತ್ತೇದಾರ್ ಕಾಂಗ್ರೆಸ್ ಸೇರ್ಪಡೆ
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಹತ್ತು ವರ್ಷಗಳಲ್ಲಿ ಒಂದೇ ಒಂದು ಪ್ರೆಸ್ ಮೀಟ್ ಮಾಡಿಲ್ಲ. ಅವರಿಗೆ ಪ್ರೆಸ್ ಮೀಟ್ ಮಾಡಲು ಹೇಳಿ ಎಂದು ಪತ್ರಕರ್ತರು ತರಾಟೆಗೆ ತೆಗೆದುಕೊಳ್ಳುತ್ತಿದ್ದಂತೆ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಬಿಜೆಪಿ ರಾಜ್ಯ ಸಂಯೋಜಕ ದತ್ತಾತ್ರಯ ಅವರು ಸುದ್ದಿಗೋಷ್ಟಿಯಿಂದ ಹೊರ ನಡೆದರು.
ಸುದ್ದಿಗೋಷ್ಟಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಹೆಬ್ಬಾಕ ರವಿಶಂಕರ್, ಬಿಜೆಪಿ ರೖತ ಮೋರ್ಚಾದ ಶಿವಪ್ರಾಸ್, ಬಿಜೆಪಿ ಮುಖಂಡರಾದ ಬಿ ಹೆಚ್ ಅನಿಲ್ ಕುಮಾರ್, ಸದಾಶಿವಯ್ಯ ಸೇರಿದತೆ ಇತರರು ಇದ್ದರು.
