ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ ಪಿ ಅವರು ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುತ್ಯಡ್ಕ ಗ್ರಾಮಕ್ಕೆ ಗುರುವಾರ ಭೇಟಿ ನೀಡಿ, ಗ್ರಾಮಸ್ಥರ ಅಹವಾಲು ಆಲಿಸಿದರು.
“ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಸಂಸೆ ಹಾಗೂ ಪ್ರಸಿದ್ಧ ಚಾರಣ ತಾಣವಾದ ನೇತ್ರಾವತಿ ಬಿಂದುವಿನ ನಡುವೆ ಸಂಪರ್ಕ ಕಲ್ಪಿಸುವ ಎಳನೀರು–ಗುತ್ಯಡ್ಕ–ಕುರ್ಚಾರು ರಸ್ತೆಯು ಸುಮಾರು 11 ಕಿಮೀಗಳಷ್ಟಿದೆ. ಈ ಗ್ರಾಮಗಳ ಸುಮಾರು 80 ಕುಟುಂಬಗಳು ಸಂಪರ್ಕಕ್ಕೆ ಈ ರಸ್ತೆಯನ್ನೇ ಅವಲಂಬಿಸಿವೆ” ಎಂದು ಗುತ್ಯಡ್ಕ ಗ್ರಾಮಸ್ಥರು ಹೇಳಿದರು.
ಹದಗೆಟ್ಟಿರುವ ರಸ್ತೆ ದುರಸ್ತಿಗೆ ಆಗ್ರಹಿಸಿದ ಗ್ರಾಮಸ್ಥರು, “ಸರ್ಕಾರವು ಅಭಿವೃದ್ಧಿ ವಿಚಾರದಲ್ಲಿ ಅನ್ಯಾಯ ಧೋರಣೆ ಅನುಸರಿಸುತ್ತಿದೆ” ಎಂದು ಆರೋಪಿಸಿ ಗುತ್ಯಡ್ಕ ಗ್ರಾಮಸ್ಥರು ಲೋಕಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸಲು ನಿರ್ಧರಿಸಿದ್ದರು.
“ಮುಲ್ಲೈ ಮುಗಿಲನ್ ಅವರು ದಕ್ಷಿಣ ಕನ್ನಡ ಜಿಲ್ಲೆಯ ಮೂಲೆಯಲ್ಲಿರುವ ಗುತ್ಯಡ್ಕಕ್ಕೆ ಭೇಟಿ ನೀಡಿದ ಮೊದಲ ಜಿಲ್ಲಾಧಿಕಾರಿ. ಎಳನೀರು– ಗುತ್ಯಡ್ಕ–ಕುರ್ಚಾರು ರಸ್ತೆಯ ಕಾಂಕ್ರೀಟ್‌ನ ಅಡಿಯ ಮಣ್ಣು ಕೊಚ್ಚಿಹೋಗಿದೆ. ಮುಂಬರುವ ಮಳೆಗಾಲದಲ್ಲಿ ಇಲ್ಲಿ ಭೂಕುಸಿತ ಉಂಟಾಗುವ ಅಪಾಯವಿದೆ” ಎಂದು ಗ್ರಾಮಸ್ಥರು ಜಿಲ್ಲಾಧಿಕಾರಿಗೆ ತಿಳಿಸಿದರು.
“ಈ ರಸ್ತೆಯಲ್ಲಿ ಗ್ರಾಮಸ್ಥರು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಪ್ರಯಾಣಿಸಬೇಕಾದ ಸ್ಥಿತಿ ಎದುರಾಗಿದೆ” ಎಂದು ಸ್ಥಳೀಯರು ಜಿಲ್ಲಾಧಿಕಾರಿ ಬಳಿ ಅಳಲು ತೋಡಿಕೊಂಡರು.
ರಸ್ತೆಯ ತಳಭಾಗದ ಮಣ್ಣು ಕೊಚ್ಚಿ ಹೋದ ಪ್ರದೇಶಕ್ಕೂ ಜಿಲ್ಲಾಧಿಕಾರಿ ಭೇಟಿ ನೀಡಿ ಪರಿಶೀಲಿಸಿ, “ದಯವಿಟ್ಟು ಮತದಾನ ಬಹಿಷ್ಕರಿಸಬೇಡಿ. ಅಧಿಕಾರಿಗಳು ಪರಿಶೀಲನೆ ನಡೆಸಿ ಗ್ರಾಮಸ್ಥರ ಬೇಡಿಕೆ ಈಡೇರಿಸಲು ಅಗತ್ಯ ಕ್ರಮವಹಿಸಲಿದ್ದಾರೆ” ಎಂದು ಜಿಲ್ಲಾಧಿಕಾರಿ ತಿಳಿಸಿರುವುದಾಗಿ ಸ್ಥಳೀಯರು ಮಾಹಿತಿ ನೀಡಿದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಪೇರಿ ಕಿತ್ತ ಬಿಜೆಪಿ ರಾಜ್ಯ ಸಂಯೋಜಕ
ಇದಕ್ಕೂ ಮುನ್ನ ಜಿಲ್ಲಾಧಿಕಾರಿಯವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ ಬಿ ರಿಷ್ಯಂತ್, ಸಹಾಯಕ ಚುನಾವಣಾಧಿಕಾರಿ ಕೆಂಪೇಗೌಡ, ಬೆಳ್ತಂಗಡಿಯ ತಹಸೀಲ್ದಾರ್ ಪೃಥ್ವಿ ಸಾನಿಕಂ ಸೇರಿದಂತೆ ಇತರ ಅಧಿಕಾರಿಗಳ ಜೊತೆ ನಾರಾವಿ ತಪಾಸಣಾ ಠಾಣೆ, ಕಜಕೆ ಸರ್ಕಾರಿ ಪ್ರಾಥಮಿಕ ಶಾಲೆಯ ಮತಗಟ್ಟೆಗಳಿಗೆ ಭೇಟಿ ನೀಡಿ ಚುನಾವಣಾ ತಯಾರಿಗಳ ಪರಿಶೀಲನೆ ನಡೆಸಿದರು.
