ಮೊದಲ ಹಂತದ ಚುನಾವಣೆ | 2019ಕ್ಕಿಂತ ಕುಸಿದ ಮತದಾನ; ಬಿಜೆಪಿಗೆ ಸೋಲಿನ ಆತಂಕ?

Date:

Advertisements

ಮನುವಾದಿ, ಫ್ಯಾಸಿಸ್ಟ್‌ ಆಡಳಿತದ ವಿರುದ್ಧ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಉಳಿವಿಗಾಗಿನ ಹೋರಾಟವೆಂದೇ ಬಣ್ಣಿಸಲಾಗುತ್ತಿರುವ 2024ರ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಶುಕ್ರವಾರ ಮುಗಿದಿದೆ. ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ 21 ರಾಜ್ಯಗಳಲ್ಲಿ ಮತದಾನ ನಡೆದಿದೆ. ಒಟ್ಟು 63.7% ಮತದಾನವಾಗಿದೆ. ಇದು 2019ರ ಚುನಾವಣೆಗೆ ಹೋಲಿಸಿದರೆ, ಮತದಾನದಲ್ಲಿ ಕುಸಿತ ಕಂಡಿದೆ. ಈ ಕುಸಿತವು ಬಿಜೆಪಿ ಸೋಲಿನ ಮೊದಲ ಗಂಟೆ ಎಂದೂ ಹೇಳಲಾಗುತ್ತಿದೆ.

2019ರ ಲೋಕಸಭಾ ಚುನಾವಣೆಯಲ್ಲಿ ಮೊದಲ ಹಂತದಲ್ಲಿ 70% ಮತದಾನವಾಗಿತ್ತು. ಆದ್ರೆ, ಈ ಬಾರಿ 63.7% ಮಾತ್ರವೇ ಮತದಾನವಾಗಿದೆ. ಬರೋಬ್ಬರಿ 6.3% ಮತಗಳು ಕುಸಿದಿವೆ. ಅದರಲ್ಲೂ, ಬಿಜೆಪಿಯೇ ಅಧಿಕಾರದಲ್ಲಿರುವ ಹಾಗೂ ಬಿಜೆಪಿ ತನ್ನ ಮಿತ್ರಪಕ್ಷಗಳೊಂದಿಗೆ ಅಧಿಕಾರ ಹಂಚಿಕೊಂಡಿರುವ ರಾಜ್ಯಗಳಲ್ಲಿ ಮತದಾನ ಹೆಚ್ಚಿನ ಪ್ರಮಾಣದಲ್ಲಿ ಕುಸಿದಿದೆ. ಈ ಕುಸಿತಕ್ಕೆ ಆಡಳಿತಾರೂಢ ಬಿಜೆಪಿ ಮೇಲಿನ ಅಸಮಾಧಾನವೇ ಕಾರಣ ಎನ್ನಲಾಗುತ್ತಿದೆ. ಇದು, ಬಿಜೆಪಿಯಲ್ಲಿ ಆತಂಕ ಸೃಷ್ಠಿಸಿದೆ.

ಬಿಜೆಪಿ ಅಧಿಕಾರದಲ್ಲಿರುವ ಅರುಣಾಚಲ ಪ್ರದೇಶ, ಉತ್ತರಾಖಂಡ, ಹರಿಯಾಣ, ಉತ್ತರ ಪ್ರದೇಶ, ಅಸ್ಸಾಂ, ತ್ರಿಪುರಾ, ಮಣಿಪುರ, ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್‌ಗಢ ರಾಜ್ಯಗಳಲ್ಲಿಯೂ ಮೊದಲ ಹಂತ ಚುನಾವಣೆ ನಡೆದಿದ್ದು, ಈ ಎಲ್ಲ ರಾಜ್ಯಗಳಲ್ಲಿ ಮತದಾನದಲ್ಲಿ ಭಾರೀ ಕುಸಿತವಾಗಿದೆ. ಅಂತೆಯೇ, ಮಿತ್ರಪಕ್ಷಗಳೊಂದಿಗೆ ಅಧಿಕಾರದಲ್ಲಿರುವ ಮಹಾರಾಷ್ಟ್ರ ಮತ್ತು ಬಿಹಾರದಲ್ಲಿಯೂ ಹೆಚ್ಚಿನ ಮತದಾರರು ಮತಗಟ್ಟೆಗತ್ತ ಸುಳಿದಿಲ್ಲ.

Advertisements

ಅರುಣಾಚಲ ಪ್ರದೇಶವು 2 ಲೋಕಸಭಾ ಸ್ಥಾನಗಳನ್ನು ಹೊಂದಿದ್ದು, 2019ರಲ್ಲಿ 82.1% ಮತದಾನವಾಗಿತ್ತು. ಈ ಬಾರಿ, ಕೇವಲ 67.7% ಮತದಾನವಾಗಿದೆ. ಮಧ್ಯಪ್ರದೇಶದ 29 ಕ್ಷೇತ್ರಗಳ ಪೈಕಿ 6 ಸ್ಥಾನಗಳಿಗೆ ಮತದಾನವಾಗಿದ್ದು, 2019ರಲ್ಲಿ 74.1% ಮತದಾನವಾಗಿತ್ತು. ಈ ಬಾರಿ ಕೇವಲ 66.7% ಮತದಾನವಾಗಿದೆ.

ಜನಾಂಗೀಯ ಹಿಂಸಾಚಾರಕ್ಕೆ ಬಲಿಯಾಗಿರುವ ಮಣಿಪುರದಲ್ಲಿ (2 ಸ್ಥಾನಗಳು) 2019ರಲ್ಲಿ 82.7% ಮತದಾನವಾಗಿತ್ತು. ಈ ಬಾರಿ, 69.2%ಗೆ ಕುಸಿದಿದೆ. ರಾಜಸ್ಥಾನದ 25 ಸ್ಥಾನಗಳಲ್ಲಿ 12 ಕ್ಷೇತ್ರಗಳಿಗೆ ಮತದಾನವಾಗಿದ್ದು, 2019ರಲ್ಲಿ 64.0% ಮತದಾನವಾಗಿದ್ದರೆ, 2024ರಲ್ಲಿ 57.3%ಗೆ ಕುಸಿದಿದೆ.

ಉತ್ತರಾಖಂಡದ ಒಟ್ಟು 5 ಸ್ಥಾನಗಳಿಗೂ ಮತದಾನವಾಗಿದ್ದು, 2019ರಲ್ಲಿ 61.9% ಮತದಾನವಾಗಿತ್ತು. ಈಗ, ಕೇವಲ 54.6% ಮತದಾನವಾಗಿದೆ. ಇನ್ನು, ಬಿಜೆಪಿಯ ಭದ್ರಕೋಟೆಯೇ ಆಗಿರುವ, ಇತ್ತೀಚೆಗೆ ಬಿಜೆಪಿ ತನ್ನ ಸಾಧನೆಯೆಂದು ಬೊಬ್ಬೆ ಹೊಡೆದು ರಾಮಮಂದಿರವನ್ನೂ ಉದ್ಘಾಟಿಸಿದ ಉತ್ತರ ಪ್ರದೇಶದಲ್ಲಿ 80 ಸ್ಥಾನಗಳ ಪೈಕಿ 8 ಸ್ಥಾನಗಳಿಗೆ ಮತದಾನವಾಗಿದ್ದು, ಕೇವಲ 59.5% ಮತದಾರರು ಮಾತ್ರವೇ ಮತ ಚಲಾಯಿಸಿದ್ದಾರೆ. 2019ರಲ್ಲಿ ಈ ರಾಜ್ಯದಲ್ಲಿ 66.6% ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು.

ಛತ್ತಿಸ್‌ಗಢದಲ್ಲಿ 11 ಸ್ಥಾನಗಳ ಪೈಕಿ 1 ಸ್ಥಾನಕ್ಕೆ ಮತದಾನವಾಗಿದೆ. ಇಲ್ಲಿ, 2019ರಲ್ಲಿ 66.3% ಮತದಾನವಾಗಿತ್ತು,. ಬಾರಿ 65.3% ಮತ ಚಲಾವಣೆಯಾಗಿವೆ. ಅಸ್ಸಾಂನಲ್ಲಿಯೂ 14 ಸ್ಥಾನಗಳಲ್ಲಿ 5 ಕ್ಷೇತ್ರಗಳಿಗೆ ಮತದಾನವಾಗಿದೆ. ಮತದಾನವು 74.8%ನಿಂದ 72.3%ಗೆ ಕುಸಿದಿದೆ. ತ್ರಿಪುರಾದ 2 ಸ್ಥಾನಗಳಲ್ಲಿ 1 ಸ್ಥಾನಕ್ಕೆ ಮತದಾನವಾಗಿದ್ದು, 81.9%ನಿಂದ 80.6%ಗೆ ಮತದಾನ ಕುಸಿದಿದೆ.

ಇನ್ನು, ಬಿಜೆಪಿ ತನ್ನ ಮಿತ್ರ ಪಕ್ಷಗಳೊಂದಿಗೆ ಅಧಿಕಾರ ಹಂಚಿಕೊಂಡಿರುವ ಮಹಾರಾಷ್ಟ್ರದ 48 ಕ್ಷೇತ್ರಗಳ ಪೈಕಿ 5 ಸ್ಥಾನಗಳಿಗೆ ಮತದಾನವಾಗಿದೆ. 64.1%ನಿಂದ 57.8%ಗೆ ಮತದಾನ ಕುಸಿದಿದೆ. ಅಂತೆಯೇ, ಬಿಹಾರದಲ್ಲಿ 40 ಸ್ತಾನಗಳಲ್ಲಿ 4 ಸ್ಥಾನಗಳಿಗೆ ಮತದಾನವಾಗಿದೆ. ಮತದಾನವು 53.6%ನಿಂದ 48.5%ಗೆ ಕುಸಿದಿದೆ.

ಇನ್ನು, ರಾಜ್ಯ ಸರ್ಕಾರವೇ ಇಲ್ಲದ ಜಮ್ಮು-ಕಾಶ್ಮೀರದಲ್ಲಿ 5 ಸ್ಥಾನಗಳ ಪೈಕಿ 1 ಸ್ಥಾನಕ್ಕೆ ಮತದಾನವಾಗಿದೆ. ಮತದಾನವು 70.2%ನಿಂದ 65.2%ಗೆ ಕುಸಿದಿದೆ. ಲಕ್ಷದ್ವೀಪದಲ್ಲಿ – ಒಂದು ಸ್ಥಾನ – 59.0% (85.2), ಮಿಜೋರಾಮ್‌ನ 1 ಸ್ಥಾನಕ್ಕೆ 56.6% (63.1) ನಾಗಲ್ಯಾಂಡ್‌ನ 1 ಸ್ಥಾನಕ್ಕೆ 56.9% (83.0%), ಪುದುಚೇರಿಯ 1 ಸ್ಥಾನಕ್ಕೆ 73.8% (81.2%, ಸಿಕ್ಕಿಂನ 1 ಸ್ಥಾನಕ್ಕೆ 75.1% (81.4%) ಮತದಾನವಾಗಿದೆ.

WhatsApp Image 2024 04 20 at 10.31.37 AM

ಡಿಎಂಕೆ ಅಧಿಕಾರದಲ್ಲಿರುವ ತಮಿಳುನಾಡಿನ 39 ಸ್ಥಾನಗಳಿಗೂ ಮತದಾನವಾಗಿದ್ದು 67.2% ಮತದಾನವಾಗಿದೆ. ಕಳೆದ ಚುನಾವಣೆಯಲ್ಲಿ 72.4% ಮತದಾನವಾಗಿತ್ತು. ಟಿಎಂಸಿ ಭದ್ರಕೋಟೆಯಾಗಿರುವ ಪಶ್ಚಿಮ ಬಂಗಾಳದಲ್ಲಿ 42 ಸ್ಥಾನಗಳ ಪೈಕಿ 3 ಸ್ಥಾನಗಳಿಗೆ 77.6% ಮತದಾನ ನಡೆದಿದೆ. 2019ರಲ್ಲಿ 84.8% ಮತದಾನವಾಗಿತ್ತು.

ಇದೆಲ್ಲದರ ನಡುವೆ, ಮೇಘಾಲಯದಲ್ಲಿ ಮತದಾನದ ಪ್ರಮಾಣ ಹೆಚ್ಚಾಗಿದೆ. ಅಲ್ಲಿನ 2 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, 74.5% ಮತದಾನವಾಗಿದೆ. ಇಲ್ಲಿ 2019ರಲ್ಲಿ 71.4% ಮತದಾನವಾಗಿತ್ತು.

ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಮತದಾನಲ್ಲಿನ ಭಾರೀ ಕುಸಿತವು ಬಿಜೆಪಿಯಲ್ಲಿ ಭಯವನ್ನು ಹುಟ್ಟು ಹಾಕಿದೆ. ಮಾತ್ರವಲ್ಲದೆ, ಮೊದಲೇ ಬಿಜೆಪಿ ಗೆಲ್ಲುವುದು ಕಷ್ಟವೆಂಬ ಪರಿಸ್ಥಿತಿಯಿದ್ದ ಬಿಜೆಪಿ ಅಧಿಕಾರದಲ್ಲಿರದ ರಾಜ್ಯಗಳಲ್ಲಿಯೂ ಬಿಜೆಪಿಗೆ ಮತಹಾಕವವರಲ್ಲಿ ಹೆಚ್ಚಿನವರು ಮತಗಟ್ಟೆಗಳಿಗೆ ಬಂದಿಲ್ಲ ಎಂಬುದು ಬಿಜೆಪಿಗೆ ಮತ್ತಷ್ಟು ಆತಂಕ ತಂದೊಡ್ಡಿದೆ.

2019ರ ಚುನಾವಣೆಯಲ್ಲಿಯೇ ಬಿಜೆಪಿ ಸೋಲುತ್ತದೆ ಎಂದು ರಾಜಕೀಯ ತಜ್ಞರು ಹಾಗೂ ಕೆಲ ಸಮೀಕ್ಷೆಗಳ ಅಭಿಪ್ರಾಯವಾಗಿತ್ತು. ಮೋದಿ ಅಲೆಯಿಲ್ಲ ಎಂಬುದು ಸ್ಪಷ್ಟವಾಗಿ ಕಾಣಿಸುತ್ತಿಲ್ಲ. ಆದರೆ, ಅದೇ ಸಮಯದಲ್ಲಿ ನಡೆದ ಪುಲ್ವಾಮ ದಾಳಿಯು ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲು ಕಾರಣವಾಯಿತು. ಆದರೀಗ, ಮೋದಿ ಅವರಿಗಿದ್ದ ವರ್ಚಸ್ಸು ಮತ್ತಷ್ಟು ಕುಸಿದಿದೆ.

ಹೀಗಾಗಿಯೇ, ಕರ್ನಾಟಕವೂ ಸೇರಿದಂತೆ ನಾನಾ ರಾಜ್ಯಗಳಲ್ಲಿ ಬಿಜೆಪಿ ಇತರ ಸಣ್ಣ ಪಕ್ಷಗಳೊಂದಿಗೂ ಕೈಜೋಡಿಸುವ ಕಸರತ್ತು ನಡೆಸುತ್ತಿದೆ. ಇತ್ತೀಚಿನ ಸಮೀಕ್ಷೆಗಳು ಕೂಡ, ಬಿಜೆಪಿ 230 ಸ್ಥಾನಗಳನ್ನು ಪಡೆಯುವುದೇ ಕಷ್ಟವೆಂದು ಹೇಳುತ್ತಿವೆ. ಪ್ರಧಾನಿ ಮೋದಿ ಅವರು ದಿನಕ್ಕೆ 3 ರಾಜ್ಯಗಳನ್ನು ಸುತ್ತುತ್ತಾ ಪ್ರಚಾರ ಮಾಡುತ್ತಿರುವ ನಡುವೆಯೂ ಮೊದಲ ಹಂತದ ಮತದಾನದಲ್ಲಿ ಭಾರೀ ಕುಸಿತವಾಗಿರುವುದು ಬಿಜೆಪಿಯ ನಿದ್ದೆಗೆಡಿಸಿದೆ. ಬಿಜೆಪಿಗೆ ಮತಹಾಕುವವರೇ ಹೆಚ್ಚಾಗಿ ಮತಗಟ್ಟೆಯಿಂದ ದೂರ ಉಳಿಯುತ್ತಿದ್ದಾರೆ.

ಉತ್ತರ ಪ್ರದೇಶದಲ್ಲಿ ರಾಮಮಂದಿರದ ಅಬ್ಬರ, ಮೋದಿ ವರ್ಚಸ್ಸು ಕುಸಿದಿದೆ. ಮಣಿಪುರದಲ್ಲಿ ಹಿಂಸಾಚಾರಕ್ಕೆ ಬಿಜೆಪಿಯೇ ಪ್ರಚೋದನೆ ನೀಡಿತ್ತು ಎಂಬ ಆರೋಪಗಳೂ ಇವೆ. ಹೀಗಾಗಿ, ಅಲ್ಲಿನ ಜನರು, ಅದರಲ್ಲೂ ಬಿಜೆಪಿಗೆ ಮತ ಚಲಾಯಿಸುತ್ತಿದ್ದ ಪ್ರಬಲ ಸಮುದಾಯ ಮೈಥೇಯಿಗಳು ಮತದಾನದಿಂದ ದೂರವಿದ್ದಾರೆ ಎನ್ನಲಾಗಿದೆ. ಅಸ್ಸಾಂನಲ್ಲಿಯೂ ಸಿಎಎ ವಿರೋಧಿ ಅಲೆಯು ಮತದಾರರು ಮತಗಟ್ಟೆಯಿಂದ ದೂರ ಉಳಿಯುವಂತೆ ಮಾಡಿದೆ. ಬಿಜೆಪಿಗೆ ನೆಲೆಯೇ ಇಲ್ಲದ ತಮಿಳುನಾಡಿನಲ್ಲಿ ಅಷ್ಟೂ ಸ್ಥಾನಗಳನ್ನು ‘ಇಂಡಿಯಾ’ ಮೈತ್ರಿಕೂಟ ಗೆಲ್ಲುತ್ತದೆ ಎಂಬುದು ಬಹುತೇಕ ಖಚಿತವಾಗಿದೆ. ಉಳಿದ ರಾಜ್ಯಗಳಲ್ಲಿಯೂ ಬಿಜೆಪಿ ವಿರುದ್ಧ ಜನರು ಅಸಮಧಾನಗೊಂಡಿದ್ದಾರೆ. ರಾಮಮಂದಿರ, ಹಿಂದುತ್ವಕ್ಕಾಗಿ ಮತ ಹಾಕುವವರು ಮತಗಟ್ಟೆಯಿಂದ ಹೊರಗುಳಿದಿದ್ದಾರೆ. ಇದೆಲ್ಲವೂ, ಬಿಜೆಪಿಗೆ ಆತಂಕ ತಂದೊಡ್ಡಿದೆ.

ಇನ್ನೂ 6 ಹಂತಗಳಲ್ಲಿ ಮತದಾನ ನಡೆಯಲಿದ್ದು, ಜೂನ್ 4ರ ಫಲಿತಾಂಶ ಏನಾಗಲಿದೆ. ಚುನಾವಣಾ ಕಣ ಉತ್ತರ ನೀಡಲಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಬಿಐ ಅಧಿಕಾರಿಗಳಂತೆ ನಟಿಸಿ 2.3 ಕೋಟಿ ರೂ. ದೋಚಿದ್ದ ಗ್ಯಾಂಗ್: ಇಬ್ಬರ ಬಂಧನ

ಕೇಂದ್ರ ತನಿಖಾ ದಳ (ಸಿಬಿಐ) ಅಧಿಕಾರಿಗಳಂತೆ ನಟಿಸಿ ಉದ್ಯಮಿಯೊಬ್ಬರ ಕಚೇರಿಯಿಂದ ಗ್ಯಾಂಗ್...

ಬೀದಿ ನಾಯಿಗಳಿಗೆ ಲಸಿಕೆ ಹಾಕಿದ ನಂತರ ಅದೇ ಸ್ಥಳಕ್ಕೆ ತಂದು ಬಿಡಬೇಕು: ಸುಪ್ರೀಂ ಕೋರ್ಟ್‌

ಬೀದಿ ನಾಯಿಗಳಿಗೆ ಸಂಬಂಧಿಸಿದ್ದಂತೆ ಆಗಸ್ಟ್ 11ರ ಆದೇಶವನ್ನು ಮಾರ್ಪಡಿಸಿದ ಸುಪ್ರೀಂ...

ವಿವಾದಾತ್ಮಕ ಯೂಟ್ಯೂಬರ್ ಎಲ್ವಿಶ್ ಮನೆ ಮೇಲೆ ಗುಂಡಿನ ದಾಳಿ: ಎನ್‌ಕೌಂಟರ್ ಮಾಡಿ ಆರೋಪಿ ಬಂಧನ

ಬಲಪಂಥೀಯ, ವಿವಾದಾತ್ಮಕ ಯೂಟ್ಯೂಬರ್ ಮತ್ತು ಬಿಗ್ ಬಾಸ್ ವಿಜೇತ ಎಲ್ವಿಶ್ ಯಾದವ್‌...

ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಚಿತ್ರದುರ್ಗ ಶಾಸಕ ವೀರೇಂದ್ರ ಮನೆ ಮೇಲೆ ಇಡಿ ದಾಳಿ

ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ...

Download Eedina App Android / iOS

X