ಲೋಕಸಭಾ ಚುನಾವಣೆಯ ಹಿನ್ನೆಲೆ, ರಾಜ್ಯದಲ್ಲಿ ರಾಜಕೀಯ ಪಕ್ಷದ ಅಭ್ಯರ್ಥಿಗಳು ಪ್ರಚಾರ ಭರಾಟೆ ಜೋರಾಗಿದೆ. ಇತ್ತೀಚೆಗೆ, ಸಂಸದೆ ಸುಮಲತಾ ಅಂಬರೀಶ್ ಅವರು ಬಿಜೆಪಿ ಸೇರಿದ ನಂತರ ಅವರ ಮಾನಸ ಪುತ್ರ ನಟ ದರ್ಶನ್ ಅವರ ನಡೆ ಆಶ್ಚರ್ಯಕರವಾಗಿದೆ.
ಹೌದು, ಸುಮಲತಾ ಅಂಬರೀಶ್ ಅವರು ಬಿಜೆಪಿ ಸೇರಿದ ನಂತರ ದರ್ಶನ್ ಅವರು ಕಾಂಗ್ರೆಸ್ ಅಭ್ಯರ್ಥಿಗಳ ಪರ ಮತಯಾಚನೆ ಮಾಡುತ್ತಿದ್ದಾರೆ. ಕಳೆದೆರಡು ದಿನಗಳ ಹಿಂದೆ ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಸ್ಟಾರ್ ಚಂದ್ರು ಅವರ ಪರವಾಗಿ ಪ್ರಚಾರ ಕೈಗೊಂಡು ಮತಯಾಚನೆ ಮಾಡಿದ್ದರು. ಈ ವೇಳೆ, ನಾನು ವ್ಯಕ್ತಿಯ ಪರವಾಗಿ ಪ್ರಚಾರಕ್ಕೆ ಬರುತ್ತೇನೆ. ಬದಲಾಗಿ ಯಾವುದೇ ಪಕ್ಷದ ಪರವಾಗಿ ಇಲ್ಲ ಎಂದಿದ್ದರು. ಇದೀಗ, ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಅವರ ಪರವಾಗಿ ನಟ ದರ್ಶನ್ ಶನಿವಾರ ಬೃಹತ್ ರೋಡ್ ಶೋ ನಡೆಸಲಿದ್ದಾರೆ.
ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರ ದೇಶದ ಗಮನ ಸೆಳೆದಿದೆ. 15 ವರ್ಷಗಳ ಹಿಂದೆ ಬೆಂಗಳೂರು ಗ್ರಾಮಾಂತರ ಕ್ಷೇತ್ರವು ರಚನೆಯಾದ ಬಳಿಕ ನಡೆಯುತ್ತಿರುವ 5ನೇ ಲೋಕಸಭಾ ಚುನಾವಣೆ ಇದಾಗಿದೆ. ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಡಾ. ಸಿ.ಎನ್. ಮಂಜುನಾಥ್ ಕಣದಲ್ಲಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ಹಾಲಿ ಸಂಸದ ಡಿ.ಕೆ.ಸುರೇಶ್ ಈ ಬಾರಿಯೂ ಗೆದ್ದು ಬೀಗುವ ಹುಮ್ಮಸ್ಸಿನಲ್ಲಿದ್ದಾರೆ.
ಇಂದಿನ ರೋಡ್ ಶೋ ರಾಜರಾಜೇಶ್ವರಿ ನಗರ ವಿಧಾನ ಸಭಾ ಕ್ಷೇತ್ರದ ಯಶವಂತರ ಪುರ ಮಾರ್ಕೆಟ್, ಲಗ್ಗೆರೆ ಸರ್ಕಲ್, ಕೊಟ್ಟಿಗೆ ಪಾಳ್ಯ ಮತ್ತು ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಉತ್ತರಹಳ್ಳಿ, ವೀವರ್ಸ್ ಕಾಲೋನಿ, ಗೊಟ್ಟಿಗೆರೆ ವಾರ್ಡ್ಗಳಲ್ಲಿ ನಡೆಯಲಿದೆ. ನಟ ದರ್ಶನ್ ಈ ರೋಡ್ ಶೋನಲ್ಲಿ ಭಾಗಿಯಾಗಲಿದ್ದಾರೆ.
ಈಗಾಗಲೇ ಡಿ.ಕೆ.ಸುರೇಶ್ ಅವರು ಪ್ರಚಾರ ಆರಂಭಿಸಿದ್ದಾರೆ. ಶನಿವಾರ ನಟ ದರ್ಶನ್ ಮತಯಾಚನೆಗೆ ಕೈ ಜೋಡಿಸಲಿದ್ದಾರೆ. ಆರ್.ಆರ್ ನಗರ ಹಾಗೂ ಬೆಂಗಳೂರು ದಕ್ಷಿಣ ವಿಧಾನಸಭೆ ಕ್ಷೇತ್ರದ ಭಾಗಗಳಲ್ಲೇ ನಟ ದರ್ಶನ್ ಪ್ರಚಾರಕ್ಕೆ ಮುಂದಾಗಿದ್ದಾರೆ. ರೋಡ್ ಶೋ ಮೂಲಕ ದರ್ಶನ್ ಮತಯಾಚಿಸಲಿದ್ದಾರೆ. ಸಂಜೆ 4 ಗಂಟೆಗೆ ಯಶವಂತಪುರ ಮಾರ್ಕೆಟ್, 5 ಗಂಟೆಗೆ ಲಗ್ಗೆರೆ ಸರ್ಕಲ್, 6 ಗಂಟೆಗೆ ಕೊಟ್ಟಿಗೆಪಾಳ್ಯದಲ್ಲಿ ದರ್ಶನ್ ಪ್ರಚಾರದ ಭರಾಟೆ ಇರಲಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಹಿತಕ್ಕಾಗಿ ಸೌಮ್ಯ ರೆಡ್ಡಿಗೆ ಮತ ನೀಡಿ: ನಟ ಧ್ರುವ ಸರ್ಜಾ
ಸಂಜೆ 7 ಗಂಟೆಗೆ ಉತ್ತರಹಳ್ಳಿ, 8 ಗಂಟೆ ವೇಳೆಗೆ ವೀವರ್ಸ್ ಕಾಲೋನಿ, ಗೊಟ್ಟಿಗೆರೆ ವಾರ್ಡ್ಗಳಲ್ಲಿ ನಟ ದರ್ಶನ್ ಪ್ರಚಾರ ಮಾಡಲಿದ್ದಾರೆ.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಕನಕಪುರ, ಕುಣಿಗಲ್, ಆನೇಕಲ್, ರಾಮನಗರ, ಚನ್ನಪಟ್ಟಣ, ಮಾಗಡಿ ಹಾಗೂ ಬೆಂಗಳೂರು ದಕ್ಷಿಣ ಸೇರಿ ಎಂಟು ವಿಧಾನಸಭೆ ಕ್ಷೇತ್ರಗಳಿವೆ. ಸದ್ಯ ಆರ್.ಆರ್ ನಗರ ಹಾಗೂ ಬೆಂಗಳೂರು ದಕ್ಷಿಣ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದಾರೆ. ಈ ಕ್ಷೇತ್ರಗಳು ಲೋಕಸಭೆ ಚುನಾವಣೆಯಲ್ಲಿ ಮಹತ್ವದ ಪಾತ್ರ ವಹಿಸಲಿವೆ.
ಕಳೆದ ಎರಡು ದಿನಗಳ ಹಿಂದೆಯಷ್ಟೇ ನಟ ದರ್ಶನ್ ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರ ಮತಯಾಚನೆ ಮಾಡಿದ್ದರು. ಇದೀಗ ಮತ್ತೋರ್ವ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡಲು ದರ್ಶನ್ ಮುಂದಾಗಿದ್ದಾರೆ. ಅಮ್ಮನ ಆಜ್ಞೆಯಂತೆ ನಡೆಯುತ್ತೇನೆ ಎಂದಿದ್ದ ನಟ ದರ್ಶನ್ ಅವರ ಈ ನಡೆ ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.