ಭದ್ರಾ ಅಣೆಕಟ್ಟೆಯಿಂದ ನದಿಗೆ ನೀರು ಬಿಡಬೇಡಿ, ಒಂದು ವೇಳೆ ಬಿಟ್ಟರೆ ಲಕ್ಷಾಂತರ ಎಕರೆ ಅಡಿಕೆ ಫಸಲುಗಳ ಮಾರಣಹೋಮವಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮುಖ್ಯಮಂತ್ರಿ ಗಳಿಗೆ ಮನವಿ ಸಲ್ಲಿಸಿದೆ.
ಮನವಿಯಲ್ಲಿ ಭದ್ರಾ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಅಚ್ಚುಕಟ್ಟು ಪ್ರದೇಶದಲ್ಲಿ 1ಲಕ್ಷಕ್ಕೂ ಹೆಚ್ಚಿಗೆ ಎಕರೆ ಭೂಮಿಯಲ್ಲಿ ಬೆಳೆ ಬೆಳೆದಿರುವ ತೋಟಗಳಿಗೆ ನಾಲೆ ಮುಖಾಂತರ ಕುಡಿಯುವ ನೀರಿಗೆ ನೀರನ್ನು ಹಂಚಿಕೆ ಮಾಡಿ ಪ್ರಕಟಣೆ ಮಾಡಲಾಗಿದೆ. ಈ ದಿನದ ಭದ್ರಾ ಅಣೆಕಟ್ಟೆಯ ನೀರಿನ ಮಟ್ಟ 124.8ಅಡಿ ಇದೆ. ಒಟ್ಟು 17.5 ಟಿಎಂಸಿ ನೀರಿನ ಸಂಗ್ರಹಣೆ ಇದ್ದು ಇದರಲ್ಲಿ 13 ಟಿಎಂಸಿ ಉಪಯೋಗಕ್ಕೆಬಾರದ (Dead Storage) ನೀರನ್ನು ಹೊರತುಪಡಿಸಿ, 4.5 ಟಿಎಂಸಿ ನೀರನ್ನು ನಾಲೆ ಮುಖಾಂತರ ಹರಿಸಬಹುದಾಗಿದೆ.
ಇದರಲ್ಲಿ ನಾಲೆ ಮುಖಾಂತರ ಕುಡಿಯುವ ನೀರಿಗೆ 1.5 ಟಿಎಂಸಿ ನೀರು ಹರಿಸಬೇಕು. ಉಳಿದ 3 ಟಿಎಂಸಿ ನೀರು 10ದಿನಗಳಿಗೆ ಸಾಕಾಗುತ್ತದೆ. ಭದ್ರಾ ಸಲಹಾ ಸಮಿತಿ ಪ್ರಕಟಣೆ ಪ್ರಕಾರ ದಿನಾಂಕ 23-04-2024 ರಿಂದ 06-05-2024 ರವೆರೆಗೆ ನೀರು ಹರಿಸುವ ಒಂದು ಕಂತು ಇನ್ನೂ ಬಾಕಿ ಇದೆ. ಆದರೆ ಬೆಳೆದು ನಿಂತ ತೋಟಗಳಿಗೆ ನೀರು ಹರಿಸಲು 4ದಿನದ ಕೊರತೆ ಉಂಟಾಗುತ್ತದೆ.
ಈಗಾಗಲೇ ನದಿ ಮುಖಾಂತರ ಕುಡಿಯುವ ನೀರಿಗಾಗಿ ಕಾಯ್ದಿರಿಸಿರುವುದಕ್ಕಿಂತ 1 ಟಿಎಂಸಿ ನೀರು ಹೆಚ್ಚಿಗೆ ಬಿಡಲಾಗಿದೆ. ಈಗ ನದಿ ಮುಖಾಂತರ ಬಿಡಲು ಅಣೆಕಟ್ಟೆಯಲ್ಲಿ ನೀರಿನ ಸಂಗ್ರಹವಿಲ್ಲ.
ದಿನಾಂಕ 30-03-2024 ರಿಂದ 06-04-2024ರವರೆಗೆ 7ದಿನಗಳ ಕಾಲ ನೀರು ಹರಿಸಿದ್ದು ಗದಗ, ಬೆಟಗೇರಿ ನಗರದ ಕುಡಿಯುವ ನೀರಿಗೆ 12-04-2024ರವರೆಗೆ ನೀರು ಹರಿಸಿದೆ. ಈ ಹಿಂದಿನ ದಿನಗಳಲ್ಲಿ ಒಂದು ಸಾರಿ ನೀರು ಬಿಟ್ಟರೆ 3ತಿಂಗಳುಗಳವರೆಗೂ ಆ ನೀರನ್ನು ಉಪಯೋಗಿಸುತ್ತಿದ್ದರು. ಈಗ ವಾರದ ಒಳಗಡೆ ಗದಗ, ಬೆಟಗೇರಿ ನಗರಕ್ಕೆ 2 ಟಿಎಂಸಿ ಕುಡಿಯುವ ನೀರನ್ನು ಹರಿಸಲು ನೀರಾವರಿ ಇಲಾಖೆಗೆ ಸನ್ಮಾನ್ಯ ಕಾನೂನು ಮತ್ತು ಸಂಸದೀಯ ಸಚಿವರಾದ ಎಚ್.ಕೆ. ಪಾಟೀಲ್‌ರವರು ಪತ್ರ ಬರೆದಿರುವುದು ಆಶ್ಚರ್ಯಕರವಾಗಿದೆ. ಈಗ ನದಿಗೆ ನೀರು ಹರಿಸಲು ನೀರು ಕೇಳುತ್ತಿರುವುದು ನದಿ ಪಾತ್ರದ ತೋಟಗಳಿಗೆ ವಿನಃ ಕುಡಿಯುವುದಕ್ಕಾಗಿ ಅಲ್ಲ ಎಂಬುದು ಸ್ಪಷ್ಟವಾಗಿದೆ.
ಸರ್ಕಾರ ಈಗ ಕುಡಿಯುವ ನೀರಿನ ನೆಪದಲ್ಲಿ 2 ಟಿಎಂಸಿ ನೀರು ಹರಿಸಿದರೆ ಶಿವಮೊಗ್ಗ, ದಾವಣಗೆರೆ, ಹಾವೇರಿ 3 ಜಿಲ್ಲೆಯ ರೈತರ ಲಕ್ಷಾಂತರ ಅಡಿಕೆ ಮತ್ತು ತೆಂಗಿನ ಮರಗಳನ್ನು ಕಡಿದು ಹಾಕಿ ಕೋಟ್ಯಾಂತರ ರೂಪಾಯಿ ರೈತರಿಗೆ ನಷ್ಟವಾಗುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ನದಿಗೆ ನೀರು ಹರಿಸಲು ಸರ್ಕಾರ ತೀರ್ಮಾನ ಮಾಡಬಾರದೆಂದು ಒತ್ತಾಯಿಸಿದ್ದಾರೆ.
ಈ ವೇಳೆ ರಾಜ್ಯಾಧ್ಯಕ್ಷ ಎಚ್.ಆರ್, ಬಸವರಾಜಪ್ಪ, ಉಪಾಧ್ಯಕ್ಷ ಶೇಖರಪ್ಪ, ಲ್ಲಾಧ್ಯಕ್ಷ ಕೆ. ರಾಘವೇಂದ್ರ, ಜಿಲ್ಲಾ ಉಪಾಧ್ಯಕ್ಷರು ಎಂ. ನಂಜುಂಡಪ್ಪ, ಸಿ.ಚಂದ್ರಪ್ಪ ಇದ್ದರು.
