ಮನಮೋಹನ್ v/s ಮೋದಿ | ಯಾರ ಸರ್ಕಾರ ಬೆಸ್ಟ್‌? ಆರೋಗ್ಯ ಅಂಕಿಅಂಶಗಳು ಹೇಳುವುದೇನು?

Date:

Advertisements

ಹಸಿವು ಸೂಚ್ಯಂಕದಲ್ಲಿ 125 ದೇಶಗಳ ಪೈಕಿ ಭಾರತ 111ನೇ ಸ್ಥಾನ ಪಡೆದುಕೊಂಡಿದೆ ಎಂದು ಜಾಗತಿಕ ಹಸಿವು ಸೂಚ್ಯಂಕ (ಜಿಎಚ್‌ಐ)-2023 ವರದಿ ಹೇಳಿತ್ತು. ಆ ವರದಿಯನ್ನು 2023­ರ ಅಕ್ಟೋಬರ್‌ನಲ್ಲಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಲೇವಡಿ ಮಾಡಿದ್ದರು. ವರದಿ ಕುರಿತ ಅವರ ಹೇಳಿಕೆ ವ್ಯಾಪಕ ಟೀಕೆಗೆ ಗುರಿಯಾಗಿತ್ತು.

ವರದಿ ಮತ್ತು ಇರಾನಿ ಲೇವಡಿ ಬಗ್ಗೆ ಪ್ರತಿಕ್ರಿಯಿಸಿದ್ದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, “ಮೋದಿ ಸರ್ಕಾರಕ್ಕೆ ಯಾವುದೇ ನಿರ್ಣಾಯಕ ಜಾಗತಿಕ ಅಂಕಿಅಂಶಗಳನ್ನು ಕಂಡರೆ ಅಲರ್ಜಿ. ಆದರೆ, ಭಾರತದ ಅಂಕಿಅಂಶಗಳು ಕೂಡ ನಮ್ಮ ಜನರು ಹಸಿವಿನಿಂದ ಬಳಲುತ್ತಿದ್ದಾರೆ ಎಂದು ಹೇಳುತ್ತದೆ!” ಎಂದು ಹೇಳಿದ್ದರು. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (NFHS-5) 2019-21ರ ವರದಿಯನ್ನು ಉಲ್ಲೇಖಿಸಿ ಭಾರತದ ಜನರ ಹಸಿವಿನ ಬಗ್ಗೆ ಖರ್ಗೆ ಮಾತನಾಡಿದ್ದರು.

ಅಂದಹಾಗೆ, ಜಾಗತಿಕ ಹಸಿವು ಸೂಚ್ಯಂಕದ ವರದಿಯನ್ನು ಯುರೋಪಿಯನ್ ಲಾಭರಹಿತ ಸಂಸ್ಥೆಗಳು (ಎನ್‌ಜಿಒ) ಸಮೀಕ್ಷೆ ನಡಸಿ, ಸಿದ್ದಪಡಿಸುತ್ತವೆ. NFHSಅನ್ನು ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಡಿಯಲ್ಲಿ ನಡೆಸಲಾಗುತ್ತದೆ. ನಾವು NFHS ವರದಿಯ ಆಧಾರದ ಮೇಲೆಯೇ ಮೋದಿ ಸರ್ಕಾರದ ಸಾಧನೆಯ ಬಗ್ಗೆ ನೋಡೋಣ…

Advertisements

1992-93ರಲ್ಲಿ ಎನ್‌ಎಫ್‌ಎಚ್‌ಎಸ್‌ ಸಮೀಕ್ಷೆ ಆರಂಭವಾಗಿದ್ದು, ಈವರೆಗೆ ಐದು ಆವೃತ್ತಿಯಲ್ಲಿ ವರದಿಯನ್ನು ಪ್ರಕಟಿಸಿದೆ. ಅದರಲ್ಲಿ, ಕಳೆದ ಮೂರು ವರದಿಗಳು ಕಳೆದ 20 ವರ್ಷಗಳಲ್ಲಿ ಆಡಳಿತ ನಡೆಸಿದ ಸರ್ಕಾರಗಳು ಜನರ ಬದುಕಿಗೆ ಏನೆಲ್ಲ ಮಾಡಿವೆ ಎಂಬುದಕ್ಕೆ ಕನ್ನಡಿ ಹಿಡಿದಿವೆ. ಆರೋಗ್ಯ, ಶಿಕ್ಷಣ ಮತ್ತು ಜೀವನ ಗುಣಮಟ್ಟ ಕ್ಷೇತ್ರಗಳಲ್ಲಿ ಮನಮೋಹನ್ ಸಿಂಗ್ (2004-2014) ನೇತೃತ್ವದ ಹಿಂದಿನ ಯುಪಿಎ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಪ್ರಸ್ತುತ ಎನ್‌ಡಿಎ ಸರ್ಕಾರಗಳು (2024-2024) ಮಾಡಿದ ಪ್ರಗತಿಯನ್ನು ಹೋಲಿಕೆ ಮಾಡಲು ಈ ವರದಿಗಳು ಸಹಾಯ ಮಾಡುತ್ತವೆ.

NFHS-6 (2023-24) ಇನ್ನೂ ಪ್ರಕಟವಾಗದಿದ್ದರೂ, ವರದಿಯನ್ನು ನಿರ್ವಹಿಸುವ ಸಂಸ್ಥೆ – ಇಂಟರ್ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಪಾಪ್ಯುಲೇಶನ್ ಸೈನ್ಸಸ್‌ನ ನಿರ್ದೇಶಕ ಕೆಎಸ್ ಜೇಮ್ಸ್ ಅವರನ್ನು 2023ರ ಜುಲೈನಲ್ಲಿ ಕೇಂದ್ರ ಸರ್ಕಾರ ಅಮಾನತುಗೊಳಿಸಿತು. ಅದಕ್ಕೆ ಕಾರಣವಿಷ್ಟೇ, ಜೇಮ್ಸ್‌ ಅವರು 2018ರ ಅಕ್ಟೋಬರ್‌ನಿಂದ ಸಂಸ್ಥೆಯ ನೇತೃತ್ವ ವಹಿಸಿದ್ದರು. ಈ ಸಮಯದಲ್ಲಿ ಹೊರಬಿದ್ದ ಸಮೀಕ್ಷೆಗಳ ಡೇಟಾ ಬಗ್ಗೆ ಸರ್ಕಾರ ಅತೃಪ್ತಿ ಹೊಂದಿತ್ತು. ಆ ಕಾರಣಕ್ಕೆ, ಅವರನ್ನು ಅಮಾನತು ಮಾಡಲಾಯಿತು ಎಂದು ವರದಿಗಳು ಹೇಳುತ್ತವೆ.

ಸದ್ಯಕ್ಕೆ NFHS-3 (2005-06), NFHS-4 (2015-16), ಮತ್ತು NFHS-5 (2019-21)ರ ವರದಿಗಳನ್ನು ತಾಳೆ ಹಾಕಿ ನೋಡೋಣ. NFHS-5 ಒಟ್ಟು 131 ಸೂಚಕಗಳಲ್ಲಿ ದತ್ತಾಂಶವನ್ನು ಹೊಂದಿದೆ. ಈ ವರದಿಯು ವಿಶೇಷವಾಗಿ ಆರೋಗ್ಯ ರಕ್ಷಣೆ, ಪೋಷಣೆ, ವ್ಯಾಕ್ಸಿನೇಷನ್, ಬಾಲಕಿಯರ ಶಿಕ್ಷಣ, ಮಕ್ಕಳ ಆರೋಗ್ಯ, ಶುದ್ಧ ಇಂಧನ ಮತ್ತು ವಿದ್ಯುತ್ ಸಂಪರ್ಕ ಸೇರಿದಂತೆ ಸರ್ಕಾರದ ಮಧ್ಯಸ್ಥಿಕೆಗಳಿಗೆ ಸಂಬಂಧಿಸಿದ ಸೂಚಕಗಳನ್ನು ವಿವರಿಸುತ್ತದೆ. ಇತ್ತೀಚಿನ ಮೂರು ವರದಿಗಳನ್ನು ತಾಳೆ ಹಾಕಿದಾಗ 29 ಸೂಚಕಗಳ ಪೈಕಿ 17 ಅಂಶಗಳಲ್ಲಿ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರಕ್ಕಿಂತ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರವೇ ಉತ್ತಮವಾಗಿ ಕಾರ್ಯನಿರ್ವಹಿಸಿತ್ತು ಎಂಬುದನ್ನು ಸೂಚಿಸುತ್ತದೆ.

ರಕ್ತಹೀನತೆ ನಿಯಂತ್ರಣ, ಮಹಿಳೆಯರಿಗೆ ವಿತರಣಾ ಆರೈಕೆ, ಆರೋಗ್ಯ ವಿಮೆ, ಎಲ್‌ಪಿಜಿ ಫಲಾನುಭವ, ಮಹಿಳಾ ಶಿಕ್ಷಣ ಮತ್ತು ಕುಟುಂಬದ ಆರ್ಥಿಕತೆಯು ಯುಪಿಎ ಸರ್ಕಾರದಲ್ಲಿ ಉತ್ತಮವಾಗಿತ್ತು ಎಂದು ವರದಿ ಹೇಳುತ್ತದೆ. ಕುಡಿಯುವ ನೀರು, ನೈರ್ಮಲ್ಯ ಇತ್ಯಾದಿಗಳನ್ನು ಸುಧಾರಿಸುವಲ್ಲಿ ಎನ್‌ಡಿಎ ಉತ್ತಮವಾಗಿ ಕಾರ್ಯನಿರ್ವಹಿಸಿದ್ದರೂ, ವರದಿಯ ಅಂಕಿಅಂಶಗಳು ಬಿಜೆಪಿ ಪ್ರಚಾರ ಮಾಡುತ್ತಿರುವ ಅಂಕಿಅಂಶಗಳಿಗಿಂತ ಭಾರೀ ಕಡಿಮೆ ಪ್ರಮಾಣದಲ್ಲಿವೆ.

ಈ ಎಲ್ಲ ಕ್ಷೇತ್ರಗಳಲ್ಲಿಯೂ ಸಮೀಕ್ಷೆಗಳ ವಾರ್ಷಿಕ ಶೇಕಡಾವಾರು ಬೆಳವಣಿಗೆ ದರವನ್ನು ತಾಳೆ ಹಾಕಲಾಗಿದೆ. 3ನೇ ಮತ್ತು 4ನೇ ಎನ್‌ಎಫ್‌ಎಚ್‌ಎಸ್‌ ವರದಿಯನ್ನು (2005-16) ಯುಪಿಎ ಸರ್ಕಾರದ ಅವಧಿಯೆಂದು ಪರಿಗಣಿಸಲಾಗಿದೆ. ಈ ಅವಧಿಯ ವಾರ್ಷಿಕ ಬೆಳವಣಿಗೆ ದರವನ್ನು ಪಡೆಯಲು ವರದಿಗಳ ಶೇಕಡಾವಾರು ದರವನ್ನು 10ರಿಂದ (2005-2015 ನಡುವಿನ 10 ವರ್ಷಗಳು) ಭಾಗಿಸಲಾಗಿದೆ. ಮೋದಿ ಸರ್ಕಾರದ ಅಡಿಯಲ್ಲಿ ವಾರ್ಷಿಕ ಬೆಳವಣಿಗೆ ದರವನ್ನು ಪಡೆಯಲು 4ನೇ ಮತ್ತು 5ನೇ NFHS ವರದಿಯ ಶೇಕಡಾವಾರು ದರವನ್ನು 5ರಿಂದ ಭಾಗಿಸಲಾಗಿದೆ.

ಉದಾಹರಣೆಗೆ, ಐದು ವರ್ಷದೊಳಗಿನ ಶಿಶುಗಳ ಮರಣ ದರವನ್ನು (ಜನಿಸುವ ಪ್ರತಿ 1,000 ನವಜಾತ ಶಿಶುಗಳಲ್ಲಿ 5 ವರ್ಷಗಳನ್ನು ಪೂರೈಸುವ ಮೊದಲು ಸಾಯುವ ಶಿಶುಗಳ ಪ್ರಮಾಣ) ಹೋಲಿಕೆ ಮಾಡಲಾಗಿದೆ.

ಮಕ್ಕಳ ಮರಣ ಪ್ರಮಾಣ

ಮೋದಿ ಸರ್ಕಾರವು ಅಧಿಕಾರಕ್ಕೆ ಬಂದ ನಂತರ, 2030ರ ವೇಳೆಗೆ ನವಜಾತ ಶಿಶುಗಳ ಮರಣ ಮತ್ತು ಗರ್ಭದಲ್ಲೇ ಶಿಶುಗಳ ಮರಣವನ್ನು ಕೊನೆಗಾಣಿಸಲು 2014ರಲ್ಲಿ ಭಾರತ ನವಜಾತ ಕ್ರಿಯಾ ಯೋಜನೆಯನ್ನು (INAP) ಪ್ರಾರಂಭಿಸಿತು.

ಮಕ್ಕಳ ಮರಣದ ವಿಷಯಕ್ಕೆ ಬಂದಾಗ – ನಿರ್ದಿಷ್ಟವಾಗಿ ಹಸುಗೂಸು ಮರಣ ಪ್ರಮಾಣ (ಜನಿಸುವ ಪ್ರತಿ 1,000 ಶಿಶುಗಳಲ್ಲಿ ಒಂದು ವರ್ಷದೊಳಗೆ ಸಾವನ್ನಪ್ಪುವ ಮಕ್ಕಳ ಸಂಖ್ಯೆ) ಮತ್ತು ಐದು ವರ್ಷ ಪೂರೈಸುವ ಮೊದಲೇ ಶಿಶುಗಳ ಮರಣ ಪ್ರಮಾಣವು ಯುಪಿಎ ಮತ್ತು ಎನ್‌ಡಿಎ ಸರ್ಕಾರಗಳ ಅಡಿಯಲ್ಲಿ ವಾರ್ಷಿಕ ಬೆಳವಣಿಗೆ ದರವು ಬಹುತೇಕ ಒಂದೇ ಆಗಿದೆ. ಆದರೆ, ರಿಜಿಸ್ಟ್ರಾರ್ ಜನರಲ್ ಮತ್ತು ಜನಗಣತಿ ಆಯುಕ್ತರ ಕಚೇರಿ ಬಿಡುಗಡೆ ಮಾಡಿದ ಮಾದರಿ ನೋಂದಣಿ ವ್ಯವಸ್ಥೆ (ಎಸ್‌ಆರ್‌ಎಸ್) ಅಂಕಿಅಂಶ ವರದಿ 2020ರ ಅಂಕಿಅಂಶಗಳನ್ನು ಉಲ್ಲೇಖಿಸಿರುವ ಮೋದಿ ಸರ್ಕಾರ, ಮಕ್ಕಳ ಮರಣ ಪ್ರಮಾಣವನ್ನು ಕಡಿಮೆ ಮಾಡುವಲ್ಲಿ ಭಾರತವು ಮಹತ್ವದ ಹೆಗ್ಗುರುತನ್ನು ಸಾಧಿಸಿದೆ ಎಂದು ಹೇಳಿಕೊಂಡಿದೆ.

ಎಸ್‌ಆರ್‌ಎಸ್‌ ವರದಿಯನ್ನು NFHS-5ಕ್ಕೆ ಹೋಲಿಕೆ ಮಾಡಿ ನೋಡಲಾಗಿದೆ. ಶಿಶು ಮರಣ ಪ್ರಮಾಣ, ಐದು ವರ್ಷಗಳಗಿನ ಮಕ್ಕಳ ಮರಣ ಪ್ರಮಾಣ ಮತ್ತು ನವಜಾತ ಶಿಶುಗಳ ಮರಣ ಪ್ರಮಾಣವು (ಜನಿಸಿದ 28 ದಿನಗಳೊಳಗಿನ ಸಾವನ್ನಪ್ಪುವ ಮಕ್ಕಳ ಸಂಖ್ಯೆ) ಎನ್‌ಎಫ್‌ಎಚ್‌ಎಸ್‌ ವರದಿ ನೀಡಿರುವ ಅಂಕಿಅಂಶಕ್ಕಿಂತ ಕಡಿಮೆ ಇದೆಯೆಂದು ಎಸ್‌ಆರ್‌ಎಸ್‌ ವರದಿ ವಾದಿಸಿದೆ.

ಮಕ್ಕಳು 1

2022 ರಲ್ಲಿ ಎಸ್‌ಆರ್‌ಎಸ್‌ ವರದಿ-2020ರ ಅಂಕಿಅಂಶಗಳನ್ನು ಪ್ರಕಟಿಸಿದ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ, ”ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ‘ಗಮನಾರ್ಹ ಮಧ್ಯಸ್ಥಿಕೆ’ ಮತ್ತು ‘ದೃಢ ಕೇಂದ್ರ-ರಾಜ್ಯ ಪಾಲುದಾರಿಕೆ’ ಜೊತೆಗೆ ಭಾರತವು 2030ರ ಮಕ್ಕಳ ಮರಣದ ಸುಸ್ಥಿರ ಅಭಿವೃದ್ಧಿ (ಎಸ್‌ಜಿಡಿ) ಗುರಿಗಳನ್ನು ಪೂರೈಸಲು ಸಜ್ಜಾಗಿದೆ” ಎಂದು ಹೇಳಿದರು. ಈ ಗುರಿಗಳು ಐದು ವರ್ಷದೊಳಗಿನ ಮರಣ ಪ್ರಮಾಣವನ್ನು 25ಕ್ಕಿಂತ (ಪ್ರತಿ 1,000ಕ್ಕೆ) ಕಡಿಮೆ ಮತ್ತು ನವಜಾತ ಮರಣ ಪ್ರಮಾಣವನ್ನು 12ಕ್ಕಿಂತ (ಪ್ರತಿ 1,000ಕ್ಕೆ) ಕಡಿಮೆ ಮಾಡುತ್ತದೆ ಎಂದು ಅವರು ಹೇಳಿದ್ದರು.

ಆದಾಗ್ಯೂ, ಎಸ್‌ಆರ್‌ಎಸ್‌ ಮರಣ ದತ್ತಾಂಶದ ವಾಸ್ತವತೆಯನ್ನು ಪ್ರಶ್ನಿಸಲಾಗಿದ್ದು, ಪರಿಶೀಲನೆ ನಡೆಸಲಾಗಿದೆ. ವಿಶೇಷವಾಗಿ 2020ರ ಕೊರೋನ ಆಕ್ರಮಣದ ವರ್ಷದಲ್ಲಿ ಮಕ್ಕಳ ಸಾವುಗಳನ್ನು ಕಡಿಮೆ ಅಂದಾಜು ಮಾಡಲಾಗಿದೆ ಎಂಬುದು ಬಹಿರಂಗವಾಗಿದೆ

ಮಕ್ಕಳು1

NFHS-3 ಮತ್ತು 4 ನಡುವಿನ ಹತ್ತು ವರ್ಷಗಳಲ್ಲಿ, ಶಿಶು ಮರಣ ಪ್ರಮಾಣವು 57 ರಿಂದ 41ಕ್ಕೆ ಇಳಿದಿತ್ತು. ಶಿಶುಗಳ ಸಾವಿನಲ್ಲಿ 28% ಕಡಿಮೆಯಾಗಿತ್ತು. ಆದ್ದರಿಂದ, ಯುಪಿಎ ಸರ್ಕಾರದ ಅಡಿಯಲ್ಲಿ, ಸರಾಸರಿ ಶಿಶು ಮರಣ ಪ್ರಮಾಣವು ವರ್ಷಕ್ಕೆ ಸುಮಾರು 2.8%ರಷ್ಟು ಸುಧಾರಿಸಿದೆ. NFHS-4 ಮತ್ತು 5 ನಡುವಿನ ಐದು ವರ್ಷಗಳ ಅವಧಿಯಲ್ಲಿ, NDA ಸರ್ಕಾರದ ಅಡಿಯಲ್ಲಿ ಶಿಶುಗಳ ಸಾವಿನಲ್ಲಿ 14.63% ಕಡಿಮೆಯಾಗಿದೆ. ಹಾಗಾಗಿ, ಮೋದಿ ಸರ್ಕಾರದ ಅಡಿಯಲ್ಲಿ ವಾರ್ಷಿಕ ಪ್ರಗತಿ ದರವು 2.9% ಆಗಿದೆ. ಹೀಗಾಗಿ, ಎನ್‌ಡಿಎ ಮತ್ತು ಎಪಿಎ ಅವಧಿಯಲ್ಲಿನ ವಾರ್ಷಿಕ ದರವು ಸಮಾನವಾಗಿವೆ.

ಮಕ್ಕಳು2

ಮಕ್ಕಳ ಪೋಷಣೆ

ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತವು ಅತ್ಯಂತ ಕೆಳಮಟ್ಟಕ್ಕೆ ಕುಸಿದಾಗ ಆ ವರದಿಯನ್ನೇ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅಪಹಾಸ್ಯ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಖರ್ಗೆ, ದೇಶದ ಮಕ್ಕಳಲ್ಲಿ ನಿರಂತರ ಅಪೌಷ್ಟಿಕತೆಯನ್ನು ತೋರಿಸುವ NFHS-5 ಡೇಟಾವನ್ನು ಮುಂದಿಟ್ಟಿದ್ದರು. ಎನ್‌ಎಫ್‌ಎಚ್‌ಎಸ್‌-5ರ ಅಂಕಿಅಂಶಗಳ ಪ್ರಕಾರ, ಐದು ವರ್ಷದೊಳಗಿನ 3 ಮಕ್ಕಳಲ್ಲಿ 1 ಮಗುವಿನಲ್ಲಿ ಅಪೌಷ್ಟಿಕತೆಯಿಂದಾಗಿ ಬೆಳವಣಿಗೆ ಕುಂಟಿತವಾಗಿದೆ. ಐದು ವರ್ಷದೊಳಗಿನ 5 ಮಕ್ಕಳಲ್ಲಿ 1 ಮಗು ಎತ್ತರಕ್ಕೆ ತಕ್ಕಷ್ಟು ತೂಕವನ್ನು ಹೊಂದಲಾಗುತ್ತಿಲ್ಲ. ಯುನಿಸೆಫ್‌ನ ಇತ್ತೀಚಿನ ಅಂದಾಜುಗಳು, 2022ಕ್ಕೂ ಮುನ್ನ, ಭಾರತದಲ್ಲಿ ಐದು ವರ್ಷದೊಳಗಿನ 31.7% ಮಕ್ಕಳಲ್ಲಿ ಬೆಳವಣಿಗೆ ಕುಂಠಿತವಾಗಿದೆ ಮತ್ತು ಅವರಲ್ಲಿ 18.7% ನಷ್ಟು ಮಕ್ಕಳು ಕಡಿಮೆ ತೂಕ ಹೊಂದಿದ್ದಾರೆ ಎಂಬುದನ್ನು ಗುರುತಿಸಿವೆ.

2015ರ ನಂತರದಲ್ಲಿ ಮಕ್ಕಳ ಅಪೌಷ್ಟಿಕತೆ ಪ್ರಮಾಣದಲ್ಲಿ ಸುಧಾರಣೆ ಕಂಡಿದೆ ಎಂದು ಕಳೆದ ಎನ್‌ಎಫ್‌ಎಚ್‌ಎಸ್‌ ವರದಿ ಹೇಳಿದರೂ, ಯುಪಿಎ ಸರ್ಕಾರಕ್ಕೆ ಹೋಲಿಸಿದರೆ ಮೋದಿ ಸರ್ಕಾರದ ಅಡಿಯಲ್ಲಿ ಅಪೌಷ್ಟಿಕತೆಯ ವಾರ್ಷಿಕ ದರವು ಅಲ್ಪ ಮಟ್ಟಿಗಷ್ಟೇ ಕಡಿಮೆಯಾಗಿದೆ.

ಆದರೆ, ತೀವ್ರವಾಗಿ ಕ್ಷೀಣಿಸುತ್ತಿರುವ ಮಕ್ಕಳ ವಿಷಯಕ್ಕೆ ಬಂದರೆ, ಎರಡೂ ಸರ್ಕಾರಗಳು ಕಳಪೆ ಪ್ರದರ್ಶನ ನೀಡಿವೆ. ಆದಾಗ್ಯೂ, ಯುಪಿಎ ಸರ್ಕಾರವು ಮಕ್ಕಳ ತೀವ್ರ ಕ್ಷೀಣತೆಯಲ್ಲಿ ಭಾರೀ ಹೆಚ್ಚಳಕ್ಕೆ ಸಾಕ್ಷಿಯಾಗಿದೆ. ಎನ್‌ಡಿಎ ಸರ್ಕಾರವು ಒಂದು ಮಟ್ಟಿಗೆ ಅಪೌಷ್ಟಿಕತೆಯನ್ನು ನಿವಾರಿಸುವಲ್ಲಿ ಕೆಲಸ ಮಾಡಿದ್ದರೂ, ಅನೇಕ ಮಕ್ಕಳಲ್ಲಿ ಅಪೌಷ್ಟಿಕತೆಯ ಸಮಸ್ಯೆ ಮುಂದುವರಿದಿದೆ.

ಮಕ್ಕಳು3

2022ರ ವೇಳೆಗೆ ದೇಶದಲ್ಲಿ ಅಪೌಷ್ಟಿಕತೆಯನ್ನು ಹೋಗಲಾಡಿಸುವ ಉದ್ದೇಶದಿಂದ ಮೋದಿ ಸರ್ಕಾರವು 2018ರಲ್ಲಿ ‘ರಾಷ್ಟ್ರೀಯ ಪೋಷಣೆ ಅಭಿಯಾನ’ವನ್ನು ‘ಪೋಶಣ್ ಅಭಿಯಾನ’ ಎಂದು ಮರುನಾಮಕರಣ ಮಾಡಿತು.

ಮಕ್ಕಳು4

ಸಮಗ್ರ ಮಕ್ಕಳ ಅಭಿವೃದ್ಧಿ ಸೇವೆಗಳು (ICDS), ಪೋಶಣ್ ಮತ್ತು ಇತರ ಯೋಜನೆಗಳನ್ನು ಒಗ್ಗೂಡಿಸಿ 2021-22ರಲ್ಲಿ ಸರ್ಕಾರವು ಸಕ್ಷಮ್ ಅಂಗನವಾಡಿ ಮತ್ತು ಪೋಶಣ್ 2.0 ಅನ್ನು ಪ್ರಾರಂಭಿಸಿತು. ಆರು ವರ್ಷದೊಳಗಿನ ಮಕ್ಕಳಿಗೆ ಮತ್ತು ಗರ್ಭಿಣಿ ಮತ್ತು ಹಾಲುಣಿಸುವ ಮಹಿಳೆಯರಿಗೆ ಆರೋಗ್ಯ ಮತ್ತು ಪೌಷ್ಟಿಕಾಂಶದ ಸೇವೆಗಳನ್ನು ಒದಗಿಸಲು ಉದ್ದೇಶಿಸಿರುವ ಐಸಿಡಿಎಸ್, ಆರಂಭವಾದ 2014-15ರಲ್ಲಿಯೇ ಕೇಂದ್ರ ಸರ್ಕಾರದಿಂದ 18,691 ಕೋಟಿ ರೂ. ಅನುದಾನವನ್ನು ಪಡೆದುಕೊಂಡಿತ್ತು.

ಐಸಿಡಿಎಸ್‌ ಆರಂಭದ ವರ್ಷಕ್ಕೂ ಇಂದಿಗೂ ತಾಳೆ ಹಾಕಿ ನೋಡಿದರೆ, 10 ವರ್ಷಗಳ ನಂತರ, 2023-24ರಲ್ಲಿ ಸಕ್ಷಮ್ ಅಂಗನವಾಡಿ ಮತ್ತು ಪೋಶಣ್ 2.0 ಯೋಜನೆಗೆ (ಐಸಿಡಿಎಸ್, ಪೋಶಣ್ ಅಭಿಯಾನ, ಇತರ ಯೋಜನೆ) ಹಂಚಿಕೆಯ ಪರಿಷ್ಕೃತ ಅಂದಾಜು ಕೇವಲ 21,523 ಕೋಟಿ ರೂ. ಮಾತ್ರ. ಅಲ್ಲದೆ, 2024-25ರ ಪ್ರಸ್ತುತ ಆರ್ಥಿಕ ವರ್ಷದಲ್ಲಿನ ಅಂದಾಜು ಹಂಚಿಕೆ 21,200 ಕೋಟಿ ರೂ. ಮಾತ್ರ)

ಪೋಷಣ್ ಅಭಿಯಾನದ ಅಡಿಯಲ್ಲಿ ಮಕ್ಕಳು ಮತ್ತು ಮಹಿಳೆಯರಲ್ಲಿ ರಕ್ತಹೀನತೆ ತಡೆಗಟ್ಟಲು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇದು ರಕ್ತಹೀನತೆಯನ್ನು ಪರಿಹರಿಸಲು ಆಯುಷ್ (ಆಯುರ್ವೇದ, ಯೋಗ ಮತ್ತು ಪ್ರಕೃತಿ ಚಿಕಿತ್ಸೆ, ಯುನಾನಿ, ಸಿದ್ಧ ಮತ್ತು ಹೋಮಿಯೋಪತಿ) ಅನ್ನು ಉತ್ತೇಜಿಸುವ ಕಾರ್ಯಕ್ರಮಗಳನ್ನು ನಡೆಸುತ್ತದೆ.

ರಕ್ತಹೀನತೆ

ಮೋದಿ ಸರ್ಕಾರದ ಅಡಿಯಲ್ಲಿ ಮಕ್ಕಳು ಮತ್ತು ವಯಸ್ಕರಲ್ಲಿ ರಕ್ತಹೀನತೆ ಗಣನೀಯವಾಗಿ ಜಿಗಿತ ಕಂಡಿದೆ. ರಕ್ತಹೀನತೆ ಹೊಂದಿರುವ ವಯಸ್ಕರ ಶೇಕಡಾವಾರು ಪ್ರಮಾಣವು 2005 ಕ್ಕಿಂತ 2020ರಲ್ಲಿ ಗರಿಷ್ಠ ಮಟ್ಟಕ್ಕೆ ತಲುಪಿದೆ.

ಹೀಗಾಗಿ, ಮುಂದಿನ ಸುತ್ತಿನ ಸಮೀಕ್ಷೆ NFHS-6ರಿಂದ ರಕ್ತಹೀನತೆ ವಿಷಯವನ್ನೇ ಕೈಬಿಡಲು ಸರ್ಕಾರ ನಿರ್ಧರಿಸಿದೆ. ಸರ್ಕಾರದ ನಿರ್ಧಾರಕ್ಕೆ ತೀವ್ರ ವಿರೋಧಗಳು ವ್ಯಕ್ತವಾಗಿವೆ. ಅದರೂ, NFHS ಸಮೀಕ್ಷೆಯಲ್ಲಿ ಬೆರಳಿಗೆ ಚುಚ್ಚುವ ಮೂಲಕ ರಕ್ತದ ಮಾದರಿ ಸಂಗ್ರಹಿಸುವ ವಿಧಾನವು ರಕ್ತಹೀನತೆಯ ಅತಿಯಾದ ಅಂದಾಜಿಗೆ ಕಾರಣವಾಗುತ್ತದೆ ಎಂಬ ಕಾರಣ ನೀಡಿ ಸರ್ಕಾರ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ.

ರಕ್ತಹೀನತೆ

ರಕ್ತಹೀನತೆ2

ಈ ನಡುವೆ, ರಕ್ತಹೀನತೆಯ ಡೇಟಾವನ್ನು ಈಗ ವಿಭಿನ್ನ ಸಮೀಕ್ಷೆಯಿಂದ ಸೆರೆಹಿಡಿಯಲಾಗುತ್ತಿದೆ. ಭಾರತದಲ್ಲಿ ಹೊಸದಾಗಿ ಪ್ರಾರಂಭಿಸಲಾದ ಡಯಟ್ ಮತ್ತು ಬಯೋಮಾರ್ಕರ್ಸ್ ಸಮೀಕ್ಷೆ (DABS-I)ಯಲ್ಲಿ ರಕ್ತನಾಳದಿಂದ ರಕ್ತದ ಮಾದರಿಗಳನ್ನು ತೆಗೆದುಕೊಳ್ಳಲಾಗುತ್ತದೆ. ಆದರೆ, ಮೊದಲ ಸುತ್ತಿನ DABS-I ವರದಿಯು ಸುಮಾರು 1.8 ಲಕ್ಷ ಕುಟುಂಬಗಳ ಮಾದರಿಗಳನ್ನು ಹೊಂದಿದೆ. ಆದರೆ, NFHS-5ರ ಸಮೀಕ್ಷೆಯು ಬರೋಬ್ಬರಿ 6.1 ಲಕ್ಷ ಕುಟುಂಬಗಳನ್ನು ಸಮೀಕ್ಷೆಗೆ ಒಳಪಡಿಸಿತ್ತು. ರಕ್ತದ ಮಾದರಿಗಳನ್ನು ಸಂಗ್ರಹಿಸಿತ್ತು.

ರಕ್ತಹೀನತೆಗೆ ಚಿಕಿತ್ಸೆ ನೀಡಲು ಬಳಸಲಾಗುವ ಕಬ್ಬಿಣ-ಫೋಲಿಕ್ ಆಮ್ಲದ ಸೇವನೆಯು ಮನಮೋಹನ್ ಸಿಂಗ್ ಸರ್ಕಾರದ ಅಡಿಯಲ್ಲಿ ಗರ್ಭಿಣಿಯರಲ್ಲಿ ವೇಗವಾಗಿ ಪ್ರಗತಿ ಸಾಧಿಸಿದೆ ಎಂದು NFHS ತೋರಿಸುತ್ತದೆ.

ಗರ್ಭಿಣಿಯರು

ಗರ್ಭಿಣಿಯರು2

ಗರ್ಭಿಣಿಯರು, ಐದು ವರ್ಷದೊಳಗಿನ ಮಕ್ಕಳು, ಋತುಮತಿಯಾದ ಹೆಣ್ಣುಮಕ್ಕಳು ಮತ್ತು ಮಹಿಳೆಯರು ರಕ್ತಹೀನತೆಗೆ ಹೆಚ್ಚು ಗುರಿಯಾಗುತ್ತಾರೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಗರ್ಭಾವಸ್ಥೆಯಲ್ಲಿ ರಕ್ತಹೀನತೆ ಎದುರಾಗುವುದರಿಂದ ‘ಅಕಾಲಿಕ ಜನನ, ಕಡಿಮೆ ಜನನ ತೂಕ ಮತ್ತು ತಾಯಿಯ ಮರಣ’ ಸೇರಿದಂತೆ ನಾನಾ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಮಗು ಮತ್ತು ತಾಯಿಯ ಆರೋಗ್ಯ

2014ರಲ್ಲಿ, ಮೋದಿ ಸರ್ಕಾರವು ತನ್ನ ಪ್ರಮುಖ ‘ಮಿಷನ್ ಇಂದ್ರಧನುಷ್’ ಕಾರ್ಯಕ್ರಮವನ್ನು ಆರಂಭಿಸಿತು. ಭಾರತದಾದ್ಯಂತ 90%ಗಿಂತ ಹೆಚ್ಚಿನ ಜನರಲ್ಲಿ ಸಂಪೂರ್ಣ ರೋಗನಿರೋಧಕತೆಯನ್ನು ಸಾಧಿಸುವ ಗುರಿಯನ್ನು ಸರ್ಕಾರ ಹೊಂದಿತ್ತು. ಅಂದಹಾಗೆ, 2021ರಲ್ಲಿ ಕೊರೋನ ಆಕ್ರಮಣ ಉಲ್ಬಣಗೊಂಡ ಸಮಯದಲ್ಲಿ 2020ಕ್ಕೂ ಮುನ್ನವೇ ಈ ಗುರಿಯನ್ನು ನಾವು ಸಾಧಿಸಿದ್ದೇವೆ ಎಂದು ಮೋದಿ ಹೇಳಿಕೊಂಡಿದ್ದರು. ಆದರೆ, ಕೊರೋನ 2ನೇ ಅಲೆಯು ಜನರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇದೆ ಎಂಬುದನ್ನು ಸಾಬೀತು ಮಾಡಿತು.

2014 ರಲ್ಲಿ, ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗ, ಭಾರತದಲ್ಲಿ ಲಸಿಕೆ ಕವರೇಜ್ ಕೇವಲ 60% ಆಗಿತ್ತು ಎಂದು ಮೋದಿ ದೂರಿದ್ದಾರೆ. ಆದರೆ, ವಾಸ್ತವದಲ್ಲಿ, NFHS-4ರ ವರದಿಯಂತೆ 12-23 ತಿಂಗಳ ವಯಸ್ಸಿನ 62% ಮಕ್ಕಳು ಸಂಪೂರ್ಣವಾಗಿ ರೋಗನಿರೋಧಕ (BCG, ದಡಾರ, ಪೋಲಿಯೊ ಮತ್ತು DPT ವಿರುದ್ಧ) ಶಕ್ತಿಯನ್ನು ಹೊಂದಿದ್ದರು. ಅದಲ್ಲದೆ, 2020ರ ಮೊದಲು 90% ರೋಗನಿರೋಧಕ ವ್ಯಾಪ್ತಿಯನ್ನು ಸಾಧಿಸಲಾಗಿದೆ ಎಂದೂ ಮೋದಿ ಸಮರ್ಥಿಸಿಕೊಂಡಿದ್ದರು. NFHS-5 ವರದಿಯು, ರೋಗನಿರೋಧಕ ವ್ಯಾಪ್ತಿಯು ಕೇವಲ 76% ಮಾತ್ರವೇ ತಲುಪಿದೆ ಎಂಬ ಸತ್ಯವನ್ನು ಬಹಿರಂಗಪಡಿಸಿದೆ.

ಅದಾಗ್ಯೂ, ಎನ್‌ಎಫ್‌ಎಚ್‌ಎಸ್ ಡೇಟಾವು ಎನ್‌ಡಿಎ ಆಡಳಿತದಲ್ಲಿ ಲಸಿಕೆ ಹಾಕುವ ವೇಗವು ಸ್ವಲ್ಪಮಟ್ಟಿಗೆ ವೇಗಗೊಂಡಿದೆ ಎಂದು ಹೇಳಿದೆ.

ಲಸಿಕೆ ಮಕ್ಕಳು

ಲಸಿಕೆ ಮಕ್ಕಳು2

ಉಳಿದಂತೆ, ಮಾತೃತ್ವ ಆರೈಕೆ ಮತ್ತು ಮಕ್ಕಳ ಕಲ್ಯಾಣದ ಇತರ ಕ್ರಮಗಳು ಯುಪಿಎ ಸರ್ಕಾರದಲ್ಲಿ ವೇಗವಾಗಿ ಪ್ರಗತಿ ಸಾಧಿಸಿವೆ ಎಂದು ಡೇಟಾ ಹೇಳಿದೆ

ತಾಯಂದಿರು

ತಾಯಂದಿರು2

ಬಾಲ್ಯ ವಿವಾಹಗಳನ್ನು ತಡೆಯುವಲ್ಲಿ ಸಂಖ್ಯೆಯು ಯುಪಿಎ ಆಡಳಿತಕ್ಕೆ ಹೋಲಿಸಿದರೆ ಎನ್‌ಡಿಎ ಆಡಳಿತದಲ್ಲಿ ನಿಧಾನಗತಿಯಲ್ಲಿ ಕಡಿಮೆಯಾಗುತ್ತಿದೆ.

ಆರೋಗ್ಯ ರಕ್ಷಣೆ

NFHS-5 ಪ್ರಕಾರ, ಭಾರತದಲ್ಲಿ ಕೇವಲ 41% ಕುಟುಂಬಗಳು ಮಾತ್ರ ಆರೋಗ್ಯ ವಿಮೆ ಅಥವಾ ಆರೋಗ್ಯ ಯೋಜನೆಯಡಿ ನೋಂದಣಿ ಮಾಡಿಕೊಂಡಿವೆ. ಈ ಸಂಖ್ಯೆ 2015ರಿಂದ ಸುಧಾರಣೆಯಾಗಿದ್ದರೂ, 2018ರಲ್ಲಿ ಕೇಂದ್ರ ಸರ್ಕಾರ ಆಯುಷ್ಮಾನ್ ಭಾರತ್ – ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ ಆರೋಗ್ಯ ವಿಮಾ ಯೋಜನೆಯನ್ನು ಆರಂಭಿಸಿದ ಹೊರತಾಗಿಯೂ ಯುಪಿಎ ಸರ್ಕಾರದ ಅಡಿಯಲ್ಲಿಯೇ ಪ್ರಗತಿಯ ವೇಗ ಹೆಚ್ಚಾಗಿತ್ತು.

ಆರೋಗ್ಯ ವಿಮೆ

ಆರೋಗ್ಯ ವಿಮೆ2

ಆರೋಗ್ಯ ಯೋಜನೆಗೆ ಖರ್ಚು ಮಾಡುವ ವೆಚ್ಚವು ವರ್ಷಗಳಿಂದ ವರ್ಷಕ್ಕೆ ಸ್ಥಿರವಾಗಿ ಹೆಚ್ಚಾಗುತ್ತಿದೆ. ಇದೇ ಸಮಯದಲ್ಲಿ, ವಿಮಾ ಕ್ಲೈಮ್ ಸೆಟಲ್‌ಮೆಂಟ್‌ಗಳಲ್ಲಿ ಹಲವಾರು ಅಕ್ರಮಗಳು ಮತ್ತು ಭ್ರಷ್ಟಾಚಾರಗಳು ನಡೆಯುತ್ತಿರುವುದನ್ನು ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಕಂಡುಹಿಡಿದ್ದಾರೆ.

ಆರೋಗ್ಯ ವಿಮೆ3

ಜೀವನಮಟ್ಟ

2016 ರಲ್ಲಿ, ಬಡ ಕುಟುಂಬಗಳಿಗೆ ಎಲ್ಪಿಜಿ ಸಂಪರ್ಕಗಳನ್ನು ಒದಗಿಸಲು ಪ್ರಧಾನ ಮಂತ್ರಿ ಉಜ್ವಲ ಯೋಜನೆ (ಪಿಎಂಯುವೈ)ಯನ್ನು ಪ್ರಾರಂಭಿಸಲಾಯಿತು. ಈ ಯೋಜನೆಯಡಿ 10.27 ಕೋಟಿ ಕುಟುಂಬಗಳು ಫಲಾನುಭವಿಗಳಾಗಿದ್ದಾರೆ ಎಂದು ಕೇಂದ್ರ ಸರ್ಕಾರ ಹೇಳಿಕೊಂಡಿದೆ. ಅಲ್ಲದೆ, ಸುಮಾರು 88% ಫಲಾನುಭವಿಗಳು 2022-23ರಲ್ಲಿ ಕನಿಷ್ಠ ಒಂದು ಬಾರಿ ತಮ್ಮ ಮನೆಯ ಸಿಲಿಂಡರ್‌ಗಳನ್ನು ಬದಲಿಸಿದ್ದಾರೆ (ರೀಫಿಲ್) ಎಂದು ಸರ್ಕಾರ ವಾದಿಸಿದೆ.

ಆದಾಗ್ಯೂ, ಆ ವರ್ಷದಲ್ಲಿ ಸುಮಾರು 25% ಉಜ್ವಲಾ ಫಲಾನುಭವಿಗಳು ಒಂದು ಅಥವಾ ಯಾವುದೇ ರೀಫಿಲ್ ಮಾಡಿಸಿಲ್ಲ ಎಂಬುದು ಆರ್‌ಟಿಐನಿಂದ ಬಹಿರಂಗವಾಗಿದೆ.

ಉಜ್ವಲ ಫಲಾನುಭವಿಗಳು ಸಬ್ಸಿಡಿಯನ್ನು (ಕಳೆದ ವರ್ಷ ರೂ. 200 ರಿಂದ ರೂ. 300ಕ್ಕೆ ಏರಿಸಲಾಗಿದೆ) ಪಡೆಯುತ್ತಾರೆ. ಸಬ್ಸಿಡಿ ಸಹಿತ LPG ಬೆಲೆಗಳು 14.2 ಕೆಜಿ ಎಲ್‌ಪಿಜಿ ಸಿಲಿಂಡರ್‌ಗೆ 2014ರ ಜನವರಿಯಲ್ಲಿ 414 ರೂ. ಇತ್ತು. ಇದೀಗ, 2023ರ ಜುಲೈನಲ್ಲಿ ಅದರ ಬೆಲೆ 903ಕ್ಕೆ ಏರಿಕೆಯಾಗಿದೆ.

ಇನ್ನು, 2018ರ ಆರಂಭದಲ್ಲಿ ಪ್ರಧಾನಿ ಮೋದಿ ಅವರು ಭಾರತದ ಎಲ್ಲ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ನೀಡಿಲಾಗಿದೆ ಎಂದು ಹೇಳಿಕೊಂಡಿದ್ದರು. ಆದರೆ, NFHS-5 ಅಂಕಿಅಂಶಗಳು ಮೋದಿ ಅವರ ವಾದವನ್ನು ತಳ್ಳಿ ಹಾಕಿದೆ. ಅದರೆ, ವಿದ್ಯುದ್ದೀಕರಣ ಸುಧಾರಿಸಿದೆ ಎಂದು ಹೇಳಿದೆ. ಇದಲ್ಲದೆ, ಯುಪಿಎ ಸರ್ಕಾರದ ಅವಧಿಯಲ್ಲೇ ವಿದ್ಯುದ್ದೀಕರಣವು ಬಹಳ ವೇಗವಾಗಿತ್ತು ಎಂದನ್ನು ವರದಿಗಳು ಖಾತ್ರಿ ಪಡಿಸಿವೆ.

ವಿದ್ಯುತ್ 4

ವಿದ್ಯುತ್2

ಗ್ರಾಮೀಣ ಭಾಗದಲ್ಲಿ ಶುದ್ಧ ಕುಡಿಯುವ ನೀರಿನ ಬಳಕೆಯನ್ನು ಸುಧಾರಿಸಲು, ಜಲ ಜೀವನ್ ಮಿಷನ್ ಅನ್ನು 2019ರ ಆಗಸ್ಟ್‌ನಲ್ಲಿ ಪ್ರಾರಂಭಿಸಲಾಯಿತು. 2024ರ ವೇಳೆಗೆ ಗ್ರಾಮೀಣ ಭಾಗದ ಎಲ್ಲ ಮನೆಗಳಿಗೆ ಕೊಳಾಯಿ (ನಲ್ಲಿ) ಸಂಪರ್ಕ ಒದಗಿಸುವ ಗುರಿಯನ್ನೂ ಹಾಕಿಕೊಳ್ಳಲಾಗಿತ್ತು. ಜಲ ಶಕ್ತಿ ಸಚಿವಾಲಯದ ಪ್ರಕಾರ, 2019ರಲ್ಲಿ 17% ಕುಟುಂಬಗಳು ಮಾತ್ರವೇ ನಲ್ಲಿ ಸಂಪರ್ಕ ಹೊಂದಿದ್ದವು. ಪ್ರಸ್ತುತ 76%ಗೆ ಏರಿಕೆಯಾಗಿದ್ದು, ಒಟ್ಟು 11 ಕೋಟಿಗೂ ಹೆಚ್ಚು ಗ್ರಾಮೀಣ ಕುಟುಂಬಗಳು ಯೋಜನೆಯ ಫಲಾನುಭವ ಪಡೆದಿವೆ ಎಂದು ಜಲ ಶಕ್ತಿ ಸಚಿವಾಲಯ ಹೇಳಿಕೊಂಡಿದೆ.

NFHS-5 ಕೂಡ ಮೋದಿ ಸರ್ಕಾರದ ಅಡಿಯಲ್ಲಿ ನೀರಿನ ಸಂಪರ್ಕದಲ್ಲಿ ಗಣನೀಯ ಸುಧಾರಣೆ ಆಗಿದೆ ಎಂಬುದನ್ನು ಪ್ರತಿಬಿಂಬಿಸುತ್ತದೆ. 2020ರ ವೇಳೆಗೆ 95% ಗ್ರಾಮೀಣ ಜನಸಂಖ್ಯೆಯು ಶುದ್ಧ ಕುಡಿಯುವ ನೀರಿನ ನಲ್ಲಿಗಳನ್ನು ಹೊಂದಿವೆ ಎಂದು ಹೇಳಿದೆ. ಆದರೆ, ಮೋದಿ ಸರ್ಕಾರ ಹೇಳಿಕೊಂಡಂತೆ ಯೋಜನೆ ಆರಂಭಕ್ಕೂ ಮುನ್ನ 17% ಕುಟುಂಬಗಳು ಮಾತ್ರವೇ ನಲ್ಲಿ ಸಂಪರ್ಕ ಹೊಂದಿರಲಿಲ್ಲ. 2015ರ ವೇಳೆಗೆ 89% ಕುಟುಂಬಗಳು ನೀರಿನ ಸಂಪರ್ಕ ಹೊಂದಿದ್ದವು ಎಂಬುದನ್ನು NFHS-4ರ ವರದಿ ಹೇಳಿದೆ.

ನೀರು 6

ನೀರು2

2014 ರಲ್ಲಿ ಪ್ರಾರಂಭವಾದ ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ, 2019ರ ವೇಳೆಗೆ ಭಾರತದ ಎಲ್ಲ ಗ್ರಾಮಗಳು ಬಯಲು ಶೌಚ ಮುಕ್ತವಾಗಿವೆ ಎಂದು ಕೇಂದ್ರ ಸರ್ಕಾರ ಹೇಳಿಕೊಂಡಿದೆ. ಗ್ರಾಮೀಣ ನೈರ್ಮಲ್ಯ ವ್ಯಾಪ್ತಿಯು 2014ರಲ್ಲಿ 39% ಇತ್ತು 2019ರ ವೇಳೆಗೆ 100%ಗೆ ಏರಿದೆ ಎಂದೂ ಸರ್ಕಾರ ಹೇಳಿದೆ. ಆದರೆ, NFHS ಡೇಟಾ ಇದಕ್ಕೆ ವಿರುದ್ಧವಾಗಿದೆ. ಯುಪಿಎಗಿಂತ ಎನ್‌ಡಿಎ ಅಡಿಯಲ್ಲಿ ನೈರ್ಮಲ್ಯ ವ್ಯವಸ್ಥೆ ಸುಧಾರಿಸಿದ್ದರೂ, 100% ಸಾಧನೆಯಾಗಿಲ್ಲ. 70.2% ಮಾತ್ರವೇ ಇದೆ ಎಂದು ಹೇಳಿದೆ.

ನೈರ್ಮಲ್ಯ

ನೈರ್ಮಲ್ಯ2

ಮಕ್ಕಳ ಲಿಂಗಾನುಪಾತ, ಆರೋಗ್ಯ, ಪೋಷಣೆ ಹಾಗೂ ಶಿಕ್ಷಣದಲ್ಲಿ ಹೆಣ್ಣು ಮಕ್ಕಳ ವಿರುದ್ಧ ತಾರತಮ್ಯವನ್ನು ಸುಧಾರಿಸಲು ಮೋದಿ ಸರ್ಕಾರವು 2015ರಲ್ಲಿ ‘ಬೇಟಿ ಬಚಾವೋ ಬೇಟಿ ಪಢಾವೋ’ ಯೋಜನೆಯನ್ನು ಪ್ರಾರಂಭಿಸಿತು. ಆದಾಗ್ಯೂ, ಎನ್‌ಡಿಎ ಸರ್ಕಾರದ ಅಡಿಯಲ್ಲಿ ಮಹಿಳಾ ಶಾಲಾ ಶಿಕ್ಷಣವು ಮೊದಲಿಗಿಂತ ನಿಧಾನಗತಿಯಲ್ಲಿ ಪ್ರಗತಿ ಸಾಧಿಸಿದೆ. ಆದರೆ, ಈ ಪ್ರಗತಿಯು ಯುಪಿಎ ಸರ್ಕಾರದ ಅಡಿಯಲ್ಲಿ ವೇಗವಾಗಿತ್ತು. ಹೆಣ್ಣು ಮಕ್ಕಳ ಶಾಲಾ ದಾಖಲಾತಿಗಳು ಮತ್ತು ಶಾಲೆಯಲ್ಲಿ ವಿದ್ಯಾರ್ಥಿನಿಯರು ಮುಂಂದುವರೆಯುವುದು ತುಲನಾತ್ಮಕವಾಗಿ ವೇಗಗೊಂಡಿತ್ತು. ಅಂದಹಾಗೆ, 2021ರಲ್ಲಿ, ಮಹಿಳಾ ಸಬಲೀಕರಣದ ಸಂಸದೀಯ ಸಮಿತಿ ನೀಡಿದ ವರದಿ ಪ್ರಕಾರ, ಎನ್‌ಡಿಎ ಸರ್ಕಾರವು ಯೋಜನೆಯ ನಿಧಿಯ ಸುಮಾರು 80%ರಷ್ಟು ಹಣವನ್ನು ಕೇವಲ ಮಾಧ್ಯಮ ಪ್ರಚಾರಕ್ಕಾಗಿಯೇ ಖರ್ಚು ಮಾಡಿದೆ.

ಹೆಣ್ಣು ಮಕ್ಕಳ ಶಿಕ್ಷಣ

ಹೆಣ್ಣು ಮಕ್ಕಳ ಶಿಕ್ಷಣ2

ಇನ್ನು, ಮಹಿಳೆಯರ ಆರ್ಥಿಕ ಪಾಲುದಾರಿಕೆಯನ್ನು ಸುಧಾರಿಸಲು 2014ರಲ್ಲಿ ಮೋದಿ ಸರ್ಕಾರ ಪ್ರಾರಂಭಿಸಿದ ಜನ್‌ ಧನ್‌ ಯೋಜನೆಯ ಹೊರತಾಗಿಯೂ, 2024ರ ಮಾರ್ಚ್ ವೇಳೆಗೆ 28.9 ಕೋಟಿ ಮಹಿಳೆಯರು ಮಾತ್ರ ಬ್ಯಾಂಕಿಂಗ್‌ ಪ್ರಯೋಜನ ಪಡೆದಿದ್ದಾರೆ ಎಂದು ಸರ್ಕಾರ ಹೇಳಿಕೊಂಡಿದೆ. ಮನಮೋಹನ್ ಸಿಂಗ್ ಸರ್ಕಾರದ ಅಡಿಯಲ್ಲಿ ಮಹಿಳೆಯರು ಬ್ಯಾಂಕಿಂಗ್‌ ಆರ್ಥಿಕತೆಯಲ್ಲಿ ತೊಡಗುವಿಕೆ ಎನ್‌ಡಿಎ ಸರ್ಕಾರಕ್ಕಿಂತ ವೇಗವಾಗಿತ್ತು ಎಂಬುದನ್ನು ವರದಿ ಗುರುತಿಸಿದೆ.

ಮಹಿಳೆಯರ ಖಾತೆ

ಮಹಿಳೆಯರ ಖಾತೆ2

ಜನ್‌ ಧನ್‌ ಯೋಜನೆಯು ಕಳಪೆ ಅನುಷ್ಠಾನ ಮತ್ತು ಹಲವಾರು ಅಕ್ರಮಗಳಿಂದ ಟೀಕೆಗೆ ಗುರಿಯಾಗಿದೆ. 2023ರಲ್ಲಿ ಬಿಡುಗಡೆಯಾದ ಸಿಎಜಿ ವರದಿಯು, ಯೋಜನೆಯ ಸುಮಾರು 7.5 ಲಕ್ಷ ಫಲಾನುಭವಿಗಳು ಒಂದೇ ಸಂಖ್ಯೆಗೆ ಲಿಂಕ್ ಆಗಿದ್ದಾರೆ.

ಮೂಲ: ದಿ ನ್ಯೂಸ್‌ ಮಿನಿಟ್
ಇಮೇಜ್ ಕ್ರೆಡಿಟ್: ದಿ ನ್ಯೂಸ್‌ ಮಿನಿಟ್‌

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಬಿಐ ಅಧಿಕಾರಿಗಳಂತೆ ನಟಿಸಿ 2.3 ಕೋಟಿ ರೂ. ದೋಚಿದ್ದ ಗ್ಯಾಂಗ್: ಇಬ್ಬರ ಬಂಧನ

ಕೇಂದ್ರ ತನಿಖಾ ದಳ (ಸಿಬಿಐ) ಅಧಿಕಾರಿಗಳಂತೆ ನಟಿಸಿ ಉದ್ಯಮಿಯೊಬ್ಬರ ಕಚೇರಿಯಿಂದ ಗ್ಯಾಂಗ್...

ಬೀದಿ ನಾಯಿಗಳಿಗೆ ಲಸಿಕೆ ಹಾಕಿದ ನಂತರ ಅದೇ ಸ್ಥಳಕ್ಕೆ ತಂದು ಬಿಡಬೇಕು: ಸುಪ್ರೀಂ ಕೋರ್ಟ್‌

ಬೀದಿ ನಾಯಿಗಳಿಗೆ ಸಂಬಂಧಿಸಿದ್ದಂತೆ ಆಗಸ್ಟ್ 11ರ ಆದೇಶವನ್ನು ಮಾರ್ಪಡಿಸಿದ ಸುಪ್ರೀಂ...

ವಿವಾದಾತ್ಮಕ ಯೂಟ್ಯೂಬರ್ ಎಲ್ವಿಶ್ ಮನೆ ಮೇಲೆ ಗುಂಡಿನ ದಾಳಿ: ಎನ್‌ಕೌಂಟರ್ ಮಾಡಿ ಆರೋಪಿ ಬಂಧನ

ಬಲಪಂಥೀಯ, ವಿವಾದಾತ್ಮಕ ಯೂಟ್ಯೂಬರ್ ಮತ್ತು ಬಿಗ್ ಬಾಸ್ ವಿಜೇತ ಎಲ್ವಿಶ್ ಯಾದವ್‌...

ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಚಿತ್ರದುರ್ಗ ಶಾಸಕ ವೀರೇಂದ್ರ ಮನೆ ಮೇಲೆ ಇಡಿ ದಾಳಿ

ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ...

Download Eedina App Android / iOS

X