ಕ್ಷೇತ್ರದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಅವರಿಗೆ ಮತ ನೀಡಿ ಗೆಲ್ಲಿಸಿದ ಪರಿಣಾಮ ಇಲ್ಲಿ 500ಕ್ಕೂ ಹೆಚ್ಚು ಎಕರೆ ಭೂಮಿ ಖರೀದಿಸಿದ್ದಾರೆ. ಈ ಭಾರಿಯ ಚುನಾವಣೆಯಲ್ಲಿ ಪುನಃ ಗೆಲ್ಲಿಸಿದರೆ, 1000ಕ್ಕೂ ಹೆಚ್ಚು ಎಕ್ಕರೆ ಜಾಗ ಖರಿದೀಸಲು ಅವಕಾಶ ನೀಡಿದಂತಾಗುತ್ತದೆ ಎಂದು ಮಾಜಿ ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ಹೇಳಿದರು.
ಶಿವಮೊಗ್ಗ ಜಿಲ್ಲೆಯ ಬೈಂದೂರು ಮತ್ತು ವಂಡ್ಸೆ ಬ್ಲಾಕ್ ಕಾಂಗ್ರೆಸ್ ಪರಿಶಿಷ್ಟ ಪಂಗಡ (ಎಸ್ ಟಿ) ಘಟಕ ವತಿಯಿಂದ ಇಲ್ಲಿನ ಗೋಳಿಹೊಳೆಯ ಮಹಿಷಿಮರ್ಧಿನಿ ಸಭಾಭವನದಲ್ಲಿ ಶನಿವಾರ (ಏ.20) ಆಯೋಜಿಸಿದ್ದ ಮರಾಠಿ ಸಮುದಾಯದ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಇಲ್ಲಿ 20 ಸಾವಿರಕ್ಕೂ ಹೆಚ್ಚು ಮರಾಠಿ ಸಮುದಾಯದವರು ವಾಸವಾಗಿದ್ದಾರೆ. ಮರಾಠಿ ಸಮುದಾಯದವರು ಧರ್ಮ ನಿಷ್ಠರು ಹಾಗೂ ಮಾನವೀಯ ಮೌಲ್ಯಗಳನ್ನು ರೂಢಿಸಿಕೊಂಡಿದ್ದಾರೆ. ಈ ಹಿಂದೆ ಇಲ್ಲಿ ಸಮಾಜಕ್ಕೆ 2 ಕೋಟಿ ರೂ. ಅನುದಾನ ಸರ್ಕಾರದಿಂದ ಬಿಡುಗಡೆಗೊಳಿಸಲಾಗಿತ್ತು. ಇದರಿಂದ, ಮರಾಠಿ ಸಮುದಾಯದ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ ಎಂದರು.
ಗೀತಾ ಶಿವರಾಜಕುಮಾರ ಅವರು ಪ್ರಮಾಣಿಕ ಹಾಗೂ ಸಾತ್ವಿಕ ಮಹಿಳೆ. ಅವರಿಗೆ ಮತ ನೀಡಿದರೆ, ಈ ಭಾಗದಲ್ಲಿ ಪ್ರಾಮಾಣಿಕವಾಗಿ ಉತ್ತಮ ಕೆಲಸ ಕಾರ್ಯಗಳು ನಡೆಯುತ್ತದೆ. ಇದಕ್ಕೆ ಜನರು ಅವಕಾಶ ಕಲ್ಪಿಸಿಕೊಡಬೇಕು ಎಂದು ಕೋರಿದರು.
ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ ಮಾತನಾಡಿ, ಬಿಜೆಪಿಯಿಂದ ಕಳೆದ 2023ರ ವಿಧಾನಸಭಾ ಚುನಾವಣೆಯಲ್ಲಿ ಪರಿಶಿಷ್ಟ ಸಮುದಾಯದಿಂದ ಒಂದೇ ಒಂದು ಸ್ಥಾನ ಗೆಲ್ಲಲು ಸಾಧ್ಯವಾಗಲಿಲ್ಲ. ಅದಕ್ಕೆ ಕಾರಣ ಬಿಜೆಪಿಯ ಸುಳ್ಳು ಭರವಸೆಯ ಆಡಳಿತ. ಆದ್ದರಿಂದ, ಈ ಭಾರಿ ನನಗೆ ಅವಕಾಶ ಕಲ್ಪಿಸಿಕೊಡಿ, ನನ್ನ ತಂದೆಯ ಹಾದಿಯಲ್ಲಿ ಸಾಗಿ, ಜನ ಸಮಾನ್ಯರಿಗೆ ಪೂರಕವಾದ ಆಡಳಿತ ನಡೆಸುತ್ತೇನೆ ಎಂದರು.
ಬೈಂದೂರು ಕ್ಷೇತ್ರಕ್ಕೆ ಮಾಜಿ ಮುಖ್ಯಮಂತ್ರಿ ದಿವಂಗತ ಬಂಗಾರಪ್ಪ ಅವರು ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದರು. ಪ್ರಸ್ತುತ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳ ಮೂಲಕ ಬಡವರು ಹಾಗೂ ಅಶಕ್ತರ ಕೈ ಹಿಡಿದು ನಡೆಸುತ್ತಿದೆ. ಅದೇ ರೀತಿ, ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ ಮರಾಠಿ ಸಮುದಾಯಕ್ಕೆ ಸಿಗಬೇಕಾದ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಲು ಒತ್ತು ನೀಡಲಾಗುವುದು ಎಂದರು.
ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಮಾತನಾಡಿ, ಕಾಂಗ್ರೆಸ್ ಪಕ್ಷಕ್ಕೆ ಎಸ್ ಟಿ ಸಮುದಾಯದವರು ಅಪಾರ ಕೊಡುಗೆ ನೀಡಿದ್ದಾರೆ. ಈ ಲೋಕಸಭಾ ಚುನಾವಣೆ ಸಹೋದರಿ ಗೀತಾ ಅವರನ್ನು ಗೆಲ್ಲಿಸಬೇಕಿದೆ. ಕಾರಣ, ಬಹುಕಾಲ ಆಡಳಿತದ ಚುಕ್ಕಾಣಿ ಹಿಡಿದ ಸಂಸದ ಬಿ.ವೈ.ರಾಘವೇಂದ್ರ ಅವರು ಈ ಭಾಗದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ನಡೆಸಿಲ್ಲ. ಆದ್ದರಿಂದ, ಇಲ್ಲಿ ಗೀತಾ ಶಿವರಾಜಕುಮಾರ ಪರ ಮತಯಾಚಿಸಲು ನೈತಿಕ ಹಕ್ಕಿದೆ ಎಂದರು.
ಮಾಜಿ ಮುಖ್ಯಮಂತ್ರಿ ದಿ. ಬಂಗಾರಪ್ಪ ಅವರ ಸಾಮಾಜಿಕ ಕಾರ್ಯಗಳು ಇಂದಿಗೂ ಜೀವಂತವಾಗಿವೆ. ಆ ಕಾರ್ಯಗಳಿಗೆ ಜೀವ ತುಂಬಲು ಗೀತಾ ಶಿವರಾಜಕುಮಾರ ಅವರಿಗೆ ಮತ ನೀಡಿ ಹರಸಬೇಕಿದೆ ಎಂದರು.
ಬೈಂದೂರು ಬ್ಲಾಕ್ ಕಾಂಗ್ರೆಸ್ ಎಸ್‌ಟಿ ಘಟಕ ಅಧ್ಯಕ್ಷ ಮಹಾಲಿಂಗ ನಾಯ್ಕ್ ಮಾತನಾಡಿ, ಈ ಭಾಗದಲ್ಲಿ ಅನೇಕ ವರ್ಷದಿಂದ ತಾಲ್ಲೂಕು ಪಂಚಾಯಿತಿಯ ಅಧಿಕಾರ ಹಿಡಿಯಲು ಕೂಡ ಮರಾಠಿ ಸಮುದಾಯಕ್ಕೆ ಆಗಿಲ್ಲ. ಹಿಂದಿನಿಂದಲೂ ಸಮುದಾಯದ ಕುರಿತ ತಾರತಮ್ಯ ನಡೆಯುತ್ತಲೇ ಇದೆ. ಇದಕ್ಕೆ ಉತ್ತರವಾಗಿ, ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ ಅವರಿಗೆ ಮತ ನೀಡಿ ಆರಿಸಬೇಕಿದೆ. ಸಮುದಾಯದ ಸಮಸ್ಯೆಗಳ ಆಹ್ವಾಲುಗಳನ್ನು ಸರ್ಕಾರದ ಮುಂದೆ ಇಡಲು ಗೀತಾ ಶಿವರಾಜಕುಮಾರ್ ಅವರು ವೇದಿಕೆ ಆಗಲಿದ್ದಾರೆ ಎಂದರು.
ಲೋಕಸಭಾ ಚುನಾವಣೆ ಜಿಲ್ಲಾ ಉಸ್ತುವಾರಿ ಅನಿಲ್ ಕುಮಾರ್ ತಡಕಲ್, ನಟ ಶಿವರಾಜಕುಮಾರ, ಉಡುಪಿ ಎಸ್‌ಟಿ ಘಟಕದ ಅಧ್ಯಕ್ಷ ಜೈರಾಮ ನಾಯ್ಕ್, ಶೇಷು ನಾಯ್ಕ್, ರಾಜು ಪೂಜಾರಿ, ಅನಿತಾ ಪುಟ್ಟನಾಯ್ಕ್, ಗೌರಿ ದೇವಾಡಿಗ, ಬೋಜ ನಾಯ್ಕ್, ಸಂತೋಷ ನಾಯ್ಕ್ ದುಡ್ಡಿನಗೋಳಿ, ಚಂದ್ರ ನಾಯ್ಕ್ ಮುತ್ತಣಗಿ, ನಾರಾಯಣ ನಾಯ್ಕ ಬಾಚುಕೂಳಿ ಸೇರಿ ಗಣ್ಯರು ಇದ್ದರು.
