ಬಿಸಿಲಿನ ಶಾಖಕ್ಕೆ ಬೇಸತ್ತಿದ ಬೆಂಗಳೂರಿನ ಜನತೆಗೆ ಶನಿವಾರ ಮಳೆಯ ದರ್ಶನವಾಗಿದೆ. ಬೆಂಗಳೂರಿನಲ್ಲಿ ತುಂತುರು ಮಳೆ ಆರಂಭವಾಗಿದೆ.
ಬೆಂಗಳೂರಿನ ಟೌನ್ ಹಾಲ್, ಮಾರ್ಕೆಟ್, ಕೆ.ಆರ್.ಸರ್ಕಲ್, ವಿಧಾನಸೌಧ, ಜೆ.ಪಿ.ನಗರ, ಕಾರ್ಪೊರೇಷನ್ ಸರ್ಕಲ್, ಮೈಸೂರ್ ಬ್ಯಾಂಕ್ ಸರ್ಕಲ್, ಸೇರಿದಂತೆ ಹಲವೆಡೆ ತುಂತುರು ಮಳೆ ಶುರುವಾಗಿದೆ.
ಬೆಂಗಳೂರಿನಲ್ಲಿ ಕೆಲವೆಡೆ ಶನಿವಾರ ಬೆಳಿಗ್ಗೆಯಿಂದಲೂ ಮೋಡ ಕವಿದ ವಾತಾವರಣವಿತ್ತು. ಈ ಹಿನ್ನಲೆ ನಗರದ ಕೆಲವೆಡೆ ಲಘು ಮಳೆಯಾಗಿದೆ.
ಬೆಂಗಳೂರಿನಲ್ಲಿ ಮುಂದಿನ ಎರಡು ದಿನ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಶುಕ್ರವಾರ ಕೂಡ ನಗರದ ಕೆಂಗೇರಿ, ಆರ್ ಆರ್ ನಗರ, ಯಲಹಂಕ ಸೇರಿದಂತೆ ಹಲವೆಡೆ ತುಂತುರು ಮಳೆಯಾಗಿದೆ.
ಏ.21 ರಿಂದ ಏ.24ರವರೆಗೆ ರಾಜ್ಯದ ಹಲವೆಡೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಈ ಸುದ್ದಿ ಓದಿದ್ದೀರಾ? ನೀತಿ ಸಂಹಿತೆ ಉಲ್ಲಂಘನೆ; ಇಬ್ಬರು ಪ್ರಭಾವಿ ನಾಯಕರ ವಿರುದ್ಧ ಎಫ್‌ಐಆರ್ ದಾಖಲು
ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೀದರ್, ಕಲಬುರ್ಗಿ, ಬೆಳಗಾವಿ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ, ಚಿತ್ರದುರ್ಗ, ದಾವಣಗೆರೆ, ಯಾದಗಿರಿ, ಧಾರವಾಡ, ಗದಗ, ಹಾವೇರಿ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಜಿಲ್ಲೆಗಳು ಹಲವು ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಕೆಲವೆಡೆ ಲಘು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. ಏ.25ರ ನಂತರ ರಾಜ್ಯದಾದ್ಯಂತ ಒಣಹವೆ ಇರುವ ಸಾಧ್ಯತೆ ಇದೆ.
ಏ.20 ರಂದು ದಕ್ಷಿಣ ಒಳನಾಡಿನ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಕಲಬುರ್ಗಿ, ಬೀದರ್, ಬೆಳಗಾವಿ, ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳು ಒಂದೆರಡು ಕಡೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹೇಳಿದೆ.
ಏ.21 ರಿಂದ ರಾಜ್ಯದಾದ್ಯಂತ ಗರಿಷ್ಠ ತಾಪಮಾನವು 2-3 °C ರಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಏ.20 ಮತ್ತು ಏ.21 ರಂದು 30-40 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ.