ಹುಬ್ಬಳ್ಳಿಯ ಎಂಸಿಎ ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಖಂಡಿಸಿ ಹಿಂದೂ ಪರ ಸಂಘಟನೆಗಳಿಂದ ಶನಿವಾರ ಬೀದರ್ ನಗರದಲ್ಲಿ ನಡೆದ ಪ್ರತಿಭಟನೆಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ನಗರಸಭೆ ಸದಸ್ಯ ಶಶಿಧರ ಹೊಸಳ್ಳಿ ಹಾಗೂ ಕನ್ನಡ ಪರ ಹೋರಾಟಗಾರ ವೀರೂಪಾಕ್ಷ ಗಾದಗಿ ವಿರುದ್ಧ ಪ್ರಕರಣ ದಾಖಲಾಗಿದೆ.
ನಗರದ ಬಸವೇಶ್ವರ ವೃತ್ತದ ಬಳಿ ಕಾಲೇಜು ವಿದ್ಯಾರ್ಥಿಗಳು, ಹಿಂದೂ ಪರ ಮುಖಂಡರು ಸೇರಿ ನಡೆಸಿದ ಪ್ರತಿಭಟನೆಯ ಬಹಿರಂಗ ಸಭೆಯಲ್ಲಿ ಮುಖಂಡ ವೀರೂಪಾಕ್ಷ ಗಾದಗಿ ಮಾತನಾಡಿ, “ನೇಹಾ ಹಿರೇಮಠ ಹತ್ಯೆ ಬಗ್ಗೆ ಗೃಹ ಸಚಿವ ಪರಮೇಶ್ವರ ನೀಡಿರುವ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದರು. ಅಲ್ಲದೇ ಗೃಹ ಸಚಿವ ಪರಮೇಶ್ವರ ವಿರುದ್ಧ ಅವಾಚ್ಯ ಶಬ್ದಗಳಿಂದ ಅವರ ಕುಟುಂಬವನ್ನು ನಿಂದಿಸಿರುವ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ” ಎಂದು ದೂರಿನಲ್ಲಿ ತಿಳಿಸಿದ್ದಾರೆ.
ನಗರಸಭೆ ಸದಸ್ಯ ಶಶಿಧರ ಹೊಸಳ್ಳಿ ಮಾತನಾಡಿ, ಪೌರಾಡಳಿತ ಸಚಿವ ರಹೀಂ ಖಾನ್ ಒಬ್ಬ ನಾಲಾಯಕ್, ಬುದ್ಧಿಗೇಡಿ, ಮೂರ್ಖನಾಗಿದ್ದಾನೆ ಎಂದಿದ್ದಾರೆ. ನಗರದ ಶಾಹೀನ್ ಶಿಕ್ಷಣ ಸಂಸ್ಥೆಯಲ್ಲಿ ಓದುವ ಹೆಣ್ಣು ಮಕ್ಕಳು ಡಾಕ್ಟರ್ ಆಗಬಹುದು ಆದರೆ ಹಿಂದೂ ಹೆಣ್ಣು ಆಗಿ ಉಳಿಯುವುದಿಲ್ಲ ಎಂದಿದ್ದಾರೆ.
ಈ ರೀತಿ ಸಮಾಜದಲ್ಲಿ ಸಮುದಾಯಗಳ ನಡುವೆ ಪ್ರಚೋದನಕಾರಿ ಭಾಷಣ ಮಾಡುವ ಮೂಲಕ ಸಮುದಾಯಗಳ ನಡುವೆ ಕೋಮು ಸೌಹಾರ್ದ ಉಂಟು ಮಾಡುತ್ತಿದ್ದಾರೆ ಎಂದು ಹಳ್ಳದಕೇರಿ (ಕೆ) ಗ್ರಾಮದ ಮುಖಂಡ ಧನರಾಜ ಹಂಗರಗಿ ಅವರು ಬೀದರ್ ನಗರ ಠಾಣೆಯಲ್ಲಿ ದೂರು ನೀಡಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಈದಿನ ಸಂದರ್ಶನ | ಬದ್ಧತೆ ಮೈಗೂಡಿಸಿಕೊಂಡು ಓದಿದರೆ ಕೋಚಿಂಗ್ ಅಗತ್ಯವಿಲ್ಲ
ದೂರಿನ್ವಯ ಕಲಂ 153B, 504, 505(2) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ನಗರಸಭೆ ಸದಸ್ಯ ಶಶಿಧರ ಹೊಸಳ್ಳಿ ಹಾಗೂ ಕನ್ನಡ ಪರ ಹೋರಾಟಗಾರ ವೀರೂಪಾಕ್ಷ ಗಾದಗಿ ಅವರನ್ನು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.