ಪ್ರಧಾನಿ ನರೇಂದ್ರ ಮೋದಿಯವರು ದೇಶದಲ್ಲಿ ಮೂರನೇ ಬಾರಿಗೆ ಅಧಿಕಾರಕ್ಕೇರಲು ಬಯಸುತ್ತಿದ್ದಾರೆ. ಅದಕ್ಕಾಗಿ, 2024ರ ಲೋಕಸಭಾ ಚುನಾವಣೆಯಲ್ಲಿ ನಾನಾ ರೀತಿಯಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಪ್ರಚಾರದಲ್ಲಿ, ಪ್ರತಿಪಕ್ಷಗಳನ್ನು ‘ಹಿಂದು ವಿರೋಧಿ’ ಮತ್ತು ‘ಮುಸ್ಲಿಂ ಪರ’ ಎಂದು ಬಿಂಬಿಸುವುದು ಮೋದಿಯವರ ಪ್ರಮುಖ ತಂತ್ರವಾಗಿ ಕಾಣಿಸುತ್ತಿದೆ.
ಚುನಾವಣಾ ಪ್ರಚಾರಗಳ ಆರಂಭದಲ್ಲಿ ಬಿಜೆಪಿಯು 10 ವರ್ಷಗಳಲ್ಲಿ ಅಧಿಕಾರಾವಧಿಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳು, ಕಲ್ಯಾಣ ಯೋಜನೆಗಳ ಅನುಷ್ಠಾನದ ಮೇಲೆ ಜನರಿಂದ ಮತ ಕೇಳುತ್ತದೆ ಎಂದು ಕೇಸರಿ ಪಡೆ ಹೇಳಿಕೊಂಡಿತ್ತು. ಆದರೆ, ಏಪ್ರಿಲ್ 19ರಂದು ಉತ್ತರ ಪ್ರದೇಶದ ಅಮ್ರೋಹಾದಲ್ಲಿ ಮೋದಿ ಮಾಡಿದ ಭಾಷಣವು, ಬಿಜೆಪಿ ತನ್ನ ಕೆಲಸಗಳ ಮೇಲೆ ಮತ ಕೇಳುವುದಿಲ್ಲ. ಧಾರ್ಮಿಕ ಭಾವನೆಗಳನ್ನು ಕೆರಳಿಸಿ ಮತ ಹೇಳುತ್ತದೆ ಎಂಬುದನ್ನು ಬಹಿರಂಗಗೊಳಿಸಿತು.
‘ಭಾರತ್ ಮಾತಾ ಕಿ ಜೈ’ ಘೋಷಣೆಗೆ ವಿರೋಧ ವ್ಯಕ್ತಪಡಿಸಿದ್ದ ಅಮ್ರೋಹಾದ ಕಾಂಗ್ರೆಸ್ ಅಭ್ಯರ್ಥಿ ಕುನ್ವರ್ ಡ್ಯಾನಿಶ್ ಅಲಿ ಅವರು ಮುಸ್ಲಿಂ ಆಗಿರುವ ಕಾರಣ, ಅವರ ವಿರುದ್ಧ ಮೋದಿ ನೇರ ವಾಗ್ದಾಳಿ ನಡೆಸಿದರು. “ಇಲ್ಲಿನ ಕಾಂಗ್ರೆಸ್ ಅಭ್ಯರ್ಥಿ [ಡ್ಯಾನಿಶ್ ಅಲಿ] ‘ಭಾರತ್ ಮಾತಾ ಕಿ ಜೈ’ ಎಂದು ಹೇಳಲು ಸಹ ಆಕ್ಷೇಪ ವ್ಯಕ್ತಪಡಿಸಿದ್ದರು. ಭಾರತ್ ಮಾತಾ ಕಿ ಜೈ ಎಂದು ಒಪ್ಪಿಕೊಳ್ಳದ ವ್ಯಕ್ತಿ ಸಂಸತ್ತಿನಲ್ಲಿ ಕೂರುವುದು ಸರಿಯೇ? ಅಂತಹ ವ್ಯಕ್ತಿ ಭಾರತದ ಸಂಸತ್ತಿಗೆ ಪ್ರವೇಶ ಪಡೆಯಬೇಕೇ” ಎಂದು ಮೋದಿ ಪ್ರಶ್ನಿಸಿದರು.
ಅಲ್ಲದೆ, “ಸಮಾಜವಾದಿ ಪಕ್ಷ (ಎಸ್‌ಪಿ), ಕಾಂಗ್ರೆಸ್ ಮತ್ತು ‘ಇಂಡಿಯಾ’ ಮೈತ್ರಿಕೂಟವು ನಮ್ಮ ನಂಬಿಕೆ (ಧಾರ್ಮಿಕ) ಮೇಲೆ ದಾಳಿ ಮಾಡಲು ಯಾವುದೇ ಒಂದು ಕಲ್ಲುಗಳನ್ನು ಕೂಡ ಬಿಡುವುದಿಲ್ಲ” ಎಂದು ಆರೋಪಿಸಿದರು.
ಅದೇ ಸಮಯದಲ್ಲಿ, ತನಗೂ ಉತ್ತರ ಪ್ರದೇಶಕ್ಕೂ ಭಾರೀ ಸಂಬಂಧವಿದೆ ಎಂಬುದರ ಮೇಲೆ ಗಮನ ಸೆಳೆಯಲು ಮೋದಿ ಅವರು ಅಯೋಧ್ಯೆ, ದ್ವಾರಕಾ ಮತ್ತು ಕಾಶಿ (ಹಿಂದುಗಳು ಪುಣ್ಯ ಕ್ಷೇತ್ರಗಳೆಂದು ಭಾವಿಸಿರುವ ನಗರಗಳು) ವಿಚಾರಗಳನ್ನು ಪ್ರಸ್ತಾಪಿಸಿದರು.
ಇದೆಷ್ಟೇ ಅಲ್ಲ, ಜನವರಿ 22ರ ನಂತರ ನಡೆದ ಹಲವಾರು ಸಮಾವೇಶಗಳಲ್ಲಿ ಅಯೋಧ್ಯಯಲ್ಲಿ ರಾಮಮಂದಿರ ಉದ್ಘಾಟನಾ ಸಮಾರಂಭದಲ್ಲಿ ವಿಪಕ್ಷಗಳು ಭಾಗಿಯಾಗದೇ ಇದ್ದುದ್ದನ್ನು ಗುರಿಯಾಗಿ ನಾನಾ ಆರೋಪಗಳನ್ನು ಮಾಡಿದ್ದಾರೆ. ಅಂದಹಾಗೆ, ಹಿಂದುತ್ವ ಮೂಲಭೂತವಾದಿಗಳು 1992ರಲ್ಲಿ ಬಾಬ್ರಿ ಮಸೀದಿಯನ್ನು ಧ್ವಂಸಗೊಳಿಸಿದ್ದರು. 30 ವರ್ಷಗಳ ಸುರ್ಧೀಘ ವಿಚಾರಣೆ ಬಳಿಕ, ಬಹುಸಂಖ್ಯಾತರ ಭಾವನೆಯ ಆಧಾರದ ಮೇಲೆ ಆ ಜಾಗದಲ್ಲಿ ರಾಮಮಂದಿರ ಕಟ್ಟಲು ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು.
ಅಯೋಧ್ಯೆಯ ಸಮಾರಂಭದಲ್ಲಿ ಪಾಲ್ಗೊಳ್ಳಲು ಎಸ್‌ಪಿ ಮತ್ತು ಕಾಂಗ್ರೆಸ್ ನಿರಾಕರಿಸಿದ್ದನ್ನು, ‘ಮುಸ್ಲಿಮರ ಓಲೈಕೆ’ ಎಂದು ಮೋದಿ ಆರೋಪಿಸಿದ್ದಾರೆ.
“ಕೆಲವು ಜನರು ತಮ್ಮ ಮತ ಬ್ಯಾಂಕ್‌ಗಾಗಿ ಅಯೋಧ್ಯ ಸಮಾರಂಭದ ಆಹ್ವಾನವನ್ನು ತಿರಸ್ಕರಿಸಿದ್ದಾರೆ ಎಂದು ನೀವು ಊಹಿಸಬಲ್ಲಿರಾ? ಮತ್ತೊಂದೆಡೆ, ಬಾಬರಿ ಮಸೀದಿ ಪ್ರಕರಣದಲ್ಲಿ ತಮ್ಮ ಜೀವನದುದ್ದಕ್ಕೂ ಹೋರಾಡಿದ ಮತ್ತು ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದಲ್ಲಿ ಸ್ವಇಚ್ಛೆಯಿಂದ ಭಾಗವಹಿಸಿದ ಜನರನ್ನೂ ನೋಡಿರಿ” ಎಂದು ಮೋದಿ ಹೇಳಿದ್ದಾರೆ.
“ರಾಮ ನವಮಿಯಂದು, ರಾಮ ಲಲ್ಲಾಗೆ ಸೂರ್ಯ ತಿಲಕ [ಸೂರ್ಯನ ಕಿರಣವನ್ನು ಅಯೋಧ್ಯೆಯಲ್ಲಿರುವ ರಾಮನ ವಿಗ್ರಹದ ಹಣೆಯ ಮೇಲೆ ಬೀಳುವಂತೆ ಮಾಡಲಾಗಿದೆ] ಇರಿಸಲಾಯಿತು. ನೀವು ಅದನ್ನು ನೋಡಿರಬೇಕು. ಇಂದು ಇಡೀ ದೇಶವೇ ‘ರಾಮ-ಮಾಯಿ’ಯಾಗಿದೆ. ಆದರೆ, ಈ ಎಸ್‌ಪಿ ನಾಯಕರು ತಮ್ಮ ಮತ ಬ್ಯಾಂಕ್‌ಗಾಗಿ ರಾಮನಿಷ್ಠರನ್ನು ‘ಪಖಂಡಿ’ (ಕಪಟಿ) ಎಂದು ಹೇಳುತ್ತಾರೆ” ಎಂದು ಮೋದಿ ಇತ್ತೀಚೆಗೆ ಆರೋಪಿಸಿದ್ದಾರೆ.
ಈ ವಿಷಯವನ್ನು ಮತ್ತಷ್ಟು ಒತ್ತಿ ಹೇಳಿದ ಮೋದಿ, “ನೀವೆಲ್ಲರೂ ಪಖಂಡಿಗಳೇ? ರಾಮಭಕ್ತರೆಲ್ಲ ಪಖಂಡಿಯೇ? ಪೂಜೆ ಮಾಡುವವರು ರಾಮ ಪಖಂಡಿಯೇ? ‘ಇಂಡಿಯಾ’ ಒಕ್ಕೂಟದ ನಾಯಕರು ಸನಾತನ ಧರ್ಮದ ವಿಚಾರದಲ್ಲಿ ಅಸಹ್ಯ ಪಡುತ್ತಾರೆ” ಎಂದು ದೂರಿದ್ದಾರೆ.
ಇನ್ನು, ತಾವು ಸಮುದ್ರದ ನೀರಿನಲ್ಲಿ ಮುಳುಗಿ ‘ಪ್ರಾಚೀನ ದ್ವಾರಕಾ’ದಲ್ಲಿ ಶ್ರೀಕೃಷ್ಣನಿಗೆ ಪ್ರಾರ್ಥನೆ ಸಲ್ಲಿಸಿದ್ದ ಘಟನೆಯನ್ನು ಉಲ್ಲೇಖಿಸುತ್ತಿರುವ ಮೋದಿ, “ಶ್ರೀ ಕೃಷ್ಣ ಇಲ್ಲಿಂದ (ಉತ್ತರ ಪ್ರದೇಶ) ಗುಜರಾತಿಗೆ ಹೋದ. ಮಜಾ ನೋಡಿ, ನಾನು ಗುಜರಾತ್‌ನಲ್ಲಿ ಹುಟ್ಟಿದ್ದೇನೆ ಮತ್ತು ಉತ್ತರ ಪ್ರದೇಶದ ಪಾದದ ಬಳಿ ಬಂದು ಕುಳಿತಿದ್ದೇನೆ. ಕಾಶಿ ನನ್ನನ್ನು ಸಂಸದನನ್ನಾಗಿ ಆಯ್ಕೆ ಮಾಡಿದೆ. ನಾನು ದ್ವಾರಕಾಗೆ ಹೋಗಿ ಪುರಾತತ್ತ್ವಜ್ಞರು ಕಂಡುಹಿಡಿದ ಶ್ರೀಕೃಷ್ಣನ ಪ್ರಾಚೀನ ಸ್ಥಳದಲ್ಲಿ ಪ್ರಾರ್ಥಿಸಿದೆ. ಶ್ರೀಕೃಷ್ಣನಿಗೆ ಇಷ್ಟವಾದ ನವಿಲು ಗರಿಗಳನ್ನೂ ಅರ್ಪಿಸಿದ್ದೇನೆ” ಎಂದು ಹೇಳಿಕೊಂಡಿದ್ದಾರೆ.
ಈ ಘಟನೆಯನ್ನು ಅವರು ರಾಹುಲ್ ಗಾಂಧಿಯನ್ನು ಗುರಿಯಾಗಿಸಿಕೊಂಡು ಉಲ್ಲೇಖಿಸಿದರು. “ಕಾಂಗ್ರೆಸ್‌ನ ಶೆಹಜಾದಾ [ರಾಜಕುಮಾರ] ಸಮುದ್ರದ ಆಳದಲ್ಲಿ ಪ್ರರ್ಥಿಸುವುದರಿಂದ ಯಾವುದೇ ಪ್ರಯೋಜನವಿಲ್ಲ ಎನ್ನುತ್ತಾರೆ. ದ್ವಾರಕಾದಲ್ಲಿ ಸಾವಿರಾರು ವರ್ಷಗಳ ನಮ್ಮ ನಂಬಿಕೆಗಳು, ಭಕ್ತಿ, ಭೌತಿಕ ಪುರಾವೆಗಳಿವೆ… ಈ ಜನರು (ಕಾಂಗ್ರೆಸ್) ಅದನ್ನು ಹೇಗೆ ತಿರಸ್ಕರಿಸುತ್ತಿದ್ದಾರೆ. ಇದೆಲ್ಲವೂ ಮತ ಬ್ಯಾಂಕ್‌ಗಾಗಿ” ಎಂದು ಮೋದಿ ವಾಗ್ದಾಳಿ ನಡೆಸಿದ್ದಾರೆ.
“ಯಾರು ತಮ್ಮನ್ನು ತಾವು ಯದುವಂಶೀಯರು (ಉತ್ತರ ಪ್ರದೇಶದ ಎಸ್‌ಪಿ – ಬಿಹಾರದ ಆರ್‌ಜೆಡಿ) ಎಂದು ಕರೆದುಕೊಳ್ಳುತ್ತಿದ್ದಾರೋ, ಅವರನ್ನು ನಾನು ಕೇಳಲು ಬಯಸುತ್ತೇನೆ. ನೀವು ನಿಜವಾದ ಯದುವಂಶಿಯರಾಗಿದ್ದರೆ, ದ್ವಾಕರಾದಲ್ಲಿ ಪೂಜಿಸಿದ್ದನ್ನು ವಿರೋಧಿಸುವ ವ್ಯಕ್ತಿಯೊಂದಿಗೆ ಹೇಗೆ ಒಟ್ಟಿಗೆ ಕುಳಿತುಕೊಳ್ಳುತ್ತೀರಿ? ನೀವು ಹೇಗೆ ಅವರೊಂದಿಗೆ ಮೈತ್ರಿ ಸಾಧಿಸಬಹುದು?” ಎಂದಿದ್ದಾರೆ.
ಈ ವರದಿ ಓದಿದ್ದೀರಾ?: ಮನಮೋಹನ್ v/s ಮೋದಿ | ಯಾರ ಸರ್ಕಾರ ಬೆಸ್ಟ್? ಆರೋಗ್ಯ ಅಂಕಿಅಂಶಗಳು ಹೇಳುವುದೇನು?
ಹೀಗೆ, ರಾಮ, ಕೃಷ್ಣ, ಸನಾತನ ಧರ್ಮದ ಹೆಸರಿನಲ್ಲಿ ವಿಪಕ್ಷಗಳ ವಿರುದ್ಧ ಮೋದಿ ಅಲ್ಲಲ್ಲಿ ಪದೇ ಪದೇ ವಾಗ್ದಾಳಿ ನಡೆಸುತ್ತಿದ್ದಾರೆ. ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳನ್ನು ಹಿಂದು ವಿರೋಧಿಗಳೆಂದು ಬಿಂಬಿಸಲು ನಾನಾ ರೀತಿಯ ವಾಕ್‌ಚಾತುರ್ಯವನ್ನು ಬಳಸುತ್ತಿದ್ದಾರೆ. ಹಲವು ರೀತಿಯಲ್ಲಿ ನಿರೂಪಣೆಗಳನ್ನು ಕಟ್ಟುತ್ತಿದ್ದಾರೆ. ಜೊತೆಗೆ, ಮುಸ್ಲಿಂ ಸಮುದಾಯದ ವಿರುದ್ಧ ಕೋಮು ದ್ವೇಷವನ್ನು ಹೆಚ್ಚಿಸುವ ಮೂಲಕ, ತಮ್ಮ ಬೇಳೆ ಬೇಯಿಸಿಕೊಳ್ಳಲು ಹವಣಿಸುತ್ತಿದ್ದಾರೆ.
ಆದರೆ, ಗಮನಿಸಬೇಕಾದ ವಿಚಾರ, ಮೋದಿ ಅವರು 10 ವರ್ಷ ಪ್ರಧಾನಿಯಾಗಿ ಅಧಿಕಾರ ಅನುಭವಿಸಿದ್ದಾರೆ. ಅವರ ಆಡಳಿತದಲ್ಲಿ ನಿರುದ್ಯೋಗ ಹೆಚ್ಚಾಗಿದೆ. ರೈತರ ಆತ್ಮಹತ್ಯೆಗಳು ನಡೆಯುತ್ತಿವೆ. ಬೆಲೆ ಏರಿಕೆ – ಹಣದುಬ್ಬರ ಜನರನ್ನು ಕಾಡುತ್ತಿವೆ. ಬಡತನ ಹೆಚ್ಚುತ್ತಿದೆ. ಆದರೆ, ಇದಾವುದರ ಬಗ್ಗೆಯೂ ಮೋದಿ ಅವರು ಎಲ್ಲಿಯೂ ಮಾತನಾಡುವುದಿಲ್ಲ.