- ಸಂತ್ರಸ್ತ ಕುಟುಂಬವನ್ನು ಭೇಟಿಯಾಗಿ ಸಮಾಧಾನ ಹೇಳಿದ ಸಚಿನ್ ಪೈಲಟ್
- ಸಂತ್ರಸ್ತ ಕುಟುಂಬದ ಧರಣಿಯಲ್ಲಿ ಭಾಗವಹಿಸಿದ್ದ ಬಿಜೆಪಿಯ ಸಂಸದ ಕಿರೋಡಿ
ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಅವರು ಇತ್ತೀಚೆಗೆ ಸಂಪುಟ ಸಚಿವ ಮಹೇಶ್ ಜೋಷಿ ಅವರನ್ನು ದೂಷಿಸಿ ಆತ್ಮಹತ್ಯೆ ಮಾಡಿಕೊಂಡ ಸಂತ್ರಸ್ತನ ಕುಟುಂಬ ನಡೆಸುತ್ತಿದ್ದ ಧರಣಿ ಸ್ಥಳಕ್ಕೆ ಗುರುವಾರ (ಏಪ್ರಿಲ್ 20) ತೆರಳಿದ್ದರು.
ಮೃತ ವ್ಯಕ್ತಿ ರಾಮ್‌ಪ್ರಸಾದ್ ತಂದೆಯನ್ನು ಸಚಿನ್ ಪೈಲಟ್ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಅಲ್ಲದೆ ಕುಟುಂಬದ ಇತರರನ್ನೂ ಪೈಲಟ್ ಮಾತನಾಡಿಸಿದ್ದಾರೆ. ಸಚಿನ್ ಪೈಲಟ್ ಸುದ್ದಿಗಾರರಿಗೆ ಪ್ರತಿಕ್ರಿಯಿಸಿ, “ಸಂತ್ರಸ್ತನ ಆತ್ಮಹತ್ಯೆಯ ಬಗ್ಗೆ ನಿಷ್ಪಕ್ಷಪಾತ ತನಿಖೆಯಾಗಬೇಕು. ಸತ್ಯಾಂಶ ಬೆಳಕಿಗೆ ಬಂದು ಸಂತ್ರಸ್ತರಿಗೆ ನ್ಯಾಯ ದೊರೆಯಬೇಕು” ಎಂದು ಹೇಳಿದ್ದಾರೆ.
ಸಂತ್ರಸ್ತ ರಾಮ್‌ಪ್ರಸಾದ್ ಆತ್ಮಹತ್ಯೆಗೂ ಮುನ್ನ ಹಂಚಿಕೊಂಡ ವಿಡಿಯೋ ಒಂದನ್ನು ಪೈಲಟ್ ಉಲ್ಲೇಖಿಸಿದ್ದಾರೆ. 38 ವರ್ಷದ ರಾಮ್‌ಪ್ರಸಾದ್ ಮೀನಾ ಅವರು ಭೂ ವಿವಾದಕ್ಕೆ ಸಂಬಂಧಿಸಿದ ಆರೋಪದಲ್ಲಿ ಸೋಮವಾರ (ಏಪ್ರಿಲ್ 17) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.
ಆತ್ಮಹತ್ಯೆಗೂ ಮುನ್ನ ರಾಮ್‌ಪ್ರಸಾದ್ ವಿಡಿಯೋ ಮಾಡಿ, “ಭೂ ವಿವಾದಕ್ಕೆ ಸಂಬಂಧಿಸಿ ತಮ್ಮ ಕುಟುಂಬಕ್ಕೆ ಮಹೇಶ್ ಜೋಷಿ ಮತ್ತು ಇತರರು ಸಮಸ್ಯೆಗಳನ್ನು ಉಂಟು ಮಾಡಿದ್ದರು. ಆತ್ಮಹತ್ಯೆಗೆ ಅವರೇ ಕಾರಣ” ಎಂದು ಆರೋಪಿಸಿದ್ದರು.
ಆದರೆ ಈ ಆರೋಪಗಳನ್ನು ಮಹೇಶ್ ಜೋಷಿ ತಳ್ಳಿಹಾಕಿದ್ದಾರೆ. ಸಚಿನ್ ಪೈಲಟ್, “ಎಲ್ಲ ಆರೋಪಿಗಳ ವಿರುದ್ಧ ನಿಷ್ಪಕ್ಷಪಾತ ತನಿಖೆ ನಡೆಯಬೇಕು” ಎಂದು ಒತ್ತಾಯಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಸಲಿಂಗ ವಿವಾಹ ಮಾನ್ಯತೆ | ದೈಹಿಕ ಸಂಬಂಧ ಮಾತ್ರವಲ್ಲ ಭಾವನಾತ್ಮಕ ಸಂಬಂಧ ಹೊಂದಿದೆ : ಡಿ ವೈ ಚಂದ್ರಚೂಡ್
ಇದಕ್ಕೂ ಮುನ್ನ ಪೈಲಟ್ ಅವರ ಆಪ್ತ, ಕಾಂಗ್ರೆಸ್ ಶಾಸಕ ಹರೀಶ್ ಮೀನಾ ಅವರೂ ಸಂತ್ರಸ್ತ ಕುಟುಂಬವನ್ನು ಭೇಟಿಯಾಗಿದ್ದರು. ಬಿಜೆಪಿಯ ಸಂಸದ ಕಿರೋಡಿ ಲಾಲ್ ಮೀನಾ ಸಹ ಪ್ರತಿಭಟನೆಯಲ್ಲಿ ಸೇರಿದ್ದರು.
ರಾಜ್ಯ ಕಾಂಗ್ರೆಸ್ ಸರ್ಕಾರದ ಕೆಲವು ನೀತಿಗಳನ್ನು ವಿರೋಧಿಸಿ ಬಹಿರಂಗವಾಗಿ ಧ್ವನಿ ಎತ್ತುತ್ತಿರುವ ಸಚಿನ್ ಪೈಲಟ್ ಅವರ ಇತ್ತೀಚಿನ ನಡೆಗಳು ರಾಜಸ್ಥಾನ ಕಾಂಗ್ರೆಸ್‌ನಲ್ಲಿ ಅಸಮಾಧಾನವನ್ನುಂಟು ಮಾಡಿದೆ.