“ನನ್ನ ಚುನಾವಣಾ ಪ್ರಚಾರವನ್ನು ಪೊಲೀಸರು ನಿಲ್ಲಿಸಿದರು. ಬಿಜೆಪಿಗೆ ಗೆಲುವಿನ ವಿಶ್ವಾಸವಿದ್ದರೆ ಇತರ ಅಭ್ಯರ್ಥಿಗಳ ಪ್ರಚಾರಕ್ಕೆ ಅಡ್ಡಿಪಡಿಸುವುದೇಕೆ ನಿಲ್ಲಿಸುವುದೇಕೆ’’ ಎಂದು ಗುಜರಾತ್‌ನ ಗಾಂಧಿನಗರದಲ್ಲಿ ಅಮಿತ್ ಶಾ ವಿರುದ್ಧ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ಸೋನಾಲ್ ಪಟೇಲ್ ಪ್ರಶ್ನಿಸಿದ್ದಾರೆ.
ಕೇಂದ್ರ ಗೃಹ ಸಚಿವ, ಬಿಜೆಪಿ ಅಭ್ಯರ್ಥಿ ಅಮಿತ್ ಶಾ ಅವರು ಗಾಂಧಿನಗರದಲ್ಲಿ ಎರಡನೇ ಅವಧಿಗೆ ಗೆಲುವು ಸಾಧಿಸಲು ಹರಸಾಹಸ ಪಡುತ್ತಿದ್ದಾರೆ. ಗಾಂಧಿನಗರವು 1989ರಿಂದ ಬಿಜೆಪಿಯ ಭದ್ರಕೋಟೆಯಾಗಿದೆ. ಅಲ್ಲಿ, ಕಾಂಗ್ರೆಸ್‌ನಿಂದ 63 ವರ್ಷದ ಸೋನಾಲ್ ಪಟೇಲ್ ಕಣಕ್ಕಿಳಿದಿದ್ದಾರೆ.
2019ರಲ್ಲಿ, ಅಮಿತ್ ಶಾ ಅವರು ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಚತುರ್‌ಸಿಂಹ ಜವಾಂಜಿ ಚಾವ್ಡಾ ಅವರ ವಿರುದ್ಧ 5.5 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಗೆದ್ದಿದ್ದರು.
“ಅಮಿತ್ ಶಾ 2019 ರಂತೆಯೇ ಕೆಲವು ರೀತಿಯ ದಾಖಲೆಯ ಗೆಲುವು ಸಾಧಿಸಲು ಬಯಸುತ್ತಾರೆ. ಅದಕ್ಕಾಗಿಯೇ, ಅವರು ಇತರ ಅಭ್ಯರ್ಥಿಗಳ ಪ್ರಚಾರಕ್ಕೆ ಅಡ್ಡಿಯುಂಟು ಮಾಡಲು ಪೊಲೀಸರನ್ನು ಬಳಸುತ್ತಿದ್ದಾರೆ” ಎಂದು ಪಟೇಲ್ ಆರೋಪಿಸಿದ್ದಾರೆ.
“ಗಾಂಧಿನಗರದಲ್ಲಿ ನನಗೆ ಮಾತ್ರ ಭದ್ರತಾ ಸಮಸ್ಯೆಗಳಿವೆ. ಇತರರು ಮುಕ್ತವಾಗಿ ಪ್ರಚಾರ ಮಾಡುತ್ತಿದ್ದಾರೆ. ಕಾಂಗ್ರೆಸ್‌ಗೆ ಯಾಕೆ ಸಮಸ್ಯೆ ನೀಡಲಾಗುತ್ತಿದೆ” ಎಂದು ಪಟೇಲ್ ಪ್ರಶ್ನಿಸಿದ್ದಾರೆ.
“ಗಾಂಧಿನಗರದಲ್ಲಿ ಪ್ರಚಾರವನ್ನು ತಡೆದದ್ದು ಮಾತ್ರವಲ್ಲದೆ, ಸನಂದ್‌ನಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಮೌನವಾಗಿರುವಂತೆ ಕಿರುಕುಳ ನೀಡಲಾಗಿದೆ. ಏಪ್ರಿಲ್ 8 ರಂದು, ತಮ್ಮ ವಾಹನವನ್ನು ಬಿಜೆಪಿ ಮುಖಂಡರು ಸುತ್ತವರೆದು, ಸಮಸ್ಯೆ ಸೃಷ್ಠಿಸಿದ್ದರು. ವಾಪಸ್ ಹೋಗದಿದ್ದರೆ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆಂದು ಬೆದರಿಕೆ ಹಾಕಿದ್ದರು” ಎಂದು ಪಟೇಲ್ ಆರೋಪಿಸಿದ್ದಾರೆ.
“ಬ್ಯಾನರ್ ಹಾಕದಂತೆ ಕಾಂಗ್ರೆಸ್ ಕಾರ್ಯಕರ್ತರಿಗೆ ಬೆದರಿಕೆ ಹಾಕಲಾಗುತ್ತಿದೆ. ಹಲವೆಡೆ ಕಾಂಗ್ರೆಸ್ ಬ್ಯಾನರ್‌ಗಳನ್ನು ಕಿತ್ತು ಹಾಕಲಾಗಿದೆ. ಬೆದರಿಕೆಗಳಿಂದಾಗಿ ಹೆಚ್ಚಿನ ಕಾರ್ಯಕರ್ತರು ಪ್ರಚಾರಕ್ಕೆ ಬರುತ್ತಿಲ್ಲ” ಎಂದು ಅವರು ಹೇಳಿದ್ದಾರೆ.
“ಮತದಾನದ ದಿನದಂದು ಮತದಾನಕ್ಕೆ ಅಡ್ಡಿಪಡಿಸಲು ಮತ್ತು ಮಧ್ಯಾಹ್ನ ಯಾವುದೇ ರಿಕ್ಷಾಗಳು ಲಭ್ಯವಾಗದಂತೆ ನೋಡಿಕೊಳ್ಳಲು ಸಮಾಜ ವಿರೋಧಿಗಳನ್ನು ಕರೆಸಿ ಸೂಚನೆ ನೀಡಲಾಗಿದೆ” ಎಂದು ಸ್ಥಳೀಯ ಕಾಂಗ್ರೆಸಿಗರು ಆರೋಪಿಸಿದ್ದಾರೆ.
ಗಾಂಧಿನಗರ ಕ್ಷೇತ್ರದಲ್ಲಿ ಬಿಜೆಪಿ ವಿರುದ್ಧ ಸ್ಪರ್ಧಿಸಿರುವ ಅಭ್ಯರ್ಥಿಗಳಿಗೆ ಯಾವ ರೀತಿ ಸಮಸ್ಯೆಗಳು ಎದುರಾಗುತ್ತಿವೆ ಎಂಬುದರ ಬಗ್ಗೆ ಸಾಮಾಜಿಕ ಕಾರ್ಯಕರ್ತೆ ಮತ್ತು ಮಾನವ ಹಕ್ಕುಗಳ ಹೋರಾಟಗಾರ್ತಿ ಶಬನಮ್ ಹಶ್ಮಿ ಕ್ಷೇತ್ರಾದ್ಯಂತ ಸಂಚರಿಸಿ, ಪರಿಸ್ಥಿತಿಯನ್ನು ಅರಿತಿದ್ದಾರೆ. ಚುನಾವಣಾ ಸಮಯದಲ್ಲಿ ಪೊಲೀಸರು ಹೇಗೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬ ಬಗ್ಗೆ ಹಶ್ಮಿ ಸೇರಿದಂತೆ ಕಾಂಗ್ರೆಸ್ ಮತ್ತು ಎಎಪಿ ಮುಖಂಡರು ಚುನಾವಣಾ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಬಿಜೆಪಿಗರು ಇತರ ಪಕ್ಷಗಳ ಕಾರ್ಯಕರ್ತರಿಗೆ ಪ್ರಚಾರ ಮಾಡದಂತೆ ತೊಂದರೆ ಕೊಡುತ್ತಿದ್ದಾರೆ. ಇದಕ್ಕೆ ಪೊಲೀಸರು ಸಹಕಾರ ನೀಡುತ್ತಿದ್ದಾರೆ ಎಂದು ಪತ್ರದಲ್ಲಿ ಆರೋಪಿಸಿದ್ದಾರೆ.