ಹುಬ್ಬಳ್ಳಿಯ ಬಿವಿಬಿ ಕಾಲೇಜ್ ವಿದ್ಯಾರ್ಥಿನಿ ನೇಹಾ ಎಂಬುವವರ ಹತ್ಯೆ ವಿರೋಧಿಸಿ, ತಪ್ಪಿತಸ್ಥ ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಹಾಗೂ ವಿದ್ಯಾರ್ಥಿನಿಯರು, ಮಹಿಳೆಯರಿಗೆ ಸೂಕ್ತ ಭದ್ರತೆ ದೊರೆಯುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್ಎಫ್ಐ) ಹಾವೇರಿ ಜಿಲ್ಲಾ ಸಮಿತಿ ಆಗ್ರಹಿಸಿದೆ.
ಹಾವೇರಿ ನಗರದ ಕಾಗಿನಲೆ ಸರ್ಕಲ್‌ನಿಂದ ಬಸ್ ನಿಲ್ದಾಣ ಹತ್ತಿರದ ಹೊಸಮನಿ ಸಿದ್ದಪ್ಪ ವೃತ್ತದವರೆಗೆ ಎಸ್‌ಎಫ್‌ಐ ನೇತೃತ್ವದಲ್ಲಿ ಮೆರವಣಿಗೆ ಹೋಗಿ, ಪ್ರತಿಭಟಿಸಿದ ವಿದ್ಯಾರ್ಥಿನಿಯರು ಉಪತಹಶೀಲ್ದಾರ್ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಪತ್ರ ಸಲ್ಲಿಸಿದರು.
ವಿದ್ಯಾರ್ಥಿನಿ ಮೇಲಿನ ದೌರ್ಜನ್ಯ, ಹತ್ಯೆಯನ್ನು ವಿರೋಧಿಸಿ ಪ್ರಗತಿಪರ ಚಿಂತಕ, ಹಿರಿಯ ಸಾಹಿತಿ ಸತೀಶ್ ಕುಲಕರ್ಣಿ ಮಾತನಾಡಿ, “ವಿದ್ಯಾರ್ಥಿನಿ ಮೇಲಿನ ಬರ್ಬರ ಹತ್ಯೆ ಅತ್ಯಂತ ನೋವುಂಟು ಮಾಡಿದೆ. ಈ ಘಟನೆಯನ್ನು ಬೇರೆ ಬೇರೆ ಕಣ್ಣುಗಳಿಂದ ನೋಡಬಾರದು. ಮಾನವೀಯತೆ ದೃಷ್ಟಿಯಿಂದ ನೋಡಿದಾಗ ಈ ಘಟನೆ ಖಂಡನೀಯವಾಗಿದೆ. ಮಹಿಳೆಯರಿಗೆ ಸೂಕ್ತ ರಕ್ಷಣೆ ಒದಗಿಸಬೇಕು” ಒತ್ತಾಯಿಸಿದರು.
ಎಸ್ಎಫ್ಐ ಜಿಲ್ಲಾ ಸಹ ಕಾರ್ಯದರ್ಶಿ ಬಸವರಾಜ ಎಸ್ ಮಾತನಾಡಿ, “ವಿದ್ಯಾರ್ಥಿನಿ ನೇಹಾಳನ್ನು ಅಮಾನವೀಯವಾಗಿ ಕ್ರೂರತನದಿಂದ ಕೊಲೆ ಕೊಲೆ ಮಾಡಿರುವುದು ಖಂಡನೀಯ. ಇಂತಹ ಕೊಲೆಗಳನ್ನು ಮತೀಯ ಕನ್ನಡಕದ ಮೂಲಕ ನೋಡುವ, ರಾಜಕೀಯವಾಗಿ ಬಳಸಿಕೊಳ್ಳುವ ನೀಚತನ, ಷಡ್ಯಂತ್ರಕ್ಕೆ ಜನತೆ ಆಸ್ಪದ ಕೊಡಬಾರದು. ಎಲ್ಲರೂ ಒಟ್ಟಾಗಿ ನಿಂತು ಇಂತಹ ಸ್ಥಿತಿಯ ವಿರುದ್ಧ ಧ್ವನಿ ಎತ್ತಬೇಕು. ನರಹಂತಕ ಕೊಲೆ ಆರೋಪಿಗೆ ಕಠಿಣ ಶಿಕ್ಷೆ ಆಗುವಂತೆ ರಾಜ್ಯ ಸರ್ಕಾರ ಸೂಕ್ತ ಕ್ರಮ ವಹಿಸಬೇಕು” ಎಂದರು.
“ಸುಪ್ರಿಂ ಕೋರ್ಟ್ ನಿರ್ದೇಶನದಂತೆ ಎಲ್ಲ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರಿಗೆ ಹಾಗೂ ಮಹಿಳೆಯರಿಗೆ ಸೂಕ್ತ ರಕ್ಷಣೆ ನೀಡಬೇಕು. ಆದರೆ ರಾಜ್ಯ ಸರ್ಕಾರ ಇದನ್ನು ಜಾರಿ ಮಾಡಿಲ್ಲ. ತಕ್ಷಣ ಇದನ್ನು ರಚನೆ ಮಾಡಬೇಕು. ವಿದ್ಯಾರ್ಥಿನಿಯರಿಗೆ, ಮಹಿಳೆಯರಿಗೆ ಸೂಕ್ತ ರಕ್ಷಣೆ ನೀಡಬೇಕು. ಶಾಲಾ-ಕಾಲೇಜುಗಳಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆಗಳನ್ನು ನಡೆಸಬೇಕು. ಮಹಿಳೆಯರು ರಕ್ಷಣೆ ಹಾಗೂ ಭದ್ರತೆಗಾಗಿ ಮಹಿಳಾ ಕಾನೂನುಗಳನ್ನು ಸಮರ್ಪಕವಾಗಿ ಜಾರಿಮಾಡಬೇಕು” ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿದ್ಯಾರ್ಥಿನಿ ರಾಧಿಕಾ ಕಾಟೆನಹಳ್ಳಿ ಮಾತನಾಡಿ, “ಈ ಕ್ರೂರ ಘಟನೆ ಭಯದ ವಾತಾವರಣ ನಿರ್ಮಿಸಿದೆ. ವಿದ್ಯಾರ್ಥಿನಿ ನೇಹಾ ಸಾವಿನ ನ್ಯಾಯದ ಕೂಗು ಸೌಜನ್ಯ, ದಾನಮ್ಮ ಸೇರಿದಂತೆ ಸಾವಿರಾರು ಮಂದಿ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರ ನ್ಯಾಯಕ್ಕಾಗಿ ಧ್ವನಿ ಎತ್ತಲಿ, ಶಾಲಾ-ಕಾಲೇಜುಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿ ಭದ್ರತೆ ನೀಡಬೇಕು” ಎಂದರು.
ಸಿಂಚನ ಕೇರಿಮತ್ತಿಹಳ್ಳಿ ಮಾತನಾಡಿ, “ಮಹಿಳೆಯರ ಮೇಲೆ ದೌರ್ಜನ್ಯ, ಶೋಷಣೆ, ಕೊಲೆಗಳು ದಿನೇ ದಿನೆ ಹೆಚ್ಚುತ್ತಿದ್ದು ಮಹಿಳೆಯರಿಗೆ, ವಿದ್ಯಾರ್ಥಿನಿಯರಿಗೆ ಸೂಕ್ತ ಭದ್ರತೆ, ರಕ್ಷಣೆ ಇಲ್ಲದಿರುವುದು ಈ ಘಟನೆಗಳಿಗೆ ಕಾರಣವಾಗಿವೆ. ಆದರಿಂದ ಶಾಲಾ-ಕಾಲೇಜು ಆವರಣದಲ್ಲಿ ಪೊಲೀಸ್ ಸಿಬ್ಬಂದಿ ನೇಮಿಸಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ವಿದ್ಯಾರ್ಥಿ ಸಂಘಟನೆಗಳ ಒಕ್ಕೂಟದಿಂದ ವಿದ್ಯಾರ್ಥಿ ಯುವಜನರ ಪ್ರಣಾಳಿಕೆ ಬಿಡುಗಡೆ
ಎಸ್ಎಫ್ಐ ಜಿಲ್ಲಾ ಮುಖಂಡರುಗಳಾದ ಪರುಶುರಾಮ ಕೊಪ್ಪಳದರ, ಮಹಾಂತೇಶ್ ದುರುಗಣ್ಣನವರ, ಅಫ್ಸಾನಾ, ಭೂಮಿಕಾ ಲಮಾಣಿ, ಲಕ್ಷ್ಮೀ ಕೆ ಎಲ್, ಕಾವೇರಿ ಅಕ್ಕಿ, ರೇಖಾ ಬಣಕಾರ, ಪಿ ಎಚ್ ಬಾನು, ಅಕ್ಷತಾ ಜಿ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಇದ್ದರು.
