ಮಾಜಿ ಸಚಿವ ಮಾಧುಸ್ವಾಮಿ ಅವರು ತೆರಳುತ್ತಿದ್ದ ಕಾರು ಅಪಘಾತಕ್ಕೀಡಾದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಹೇಮಗಿರಿ ಗೇಟ್ ಬಳಿ ನಡೆದಿದೆ.
ಬೆಳಗ್ಗೆ ಸುಮಾರು 11:10 ವೇಳೆಗೆ ಕಡೂರಿನ ಹೇಮಗಿರಿ ಬಳಿಯ ಬೆಂಗಳೂರು-ಹೊನ್ನಾವರ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ. ಸದ್ಯ ಅಪಘಾತದಲ್ಲಿ ಮಾಧುಸ್ವಾಮಿ ಹಾಗೂ ಅವರ ಕಾರು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಮಾಧುಸ್ವಾಮಿ ಅವರು ಎನ್‌ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪರ ಬೀರೂರಿನಲ್ಲಿ ನಡೆಯಲಿರುವ ಪ್ರಚಾರ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದೆ.
ಗುಜುರಿ ಆಟೋಗೆ ಮಾಧುಸ್ವಾಮಿ ಅವರ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ರಿಕ್ಷಾ ಚಲಾಯಿಸುತ್ತಿದ್ದ ಬಾಣಾವರದ ರಫೀಕ್ ಎಂಬವರು ಗಾಯಗೊಂಡಿದ್ದಾರೆ. ಸದ್ಯ ಅವರು ಕಡೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.
ಮಾಧುಸ್ವಾಮಿಯ ಕಾರಿನ ಮುಂಭಾಗಕ್ಕೆ ಸ್ವಲ್ಪ ಹಾನಿಯಾಗಿದೆ. ಅಪಘಾತ ಸಂಭವಿಸಿದ ಬಳಿಕ ಮಾಧುಸ್ವಾಮಿ ಅಲ್ಲಿಂದ ಬೇರೊಂದು ಕಾರಿನಲ್ಲಿ ತೆರಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ವಿಶೇಷ ಜಾತ್ರೆ | ತಲೆ ಮೇಲೆ ತೆಂಗಿನಕಾಯಿ ಒಡೆದುಕೊಂಡು ಮಳೆಗಾಗಿ ಪ್ರಾರ್ಥನೆ ಮಾಡಿದ ಖಾಜಿಸೊನ್ನೇನಹಳ್ಳಿ ಗ್ರಾಮಸ್ಥರು
ಮಾಜಿ ಸಚಿವ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪರ ಪ್ರಚಾರ ಕಾರ್ಯಕ್ರಮಕ್ಕೆ ತೆರಳುತ್ತಿದ್ದರು. ಬೀರೂರಿನಲ್ಲಿ 11 ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು, ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಕಡೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.