ಬಿಜೆಪಿಯ ಅಗ್ರಹಾರದಲ್ಲಿ ಪ್ರಬಲ ವಾಗ್ಮಿ ಎಂದೇ ಕರೆಸಿಕೊಂಡಿರುವ ತೇಜಸ್ವಿ ಸೂರ್ಯ ಅಷ್ಟೇ ಚೇಷ್ಠೆ ಕೂಡ. ಕಳೆದ ವರ್ಷ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ವಿಮಾನವೇರಿ ಕುಳಿತಿದ್ದ ಸೂರ್ಯ, ವಿಮಾನದ ತುರ್ತು ನಿರ್ಗಮನ ಬಾಗಿಲು ತೆರೆದು ಅವಾಂತರ ಸೃಷ್ಟಿಸಿದ್ದರು. ಇತ್ತೀಚೆಗೆ, ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ನಲ್ಲಿ ಹಣವಿಟ್ಟು, ಮೋಸ ಹೋದ ಜನರಿಗೆ ಹೆದರಿ, ಹಿಂಬಾಗಿನಿಂದ ಓಡಿ ಹೋಗಿದ್ದರು. ಇದೆಲ್ಲದಕ್ಕೂ ಮುಂಚೆ, ಪಶ್ಚಿಮ ಬಂಗಾಳದಲ್ಲಿ ಪ್ರತಿಭಟನೆಗೆ ಹೋಗಿ, ದೂರದಲ್ಲಾದ ಸದ್ದಿಗೆ ಕೂತಲ್ಲೇ ಬೆಚ್ಚಿ ಬಿದ್ದಿದ್ದರು. ಈಗ ಅವರು, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ 2ನೇ ಬಾರಿಯ ಆಯ್ಕೆಗಾಗಿ ಸ್ಪರ್ಧಿಸಿದ್ದಾರೆ. ಫಲಿತಾಂಶದ ದಿನ, ಕೌಂಟಿಂಗ್ ಕೇಂದ್ರದಿಂದಲೂ ಓಡಿ ಹೋಗುವರೇ ಎಂಬ ಗುಮಾನಿ ಶುರುವಾಗಿದೆ.
ಅಂದಹಾಗೆ, ತೇಜಸ್ವಿ ಸೂರ್ಯ ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷರೂ ಆಗಿದ್ದಾರೆ. ಆದರೆ, ಅವರು ತಮ್ಮ ಕ್ಷೇತ್ರವನ್ನು ಬಿಟ್ಟು ಹೊರಗೆ ಕಾಣಿಸುತ್ತಿಲ್ಲ. ಎಲ್ಲಿಯೂ ಪ್ರಚಾರಕ್ಕೂ ಹೋಗುತ್ತಿಲ್ಲ. ಅವರ ಈ ನಡೆ, ಮೋದಿಯ ಸೆಲ್ಫ್ ಸೆಂಟ್ರಿಕ್‌ನಂತೆ ‘ತಾವು ಗೆದ್ದರೆ ಸಾಕಪ್ಪಾ’ ಎಂಬಂತಹ ಪರಿಸ್ಥಿತಿಯಲ್ಲಿದ್ದಾರೆ ಎಂಬುದನ್ನು ಸೂಚಿಸುತ್ತದೆ.
ಬಿಜೆಪಿಯ ಯುವ ನಾಯಕನ ವಿರುದ್ಧ ಕಾಂಗ್ರೆಸ್ ಯುವ ನಾಯಕಿ, ಮಾಜಿ ಶಾಸಕಿ ಸೌಮ್ಯ ರೆಡ್ಡಿ ಕಣಕ್ಕಿಳಿದಿದ್ದಾರೆ. ಪ್ರಬಲ ಪೈಪೋಟಿ ನೀಡುತ್ತಿದ್ದಾರೆ. ಸೂರ್ಯರನ್ನು ಕ್ಷೇತ್ರದಿಂದ ಕದಲದಂತೆ ಕಟ್ಟಿ ಹಾಕಿದ್ದಾರೆ. ಆದಾಗ್ಯೂ, ಸೂರ್ಯ ತಮಿಳುನಾಡಿನಲ್ಲಿ ಅಣ್ಣಾಮಲೈ (ಕೊಯಮತ್ತೂರು) ಮತ್ತು ವಿನೋಜ್ ಸೆಲ್ವಂ (ಚೆನ್ನೈ ಸೆಂಟ್ರಲ್) ಪರ ಒಂದು ದಿನದ ಪ್ರಚಾರ ಮಾಡಿ ಬಂದಿದ್ದಾರೆ.
ಹಾಲಿ ಸಂಸದ ಸೂರ್ಯ ಮತ್ತು ಹಾಲಿ ಸಚಿವ ರಾಮಲಿಂಗಾರೆಡ್ಡಿ ಅವರ ಪುತ್ರಿ ಸೌಮ್ಯ ನಡುವಿನ ಹೋರಾಟದಿಂದ ಬೆಂಗಳೂರು ದಕ್ಷಿಣ ಕ್ಷೇತ್ರ ಪ್ರತಿಷ್ಠೆಯ ಕಣವಾಗಿ ಕಾಣಿಸಿಕೊಂಡಿದೆ. 2019ರಲ್ಲಿ ಸೂರ್ಯ ಕ್ಷೇತ್ರದಲ್ಲಿ ಗೆದ್ದು ಸಂಸದರಾಗಿದ್ದರೆ, ರಾಮಲಿಂಗಾರೆಡ್ಡಿ ಇದೇ ಕ್ಷೇತ್ರದ ವ್ಯಾಪ್ತಿಯಲ್ಲೇ ಇರುವ ಬಿಟಿಎಂ ಲೇಔಟ್‌ನ ಶಾಸಕರಾಗಿದ್ದಾರೆ. ಸೌಮ್ಯ 2018ರಲ್ಲಿ ಜಯನಗರದಿಂದ ಶಾಸಕಿಯಾಗಿದ್ದರು. 2023ರಲ್ಲಿ ಕೂದಲೆಳೆಯಲ್ಲಿ ಕ್ಷೇತ್ರವನ್ನು ಕಳೆದುಕೊಂಡರು.
ಪ್ರತಿಷ್ಠೆಯ ಕ್ಷೇತ್ರದಲ್ಲಿ ಹವಾಲಾ ಹಣ ನೀರಿನಂತೆ ಹರಿಯುತ್ತಿದೆ ಎಂಬ ಆರೋಪ, ವದಂತಿ, ಊಹಾಪೋಹಗಳೂ ದಟ್ಟವಾಗಿವೆ. ಕ್ಷೇತ್ರದ ವ್ಯಾಪ್ತಿಯಲ್ಲಿ ಚುನಾವಣಾ ಅಧಿಕಾರಿಗಳು ಕಾರೊಂದರಲ್ಲಿ 1.4 ಕೋಟಿ ರೂ. ಹಣವನ್ನು ವಶಕ್ಕೆ ಪಡೆದರು. ಆಗ, ಬಿಜೆಪಿಯನ್ನು ಸೌಮ್ಯ ದೂಷಿಸಿದರು. ಆದರೆ, ನಿಷ್ಪಕ್ಷಪಾತ ತನಿಖೆಯಾಗಬೇಕೆಂದು ಸೂರ್ಯ ಕೂಡ ಹೇಳಿಕೆ ಕೊಟ್ಟರು.
ಈ ವರದಿ ಓದಿದ್ದೀರಾ?: 2019ರಲ್ಲಿ ಮೋದಿ ಕೊಟ್ಟ ಆಶ್ವಾಸನೆಗಳ ಕತೆ ಏನಾಯಿತು?
ಇದೆಲ್ಲದರ ನಡುವೆ, ಕಳೆದ ಐದು ವರ್ಷಗಳಲ್ಲಿ ಬಹುತೇಕ ಸಮಯವನ್ನು ದೆಹಲಿಯಲ್ಲೇ ಕಳೆದಿದ್ದ ಸೂರ್ಯ, ಕ್ಷೇತ್ರದತ್ತ ತಲೆ ಹಾಕಿಯೂ ಮಲಗಲಿಲ್ಲ. ಕ್ಷೇತ್ರದ ಬಹಳಷ್ಟು ಮಂದಿ ಸೂರ್ಯ ತಮ್ಮ ಸಂಸದ ಎಂಬುದನ್ನೇ ಮರೆತಿದ್ದಾರೆ. ಇದಕ್ಕೆ ತದ್ವಿರುದ್ಧವಾಗಿ, ಸೌಮ್ಯ ಕ್ಷೇತ್ರದಲ್ಲಿ ಕಾಣಸಿಗುತ್ತಿದ್ದರು. ಮಾತ್ರವಲ್ಲದೆ, ಅವರ ತಂದೆ ರಾಮಲಿಂಗಾರೆಡ್ಡಿ ಬಿಜೆಪಿಯೂ ಸೇರಿದಂತೆ ಎಲ್ಲ ನಾಯಕರೊಂದಿಗೆ ಉತ್ತಮ ಒಡನಾಟ ಬಾಂಧವ್ಯ ಹೊಂದಿದ್ದಾರೆ. ಸಾಮಾನ್ಯ ಜನರಿಂದಲೂ ಗೌರವ ಗಳಿಸಿದ್ದಾರೆ. ಇದು, ಮತದಾರರನ್ನು ಸೌಮ್ಯ ಕಡೆಗೆ ತಿರುಗಿಸುವ ಎಲ್ಲ ಸಾಮರ್ಥ್ಯಗಳು ರೆಡ್ಡಿ ಅವರಿಗಿದೆ.
ಅಲ್ಲದೆ, ರೆಡ್ಡಿ ಅವರು ಬಿಬಿಎಂಪಿ ಕಾರ್ಪೊರೇಟರ್‌ಗಳು ಸೇರಿದಂತೆ ಎಲ್ಲ ರೀತಿಯ ನಾಯಕರನ್ನು ತಮ್ಮ ಪರವಾಗಿ ಸೆಳೆಯಲು ಕಸರತ್ತು ನಡೆಸುತ್ತಿದ್ದಾರೆ. ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಮತ್ತು ದಲಿತರ ಮತಗಳನ್ನು ಕ್ರೋಡೀಕರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ ಕ್ಷೇತ್ರದಲ್ಲಿ ವ್ಯಾಪಕ ಪ್ರಚಾರ ನಡೆಸಿದ್ದಾರೆ. ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಕೂಡ ಒಕ್ಕಲಿಗರು ಸೌಮ್ಯರನ್ನು ತಮ್ಮ ಮಗಳಂತೆ ಪರಿಗಣಿಸಿ ಆಶೀರ್ವದಿಸಬೇಕೆಂದು ಕೋರಿದ್ದಾರೆ. ಆದರೆ, ಈ ನಗರದ ಒಕ್ಕಲಿಗರಲ್ಲಿ ಹೆಚ್ಚಿನವರು ನಿಯೋಬ್ರಾಹ್ಮಿನ್ಸ್ ಆಗಿದ್ದಾರೆ. ಅವರೆಲ್ಲರೂ, ಬ್ರಾಹ್ಮಣರಾದ ಸೂರ್ಯ ಅವರನ್ನು ಬೆಂಬಲಿಸುವ ಸಾಧ್ಯತೆಯಿದೆ ಎಂಬುದು ಗಮನಾರ್ಹ.
ಜೊತೆಗೆ, ರೆಡ್ಡಿಗಳು ಮತ್ತು ನಾಯ್ಡುಗಳು ಸೇರಿದಂತೆ ತೆಲುಗು ಮಾತನಾಡುವ ಜನರಲ್ಲಿ ಹೆಚ್ಚಿನ ಮತದಾರರು ಸೌಮ್ಯ ಬಗ್ಗೆ ಒಲವು ಹೊಂದಿದ್ದಾರೆ. ಮಾತ್ರವಲ್ಲದೆ, ಈ ಹಿಂದೆ ಬಿಜೆಪಿ ಜೊತೆಗಿದ್ದ ಹಲವಾರು ಮತದಾರರು ಬಿಜೆಪಿ ಬಗ್ಗೆ ಅಸಮಾಧಾನಗೊಂಡಿದ್ದಾರೆ. ಅದರಲ್ಲೂ ಬಿಜೆಪಿಗೊಂದು ಭದ್ರ ನೆಲೆ ಒದಗಿಸಿದ್ದ ಮಾಜಿ ಮಂತ್ರಿ ದಿವಂಗತ ಅನಂತಕುಮಾರ್, ಅವರ ಪತ್ನಿ ತೇಜಸ್ವಿನಿಯವರು, ಈಗ ಬಿಜೆಪಿಯಿಂದ ದೂರ ಸರಿದಿದ್ದಾರೆ. ಅನಂತಕುಮಾರ್ ಹಿಂಬಾಲಕರನ್ನು ಸೂರ್ಯ ನಿರ್ಲಕ್ಷಿಸಿದರು ಎಂಬುದು, ಅವರ ಮೇಲಿರುವ ದೊಡ್ಡ ಆರೋಪ. ಹಾಗಾಗಿ ಅವರು ತಮ್ಮ ನಿಷ್ಠೆಯನ್ನು ಬದಲಿಸಬಹುದು. ಕಾಂಗ್ರೆಸ್‌ನತ್ತ ವಾಲಬಹುದು ಎಂಬ ಅಭಿಪ್ರಾಯವೂ ಕ್ಷೇತ್ರದಲ್ಲಿದೆ.
ಮತ್ತೊಂದು ವಿಚಾರವೆಂದರೆ, ಕ್ಷೇತ್ರದಲ್ಲಿ ಗಣನೀಯ ಸಂಖ್ಯೆಯಲ್ಲಿರುವ ಬ್ರಾಹ್ಮಣರೂ ತೇಜಸ್ವಿ ವಿರುದ್ಧ ಸಿಟ್ಟಾಗಿದ್ದಾರೆ. ಶ್ರೀ ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್‌ನಲ್ಲಿ ಠೇವಣಿ ಇಟ್ಟಿದ್ದವರಲ್ಲಿ ಬಹುತೇಕರು ಬ್ರಾಹ್ಮಣರು. ಆದರೆ, ಅವರು ತಮ್ಮ ಠೇವಣಿ ಹಣವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಇತ್ತೀಚೆಗೆ ನಡೆದ ಬ್ಯಾಂಕ್ ಸಭೆಯಲ್ಲಿ, ಸೂರ್ಯ ಮತ್ತು ಅವರ ಚಿಕ್ಕಪ್ಪ (ಬಸವನಗುಡಿ ಶಾಸಕ ಎಲ್.ಎ ರವಿ ಸುಬ್ರಹ್ಮಣ್ಯ) ಬ್ಯಾಂಕ್‌ನ ಠೇವಣಿದಾರರ ಹಿತಾಸಕ್ತಿ ಕಾಪಾಡುವಲ್ಲಿ ವಿಫಲರಾಗಿದ್ದಾರೆ ಎಂದು ಠೇವಣಿದಾರರು ಆರೋಪಿಸಿದ್ದರು. ಅವರ ಆಕ್ರೋಶವನ್ನು ತಣಿಸುವಲ್ಲಿ ವಿಫಲರಾದ ಸೂರ್ಯ, ತುರ್ತು ನಿರ್ಗಮನ ದ್ವಾರದಿಂದ ಕಾಲ್ಕಿತ್ತರು.
ಇಂತಹ ಸಂದರ್ಭದಲ್ಲಿ, ಪ್ರಧಾನಿ ಮೋದಿ ಮೇಲೆ ಸೂರ್ಯ ಅವಲಂಬಿತರಾಗಿದ್ದಾರೆ. ಮೋದಿ ವರ್ಚಸ್ಸಿನ ಮೇಲೆ ಮತ ಕೇಳುತ್ತಿದ್ದಾರೆ. ಮೋದಿ ಮಾಡಿದ ಬಹುದೊಡ್ಡ ಭ್ರಷ್ಟಾಚಾರವಾದ ಚುನಾವಣಾ ಬಾಂಡ್ ಬಗ್ಗೆ, ಅದೊಂದು ಹಗರಣವೇ ಅಲ್ಲ ಎನ್ನುವ ಉಡಾಫೆಯಿಂದ ಉತ್ತರಿಸುತ್ತಿದ್ದಾರೆ. ಹೀಗಾಗಿ ಈ ಬಾರಿ, ರಾಜ್ಯದಲ್ಲಿ ಮೋದಿ ಅಲೆ ಇಲ್ಲ. ಇದ್ದರೂ, ಫಲಿಸುವುದಿಲ್ಲ ಎಂಬುದು ಸ್ಪಷ್ಟವಾಗಿದೆ.
ಕ್ಷೇತ್ರದ ಈ ಎಲ್ಲ ರಾಜಕೀಯ ಸನ್ನಿವೇಶಗಳು ಸೂರ್ಯ ಗೆಲುವಿಗೆ ಸವಾಲಾಗಿವೆ. ರಾಘವೇಂದ್ರ ಬ್ಯಾಂಕ್‌ನಿಂದ ಓಡಿ ಹೋದ ಸೂರ್ಯ, ಜೂನ್ 4ರ ನಂತರ ಕ್ಷೇತ್ರದಿಂದಲೂ ಓಡಿ ಹೋಗುವರೇ ಎಂಬ ಚರ್ಚೆಯನ್ನು ಹುಟ್ಟು ಹಾಕಿವೆ.