ಬೆಲೆ ಏರಿಕೆ, ಆರ್ಥಿಕ ಅಸಮಾನತೆ ನಿರುದ್ಯೋಗದಿಂದ ಕೇಂದ್ರ ಸರ್ಕಾರದ ವಿರುದ್ಧ ಜನರ ಆಕ್ರೋಶ ಸ್ಪೋಟಗೊಂಡು, ಈ ಬಾರಿಯ ಚುನಾವಣೆಯಲ್ಲಿ ಎನ್‌ಡಿಎ ಹೀನಾಯವಾಗಿ ಸೋತು ಇಂಡಿಯಾ ಒಕ್ಕೂಟವು ಬಹುಮತಗಳಿಸಲಿದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯಿಲಿ ಹೇಳಿದರು.
ಮಂಗಳೂರು ನಗರದ ಕಾಂಗ್ರೆಸ್ ಭವನದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿ ಯನ್ನುದ್ದೇಶಿಸಿ ಅವರು ಮಾತನಾಡಿದರು.
ಬಿಜೆಪಿ ನೇತೃತ್ವದ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಳಿಕ ದೇಶದಲ್ಲಿ ಆರ್ಥಿಕ ಅಸಮಾನತೆ ಹೆಚ್ಚಿದೆ. ಮೋದಿಯವರ ಆಡಳಿತ ಅವಧಿಯಲ್ಲಿ ಶೇ.1ರಷ್ಟು ಜನರಲ್ಲಿ ದೇಶದ ಒಟ್ಟು ಸಂಪತ್ತು ಶೇಖರಣೆಯಾಗಿದೆ. ನಿರುದ್ಯೋಗದ ಪ್ರಮಾಣ ಏರಿಕೆಯಾಗಿದೆ. ಜಗತ್ತಿನ ಹಲವು ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದ ಬಡತನ ಪ್ರಮಾಣ ಕಳೆದ ಹತ್ತು ವರ್ಷಗಳಲ್ಲಿ ಗರಿಷ್ಠ ಪ್ರಮಾಣಕ್ಕೆ ಏರಿಕೆಯಾಗಿದೆ ಎಂದು ಮೊಯ್ಲಿ ವಿವರಿಸಿದರು.
ಈ ಬಾರಿಯ ಚುನಾವಣಾ ಪ್ರಕ್ರಿಯೆಯನ್ನು ಎರಡು ತಿಂಗಳ ಸುದೀರ್ಘ ಅವಧಿಗೆ ಆಯೋಜಿಸಿರುವುದು ಅನುಮಾನಕ್ಕೆ ಎಡೆ ಮಾಡಿದೆ. ತಂತ್ರಜ್ಞಾನ ಅಭಿವೃದ್ಧಿ ಯಾಗಿದ್ದರೂ ಚುನಾವಣಾ ಪ್ರಕ್ರಿಯೆ ಯಾಕಿಷ್ಟು ವಿಳಂಬ? ಸುಮಾರು 60 ದಿನಗಳ ಕಾಲ ಚುನಾನಣೆ ನಡೆಯುತ್ತಿರುವುದು ಹಲವು ಅನುಮಾನಗಳನ್ನು ಹುಟ್ಟು ಹಾಕುತ್ತಿವೆ. ಈ ಬಗ್ಗೆ ಚುನಾವಣಾ ಆಯೋಗ ಗಮನ ಹರಿಸಬೇಕು ಎಂದು ಮೊಯಿಲಿ ಆಗ್ರಹಿಸಿದರು.
ಕರ್ನಾಟಕ ಸರ್ಕಾರಕ್ಕೆ ಸಂವಿಧಾನದ ಪ್ರಕಾರ ನೀಡಬೇಕಾದ ತೆರಿಗೆಯ ಪಾಲನ್ನು ನೀಡದೆ ಖಾಲಿ ಚೊಂಬು ನೀಡಿದೆ. ಇದು ಕೆಪಿಸಿಸಿ ಪ್ರಕಟಿಸಿದ ಅತ್ಯಂತ ಸೂಕ್ತವಾದ ಜಾಹೀರಾತು ಎಂದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಜೆ.ಆರ್. ಲೋಬೊ, ಐವನ್ ಡಿಸೋಜ, ಮಾಜಿ ಮೇಯರ್ ಶಶಿಧರ ಹೆಗ್ಡೆ, ಭಾಸ್ಕರ.ಕೆ, ಮಾಹಾಬಲ ಮಾರ್ಲ, ಅಶ್ರಫ್ ಎಐಸಿಸಿ ಅಲ್ಪಸಂಖ್ಯಾತ ವಿಭಾಗದ ವೀಕ್ಷಕ ಜಾನ್ ಕೆನಾನ್, ಕೆಪಿಸಿಸಿ ಚುನಾವಣಾ ವಾರ್ ರೂಮ್ ಮುಖ್ಯ ಸಂಯೋಜಕ ಅಶ್ವಿನ್ ಕುಮಾರ್ ರೈ, ಮುಖಂಡರಾದ ಶಾಹುಲ್ ಹಮೀದ್, ಶುಭೋದಯ ಆಳ್ವಾ, ಡಿ.ಕೆ. ಅಶೋಕ್, ಆರಿಫ್, ಶಬೀರ್ ಸಿದ್ದಕಟ್ಟೆ, ಟಿ.ಕೆ. ಸುಧೀರ್ ಮೊದಲಾದವರು ಉಪಸ್ಥಿತರಿದ್ದರು.
