- ಗುತ್ತಿಗೆದಾರರ ಆರೋಪದ ಕುರಿತು ಮಾತನಾಡುವಂತೆ ಆಗ್ರಹ
- ‘ರಾಜ್ಯದ ಜನರು ಬಿಜೆಪಿ ಸರ್ಕಾರವನ್ನು ಕ್ಷಮಿಸುವುದಿಲ್ಲ’
ಪ್ರಧಾನಿ ಮೋದಿ ಅವರು ಕೆ ಎಸ್ ಈಶ್ವರಪ್ಪ ಅವರಿಗೆ ಕರೆ ಮಾಡಿರುವ ಕುರಿತು ಮಾತನಾಡಿರುವ ಎಐಸಿಸಿ ರಾಜ್ಯ ಚುನಾವಣಾ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, “ಭಾರತೀಯ ಪ್ರಜಾಪ್ರಭುತ್ವಕ್ಕೆ ಇಂದು ಅತ್ಯಂತ ಕರಾಳ ದಿನ, ಪ್ರಧಾನಿ ಮೋದಿ ಅವರ ಕಚೇರಿ ದೇಶಕ್ಕೆ ಅಪಮಾನ ಮಾಡಿದೆ. ಪ್ರಧಾನಿ ಮೋದಿ ಅವರು ಅಪರಾಧ ಕೃತ್ಯವನ್ನು ಎಸಗಿದ್ದಾರೆ” ಎಂದು ಹರಿಹಾಯ್ದಿದ್ದಾರೆ.
“ರಾಜಕೀಯ ಲಾಭ ಹಾಗೂ ಮತ ಗಳಿಕೆಗೆ ಮೋದಿ ಹಾಗೂ ಬಿಜೆಪಿ ಯಾವುದೇ ಹಂತಕ್ಕೆ ಬೇಕಾದರೂ ಹೋಗುತ್ತಾರೆ ಎಂದು ಸಾಬೀತಾಗಿರುವ ದಿನ. ಇಂದು ಮೋದಿ ಅವರು ಸತ್ಯಪಾಲ್ ಮಲಿಕ್ ಅವರ ಪ್ರಧಾನಿಗೆ ಭ್ರಷ್ಟಾಚಾರದ ಮೇಲೆ ದ್ವೇಷವಿಲ್ಲ ಎಂಬ ಹೇಳಿಕೆಯನ್ನು ಸಾಬೀತು ಮಾಡಿರುವ ದಿನ” ಎಂದಿದ್ದಾರೆ.
“ಪ್ರಧಾನಿ ಮೋದಿ ಅವರು ಬಿಜೆಪಿ ಕಾರ್ಯಕರ್ತ ಸಂತೋಷ್ ಪಾಟೀಲ್ ಅವರ ಸಾವಿಗೆ ಕಾರಣಕರ್ತರಾದ ಈಶ್ವರಪ್ಪ ಅವರಿಗೆ ಕರೆ ಮಾಡಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ” ಎಂದು ಹೇಳಿದ್ದಾರೆ.
“ಈಶ್ವರಪ್ಪ ಅವರ 40% ಕಿರುಕುಳಕ್ಕೆ ಸಂತೋಷ್ ಪಾಟೀಲ್ ಆತ್ಮಹತ್ಯೆ ಪತ್ರ ಬರೆದು ಪ್ರಾಣ ಕಳೆದುಕೊಳ್ಳಲಿಲ್ಲವೇ? ಈ ಬಗ್ಗೆ ಮೋದಿ ಅವರು ಸಂತೋಷ್ ಪಾಟೀಲ್ ಅವರ ಕುಟುಂಬದ ಮನೆಯವರ ಜತೆ ಮಾತನಾಡಿ ಸಂತಾಪ ಸೂಚಿಸಿದ್ದಾರಾ? ಮೋದಿ ಅವರು ಬೆಳಗಾವಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಂತೋಷ್ ಪಾಟೀಲ್ ಅವರ ಮನೆಗೆ ಭೇಟಿ ನೀಡಿದ್ದರೇ?” ಎಂದು ಪ್ರಶ್ನಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಡಿಕೆಶಿ ನಾಮಪತ್ರ ಅಂಗೀಕಾರ; ಕನಕಪುರದಲ್ಲಿ ಡಿ ಕೆ ಶಿವಕುಮಾರ್ ಸ್ಪರ್ಧೆ ಖಚಿತ
“ಸಂತೋಷ್ ಪಾಟೀಲ್ ಸಾವಿಗೆ ಈಶ್ವರಪ್ಪ ಕಾರಣವಲ್ಲದಿದ್ದರೆ, ಅವರನ್ನು ಸಚಿವ ಸ್ಥಾನದಿಂದ ಕೆಳಗೆ ಇಳಿಸಿದ್ದು ಯಾಕೆ? ಅವರಿಗೆ ಟಿಕೆಟ್ ಯಾಕೆ ನೀಡಲಿಲ್ಲ? ಮೋದಿ ಅವರು ಈಶ್ವರಪ್ಪ ಅವರಿಗೆ ಕರೆ ಮಾಡಿ ಪ್ರಶಂಸೆ ಮಾಡುವ ಮೂಲಕ ರಾಜ್ಯದಲ್ಲಿ 40% ಕಮಿಷನ್ ಭ್ರಷ್ಟಾಚಾರಕ್ಕೆ ಅನುಮೋದನೆ ನೀಡಿದ್ದಾರೆ. ಪ್ರಧಾನಿ ಅವರ ಈ ನಡೆ ನೋಡಿ ದೇಶದ ಪ್ರಜೆಯಾಗಿ ನನಗೆ ನಾಚಿಕೆಯಾಗುತ್ತಿದೆ” ಎಂದು ಕುಟುಕಿದ್ದಾರೆ.
“ಈ ಸರ್ಕಾರ ನಾ ಖಾವೂಂಗಾ ನಾ ಖಾನೇದೂಂಗಾ ಸರ್ಕಾರವಲ್ಲ, ಇದು 40% ಕಮಿಷನ್ ಭ್ರಷ್ಟಾಚಾರವನ್ನು ಪೋಷಿಸುತ್ತಿರುವ ಸರ್ಕಾರವಾಗಿದೆ. ಇದೇ ಕಾರಣಕ್ಕೆ ಗುತ್ತಿಗೆದಾರರ ಸಂಘ, ರುಪ್ಸಾ, ಲಿಂಗಾಯತ ಸಮುದಾಯದ ಸ್ವಾಮೀಜಿಗಳ ಭ್ರಷ್ಟಾಚಾರದ ಆರೋಪದ ಬಗ್ಗೆ ಮೋದಿ ಅವರು ಯಾವುದೇ ಮಾತನಾಡುತ್ತಿಲ್ಲ” ಎಂದಿದ್ದಾರೆ.
“ಮೋದಿ ಅವರು ಇಂದು ಭ್ರಷ್ಟಾಚಾರದ ಕಳಂಕ ಹೊತ್ತಿರುವ ಈಶ್ವರಪ್ಪ ಅವರಿಗೆ ಕರೆ ಮಾಡಿ ಪ್ರಶಂಸೆ ಮಾಡಿರುವುದು ಬಿಜೆಪಿ ಸರ್ಕಾರ ಭ್ರಷ್ಟಾಚಾರವನ್ನು ಬೆಂಬಲಿಸಲಿದೆ ಎಂಬುದಕ್ಕೆ ಸಾಕ್ಷಿ. ರಾಜ್ಯದ ಜನ ಇದನ್ನು ಕ್ಷಮಿಸುವುದಿಲ್ಲ” ಎಂದು ಸುರ್ಜೇವಾಲ ಕಿಡಿಕಾರಿದ್ದಾರೆ.