ಜೈಪುರದ ಸವಾಯಿ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಸೋಮವಾರ(ಏ.22) ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ 9 ವಿಕೆಟ್‌ಗಳ ಅಂತರದ ಭರ್ಜರಿ ಗೆಲುವು ಪಡೆಯಿತು.
ಸಂದೀಪ್ ಶರ್ಮಾ ಬೌಲಿಂಗ್(18/5) ಹಾಗೂ ಯಶಸ್ವಿ ಜೈಸ್ವಾಲ್ ಅಜೇಯ ಶತಕದ(104) ನೆರವಿನಿಂದ ಆರ್‌ಆರ್ ಟೂರ್ನಿಯಲ್ಲಿ 7ನೇ ಗೆಲುವು ದಾಖಲಿಸಿತು. 180 ರನ್‌ಗಳ ಗುರಿ ಬೆನ್ನಟ್ಟಿದ ರಾಜಸ್ಥಾನ 18.4 ಓವರ್‌ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ಈ ಪಂದ್ಯದಲ್ಲಿ ಜೈಸ್ವಾಲ್ ಹಾಗೂ ಚಾಹಲ್ ವಿನೂತನ ದಾಖಲೆ ಮಾಡಿದರು
ಐಪಿಎಲ್‌ನಲ್ಲಿ 200 ವಿಕೆಟ್ ಕಬಳಿಸಿದ ಮೊದಲ ಬೌಲರ್ ಚಾಹಲ್
ಐಪಿಎಲ್ ಇತಿಹಾಸದಲ್ಲೇ 200 ವಿಕೆಟ್ ಗಳಿಸಿದ ಮೊದಲ ಬೌಲರ್ ಎಂಬ ಖ್ಯಾತಿಗೆ ಯಜುವೇಂದ್ರ ಚಾಹಲ್ ಪಾತ್ರರಾದರು. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಮೊಹಮ್ಮದ್ ನಬಿ ವಿಕೆಟ್ ಪಡೆದ ಚಾಹಲ್ ತಮ್ಮ 153ನೇ ಪಂದ್ಯದಲ್ಲಿ ಈ ಸಾಧನೆ ಮಾಡಿದರು. ಚಾಹಲ್ ನಂತರದ ಸ್ಥಾನದಲ್ಲಿ ಡ್ವೇನ್ ಬ್ರಾವೊ 183, ಪಿಯೂಷ್ ಚಾವ್ಲಾ 182, ಭುವನೇಶ್ವರ ಕುಮಾರ್ 174 ಹಾಗೂ ಅಮಿತ್ ಮಿಶ್ರಾ 173 ಇದ್ದಾರೆ
ಈ ಸುದ್ದಿ ಓದಿದ್ದೀರಾ? ಅಂಪೈರ್ ಜೊತೆ ವಾಗ್ವಾದ: ಕೊಹ್ಲಿಗೆ ಶೇ.50 ರಷ್ಟು ದಂಡ
ಜೈಸ್ವಾಲ್ 2ನೇ ಶತಕ ಸಾಧನೆ
ಆರ್‌ಆರ್‌ನ ಉದಯೋನ್ಮುಖ ಸ್ಫೋಟಕ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್, ಐಪಿಎಲ್‌ನಲ್ಲಿ ಎರಡನೇ ಶತಕ ಗಳಿಸಿದರು. ಈ ಎರಡೂ ಶತಕಗಳು ಮುಂಬೈ ಇಂಡಿಯನ್ಸ್ ವಿರುದ್ಧವೇ ದಾಖಲಾಗಿರುವುದು ಗಮನಾರ್ಹ. 60 ಎಸೆತಗಳಲ್ಲಿ ಅಜೇಯ 104 ರನ್ ಗಳಿಸಿದ ಜೈಸ್ವಾಲ್ ತಮ್ಮ ಇನಿಂಗ್ಸ್‌ನಲ್ಲಿ ಒಂಬತ್ತು ಬೌಂಡರಿ ಹಾಗೂ ಏಳು ಸಿಕ್ಸರ್‌ಗಳು ಸೇರಿದ್ದವು. ನಾಯಕ ಸಂಜು ಸ್ಯಾಮ್ಸನ್ ಜೊತೆ ಮುರಿಯದ ಎರಡನೇ ವಿಕೆಟ್‌ಗೆ 109 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು.
ಸಂದೀಪ್ ಶರ್ಮಾ ಚೊಚ್ಚಲ ಐದು ವಿಕೆಟ್
ರಾಜಸ್ಥಾನದ 30 ವರ್ಷದ ಮಧ್ಯಮ ವೇಗಿ ಸಂದೀಪ್ ಶರ್ಮಾ, ಮೊದಲ ಬಾರಿ ಐಪಿಎಲ್‌ನಲ್ಲಿ 5 ವಿಕೆಟ್ ಪಡೆದು ಮಿಂಚಿದರು. ಕೇವಲ 18 ರನ್ ನೀಡಿ ಸಂದೀಪ್ ಐದು ವಿಕೆಟ್ ಕಬಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಟೂರ್ನಿಯಲ್ಲಿ ಇಲ್ಲಿಯವರೆಗೂ ಆಡಿರುವ ಎಂಟು ಪಂದ್ಯಗಳಲ್ಲಿ 7 ಗೆಲುವು ದಾಖಲಿಸಿರುವ ರಾಜಸ್ಥಾನ 14 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಮುಂಬೈ ಇಂಡಿಯನ್ಸ್ ಮೂರು ಗೆಲುವು, ಐದು ಸೋಲಿನೊಂದಿಗೆ ಆರು ಅಂಕ ಗಳಿಸಿದ್ದು, ಏಳನೇ ಸ್ಥಾನದಲ್ಲಿದೆ.
