ದೇಶದಲ್ಲಿ ಪ್ರತಿ ಆರು ನಿಮಿಷಗಳಿಗೊಂದು ದಲಿತರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಈ ದೌರ್ಜನ್ಯವನ್ನು ತಡೆಯಲು ಬಿಜೆಪಿ ಸರ್ಕಾರದಿಂದ ಸಾಧ್ಯವಾಗುತ್ತಿಲ್ಲ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಡಿ.ಜಿ.ಸಾಗರ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, “ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತಿರುವ ಬಿಜೆಪಿ ಮತ್ತೆ ಬ್ರಾಹ್ಮಣಶಾಹಿ ಮತ್ತು ಮನುವಾದಕ್ಕೆ ಪ್ರೋತ್ಸಾಹ ನೀಡುತ್ತಿದೆ ಎಂದರು.
“ಕೇಂದ್ರದಲ್ಲಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ನಂತರ ನಿರುದ್ಯೋಗ ಸಮಸ್ಯೆ ಉಲ್ಭಣಗೊಂಡಿದೆ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇನೆಂದು ಹೇಳಿದ್ದರು. ಆದರೆ ಉದ್ಯೋಗಗಳನ್ನು ಕಸಿದಿದ್ದಾರೆ. ಸಂವಿಧಾನ ಮತ್ತು ಮೀಸಲಾತಿಗೆ ಸ್ಫೂರ್ತಿ ನೀಡುತ್ತಿಲ್ಲ. ಸಂವಿಧಾನದ ಆಶಯಗಳನ್ನು ಕ್ರಮೇಣವಾಗಿ ಮೊಟಕುಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ” ಎಂದು ಆರೋಪಿಸಿದರು.
“ಪೆಟ್ರೋಲ್ ಬೆಲೆ ನೂರರ ಗಡಿ ದಾಟಿದೆ. ಸಿಲಿಂಡರ್ ಬೆಲೆ ಸಾವಿರ ದಾಟಿದೆ. ರಾಜ್ಯದ ಪಾಲಿನ ತೆರಿಗೆ ನೀಡಲಿಲ್ಲ. ಶ್ರಮಿಕ ವರ್ಗದವರಿಗೆ ಬೆಲೆ ಇಲ್ಲ. ಒಟ್ಟಿನಲ್ಲಿ ಸಂವಿಧಾನ ವಿರೋಧಿ ನಡೆ ಬಿಜೆಪಿ ಅನುಸರಿಸುತ್ತಿದೆ. ದೇಶ ಪ್ರಭುದ್ಧವಾಗಬೇಕು. ಜನರ ಜೀವನ ಮಟ್ಟ ಸುಧಾರಣೆ ಆಗಬೇಕಾದರೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಕು. ದಲಿತ ಸಂಘರ್ಷ ಸಮಿತಿ ಸಂಪೂರ್ಣವಾಗಿ ಕಾಂಗ್ರೆಸ್‌ಗೆ ಬೆಂಬಲ ನೀಡುತ್ತಿದೆ. ಬೀದರ್ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಾಗರ ಖಂಡ್ರೆ ಅವರನ್ನು ಗೆಲ್ಲಿಸಬೇಕು” ಎಂದು ಕೋರಿದರು.
ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಮಾರುತಿ ಬೌದ್ಧೆ ಮಾತನಾಡಿ, “ನಾನು ಜೆಡಿಎಸ್‌ನಲ್ಲಿ ಮಾಜಿ ಶಾಸಕ ಬಂಡೆಪ್ಪ ಖಾಶೆಂಪೂರ ಅವರೊಂದಿಗೆ ಉತ್ತಮ ಒಡನಾಟ ಹೋಂದಿದ್ದೇನೆ. ಆದರೆ ಜೆಡಿಎಸ್ ಸದಸ್ಯತ್ವ ಪಡೆದಿಲ್ಲ. ನನ್ನ ಧರ್ಮಪತ್ನಿ ಜೆಡಿಎಸ್‌ನಿಂದ ಜಿಪಂ ಸದಸ್ಯರಾಗಿ ಆಯ್ಕೆಯಾಗಿದ್ದರು. ಆದರೆ ನನ್ನ ಸಂಪೂರ್ಣ ಬೆಂಬಲ ಕಾಂಗ್ರೆಸ್ ಪಕ್ಷಕ್ಕಿದೆ. ಸಂವಿಧಾನದ ಆಶಯಗಳು ಉಳಿಯಬೇಕಾದರೆ ಬಿಜೆಪಿ ಸೋಲಿಸಿ, ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂದು ಪ್ರತಿಪಾದಿಸಿದರು.
ಇದೇ ಸಂದರ್ಭದಲ್ಲಿ ಸಂವಿಧಾನ, ಪ್ರಜಾಪ್ರಭುತ್ವ ವಿರೋಧಿ ಕೋಮುವಾದಿ ಪಕ್ಷಗಳನ್ನು ಧಿಕ್ಕರಿಸಿ ಜನಪರ ಚಿಂತನೆಯ ಪಕ್ಷವನ್ನು ಬೆಂಬಲಿಸಿ ಎಂಬ ಮತದಾರರ ಜಾಗೃತಿ ಕರಪತ್ರಗಳನ್ನು ಬಿಡುಗಡೆ ಮಾಡಲಾಯಿತು.
ಈ ಸುದ್ದಿ ಓದಿದ್ದೀರಾ? ಯಾದಗಿರಿ | ಈಜಲು ಹೋಗಿದ್ದ ಮೂವರು ಬಾಲಕರು ಕೆಸರಿನಲ್ಲಿ ಸಿಲುಕಿ ಸಾವು
ಸುದ್ದಿಗೋಷ್ಠಿಯಯಲ್ಲಿ ಸಮಿತಿಯ ಜಿಲ್ಲಾ ಸಂಚಾಲಕ ಅರುಣ ಪಟೇಲ್, ಜಿಲ್ಲಾ ಸಂಘಟನಾ ಸಂಚಾಲಕ ಅಶೋಕ ಗಾಯಕವಾಡ, ರಾಜು ವಾಘಮಾರೆ, ತಾಲೂಕಾ ಸಂಚಾಲಕ ರಮೇಶ ಬೆಲ್ದಾರ್, ಝರೆಪ್ಪ ವರ್ಮಾ, ರಾಹುಲ್ ಹಾಲಹಿಪ್ಪರ್ಗಾ, ಶಿವರಾಜ ತಡಪಳ್ಳಿ, ವಾಮನ್ ಮೊಸಲಗಿ, ಸತೀಶ ರತ್ನಾಕರ್ ಹಾಜರಿದ್ದರು.