ಕೆಲವರು ನಾವು ಮೋದಿ ಪರ, ಆದರೂ ಈ ಬಾರಿ ರಾಜೀವ್ ಗೌಡರ ಪರವಾಗಿ ಇರ್ತೇವೆ ಅಂತ ಹೇಳಿದ್ದಾರೆ. ಇನ್ನು ಕೆಲವರು ಏನೇ ಆದರೂ ಮೋದಿಯೇ ಬರುವುದು, ಅವರೇ ಬರಬೇಕು ಎನ್ನುತ್ತಾರೆ. ಅದಕ್ಕೆ ಕಾರಣ ಮಾತ್ರ ನಮಗೆ ತಿಳಿದಿಲ್ಲ. ಒಟ್ಟಿನಲ್ಲಿ ಅವರು ಬರಬೇಕಷ್ಟೇ ಎಂದಿದ್ದಾರೆ.
ಲೋಕಸಭೆ ಚುನಾವಣೆಗೆ ಕರ್ನಾಟಕ ಸಜ್ಜಾಗಿದೆ. ಏಪ್ರಿಲ್ 26ರಂದು ರಾಜ್ಯದ ರಾಜಧಾನಿ ಬೆಂಗಳೂರು ಸೇರಿದಂತೆ ಕೆಲವು ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ನಡೆಯಲಿದೆ. ಈ ಬಾರಿ ಬೆಂಗಳೂರು ಉತ್ತರ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿಯಿಂದ ಚಿಕ್ಕಮಗಳೂರು- ಉಡುಪಿ ಲೋಕಸಭೆ ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಸ್ಪರ್ಧಿಸಿದರೆ, ಕಾಂಗ್ರೆಸ್‌ನಿಂದ ರಾಜ್ಯಸಭಾ ಸದಸ್ಯರಾಗಿದ್ದ ಪ್ರೊಫೆಸರ್ ರಾಜೀವ್ ಗೌಡ ಅವರು ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
ದಶಕಗಳಿಂದ ಕಾಂಗ್ರೆಸ್‌ನ ಹೆಬ್ಬಾಗಿಲಾಗಿದ್ದ ಬೆಂಗಳೂರು ಉತ್ತರ ಕ್ಷೇತ್ರ 2004ರಿಂದ ಬಿಜೆಪಿ ತೆಕ್ಕೆಗೆ ಸೇರಿದೆ. 2014 ಮತ್ತು 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಡಿ ವಿ ಸದಾನಂದ ಗೌಡ ಅವರು ಈ ಕ್ಷೇತ್ರದಲ್ಲಿ ಗೆದ್ದಿದ್ದಾರೆ. ಆದರೆ ಈ ಬಾರಿ ಸದಾನಂದ ಗೌಡರಿಗೆ ಬಿಜೆಪಿ ಟಿಕೆಟ್ ಕೈತಪ್ಪಿದೆ.
ಬೆಂಗಳೂರು ಉತ್ತರದ ಬಿಜೆಪಿ ಅಭ್ಯರ್ಥಿಯನ್ನು ಘೋಷಿಸುತ್ತಿದ್ದಂತೆ “ಶೋಭಾ ಕರಂದ್ಲಾಜೆ ಅವರು ಎರಡು ಬಾರಿ ಸಂಸರಾದರೂ ಕೂಡಾ ಅವರ ಕ್ಷೇತ್ರದ ಅಭಿವೃದ್ಧಿ ಮಾಡಿಲ್ಲ. ಈ ಬಾರಿಯೂ ಸದಾನಂದಗೌಡರನ್ನೇ ನಮ್ಮ ಕ್ಷೇತ್ರದಲ್ಲಿ ಕಣಕ್ಕಿಳಿಸಿ” ಅಂತ ಬಿಜೆಪಿ ಕಾರ್ಯಕರ್ತರು ಹೇಳಿದ್ದರು. ಜೊತೆಗೆ ‘ಗೋ ಬ್ಯಾಕ್’ ಎಂದು ಭಿತ್ತಿಪತ್ರಗಳನ್ನು ಹಿಡಿದು ಬೀದಿಗಿಳಿದಿದ್ದರು. ಇದರಿಂದಾಗಿ ಈಗ ಬಿಜೆಪಿ ಭದ್ರಕೋಟೆಯನ್ನು ಉಳಿಸಿಕೊಳ್ಳೋದು ಶೋಭಾ ಕರಂದ್ಲಾಜೆ ಅವರಿಗೆ ಕಠಿಣ ಸವಾಲಾಗಿದೆ.
ಇದನ್ನು ಓದಿದ್ದೀರಾ? ‘ಈ ದಿನ’ ಸಮೀಕ್ಷೆ | ಗ್ಯಾರಂಟಿ ಯೋಜನೆ ಬೆಂಬಲಿಸಿ ಕಾಂಗ್ರೆಸ್‌ಗೆ ಮತ ಹಾಕ್ತೀರಾ, ಜನರು ಹೇಳೋದೇನು?
ಇನ್ನೊಂದೆಡೆ ಕಾಂಗ್ರೆಸ್‌ನಿಂದ ಸ್ಪರ್ಧಿಸುತ್ತಿರುವ ಎಂ ವಿ ರಾಜೀವ್ ಗೌಡ ಅವರಿಗೆ ಈ ಚುನಾವಣಾ ರಾಜಕೀಯ ಹೊಸತು. ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಸೂಕ್ತ ಅಭ್ಯರ್ಥಿಯ ಹುಡುಕಾಟದಲ್ಲಿದ್ದ ಕಾಂಗ್ರೆಸ್ ಪ್ರೊಫೆಸರ್‌ಗೆ ಟಿಕೆಟ್ ನೀಡಿ ಜನರನ್ನು ಸೆಳೆಯಲು ಮುಂದಾಗಿದೆ. ಇನ್ನೊಂದೆಡೆ ಕಾಂಗ್ರೆಸ್‌ಗೆ ಗ್ಯಾರಂಟಿ ಯೋಜನೆ ಲಾಭ ನೀಡುವ ಸಾಧ್ಯತೆಯಿದೆ.
ಸದ್ಯ ಕ್ಷೇತ್ರದಲ್ಲಿ ಮತದಾರರ ಒಲವು ಯಾರ ಕಡೆಗಿದೆ ಎಂಬ ಬಗ್ಗೆ ತಿಳಿಯಲು ಖುದ್ದು ಈ ದಿನ.ಕಾಮ್ ಫೀಲ್ಡ್‌ಗೆ ಇಳಿದು ಸಮೀಕ್ಷೆ ನಡೆಸಿದೆ.
ಕಾಂಗ್ರೆಸ್ ಗ್ಯಾರಂಟಿಯಿಂದಾಗಿ ನಮಗೆ ಸಹಾಯವಾಗಿದೆ. ಹಾಗಾಗಿ ನಾವು ಕಾಂಗ್ರೆಸ್‌ಗೆ ಪರವಾಗಿ ಎಂದು ಕೆಲವರು ಹೇಳಿದರೆ. ಇನ್ನು ಕೆಲವರು ನಮಗೆ ರಾಜ್ಯದಲ್ಲಿ ಕಾಂಗ್ರೆಸ್ ಬರಬೇಕು, ಆದರೆ ಕೇಂದ್ರದಲ್ಲಿ ಮೋದಿ ಅವರೇ ಬರಬೇಕು ಎಂದಿದ್ದಾರೆ. ಇನ್ನೂ ಕೆಲವರು ನಾವು ವ್ಯಕ್ತಿತ್ವ ನೋಡಿ ಮತ ಹಾಕುವುದು ಎಂದು ಹೇಳಿದ್ದಾರೆ.
ಇನ್ನು ಕೆಲವರು ನಾವು ಮೋದಿ ಪರವಾಗಿ ಆದರೂ ಕೂಡ ಈ ಬಾರಿ ರಾಜೀವ್ ಗೌಡರ ಪರವಾಗಿ ಇರ್ತೇವೆ ಅಂತ ಹೇಳಿದ್ದಾರೆ. ಇನ್ನು ಏನೇ ಆದರೂ ಮೋದಿ ಅವರೇ ಬರುವುದು, ಅವರೇ ಬರಬೇಕು ಎನ್ನುವವರು, ಅದಕ್ಕೆ ಕಾರಣ ಮಾತ್ರ ನಮಗೆ ತಿಳಿದಿಲ್ಲ. ಒಟ್ಟಿನಲ್ಲಿ ಅವರು ಬರಬೇಕಷ್ಟೇ ಎಂದಿದ್ದಾರೆ.
ಜನರು ಹೇಳುವುದು ಏನು?
ಈ ಬಗ್ಗೆ ಈದಿನ.ಕಾಮ್ ಜೊತೆ ಮಾತನಾಡಿದ ದಾಸರಹಳ್ಳಿ ನಿವಾಸಿ, ಗೃಹಿಣಿ ಸೌಮ್ಯ ಅವರು “ನಾವು ಹಿಂದಿನಿಂದಲೇ ಕಾಂಗ್ರೆಸ್ ಪರವಾಗಿ ಇರುವವರು. ನಮಗೆ ಕಾಂಗ್ರೆಸ್‌ನಿಂದ ಸಹಾಯವಾಗಿದೆಯೇ ಹೊರತು ಬಿಜೆಪಿಯಿಂದ ಯಾವುದೇ ಸಹಾಯವಾಗಿಲ್ಲ. ನಮ್ಮಂತಹ ಬಡಕುಟುಂಬಕ್ಕೆ ಕಾಂಗ್ರೆಸ್‌ನಿಂದ ತುಂಬಾ ಸಹಾಯ ಆಗಿದೆ. ಗೃಹಲಕ್ಷ್ಮೀಯಿಂದ ನಮಗೆ ತುಂಬಾ ಸಹಾಯ ಆಗಿದೆ. ಈಗ ಕೇಂದ್ರದಲ್ಲಿಯೂ ಬಿಜೆಪಿ ಬಂದರೆ ಅವರೂ ನಮಗೆ ಸಹಾಯ ಮಾಡುತ್ತಾರೆ. ಅದಕ್ಕಾಗಿ ನಾವು ಕಾಂಗ್ರೆಸ್ ಗೆಲ್ಲಲು ಮತ ಹಾಕುತ್ತೇವೆ” ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಈದಿನ ಸಮೀಕ್ಷೆ | ಕಳೆದ 10 ವರ್ಷಗಳಲ್ಲಿ ನಿರುದ್ಯೋಗ ಹೆಚ್ಚಳಕ್ಕೆ ಬಿಜೆಪಿಯೇ ಕಾರಣ!
ಈ ಬಗ್ಗೆ ಈ ದಿನ.ಕಾಮ್ ಜೊತೆ ಮಾತನಾಡಿದ ಆಟೋ ಚಾಲಕ ಬಾಬು ಅವರು, “ಬೆಂಗಳೂರಿನಲ್ಲಿರುವ ಎಲ್ಲರೂ ಕಡುಬಡವರು. ಅವರಿಗೆ ಗ್ಯಾರಂಟಿ ಯೋಜನೆಗಳಿಂದ ಅನುಕೂಲ ಆಗುತ್ತಿದೆ. ಸಿದ್ಧರಾಮಯ್ಯ ಸರ್ಕಾರದಿಂದ ಹೊಟ್ಟೆ ಬಟ್ಟೆಗೆ ತೊಂದರೆ ಇಲ್ಲ. ಮೋದಿ ಬೆಂಗಳೂರಿನಲ್ಲಿ ಇರಲ್ಲ. ಬೆಂಗಳೂರಿನಲ್ಲಿನ ಜನರ ದುಃಖ ಸುಖ ನೋಡುವವರಿಗೆಯೇ ನಾವು ಮತ ಹಾಕಬೇಕು. ಅವರನ್ನು ಬಿಟ್ಟು ಬೇರೆಯವರಿಗೆ ಮತ ಹಾಕಬೇಕು ಅನ್ನುವುದು ಸರಿಯಲ್ಲ. ಮೋದಿ ಸರ್ಕಾರ ಬಂದು ಲಾಕ್‌ಡೌನ್ ಆಯ್ತು. ಎಷ್ಟು ಜನರು ಸತ್ತು ಹೋದರು. ಯಾರೂ ಕೂಡಾ ಅವಿದ್ಯಾವಂತರು ಇಲ್ಲ. ಎಲ್ಲರೂ ಓದಿದ್ದಾರೆ. ಆದ್ದರಿಂದ ಕಾಂಗ್ರೆಸ್ ಸರ್ಕಾರ ಬಂದರೆ ಅನುಕೂಲವಾಗುತ್ತದೆ” ಎಂದು ಅಭಿಪ್ರಾಯಿಸಿದ್ದಾರೆ.
ಇನ್ನು ಯಶವಂತಪುರ ನಿವಾಸಿ ಯೋಗೇಶ್ ಗೌಡ ಅವರು, “ಬೆಂಗಳೂರು ಉತ್ತರದಲ್ಲಿ ಏನೇ ಆದರೂ ಕೂಡಾ ಬಿಜೆಪಿ-ಜೆಡಿಎಸ್ ಜೊತೆಯಾಗಿ ಮುಂದಿದೆ ಅನಿಸುತ್ತಿದೆ. ಯಾಕೆ ಅಂತ ನಮಗೆ ಹೇಳಲು ಆಗಲ್ಲ. ಇಲ್ಲಿ ಯಾರೂ ನಾಯಕರು ಇಲ್ಲ, ಬರೀ ಕೇಂದ್ರದಲ್ಲಿರುವ ಮೋದಿ ಹೆಸರಿನಲ್ಲಿ ಬಿಜೆಪಿ ಬರುತ್ತಿದೆ. ಎಲ್ಲ ಕಡೆಯೂ ಪರ ವಿರೋಧ ಇರುತ್ತಾರೆ. ಯಾರೇ ಗೋ ಬ್ಯಾಕ್, ಕಮ್ ಇನ್ ಅಂದರೂ ಕೂಡಾ ಚುನಾವಣೆ ಬಳಿಕ ಒಬ್ಬರೂ ಮಾತ್ರ ಗೆಲ್ಲೋದು” ಎಂದಿದ್ದಾರೆ.
“ನಾವು ಕಾಂಗ್ರೆಸ್ ಪರವೂ ಅಲ್ಲ ಬಿಜೆಪಿ ಪರವೂ ಅಲ್ಲ. ನಮಗೆ ಯಾರು ಒಳ್ಳೆಯ ಕೆಲಸ ಮಾಡುತ್ತಾರೋ ಅವರು ನಮಗೆ ಬೇಕು. ಈಗ ಕರಂದ್ಲಾಜೆ ಅವರು ಇಲ್ಲಿ ಸ್ಪರ್ಧಿಸುತ್ತಿದ್ದಾರೆ. ಅವರು ತಮ್ಮ ಕ್ಷೇತ್ರದಲ್ಲಿ ಏನು ಮಾಡಿದ್ದಾರೆ?. ಮೊದಲೆಲ್ಲ ಚೆನ್ನಾಗಿತ್ತು. ಆದರೆ ಈ ಬಾರಿ ಇದ್ದವರು (ಸದಾನಂದ ಗೌಡ) ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ” ಎಂದು ಮಲ್ಲೇಶ್ವರಂ ನಿವಾಸಿ ಅಬ್ದುಲ್ಲಾ ಹೇಳಿದ್ದಾರೆ.
ಇದನ್ನು ಓದಿದ್ದೀರಾ? ʼಈ ದಿನʼ ಸಮೀಕ್ಷೆ | ಮೋದಿ ಮಣಿಸಲಿದೆಯೇ ಮಹಿಳೆಯರಿಗೆ ₹1 ಲಕ್ಷ ಸಹಾಯಹಸ್ತದ ಕಾಂಗ್ರೆಸ್ ‘ಮಹಾಲಕ್ಷ್ಮಿ’ ಗ್ಯಾರಂಟಿ?
“ನಾವು ಕಾಂಗ್ರೆಸ್‌ನ ರಾಜೀವ್ ಗೌಡರ ಪರವಾಗಿದ್ದೇವೆ. ಅವರು ಒಳ್ಳೆಯ ವ್ಯಕ್ತಿ. ಬಡಬಗ್ಗರಿಗೆ ಕಾಂಗ್ರೆಸ್‌ನಿಂದ ಒಳ್ಳೆಯದಾಗುತ್ತದೆ. ಮಹಿಳೆಯರಿಗೆ ಒಳ್ಳೆಯದಾಗುತ್ತದೆ. ಮಹಿಳೆಯರಿಗೆ ಬಸ್‌ನಲ್ಲಿ ಉಚಿತ ಪ್ರಯಾಣ ನೀಡಿದ್ದಾರೆ, ವಿದ್ಯುತ್ ಉಚಿತ ನೀಡಿದ್ದಾರೆ, ಗೃಹಲಕ್ಷ್ಮೀ ಮೂಲಕ ಎರಡು ಸಾವಿರ ನೀಡುತ್ತಿದ್ದಾರೆ. ಮುಂದೆ ಕೇಂದ್ರ ಸರ್ಕಾರದಲ್ಲಿ ಕಾಂಗ್ರೆಸ್ ಬಂದರೆ ಒಂದು ಲಕ್ಷ ಕೊಡುತ್ತೇವೆ ಎಂದಿದ್ದಾರೆ. ಅಷ್ಟೆಲ್ಲ ಸೌಕರ್ಯ ನಮಗೆ ಇರುವಾಗ ಕಾಂಗ್ರೆಸ್ ಕಡೆ ನಮ್ಮ ಒಲವು” ಎಂದು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಮತದಾರ ರಾಜು ತಿಳಿಸಿದ್ದಾರೆ.
“ಇಲ್ಲಿ ಕಾಂಗ್ರೆಸ್ ಕಡೆ ಒಲವು ಹೆಚ್ಚು. ಇಲ್ಲಿ ಕಾಂಗ್ರೆಸ್‌ನವರು ಒಳ್ಳೆಯ ಕೆಲಸ ಮಾಡಿದ್ದಾರೆ. ಸಿದ್ಧರಾಮಯ್ಯ ಅವರ ಸರ್ಕಾರದಿಂದ ಜನರಿಗೆ ಒಳ್ಳೆಯ ಕೆಲಸಗಳನ್ನು ಮಾಡಲಾಗಿದೆ, ಮುಂದೆಯೂ ಆಗಲಿದೆ ಎಂಬ ಭರವಸೆಯಿದೆ. ಗ್ಯಾರಂಟಿ ಯೋಜನೆಯಿಂದ ಅನುಕೂಲವಾಗಿದೆಯೇ ಹೊರತು ಅನಾನುಕೂಲ ಆಗಿಲ್ಲ. ಸಿದ್ಧರಾಮಯ್ಯ ಅವರ ಸರ್ಕಾರದ ಮೇಲಿನ ನಂಬಿಕೆಯಿಂದ ನಾವು ಲೋಕಸಭೆ ಚುನಾವಣೆಯಲ್ಲಿಯೂ ಕಾಂಗ್ರೆಸ್ ಅನ್ನು ಬೆಂಬಲಿಸುವುದು” ಎಂದು ದಾಸರಹಳ್ಳಿ ನಿವಾಸಿ ಬಾಬು ಹೇಳಿದ್ದಾರೆ.
“ಇಲ್ಲಿ ಶಾಸಕರಾಗಿರುವ ಬಿಜೆಪಿಯ ಅಶ್ವತ್ಥ ನಾರಾಯಣ ಅವರೂ ಚೆನ್ನಾಗಿ ಕೆಲಸ ಮಾಡಿದ್ದಾರೆ. ಹಾಗಾಗಿ ಇಲ್ಲಿ ಲೋಕಸಭೆ ಚುನಾವಣೆಯಲ್ಲಿಯೂ ಬಿಜೆಪಿಯೇ ಬರಬಹುದು. ಕರ್ನಾಟಕ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಯಲ್ಲಿ ಎರಡು ಸಾವಿರ ಬರುತ್ತಿದೆ, ಅಕ್ಕಿಯೂ ಸಿಗುತ್ತಿದೆ. ಆದರೂ ಕೂಡಾ ನಾವು ಮೋದಿಯ ಪರವಾಗಿ” ಎಂದು ಮಲ್ಲೇಶ್ವರಂ ನಿವಾಸಿ ವಿದ್ಯಾ ಅವರು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ʼಈ ದಿನʼ ಸಮೀಕ್ಷೆ | ಪರಿಶಿಷ್ಟರಿಗೆ ಬೇಡವಾದ ಬಿಜೆಪಿ; ಏನು ಹೇಳುತ್ತವೆ ಅಂಕಿ- ಅಂಶ?
“ನಾನು ಮೂರು ಬಾರಿ ಎಂಎಲ್‌ಎ, ಎರಡು ಬಾರಿ ಎಂಪಿ ಚುನಾವಣೆಗೆ ನಾನು ಮತ ಹಾಕಿದ್ದೇನೆ. ನಾವು ಕಾಂಗ್ರೆಸ್, ಬಿಜೆಪಿ ಪರ ಅಂತ ಇಲ್ಲ. ಆದರೆ ಕಾಂಗ್ರೆಸ್ ಬಂದರೆ ಬಡವ ಬಗ್ಗರಿಗೆ ಕೆಲವೊಂದು ಯೋಜನೆಗಳನ್ನು ನೀಡಿದ್ದಾರೆ. ಮೋದಿಯವರು ಕೆಟ್ಟವರು, ಒಳ್ಳೆಯವರು ಎಂದು ನಾವು ಹೇಳುವುದಿಲ್ಲ. ಆದರೆ ಅವರು ಯುವಕರಿಗೆ ಉದ್ಯೋಗ ನೀಡಿಲ್ಲ, ಪೆಟ್ರೋಲ್, ಗ್ಯಾಸ್ ಬೆಲೆ ಹೆಚ್ಚು ಮಾಡಿದ್ದಾರೆ. ರೈತರಿಗೂ ಮೋದಿ ಏನು ಮಾಡಿಲ್ಲ. ಜಿರೋ ಅಕೌಂಟ್ ಮಾಡಲು ಹೇಳಿದ್ರು ಆದರೆ ನಮಗೆ ದುಡ್ಡೇ ಹಾಕಿಲ್ಲ. ಕಾಂಗ್ರೆಸ್ ಸರ್ಕಾರ ಬಡವರಿಗೆ ಸಹಾಯ ಮಾಡಿದೆ. ಶೋಭಾ ಇಲ್ಲಿಯವರು ಅಲ್ಲ. ರಾಜೀವ್ ಗೌಡ ಅವರು ವಿದ್ಯಾವಂತರು. ನಾವು ಎರಡು ಬಾರಿ ಸದಾನಂದ ಗೌಡರನ್ನು ಗೆಲ್ಲಿಸಿದೆವು. ಆದರೆ ಅವರು ಯಾವುದೇ ನಮಗೆ ಏನು ಮಾಡಿಲ್ಲ” ಎಂದು ದಾಸರಹಳ್ಳಿಯ ಕುಮಾರು ಹೇಳಿದ್ದಾರೆ.
“ಮೋದಿ ಅವರೇ ಬರಬೇಕು. ಅವರು ಕೇಂದ್ರದಲ್ಲಿ ಬಂದರೆಯೇ ನಮ್ಮ ದೇಶ ಉದ್ಧಾರ ಆಗುವುದು. ನನಗೂ ಗ್ಯಾರಂಟಿ ಯೋಜನೆಯ ಎರಡು ಸಾವಿರ ರೂಪಾಯಿ ಬರುತ್ತಿದೆ. ಆದರೆ ಮೋದಿಯವರೇ ಬರಬೇಕು” ಎಂದು ಅನ್ತಾರೆ ಮಲ್ಲೇಶ್ವರಂ ನಿವಾಸಿ ನೇತ್ರಾ.
“ನಮ್ಮ ದೇಶದ ಹಿತಾದೃಷ್ಟಿಯಿಂದ ನಾವು ಮತದಾನ ಮಾಡಬೇಕು. ಕೇಂದ್ರದಲ್ಲಿ ಮೋದಿ ಅವರು ಬರಬೇಕು ಎಂಬುವುದು ನಮ್ಮ ಅಭಿಪ್ರಾಯ. ಆದರೆ ಸ್ಥಳೀಯವಾಗಿ ನಮ್ಮ ಅಭಿಪ್ರಾಯ ಬದಲಾಗುತ್ತದೆ. ಇಲ್ಲಿ ಶೋಭಾ ಕರಂದ್ಲಾಜೆ ಅವರು ಏನೂ ಮಾಡಿಲ್ಲ. ಹಾಗಾಗಿ ರಾಜೀವ್ ಗೌಡ ಅವರೇ ಬರುತ್ತಾರೆ. ಪಕ್ಷ ಮುಖ್ಯವಲ್ಲ ನಮಗೆ ವ್ಯಕ್ತಿತ್ವ ಮುಖ್ಯ. ಹಾಗಾಗಿ ರಾಜೀವ್ ಗೌಡರು ಈ ಬಾರಿ ಗೆಲ್ಲಬೇಕು ಎಂಬುವುದು ನಮ್ಮ ಅಭಿಪ್ರಾಯ” ಎಂದು ಹೇಳ್ತಾರೆ ಆಟೋ ಚಾಲಕ ರವಿ.
“ನಾವು ಬಿಜೆಪಿ ಬೆಂಬಲಿಗರಾಗಿದ್ದೆವು. ಆದರೆ ನಮಗೆ ಬಿಜೆಪಿಯಿಂದ ಯಾವುದೇ ಸಹಾಯ ಆಗಿಲ್ಲ. ಆದ್ದರಿಂದ ನಾವು ಈಗ ಕಾಂಗ್ರೆಸ್ ಪರವಾಗಿ ಇದ್ದೇವೆ. ಇಲ್ಲಿ ಶೋಭಾ ಮೇಡಂ ಅವರಿಗೆ ಬಿಜೆಪಿ ಟಿಕೆಟ್ ಕೊಟ್ಟ ಕಾರಣ ಇಲ್ಲಿ ಬಿಜೆಪಿ ಪರವಾಗಿ ಜನರಿಲ್ಲ. ವಿದ್ಯಾವಂತರಾದ ಕಾಂಗ್ರೆಸ್ ಪರವಾಗಿದ್ದಾರೆ” ಎಂದು ರಾಜಾಜಿನಗರದ ನರೇಶ್ ಹೇಳಿದ್ದಾರೆ.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.