ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಒಳಮೀಸಲಾತಿ ಹೆಸರಿನಲ್ಲಿ ದಲಿತರೊಂದಿಗೆ ಮೋಸದಾಟ ಆಡುತ್ತಿದೆ ಎಂದು ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಕ್ಕೂಟದ ಅಧ್ಯಕ್ಷ ಬಸವರಾಜ ಕೌತಾಳ ಆರೋಪಿಸಿದರು.
ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಕ್ಕೂಟದ ವತಿಯಿಂದ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, “ಸಂವಿಧಾನಬದ್ಧ ಮೀಸಲಾತಿ ವರ್ಗೀಕರಣಕ್ಕಾಗಿ ಮಾದಿಗ ಸಮುದಾಯ 30 ವರ್ಷಗಳಿಂದ ಹೋರಾಟ ಮಾಡಿಕೊಂಡು ಬರುತ್ತಿದೆ. ಆದರೆ, ಬಿಜೆಪಿ ಸಂಸದರು ಒಂದು ದಿನವೂ ಸಂಸತ್ತಿನಲ್ಲಿ ಮೀಸಲಾತಿ ಬಗ್ಗೆ ಮಾತನಾಡಿಲ್ಲ. ನರೇಂದ್ರ ಮೋದಿಯವರು ಒಳಮೀಸಲಾತಿ ಬಗ್ಗೆ ಒಂದೇ ಒಂದು ಮಾತನಾಡಿಲ್ಲ. ಆದರೆ, ತೆಲಂಗಾಣದ ಚುನಾವಣೆಯ ಲಾಭ ಪಡೆಯಲು ವಿಶ್ವರೂಪಂ ಸಮಾವೇಶಕ್ಕೆ ಬಂದು ನಾಟಕ ಮಾಡಿದರೇ ಹೊರತು ಅಲ್ಲಿಯೂ ವರ್ಗಿಕರಣ ನಾನು ಮಾಡೇ ಮಾಡುತ್ತೇನೆ ಎಂದು ಒಮ್ಮೆಯೂ ಬಾಯಿ ಬಿಡಲಿಲ್ಲ. ಇಂತಹ ಪಕ್ಷವನ್ನು ಮಾದಿಗ, ಛಲವಾದಿ, ತ್ರಿಮಸ್ಥ ಸೇರಿದಂತೆ ಎಲ್ಲಾ ದಲಿತರು ತಿರಸ್ಕರಿಸಬೇಕು” ಎಂದು ತಿಳಿಸಿದರು.
2008ರಲ್ಲಿ ಯುಪಿಎ ಸರ್ಕಾರ ನೇಮಿಸಿದ್ದ ಜಸ್ಟೀಸ್ ಉಷಾ ಮೆಹ್ರಾ ಸಮಿತಿ ಮೀಸಲಾತಿ ವರ್ಗಿಕರಣಕ್ಕೆ ಸಂವಿಧಾನದ ತಿದ್ದುಪಡಿ ಅಗತ್ಯ ಎಂದು ವಾದಿಸಿ ಸಮಗ್ರವಾದ ರಾಷ್ಟ್ರಮಟ್ಟದ ವರದಿ ಸಲ್ಲಿಸಿತ್ತು. ಈ ಶಿಫಾರಸ್ಸು ಇದ್ದರೂ ಮೋದಿ ಸರ್ಕಾರ ಸಂವಿಧಾನ ತಿದ್ದುಪಡಿ ಮಾಡಲಿಲ್ಲ. ಬದಲಿಗೆ ಇನ್ನೊಂದು ಸಮಿತಿ ರಚಿಸಿದ್ದು ವಂಚಿತ ಸಮುದಾಯಗಳಿಗೆ ಮಾಡಿದ ಮೋಸವಲ್ಲದೆ ಮತ್ತೇನು ಇಲ್ಲ. ಈಗಿನ ಸಮಿತಿಯಲ್ಲಿ ಮೀಸಲಾತಿ ವರ್ಗೀಕರಣ ಕುರಿತು ಪ್ರಸ್ತಾಪ ಇಲ್ಲದಿರುವುದು ದಲಿತರೊಂದಿಗೆ ಆಡುತ್ತಿರುವ ಮೋಸದಾಟವಾಗಿದೆ ಎಂದರು.
“ಶೇ. 3ರಷ್ಟಿರುವ ಬ್ರಾಹ್ಮಣ ಬನಿಯಾಗಳಿಗೆ ಸಂವಿಧಾನ ತಿದ್ದುಪಡಿ ಮಾಡುವ ಮೂಲಕ ಇಡಬ್ಲೂ ಎಸ್ ಹೆಸರಿನಲ್ಲಿ ಶೇ. 10ರಷ್ಟು ಮೀಸಲಾತಿ ನೀಡಲು ಕೇವಲ ಒಂದು ವಾರವಷ್ಟೇ ಬಿಜೆಪಿಗೆ ಸಾಕಾಯಿತು. 30 ವರ್ಷ ನಾವು ಹೋರಾಟ ಮಾಡಿದ್ದರೂ ನಮ್ಮ ಹೋರಾಟಕ್ಕೆ ಬೆಲೆ ಇಲ್ಲದಂತಾಗಿದೆ” ಎಂದು ಅಸಮಾಧಾನ ಹೊರಹಾಕಿದರು.
ಒಕ್ಕೂಟದ ಮುಖಂಡ ಚಂದ್ರಕಾಂತ ಹಿಪ್ಪಳಗಾಂವೆ ಮಾತನಾಡಿ, “ಕೇಂದ್ರ ಸಚಿವ ಭಗವಂತ ಖೂಬಾ ಅವರಿಗೆ 10 ವರ್ಷಗಳ ಕಾಲ ಜನರು ನೋಡಿ ಬೇಸತ್ತಿದ್ದಾರೆ. ಅವರಿಂದ ಯಾವುದೇ ಹೇಳಿಕೊಳ್ಳುವಂಥ ಅಭಿವೃದ್ಧಿ ಕಾರ್ಯಗಳಾಗಲಿಲ್ಲ. ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಸಾಗರ ಈಶ್ವರ ಖಂಡ್ರೆಯವರನ್ನು ಆರಿಸಿ ತರೋಣ. ಯುವಕರು ಹಾಗೂ ಉತ್ಸಾಹಿಗಳಾಗಿರುವ ಸಾಗರ ಖಂಡ್ರೆ ಅತಿ ಚಿಕ್ಕ ವಯಸ್ಸಿನ ಸಂಸದರೆಂದು ಎನಿಸಿಕೊಂಡು ಜಿಲ್ಲೆಗೆ ಕೀರ್ತಿ ತರಬೇಕಾದರೆ ಎಲ್ಲಾ ದಲಿತ ವರ್ಗಗಳ ಮತ ಅವರಿಗೆ ಬೀಳಬೇಕು” ಎಂದರು.
“ನಮ್ಮ ದಲಿತ ಸಮಾಜ ಅವರ ಬೆನ್ನಿಗಿದೆ. ಪರಿಶಿಷ್ಟರಲ್ಲಿನ 101 ಸಮುದಾಯಗಳಲ್ಲಿ ಮಾದಿಗರು, ಛಲವಾದಿ, ಅಲೆಮಾರಿ, ತ್ರಿಮಸ್ಥರು ಒಗ್ಗಟ್ಟಾಗಿ ಬಾಬಾ ಸಾಹೇಬರ ಸಂವಿಧಾನದ ಆಶಯ ಗಟ್ಟಿಗೊಳಿಸಲು ಕಾಂಗ್ರೆಸ್‌ಗೆ ಮತ ನೀಡಿ ಎಂದರಲ್ಲದೆ ನಮ್ಮ ಒಳಮಿಸಲಾತಿಗೆ ದ್ರೋಹ ಮಾಡಿದ ಬಿಜೆಪಿ ಹಾಗೂ ಆರ್‌ಎಸ್‌ಎಸ್ ಗೆ ಸೋಲಿಸಲು ನಾವೆಲ್ಲರೂ ಒಮ್ಮತದಿಂದ ಸಾಗಬೇಕಾಗಿದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಬಿಜೆಪಿಯಿಂದ ಸಂವಿಧಾನ ಆಶಯಗಳು ಬುಡಮೇಲು : ಡಿ.ಜಿ.ಸಾಗರ್
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಬಕ್ಕಪ್ಪ ದಂಡೀನ್, ಬಾಬುರಾವ ಕೌಠಾ ಹಾಜರಿದ್ದರು.