ಬಿಜೆಪಿ ಪ್ರಜಾಪ್ರಭುತ್ವ, ಸಾಮಾಜಿಕ ನ್ಯಾಯ ಮತ್ತು ಸಂವಿಧಾನ ವಿರೋಧಿಯಾಗಿದೆ. ದೇಶದಲ್ಲಿ ಮೀಸಲಾತಿ ವ್ಯವಸ್ಥೆಯನ್ನು ಬುಡಮೇಲುಗೊಳಿಸಿ, ಸಿರಿವಂತ ಜಾತಿಗಳಿಗೆ ದೇಶದ ಸರ್ವ ಸಂಪತ್ತನ್ನು ಧಾರೆ ಎರೆಯಲು ಗುಪ್ತ ಕಾರ್ಯಸೂಚಿಯನ್ನು ಹೊಂದಿದ್ದಾರೆ. ಬಿಜೆಪಿ ಮತ್ತೇ ಅಧಿಕಾರಕ್ಕೆ ಬಂದರೆ ಪ್ರಜಾಪ್ರಭುತ್ವ, ಸಂವಿಧಾನಕ್ಕೆ ಅಪಾಯ ಒದಗುವುದು ಶತಃಸಿದ್ದ ಎಂದು ಸಮಾನ ಮನಸ್ಕ ದಲಿತ ಸಂಘರ್ಷ ಸಮಿತಿಗಳ ಮಹಾ ಒಕ್ಕೂಟದ ಸಂಚಾಲಕ ಮಂಜುನಾಥ್ ಗಿಳಿಯಾರ್ ಹೇಳಿದರು.
ಉಡುಪಿಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು. ದೇಶದಲ್ಲಿ ಬಡವರು ಜನಸಾಮಾನ್ಯರು ದಿನಂಪ್ರತಿ ಬಳಸುವ ಆಹಾರ-ಪದಾರ್ಥಗಳ ಬೆಲೆ ಗಗನಕ್ಕೇರಿದೆ. ವೈದ್ಯಕೀಯ ಸೇವೆ, ಶಿಕ್ಷಣ ಮತ್ತು ಅಗತ್ಯ ಸೇವೆಗಳು ದುಬಾರಿಯಾಗಿದೆ. ಶ್ರಮಿಕವರ್ಗ, ಸಾಮಾಜಿಕ ಭದ್ರತೆಯಲ್ಲಿದೆ ಹಿಂದೆಂದಿಗಿಂತಲೂ ಆತಂಕದಲ್ಲಿ ದಿನ ದೂಡುತ್ತಿದ್ದಾರೆ, ಕೇಂದ್ರ ಸರ್ಕಾರವು ತನ್ನ ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಣಗೊಳಿಸಿ, ಮೀಸಲಾತಿ ವ್ಯವಸ್ಥೆ ಕನ್ನಡಿಯೊಳಗಿನ ಗಂಟಿನಂತಾಗಿಸಿದೆ. ಸಮುದಾಯಕ್ಕೆ ನ್ಯಾಯಬದ್ಧವಾಗಿ ಸಿಗಬೇಕಾಗಿದ್ದ ಲಕ್ಷಾಂತರ ಸರಕಾರಿ ಉದ್ಯೋಗವನ್ನು ಆ ಮೂಲಕ ಕಿತ್ತುಕೊಳ್ಳಲಾಗಿದೆ ಎಂದರು.
ದೇಶದಲ್ಲಿ ದಲಿತರ ಮೇಲಿನ ದೌರ್ಜನ್ಯಗಳು 2 ಪಟ್ಟು ಹೆಚ್ಚಾಗಿದೆ. ದಲಿತ ಹೆಣ್ಣು ಮಕ್ಕಳು ಮತ್ತು ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಕಳೆದ 10 ವರ್ಷಗಳಲ್ಲಿ ಗಣನೀಯವಾಗಿ ಏರಿಕೆ ಕಂಡಿದೆ. ಇಂತಹ ಪ್ರಕರಣಗಳಲ್ಲಿ ಅಪರಾಧಿಗಳು ಮೇಲು ಜಾತಿಗೆ ಸೇರಿದವರಾಗಿದ್ದಲ್ಲಿ, ಅವರಿಗೆ ರಕ್ಷಣೆ ನೀಡಿ, ಶಿಕ್ಷೆಯಿಂದ ಅವರನ್ನು ಪಾರು ಮಾಡಲಾಗುತ್ತಿದೆ ಎಂದರು.
ದಲಿತ ಸಮುದಾಯದ, ಮಹಿಳೆಯರು ಮತ್ತು ಹಿಂದುಳಿದ ವರ್ಗಗಳಿಗೆ ಸಮಾನ ಅವಕಾಶ ಕಲ್ಪಿಸಿರುವ ದೇಶದ ಸಂವಿಧಾನವನ್ನು ಬದಲಾಯಿಸಿ, ಸ್ಥಾಪಿತ ಹಿತಾಸಕ್ತಿಗಳ ಪರವಾಗಿರುವ ಸಂವಿಧಾನವನ್ನು ಜ್ಯಾರಿಗೊಳಿಸಲು ಬಿ.ಜೆ.ಪಿ ಬದ್ಧವಾಗಿದೆ ಎಂದು ಆ ಪಕ್ಷದ ಅನೇಕ ಮಂತ್ರಿಗಳು, ಲೋಕಸಭಾ ಸದಸ್ಯರುಗಳು ಮತ್ತು ಪಕ್ಷದ ಪದಾಧಿಕಾರಿಗಳು ಬಹಿರಂಗ ಹೇಳಿಕೆ ನೀಡುತ್ತಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಗೆದ್ದು ಅಧಿಕಾರ ಹಿಡಿದರೆ ಈ ದೇಶದ ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ ಆಪಾಯ ಒದಗುವುದು ಶತಃಸಿದ್ದ ಎಂದರು.
ಇಂತಹ ಬಿ.ಜೆ.ಪಿ ಪಕ್ಷವನ್ನು ಈ ಲೋಕಸಭಾ ಚುನಾವಣೆಯಲ್ಲಿ ಸೋಲಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಆಗಿದೆ. ಪ್ರಜ್ಞಾವಂತ ಮತದಾರರು ಈ ಬಾರಿ ಸಂವಿಧಾನ ವಿರೋಧಿ ಬಿಜೆಪಿ ಪಕ್ಷದ ಅಭ್ಯರ್ಥಿಗಳಿಗೆ ಮತ ಹಾಕಬಾರದು ಎಂದು ಸಂಘಟನೆಯು ಆಗ್ರಹಿಸುತ್ತದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ಪ್ರಧಾನ ಸಂಚಾಲಕ ಸುಂದರ್ ಮಾಸ್ಟರ್, ಅಣ್ಣಪ್ಪ ನಕ್ರೆ, ವಿಶ್ವನಾಥ್ ಬೆಳ್ಳಂಪಳ್ಳಿ, ಕುಮಾರ್ ಕೋಟ, ಸುರೇಶ್, ಮೋಹನ್ ಮೂಡಬೆಟ್ಡು, ಚಂದ್ರಶೇಖರ್, ಕೀರ್ತಿ ಕುಮಾರ್, ಸೌಮ್ಯ ಕಾರ್ಕಳ ಮುಂತಾದವರು ಉಪಸ್ಥಿತರಿದ್ದರು.