ಖಾಸಗಿ ವಿಡಿಯೋ ಹರಿ ಬಿಡುವುದಾಗಿ ಅಪರಿಚಿತರಿಂದ ಬೆದರಿಕೆ
ಬೆದರಿಕೆ ಪತ್ರದ ಹಿಂದಿರುವ ವ್ಯಕ್ತಿಯ ಬಗ್ಗೆ ಗೊತ್ತು ಎಂದಿದ್ದ ಸುದೀಪ್
ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿ ನಟ ಸುದೀಪ್ ಅವರ ಮಾಜಿ ಕಾರು ಚಾಲಕನನ್ನು ಸಿಸಿಬಿ ಪೊಲೀಸರು ಶುಕ್ರವಾರ ವಿಚಾರಣೆ ನಡೆಸಿದ್ದಾರೆ. ಆದರೆ, ಸುದೀಪ್ ಅವರಿಗೆ ಬಂದಿರುವ ಬೆದರಿಕೆ ಪತ್ರಗಳಿಗೂ ಆತನಿಗೂ ಯಾವುದೇ ಸಂಬಂಧವಿಲ್ಲ ಎಂಬುದು ವಿಚಾರಣೆಯಲ್ಲಿ ತಿಳಿದುಬಂದಿದೆ.
ಇತ್ತೀಚೆಗೆ ಸುದೀಪ್ ಅವರ ಪುಟ್ಟೇನಹಳ್ಳಿ ನಿವಾಸಕ್ಕೆ ಅಪರಿಚಿತರಿಂದ ಎರಡು ಬೆದರಿಕೆ ಪತ್ರಗಳು ಬಂದಿದ್ದವು. ನಟನ ಖಾಸಗಿ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡುವುದಾಗಿ ಕಿಡಿಗೇಡಿಗಳು ಬೆದರಿಕೆ ಹಾಕಿದ್ದರು. ಈ ಸಂಬಂಧ ಸುದೀಪ್ ಅವರ ಆಪ್ತ ಸಹಾಯಕ ಜಾಕ್ ಮಂಜು ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಬೆದರಿಕೆ ಆರೋಪದಡಿ ದೂರು ದಾಖಲಿಸಿದ್ದರು. ಜೊತೆಗೆ ನಟನ ಮಾಜಿ ಕಾರು ಚಾಲಕನ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ಇದಾದ ಕೆಲ ದಿನಗಳ ನಂತರ ಪ್ರಕರಣ ಸಿಸಿಬಿಗೆ ವರ್ಗಾವಣೆಗೊಂಡಿತ್ತು.
ಈ ಹಿನ್ನೆಲೆ ಸದ್ಯ ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು ಸುದೀಪ್ ಅವರ ಮಾಜಿ ಕಾರು ಚಾಲಕನ್ನು ಕರೆದು ವಿಚಾರಣೆಗೆ ನಡೆಸಿದ್ದು, ಆತನ ಮೊಬೈಲ್ ಅನ್ನು ಕೂಡ ಪರಿಶೀಲಿಸಿದ್ದಾರೆ. ಆದರೆ, ಆತ 3 ವರ್ಷಗಳ ಹಿಂದೆಯೇ ಸುದೀಪ್ ಬಳಿ ಕೆಲಸ ಬಿಟ್ಟಿರುವುದಾಗಿ ತಿಳಿಸಿದ್ದಾನೆ. ಸುದೀರ್ಘ ವಿಚಾರಣೆಯ ಬಳಿಕ ಆತನಿಗೂ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಎಂಬುದು ಸ್ಪಷ್ಟವಾಗಿದೆ.
ಈ ಸುದ್ದಿ ಓದಿದ್ದೀರಾ? ‘ಟ್ವಿಟರ್ ಬ್ಲೂಟಿಕ್’ಗೆ ಬೈ ಹೇಳಿದ ಪ್ರಕಾಶ್ ರಾಜ್
ಬೆದರಿಕೆ ಪತ್ರದ ವಿಚಾರಕ್ಕೆ ಸಂಬಂಧಿಸಿ ಇತ್ತೀಚೆಗೆ ಪ್ರತಿಕ್ರಿಯಿಸಿದ್ದ ಸುದೀಪ್, “ಸಿನಿಮಾ ರಂಗದವರೇ ಬೆದರಿಕೆ ಪತ್ರ ಕಳುಹಿಸಿದ್ದಾರೆ. ಈ ಕೃತ್ಯದ ಹಿಂದಿರುವ ವ್ಯಕ್ತಿ ಯಾರು ಎಂಬುದು ನನಗೆ ಗೊತ್ತಿದೆ. ಅವರಿಗೆ ಕಾನೂನಾತ್ಮಕವಾಗಿಯೇ ಉತ್ತರ ಕೊಡುತ್ತೇನೆ ಎಂದಿದ್ದರು. ಆದರೆ, ಪ್ರಕರಣ ದಾಖಲಾಗಿ ತಿಂಗಳು ಕಳೆಯುತ್ತ ಬಂದರೂ ಆರೋಪಿಗಳ ಸುಳಿವಿಲ್ಲ. ಹೀಗಾಗಿ ಸುದೀಪ್ ಅವರಿಗೆ ಬೆದರಿಕೆ ಹಾಕಿದವರ ಬಗ್ಗೆ ಮಾಹಿತಿ ಎಂದಾದರೆ, ಅವರು ಪೊಲೀಸರಿಗೆ ತಿಳಿಸಬೇಕು ಎಂಬ ಮಾತುಗಳು ಕೂಡ ಕೇಳಿ ಬರುತ್ತಿವೆ.
ಕಳೆದ ಮಾರ್ಚ್‌ನಲ್ಲಿ ದೊಮ್ಮಲೂರಿನ ಅಂಚೆ ಕಚೇರಿಗೆ ನಕಲಿ ನಂಬರ್ ಪ್ಲೇಟ್ ಹೊಂದಿದ್ದ ಸ್ವಿಫ್ಟ್ ಕಾರಿನಲ್ಲಿ ಬಂದ ಕಿಡಿಗೇಡಿಗಳು ಅಂಚೆ ಡಬ್ಬದಲ್ಲಿ ಪತ್ರವನ್ನು ಹಾಕಿ ಸ್ಥಳದಿಂದ ಪರಾರಿಯಾಗಿದ್ದರು ಎನ್ನಲಾಗಿದೆ. ಕೆಲ ದಿನಗಳ ಬಳಿಕ ಅಂಚೆ ಸೇವೆಯ ಮೂಲಕ ಪತ್ರ ಸುದೀಪ್ ಅವರ ನಿವಾಸ ತಲುಪಿತ್ತು. ಖಾಸಗಿ ವಿಡಿಯೋ ಬಹಿರಂಗ ಪಡಿಸುವ ಬೆದರಿಕೆ ಪತ್ರ ಕೈಸೇರಿದ ಬೆನ್ನಲ್ಲೇ ಹೈಕೋರ್ಟ್ ಮೊರೆ ಹೋಗಿದ್ದ ಸುದೀಪ್, ತಮ್ಮ ಘನತೆಗೆ ಧಕ್ಕೆಯುಂಟು ಮಾಡುವ ಸುದ್ದಿಗಳ ಪ್ರಸಾರಕ್ಕೆ ತಡೆಯಾಜ್ಞೆ ತಂದಿದ್ದಾರೆ.