ಶಾಸಕರ ಕಡೆಗಣನೆಗೆ ಬೇಸತ್ತು ಕಾಂಗ್ರೆಸ್ ಕಾರ್ಮಿಕ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು, ಬಿಜೆಪಿ ಸೇರ್ಪಡೆಯಾಗುತ್ತಿದ್ದೇನೆ ಎಂದು ಕಾಂಗ್ರೆಸ್ ಕಾರ್ಮಿಕ ಘಟಕದ ಅಧ್ಯಕ್ಷ ಮಂಜುನಾಥ್ ಹೇಳಿದರು.
ಚಿಕ್ಕಬಳ್ಳಾಪುರ ನಗರದಲ್ಲಿ ಬುಧವಾರ (ಏ.24) ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಕಾಂಗ್ರೆಸ್ ಉತ್ತಮ ಸ್ಥಾನಮಾನ ಕೊಟ್ಟಿತ್ತು. ಅದರಂತೆ ನಾನು ಪಕ್ಷ ಸಂಘಟನೆ ಮಾಡಿ ಪಕ್ಷ ಹಾಗೂ ಶಾಸಕರ ಗೆಲುವಿಗೆ ಶ್ರಮಿಸಿದೆ. ಆದರೆ ಶಾಸಕರು ನಮ್ಮನ್ನು ಗುರುತಿಸಿದೆ ನಿರ್ಲಕ್ಷ್ಯ ಮಾಡಿದ್ದಾರೆ. ಅದಕ್ಕಾಗಿ ಪಕ್ಷ ತೊರೆಯುವ ನಿರ್ಧಾರ ಮಾಡಿದ್ದೇನೆ ಎಂದರು.
ಮಾಜಿ ಶಾಸಕ ಶಿವಾನಂದ್ ಮಾತನಾಡಿ, ಕ್ಷೇತ್ರದಲ್ಲಿ ಸುಧಾಕರ್ ಪರ ಜನರ ಒಲವಿದೆ. ಪ್ರಧಾನಿ ಮೋದಿ ಪ್ರಪಂಚವೇ ನನ್ನ ಕುಟುಂಬ ಎಂಬ ನಿಲುವು ಹೊಂದಿದ್ದಾರೆ. ಹಾಗಾಗಿ ಮೋದಿ ಕೈ ಬಲಪಡಿಸಲು ಸುಧಾಕರ್‌ಗೆ ಮತ ನೀಡಿ ಎಂದು ಮನವಿ ಮಾಡಿದರು.
ಬಿಜೆಪಿ ಮುಖಂಡ ಶಿವಕುಮಾರ್ ಮಾತನಾಡಿ, ಹೊಸಬರ ಸೇರ್ಪಡೆಯಿಂದ ನಮ್ಮ ಪಕ್ಷಕ್ಕೆ ಬಲ ಬಂದಿದೆ. ಈ ಹಿಂದೆ ನಾನು ಕೂಡ ಕಾಂಗ್ರೆಸ್ ಶಾಸಕರ ಗೆಲುವಿಗೆ ಶ್ರಮಿಸಿದ್ದೆ. ಆದರೆ ಪಕ್ಷದಲ್ಲಿ ಬೆಲೆ ಸಿಗದ ಕಾರಣ ಪಕ್ಷ ತೊರೆದು ಬಿಜೆಪಿ ಸೇರಿದೆ. ಏ.26 ರಂದು ಎಲ್ಲರಿಗೂ ಸೂಕ್ತ ಉತ್ತರ ದೊರೆಯಲಿದೆ. ಪಕ್ಷಕ್ಕಾಗಿ ದುಡಿಯೋಣ. ಪಕ್ಷ ಸಂಘಟಿಸಿ ಮೋದಿ ಗೆಲುವಿಗೆ ಶ್ರಮಿಸೋಣ ಎಂದರು.
ಇದೇ ವೇಳೆ ಹೊಸದಾಗಿ ಪಕ್ಷ ಸೇರ್ಪಡೆಗೊಂಡ ಜಯರಾಮ್ ಹಾಗೂ ಬಿಜೆಪಿ ಕಾರ್ಯಕರ್ತರಾದ ಮಂಜುನಾಥ್, ರಾಮು, ಅಕ್ರಂ, ದಿನೇಶ್ ಇತರರಿದ್ದರು.
