2024ರ ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆ, ಜಿಲ್ಲಾ ಚುನಾವಣಾಧಿಕಾರಿ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಏ.25ರಂದು ನಾನಾ ಮಸ್ಟರಿಂಗ್ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
“ಬೆಂಗಳೂರಿನ 3 ಲೊಕಸಭಾ ಕ್ಷೇತ್ರ ಚುನಾವಣಾಧಿಕಾರಿ ವ್ಯಾಪ್ತಿಯಲ್ಲಿರುವ ಮಸ್ಟರಿಂಗ್ ಕೇಂದ್ರಗಳಿಗೆ ಎಲ್ಲ ಮತಗಟ್ಟೆ ಅಧಿಕಾರಿಗಳು ಬಂದು ಮತಗಟ್ಟೆಗಳಿಗೆ ಅಗತ್ಯವಿರುವ ಇವಿಎಂ, ಬ್ಯಾಲೆಟ್ ಯುನಿಟ್, ಕಂಟ್ರೋಲ್ ಯುನಿಟ್, ವಿವಿ ಪ್ಯಾಟ್ ಸೇರಿದಂತೆ ಎಲ್ಲ ಮತಗಟ್ಟೆ ಸಾಮಾಗ್ರಿಗಳನ್ನು ತೆಗೆದುಕೊಂಡು ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಹಾಗೂ ಇತರೆ ವಾಹನಗಳ ಮೂಲಕ ಮತಗಟ್ಟೆಗಳಿಗೆ ಪೊಲೀಸ್ ಬಂದೋಬಸ್ತ್ ಮೂಲಕ ತೆರಳಲಿದ್ದಾರೆ. ಎಲ್ಲ ಮತಗಟ್ಟೆಗಳಲ್ಲೂ ವಸತಿ, ನೀರಿನ ವ್ಯವಸ್ಥೆ ಸೇರಿದಂತೆ ಎಲ್ಲ ರೀತಿಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗಿದೆ” ಎಂದು ತಿಳಿಸಿದರು.
ಏ.26ರಂದು ಬೆಳಗ್ಗೆ 7 ರಿಂದ ಸಂಜೆ 6 ಗಂಟೆಯವರೆಗೆ ಮತದಾನ
“ಏಪ್ರಿಲ್ 26ರಂದು ಬೆಳಗ್ಗೆ 7 ರಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದ್ದು, ಅದಕ್ಕಿಂತ ಮುಂಚಿತವಾಗಿ ಬೆಳಗ್ಗೆ 5.30ಕ್ಕೆ ಅಣುಕು ಮತದಾನ ಪ್ರಾರಂಭವಾಗಲಿದೆ. 7 ಗಂಟೆಯೊಳಗಾಗಿ ಮತದಾನ ಪೂರ್ಣಗೊಳ್ಳಲಿದೆ. ಮತಗಟ್ಟೆಗಳಲ್ಲಿ ಮತದಾರರಿಗೆ ಯಾವುದೇ ಸಮಸ್ಯೆ ಆಗದಂತೆ ಎಲ್ಲ ರೀತಿಯ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಮಾಡಲಾಗಿದೆ” ಎಂದರು.
“ಎಲ್ಲ ಮಸ್ಟರಿಂಗ್ ಕೇಂದ್ರಗಳಿಂದ ಬ್ಯಾಲೆಟ್ ಯುನಿಟ್ (ಇವಿಎಂ), ಕಂಟ್ರೋಲ್ ಯುನಿಟ್ (ಸಿಯು), ವಿವಿ ಪ್ಯಾಟ್‌ಗಳನ್ನು ಮತಗಟ್ಟೆಗಳಿಗೆ ತಲುಪಿಸಲು ಈಗಾಗಲೇ ರೂಟ್ ಸಿದ್ದಪಡಿಸಿಕೊಳ್ಳಲಾಗಿದೆ. ಆ ಪ್ರಕಾರ ಒಂದು ಬಸ್‌ನಲ್ಲಿ 5 ರಿಂದ 6 ಮತಗಟ್ಟೆಗಳ ಅಧಿಕಾರಿಗಳು ತೆರಳಲಿದ್ದಾರೆ. ಇಂದು ಮಧ್ಯಾಹ್ನದ ನಂತರ ಮತಗಟ್ಟೆಗಳಿಗೆ ತೆರಳಲಿದ್ದಾರೆ” ಎಂದು ಹೇಳಿದರು.
ಅಣುಕು ಮತದಾನದ ವೇಳೆ ಇವಿಎಂನಲ್ಲಿ ಲೋಪದೋಷಗಳು ಕಂಡುಬಂದರೆ, ಸೆಕ್ಟರ್ ಅಧಿಕಾರಿ ಮೂಲಕ ಕನಿಷ್ಠ 10 ಮತಗಟ್ಟೆಗಳಿಗೆ ನಿಯೋಜನೆ ಮಾಡಿರುವಂತಹ ಮಾರ್ಗ ಅಧಿಕಾರಿಯು ಪರ್ಯಾಯ ವ್ಯವಸ್ಥೆ ಮಾಡಲಿದ್ದಾರೆ.
ಮತಗಟ್ಟೆ ಅಧಿಕಾರಿಗಳಿಗೆ ಕಿಟ್ ವಿತರಣೆ
ನಗರದ 28 ವಿಧಾನಸಭಾ ಕ್ಷೇತ್ರಗಳ ಮಸ್ಟರಿಂಗ್ ಕೇಂದ್ರಗಳಿಂದ ಮತಗಟ್ಟೆ ಅಧಿಕಾರಿಗಳು, ಇವಿಎಂ, ಸಿಯು, ವಿವಿ ಪ್ಯಾಟ್, ಮತದಾನದ ದಿನ ಅಗತ್ಯವಿರುವ ಚೆಕ್ ಲಿಸ್ಟ್ ಪ್ರಕಾರ ಎಲ್ಲ ರೀತಿಯ ಸಾಮಾಗ್ರಿಗಳು, ಮತಗಟ್ಟೆಗಳಲ್ಲಿ ರಾತ್ರಿ ಉಳಿಯಲು ಮತಗಟ್ಟೆ ಅಧಿಕಾರಿಗಳಿಗೆ ಬೇಕಾದಂತಹ ವ್ಯವಸ್ಥೆ ಮಾಡಲಾಗಿದೆ.
ನಗರದಲ್ಲಿರುವ 8,984 ಮತಗಟ್ಟೆಗಳಲ್ಲಿ ಏ.26ರಂದು ಮತದಾನ ನಡೆಯಲಿದ್ದು, ಎಲ್ಲ ಸಿಬ್ಬಂದಿ ಏ.25ರಂದು ಬೆಳಿಗ್ಗೆ ಮಸ್ಟರಿಂಗ್ ಕೇಂದ್ರಗಳಿಂದ ಸಾಮಗ್ರಿಗಳನ್ನು ಸಂಗ್ರಹಿಸಿ ಮತಗಟ್ಟೆಗೆ ತೆರಳಿದ್ದಾರೆ. ಎಲ್ಲ ಮಸ್ಟರಿಂಗ್ ಕೇಂದ್ರಗಳಲ್ಲೂ ಚುನಾವಣಾ ಕರ್ತವ್ಯನಿರತ ಮತದಾರರಿಗಾಗಿ ಮತದಾನ ಸೌಲಭ್ಯ ಕೇಂದ್ರ ತೆರೆಯಲಾಗಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ರೈಲಿಗೆ ಸಿಲುಕಿ ಮೂವರು ಯುವಕರು ದುರ್ಮರಣ
ಪರಿಶೀಲನೆಯ ವೇಳೆ ವಲಯ ಜಂಟಿ ಆಯುಕ್ತರುಗಳಾದ ಮೊಹ್ಮದ್ ನಯೀಮ್ ಮೊಮಿನ್, ಬಾಲಶೇಖರ್, ಸಹಾಯಕ ಚುನಾವಣಾಧಿಕಾರಿಗಳಾದ ಸುರೇಶ್, ಪ್ರಮೋದ್ ಪಾಟೀಲ್, ಬಾಲಪ್ಪ ಹಂದಿಗುಂದ, ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.