ವಾಟ್ಸಾಪ್‌ನಲ್ಲಿ ಸಂದೇಶಗಳ ಖಾಸಗಿತನ/ಗೌಪ್ಯತೆ (ಎಂಡ್-ಟು-ಎಂಚ್ ಎನ್‌ಕ್ರಿಪ್ಶನ್) – ಸಂದೇಶ ಕಳಿಸಿದವರು, ಸ್ವೀಕರಿಸಿದವರಲ್ಲದೆ ಮೂರನೇ ವ್ಯಕ್ತಿ ಆ ಸಂದೇಶ ನೋಡಲಾಗದು – ಉಲ್ಲಂಘಿಸಲು ಒತ್ತಾಯಿಸಿದರೆ ದೇಶವನ್ನು ತೊರೆಯುವುದಾಗಿ ವಾಟ್ಸಾಪ್ ಹೇಳಿದೆ. ಭಾರತದಲ್ಲಿ ತನ್ನ ಕಾರ್ಯಾಚರಣೆಯನ್ನು ರದ್ದುಗೊಳಿಸುವುದಾಗಿ ಮೆಟಾ ಒಡೆತನದ ವಾಟ್ಸಾಪ್ ಗುರುವಾರ ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ.
ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ನಿಯಂತ್ರಿಸುವ ‘ಮಾಹಿತಿ ತಂತ್ರಜ್ಞಾನ ನಿಯಮ ನಿಯಮಗಳು-2021’ಅನ್ನು ಪ್ರಶ್ನಿಸಿ 2021ರಲ್ಲಿಯೇ ವಾಟ್ಸಾಪ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿತ್ತು. ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ ಮನಮೀತ್ ಪ್ರೀತಮ್ ಸಿಂಗ್ ಅರೋರಾ ಅವರಿದ್ದ ವಿಭಾಗೀಯ ಪೀಠ ನಡೆಸುತ್ತಿದೆ. “ಬಳಕೆದಾರರ ಖಾಸಗಿತನವನ್ನು ವೇದಿಕೆಯು ಉಲ್ಲಂಘಿಸುವಂತೆ ಒತ್ತಾಯಿಸಿದರೆ, ಭಾರತದಲ್ಲಿ ತನ್ನ ಕಾರ್ಯಾಚರಣೆಯನ್ನೇ ನಿಲ್ಲಿಸುತ್ತದೆ” ಎಂದು ವಾಟ್ಸಾಪ್ ಕಂಪನಿಯ ವಕೀಲ ತೇಜಸ್ ಕರಿಯಾ ಹೇಳಿದ್ದಾರೆ.
“ಖಾಸಗಿತನದ ಗೌಪ್ಯತೆಯ ಕಾರಣಕ್ಕಾಗಿ ಜನರು ವಾಟ್ಸಾಪ್‌ಅನ್ನು ಬಳಸುತ್ತಿದ್ದಾರೆ. ಕೇಂದ್ರ ಸರ್ಕಾರದ ಹೊಸ ನಿಯಮವು ಬಳಕೆದಾರರ ಗೌಪ್ಯತೆಯನ್ನು ಮುರಿಯುತ್ತದೆ. ವಾಟ್ಸಾಪ್ ಶತಕೋಟಿ ಸಂದೇಶಗಳನ್ನು ಸಂಗ್ರಹಿಸಬಹುದಾದ ವೇದಿಕೆಯಾಗಿದೆ. ವಾಟ್ಸಾಪ್‌ನಲ್ಲಿ ಯಾವುದೇ ಮಿತಿಯಿಲ್ಲಲ. ಹೀಗಾಗಿ, ನಮ್ಮ ಮೇಲೆ, ಬಳಕೆದಾರರ ಸಂದೇಶಗಳನ್ನು ಪದೇ ಪದೆ ಕೇಳಲಾಗುತ್ತದೆ” ಎಂದು ವಾದಿಸಿದ್ದಾರೆ.
“ಇಲ್ಲಿ ಎರಡು ವಿಚಾರಗಳಿವೆ – ಒಂದು, ಬಳಕೆದಾರರ ಖಾಸಗಿತನ – ಗೌಪ್ಯತೆ. ಎರಡು, ಸರ್ಕಾರವು ಬಳಕೆದಾರರ ಸಂದೇಶಗಳ ಬಗ್ಗೆ ತಿಳಿದುಕೊಳ್ಳುವ ಹಕ್ಕನ್ನು ಹೊಂದಿದೆ. ಉದಾಹರಣೆಗೆ, ಭಯೋತ್ಪದಕ ಕೃತ್ಯದಲ್ಲಿ ಭಾಗಿಯಾಗಿದ್ದಾನೆಂಬ ಆರೋಪದ ಮೇಲೆ ಆತನನ್ನು ಹಿಡಿಯಲು, ಆತ ಕಳುಹಿಸುವ ಸಂದೇಶಗಳಿಗಾಗಿ ಸರ್ಕಾರವು ನಮ್ಮ ಮೇಲೆ ಒತ್ತಡ ಹೇರುತ್ತದೆ. ನಾವು ಬಳಕೆದಾರ ಮತ್ತು ಸರ್ಕಾರಗಳ ನಡುವೆ ಸಿಲುಕಿದ್ದೇವೆ. ಒಂದು ಸೂಚನೆಗಾಗಿ ನಾವು ನಮ್ಮ ಗೌಪ್ಯತೆಯ ನಿಲುವನ್ನು ಮುರಿಯಬೇಕೆ? ಈ ನಿಯಮದ ಸಾಂವಿಧಾನಿಕ ಸಿಂಧುತ್ವವನ್ನು ನ್ಯಾಯಾಲಯವು ಪರಿಶೀಲಿಸಬೇಕಾಗುತ್ತದೆ. ಮಾಹಿತಿ ತಂತ್ರಜ್ಞಾನ ಕಾಯ್ದೆಯಲ್ಲಿ ಈ ನಿಯಮ ರೂಪಿಸಲು ಸರ್ಕಾರಕ್ಕೆ ಅವಕಾಶವಿಲ್ಲ” ಎಂದು ವಕೀಲರು ವಾದಿಸಿದ್ದಾರೆ.