ಬಿಹಾರದ ದರ್ಬಂಗಾ ಜಿಲ್ಲೆಯ ಮದುವೆಯ ಮಂಟಪ ಹೊತ್ತಿ ಉರಿದಿದ್ದು, ಈ ಅಗ್ನಿ ಅವಘಡದಲ್ಲಿ ಆರು ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಮೃತರನ್ನು ಸುನೀಲ್ ಪಾಸ್ವಾನ್ (26), ಲೀಲಾದೇವಿ (23), ಕಾಂಚನ್ ದೇವಿ (26), ಸಿದ್ದಾಂತ್ ಕುಮಾರ್ (4), ಶಶಾಂಕ್ ಕುಮಾರ್ (3) ಮತ್ತು ಸಾಕ್ಷಿ ಕುಮಾರಿ (5) ಎಂದು ಗುರುತಿಸಲಾಗಿದೆ.
ಬಹೇರಾ ಪೊಲೀಸ್ ಠಾಣೆ ವ್ಯಾಪ್ತಿಯ ಅಲಿನಗರದಲ್ಲಿ ಗುರುವಾರ ರಾತ್ರಿ 11.15 ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಹೇಳಿದ್ದಾರೆ. ಪಟಾಕಿ ಸಿಡಿಸುವ ವೇಳೆ ಮಂಟಪಕ್ಕೆ ಬೆಂಕಿ ಹೊತ್ತಿಕೊಂಡಿದೆ ಎಂದು ವರದಿಯಾಗಿದೆ.
ಇದನ್ನು ಓದಿದ್ದೀರಾ? ಪಾಟ್ನಾ| ರೈಲ್ವೆ ನಿಲ್ದಾಣದ ಬಳಿಯ ಹೋಟೆಲ್‌ನಲ್ಲಿ ಅಗ್ನಿ ಅವಘಡ, ಆರು ಮಂದಿ ಸಾವು
ಮಂಟಪದೊಳಗೆ ಇರಿಸಲಾಗಿದ್ದ ಕೆಲವು ವಸ್ತುಗಳು ಬೆಂಕಿ ವೇಗವಾಗಿ ಹರಡಲು ಸಹಾಯ ಮಾಡಿದೆ. ಮೂರು ಹಸುಗಳೂ ಬೆಂಕಿಗೆ ಆಹುತಿಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
“ಬೆಂಕಿ ಅವಘಡಕ್ಕೆ ನಿಖರವಾದ ಕಾರಣವನ್ನು ಪತ್ತೆ ಹಚ್ಚಲು ತನಿಖೆಗೆ ಆದೇಶಿಸಲಾಗಿದೆ. ಈ ಮಧ್ಯೆ, ವಿಪತ್ತು ನಿರ್ವಹಣಾ ಮಾರ್ಗಸೂಚಿಗಳ ಪ್ರಕಾರ ಸಂತ್ರಸ್ತರ ಕುಟುಂಬಗಳಿಗೆ ಜಿಲ್ಲಾಡಳಿತವು ಎಲ್ಲ ರೀತಿಯ ನೆರವು ನೀಡುತ್ತಿದೆ” ಎಂದು ಜಿಲ್ಲಾಧಿಕಾರಿ ರಾಜೀವ್ ರೋಷನ್ ಪಿಟಿಐಗೆ ತಿಳಿಸಿದರು.
ಬೆಂಕಿಯ ಬಗ್ಗೆ ಮಾಹಿತಿ ಬಂದ ಕೂಡಲೇ ಅಗ್ನಿಶಾಮಕ ದಳಗಳನ್ನು ಸ್ಥಳಕ್ಕೆ ಕಳುಹಿಸಲಾಗಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಜಗುನಾಥ ರೆಡ್ಡಿ ತಿಳಿಸಿದ್ದಾರೆ. “ಸ್ವಲ್ಪ ಸಮಯದ ನಂತರ ಬೆಂಕಿಯನ್ನು ಹತೋಟಿಗೆ ತರಲಾಯಿತು. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ” ಎಂದು ಹೇಳಿದರು.