ದೇಶದ 13 ರಾಜ್ಯಗಳ 88 ಲೋಕಸಭಾ ಕ್ಷೇತ್ರಗಳಿಗೆ ಎರಡನೇ ಹಂತದ ಮತದಾನ ಪ್ರಗತಿಯಲ್ಲಿದ್ದು, ಮಧ್ಯಾಹ್ನ 1 ಗಂಟೆವರೆಗಿನ ಮತದಾನದಲ್ಲಿ ದೇಶಾದ್ಯಂತ ಶೇ.39.13 ರಷ್ಟು ಮತದಾನವಾಗಿದೆ.
ಈ ನಡುವೆ ಚುನಾವಣಾ ಆಯೋಗವು ಇವಿಎಂನ ಅಸಮರ್ಪಕ ಕಾರ್ಯಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದಿಂದ 290 ದೂರುಗಳನ್ನು ಸ್ವೀಕರಿಸಿದೆ. ಆಯೋಗಕ್ಕೆ ಪತ್ರ ಬರೆದಿರುವ ತೃಣಮೂಲ ಕಾಂಗ್ರೆಸ್ ತಕ್ಷಣ ಮಧ್ಯಸ್ಥಿಕೆ ವಹಿಸಬೇಕೆಂದು ಕೋರಿದೆ.
ಆದಾಗ್ಯೂ, ಕೇಂದ್ರ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಟಿಎಂಸಿ ನಡೆಯನ್ನು ಖಂಡಿಸಿದ್ದು, ಸುಪ್ರೀಂ ಕೋರ್ಟ್ ಪದೇ ಪದೆ ಇವಿಎಂನಲ್ಲಿ ಯಾವುದೇ ದೋಷವಿಲ್ಲ ಎಂದು ಹೇಳಿದರೂ ಜನರು ಪ್ರಶ್ನಿಸುವುದನ್ನು ಬಿಡುತ್ತಿಲ್ಲ ಎಂದು ತಿಳಿಸಿದ್ದಾರೆ.
88 ಲೋಕಸಭಾ ಕ್ಷೇತ್ರಗಳಲ್ಲಿ ಕೇರಳದ ಎಲ್ಲ 20, ಕರ್ನಾಟಕದ 14 ಸೇರಿದಂತೆ ರಾಜಸ್ಥಾನ, ಮಹಾರಾಷ್ಟ್ರ, ಉತ್ತರ ಪ್ರದೇಶ, ಮಧ್ಯ ಪ್ರದೇಶ, ಅಸ್ಸಾಂ, ಬಿಹಾರ್, ಛತ್ತೀಸ್ಘಡ, ಪಶ್ಚಿಮ ಬಂಗಾಳ, ಮಣಿಪುರ, ತ್ರಿಪುರ ಮತ್ತು ಜಮ್ಮು ಕಾಶ್ಮೀರ ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕೋಮುದ್ವೇಷ ಜಾಹೀರಾತು ನೀಡಿ ವಿಕೃತಿ ಮೆರೆದ ಬಿಜೆಪಿ
ಇಂದು ಬೆಳಗಿನಿಂದಲೇ ಪ್ರಮುಖ ಗಣ್ಯ ವ್ಯಕ್ತಿಗಳು ತಮ್ಮ ಹಕ್ಕು ಚಲಾಯಿಸಿದರು. ಕಾಂಗ್ರೆಸ್ ನಾಯಕ ಶಶಿ ತರೂರ್, ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ನಟರಾದ ಪ್ರಕಾಶ್ ರಾಜ್, ಯಶ್, ಮಾಜಿ ಕ್ರಿಕೆಟಿಗರಾದ ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ ಉದ್ಯಮಿಗಳಾದ ನಾರಾಯಣ ಮೂರ್ತಿ ಹಾಗೂ ಸುಧಾ ಮೂರ್ತಿ ಮತದಾನ ಮಾಡಿದರು.
ಚುನಾವಣಾ ಆಯೋಗದ ಪ್ರಕಾರ ಮಧ್ಯಾಹ್ನ ಒಂದು ಗಂಟೆಯವರೆಗೆ ತ್ರಿಪುರಾರಲ್ಲಿ ಶೇ.54.47 ಮತದಾನವಾಗಿದೆ. ಛತ್ತೀಸ್ಘಡ ಶೇ. 54.26, ಅಸ್ಸಾಂ 46.31, ಕರ್ನಾಟಕ 38.23, ಪಶ್ಚಿಮ ಬಂಗಾಳ 46.29 ಹಾಗೂ ಕೇರಳದಲ್ಲಿ 29.36 ರಷ್ಟು ಮತದಾನವಾಗಿದೆ.
ಇಂದಿನ ಹಂತದಲ್ಲಿ ಒಟ್ಟು 1,210 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಿಎಸ್ಪಿ 74, ಬಿಜೆಪಿ 69 ಹಾಗೂ ಕಾಂಗ್ರೆಸ್ 68 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಇಷ್ಟು ಲೋಕಸಭಾ ಕ್ಷೇತ್ರಗಳಿಗೆ 2019ರಲ್ಲಿ ನಡೆದ ಚುನಾವಣೆಯಲ್ಲಿ ಎನ್ಡಿಎ 65 ಹಾಗೂ ಇಂಡಿಯಾ ಒಕ್ಕೂಟ 23 ಕ್ಷೇತ್ರಗಳಲ್ಲಿ ಜಯಿಸಿತ್ತು.
