ಸೂರತ್ ಅಭ್ಯರ್ಥಿ ನೀಲೇಶ್ ಕುಂಭಾನಿ ಅವರ ನಾಮಪತ್ರ ತಿರಸ್ಕೃತಗೊಂಡು ಬಿಜೆಪಿಯ ಮುಖೇಶ್ ದಲಾಲ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ವಿಚಾರದಲ್ಲಿ ಶುಕ್ರವಾರ ಗುಜರಾತ್ ಕಾಂಗ್ರೆಸ್ ಆರು ವರ್ಷಗಳ ಕಾಲ ನೀಲೇಶ್ ಕುಂಭಾನಿ ಅವರನ್ನು ಪಕ್ಷದಿಂದ ಅಮಾನತುಗೊಳಿಸಿದೆ.
ಕೂಲಂಕುಷವಾಗಿ ಚರ್ಚಿಸಿದ ನಂತರ ಪಕ್ಷದ ಶಿಸ್ತು ಸಮಿತಿಯು ಕುಂಭಾನಿ ಅವರನ್ನು ಅಮಾನತುಗೊಳಿಸಲು ನಿರ್ಧರಿಸಿದೆ ಎಂದು ಕಾಂಗ್ರೆಸ್ನ ಹೇಳಿಕೆ ತಿಳಿಸಿದೆ. ಕುಂಭಾನಿ ಅವರ ತೀವ್ರ ನಿರ್ಲಕ್ಷ್ಯ ಮತ್ತು ಬಿಜೆಪಿಯ ಜೊತೆಗಿನ ಸಹಕಾರದಿಂದ ನಾಮಪತ್ರವನ್ನು ತಿರಸ್ಕರಿಸಲಾಗಿದೆ ಎಂಬ ತೀರ್ಮಾನಕ್ಕೆ ಬಂದಿದೆ ಎಂದು ಹೇಳಿದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಸೂರತ್ ಸಂಸದನ ಅವಿರೋಧ ಆಯ್ಕೆಯ ಈ ಪ್ರಹಸನ ಅಪಾಯಕಾರಿ
“ನಿಮಗೆ ನ್ಯಾಯವಾಗಿ, ನಿಮ್ಮ ಪ್ರಕರಣವನ್ನು ವಿವರಿಸಲು ನಾವು ನಿಮಗೆ ಸಮಯ ನೀಡಿದ್ದೇವೆ. ಆದರೆ ಪಕ್ಷದ ಶಿಸ್ತು ಸಮಿತಿಯ ಮುಂದೆ ಬರುವ ಬದಲು ನೀವು ನಾಪತ್ತೆಯಾಗಿದ್ದೀರಿ. ನಿಮ್ಮ ಫಾರ್ಮ್ ಅನ್ನು ಅಧಿಕಾರಿಗಳು ತಿರಸ್ಕರಿಸಿದ ನಂತರ, ಬಿಜೆಪಿಯು ಮುಂದೆ ಹೋಗಿ ಇತರ ಎಂಟು ಮಂದಿಯ ಫಾರ್ಮ್ ಅನ್ನು ಹಿಂಪಡೆಯುವಂತೆ ಮಾಡಿದೆ. ಇದು ಸೂರತ್ನ ಜನರ ಮತದಾನದ ಹಕ್ಕನ್ನು ಕಸಿದುಕೊಂಡಿದೆ” ಎಂದು ಬಾಲು ಪಟೇಲ್ ನೇತೃತ್ವದ ಕಾಂಗ್ರೆಸ್ ಶಿಸ್ತು ಸಮಿತಿ ಹೇಳಿದೆ.
“ಸೂರತ್ನ ಜನರು ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷವು ನಿಮ್ಮನ್ನು ಆರು ವರ್ಷಗಳ ಕಾಲ ಪಕ್ಷದಿಂದ ಅಮಾನತು ಮಾಡಲು ನಿರ್ಧರಿಸಿದೆ” ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಇದನ್ನು ಓದಿದ್ದೀರಾ? ಬಿಜೆಪಿ ಒತ್ತಡದಿಂದ ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ತಿರಸ್ಕಾರ; ಹೈಕೋರ್ಟ್ಗೆ ಹೋಗುತ್ತೇವೆಂದ ಕಾಂಗ್ರೆಸ್
ದಾಖಲೆಯ ಮೇಲಿನ ಸಹಿಗಳು ತಮ್ಮದಲ್ಲ ಎಂದು ಆರೋಪಿಸಿ ನೀಲೇಶ್ ಕುಂಭಾನಿ ಅವರ ಮೂವರು ಪ್ರಸ್ತಾವಕರು ಜಿಲ್ಲಾ ಚುನಾವಣಾಧಿಕಾರಿಗೆ ಅಫಿಡವಿಟ್ ಸಲ್ಲಿಸಿದ ನಂತರ ಕುಂಭಾಣಿ ಅವರ ನಾಮಪತ್ರವನ್ನು ಏಪ್ರಿಲ್ 21 ರಂದು ತಿರಸ್ಕರಿಸಲಾಯಿತು. ಇದೇ ಕಾರಣಕ್ಕೆ ಸೂರತ್ನಿಂದ ಕಾಂಗ್ರೆಸ್ನ ಪರ್ಯಾಯ ಅಭ್ಯರ್ಥಿ ಸುರೇಶ್ ಪಡಸಾಲ ಅವರ ನಾಮಪತ್ರವನ್ನು ಅಮಾನ್ಯಗೊಳಿಸಲಾಗಿದೆ. ಸೂರತ್ನ ಮಾಜಿ ಕಾರ್ಪೊರೇಟರ್ ಕುಂಭಾನಿ ಅವರು 2022 ರ ವಿಧಾನಸಭಾ ಚುನಾವಣೆಯಲ್ಲಿ ಕಾಮ್ರೇಜ್ ಕ್ಷೇತ್ರದಲ್ಲಿ ಸೋತಿದ್ದರು.
ಈಗ 2024ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ನಾಮಪತ್ರ ತಿರಸ್ಕೃತಗೊಂಡ ಬಳಿಕ ಬಿಜೆಪಿಯ ಮುಖೇಶ್ ದಲಾಲ್ ಅವರು ಏಪ್ರಿಲ್ 22 ರಂದು ಸೂರತ್ ಲೋಕಸಭಾ ಕ್ಷೇತ್ರದಿಂದ ಅವಿರೋಧವಾಗಿ ಆಯ್ಕೆಯಾದರು. ಬಿಎಸ್ಪಿಯಿಂದ ಒಬ್ಬರು ಸೇರಿದಂತೆ ಎಲ್ಲಾ ಇತರ ಅಭ್ಯರ್ಥಿಗಳು ನಾಮಪತ್ರ ಹಿಂಪಡೆಯುವ ಕೊನೆಯ ದಿನದಂದು ಒಬ್ಬೊಬ್ಬರಾಗಿಯೇ ನಾಮಪತ್ರ ಹಿಂಪಡೆದಿದ್ದಾರೆ.