ಪಶ್ಚಿಮ ಬಂಗಾಳದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಭರ್ಜರಿಯಾಗಿ ರ್‍ಯಾಲಿ ನಡೆಸಿ ಚುನಾವಣಾ ಪ್ರಚಾರ ಮಾಡಿದ ಕೆಲವೇ ಗಂಟೆಗಳಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪ್ರಧಾನಿಯ ಹೇಳಿಕೆಗಳನ್ನು ಪಟ್ಟಿ ಮಾಡಿ ಅದರ ಫ್ಯಾಕ್ಟ್‌ಚೆಕ್ ಮಾಡಿದೆ.
ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ಮೋದಿ, ಆಡಳಿತಾರೂಢ ಟಿಎಂಸಿ ಮತ್ತು ರಾಜ್ಯದಲ್ಲಿನ ಈ ಹಿಂದಿನ ಎಡರಂಗ ಸರ್ಕಾರವು ಅಭಿವೃದ್ಧಿಗೆ ಬ್ರೇಕ್ ಹಾಕಿದೆ. ಈ ಎರಡೂ ಪಕ್ಷಗಳು ತಮ್ಮ ಆಡಳಿತದಲ್ಲಿ ಬಂಗಾಳದ ಹಿರಿಮೆ, ಜಾಗತಿಕ ಇಮೇಜ್ ಮತ್ತು ಘನತೆಯನ್ನು ಹಾಳುಮಾಡಿದೆ ಎಂದು ಆರೋಪಿಸಿದ್ದರು.
ಕೋಲ್ಕತ್ತಾ ಹೈಕೋರ್ಟ್ ಇತ್ತೀಚೆಗೆ ರಾಜ್ಯದಲ್ಲಿ 25,000 ಕ್ಕೂ ಹೆಚ್ಚು ನೇಮಕಾತಿಗಳನ್ನು ರದ್ದುಗೊಳಿಸಿದೆ. ಇದರಿಂದಾಗಿ ಬೋಧಕ ಹುದ್ದೆಗಳ ನೇಮಕಾತಿಗಳಲ್ಲಿನ ಅಕ್ರಮ ನಡೆಸಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಪಕ್ಷವು ಮತ್ತೆ ಮುನ್ನೆಲೆಗೆ ಬಂದಿದೆ ಎಂದೂ ಪ್ರಧಾನಿ ದೂರಿದ್ದರು.
ಇದನ್ನು ಓದಿದ್ದೀರಾ? ಕೋರ್ಟ್ ತೀರ್ಪುಗಳ ಮೇಲೆ ಬಿಜೆಪಿ ನಾಯಕರ ಪ್ರಭಾವ: ಮಮತಾ ಬ್ಯಾನರ್ಜಿ ಆಕ್ರೋಶ
“ಪಶ್ಚಿಮ ಬಂಗಾಳವು ದೇಶದ ಅಭಿವೃದ್ಧಿ ಮತ್ತು ಪ್ರಗತಿಯ ಎಂಜಿನ್ ಆಗಿದ್ದ ಸಮಯವಿತ್ತು. ಬಂಗಾಳ ಸಾಮಾಜಿಕ ಸುಧಾರಣೆಗಳು, ವೈಜ್ಞಾನಿಕ ಪ್ರಗತಿಗಳು, ಹಾಗೆಯೇ ತಾತ್ವಿಕ ಮತ್ತು ಆಧ್ಯಾತ್ಮಿಕ ಚಿಂತನೆ ಮತ್ತು ಜಾಗೃತಿಗೆ ದಾರಿ ತೋರಿತ್ತು” ಎಂದು ಪಿಎಂ ಬಹುಪಾಲು ಮುಸ್ಲಿಂ ಮತದಾರರಿರುವ ಮಾಲ್ಡಾ ಜಿಲ್ಲೆಯಲ್ಲಿ ಪ್ರಚಾರದ ವೇಳೆ ಹೇಳಿದ್ದರು.
“ಆದರೆ ಎಡರಂಗ ಮತ್ತು ಪ್ರಸ್ತುತ ಟಿಎಂಸಿ ಆಡಳಿತವು ಜಾಗತಿಕ ಮಟ್ಟದಲ್ಲಿ ಬಂಗಾಳದ ಹಿರಿಮೆಯನ್ನು ಕಸಿದುಕೊಂಡಿದೆ. ಪ್ರಪಂಚದ ದೃಷ್ಟಿಯಲ್ಲಿ ಅದರ ಘನತೆ ಮತ್ತು ಪ್ರತಿಷ್ಠೆಯನ್ನು ಕಡಿಮೆ ಮಾಡಿದೆ. ಟಿಎಂಸಿ ಆಡಳಿತದಲ್ಲಿ ಬಂಗಾಳದಲ್ಲಿ ಕೇವಲ ಸಾವಿರಾರು ಕೋಟಿಗಳ ಹಗರಣಗಳು ಮಾತ್ರ ಕಾಣಿಸುತ್ತಿದೆ” ಎಂದು ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ್ದರು.
ಇದನ್ನು ಓದಿದ್ದೀರಾ? ಪಶ್ಚಿಮ ಬಂಗಾಳ ರಾಜ್ಯಪಾಲದ ವಿರುದ್ಧ ಚುನಾವಣಾ ಆಯೋಗಕ್ಕೆ ಟಿಎಂಸಿ ದೂರು
“ಬಂಗಾಳದಲ್ಲಿ ಹಣ ನೀಡದೆ ಒಂದು ಇಟ್ಟಿಗೆ ಕೂಡಾ ಇಡಲ್ಲ. ಅಷ್ಟೊಂದು ಮಟ್ಟಿಗೆ ರಾಜ್ಯದಲ್ಲಿ ಭ್ರಷ್ಟಾಚಾರವಿದೆ. ಟಿಎಂಸಿ ರೈತರನ್ನೂ ಸಹ ಬಿಡಲಿಲ್ಲ. ಟಿಎಂಸಿ ರಾಜ್ಯದ ಯುವಕರ ಭವಿಷ್ಯದ ಜೊತೆ ಆಟವಾಡಿದೆ. ಈಗ 26,000 ಕುಟುಂಬಗಳಿಗೆ ಉದ್ಯೋಗವಿಲ್ಲದಂತಾಗಿದೆ. ಈ ಉದ್ಯೋಗಗಳಿಗೆ ಬದಲಾಗಿ ಅವರು ಟಿಎಂಸಿಗೆ ಲಂಚ ನೀಡಲು ಪಡೆದ ಸಾಲದ ಹೊರೆಯನ್ನು ಎದುರಿಸುತ್ತಿದ್ದಾರೆ,” ಎಂದು ಹೇಳಿದರು.
ಟಿಎಂಸಿಯ ಫ್ಯಾಕ್ಟ್‌ಚೆಕ್ ಏನು ಹೇಳುತ್ತದೆ?
ಬಿಜೆಪಿ ಸರ್ಕಾರವು ಬಂಗಾಳಕ್ಕೆ ವಿವಿಧ ಯೋಜನೆಗಳ ಅಡಿಯಲ್ಲಿ ಬರೋಬ್ಬರಿ 1.6 ಲಕ್ಷ ಕೋಟಿ ರೂಪಾಯಿ ಹಣವನ್ನು ತಡೆಹಿಡಿದಿದೆ ಎಂದು ತೃಣಮೂಲ ಹೇಳಿದೆ. ಬಿಜೆಪಿ ಮಾತ್ರ ಬಂಗಾಳದ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದೆ ಎಂಬ ಪ್ರಧಾನಿ ಮೋದಿಯವರ ಹೇಳಿಕೆಗೆ ಈ ಮೂಲಕ ಟಿಎಂಸಿ ಪ್ರತಿಕ್ರಿಯೆ ನೀಡಿದೆ
ಕೌಶಲ್ ವಿಕಾಸ್ ಯೋಜನೆ ಮತ್ತು ಸ್ಟಾರ್ಟ್ ಅಪ್ ಇಂಡಿಯಾ ಕಾರ್ಯಕ್ರಮವು ಯುವಕರನ್ನು ಸಶಕ್ತಗೊಳಿಸಿದೆ ಎಂಬ ಪ್ರಧಾನಿ ಮೋದಿಯವರ ಹೇಳಿಕೆಯ ಫ್ಯಾಕ್ಟ್‌ಚೆಕ್ ಮಾಡಿರುವ ಟಿಎಂಸಿ, ಕೌಶಲ್ ವಿಕಾಸ್ ಯೋಜನೆ 2.0 ಗಾಗಿ ಉದ್ಯೋಗ ದರವು ಶೇಕಡ 23 ರಷ್ಟಿದ್ದರೆ, ಪಿಎಂಕೆವಿವೈ 3.0ಗೆ ಉದ್ಯೋಗ ದರವು 8 ಕ್ಕೆ ಇಳಿಕೆಯಾಗಿದೆ ಎಂದು ಹೇಳಿದೆ.
ಬಂಗಾಳದಲ್ಲಿ ಆಯುಷ್ಮಾನ್ ಭಾರತ್ ಯೋಜನೆಯನ್ನು ಪ್ರಾರಂಭಿಸಲು ಟಿಎಂಸಿ ಕೇಂದ್ರಕ್ಕೆ ಅವಕಾಶ ನೀಡುತ್ತಿಲ್ಲ ಎಂದು ಪ್ರಧಾನಿ ಮೋದಿ ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಟಿಎಂಸಿ ಈ ಯೋಜನೆಯಡಿಯಲ್ಲಿ ಶೇಕಡ 40ರಷ್ಟು ಹಣವು ರಾಜ್ಯವೇ ನೀಡಬೇಕಾಗುತ್ತದೆ ಎಂದಿದೆ.
“ಬಂಗಾಳವು ಉತ್ತಮ ಆರೋಗ್ಯ ವಿಮಾ ಯೋಜನೆಯನ್ನು ಹೊಂದಿದ್ದು ಅದುವೇ ಸ್ವಾಸ್ಥ್ಯ ಸತಿ ಆಗಿದೆ. ಈ ಯೋಜನೆಯಡಿ 5 ಲಕ್ಷ ರೂಪಾಯಿ ಕವರೇಜ್ ಇದೆ. ಸಂಪೂರ್ಣ ಮೊತ್ತವನ್ನು ರಾಜ್ಯವು ಭರಿಸುತ್ತದೆ. ಸಂಪೂರ್ಣವಾಗಿ ಕಾಗದರಹಿತ, ನಗದು ರಹಿತ, ಇಬ್ಬರೂ ಸಂಗಾತಿಗಳ ಪೋಷಕರಿಗೂ ಇದು ಕವರ್ ಆಗುತ್ತದೆ. ಸರ್ಕಾರಿ ಆಸ್ಪತ್ರೆಯಲ್ಲಿ ಎಲ್ಲರಿಗೂ ಉಚಿತ ಚಿಕಿತ್ಸೆಯಿದೆ” ಎಂದು ಟಿಎಂಸಿ ಹೇಳಿದೆ.
ಸಂದೇಶ್ ಖಾಲಿಯಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳ ಬಗ್ಗೆ ಪ್ರಧಾನಿ ಮೋದಿ ಮಮತಾ ಬ್ಯಾನರ್ಜಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ಇದಕ್ಕೆ ತಿರುಗೇಟು ನೀಡಿರುವ ಟಿಎಂಸಿ “ಬಂಗಾಳ ಪೊಲೀಸರು ಸಂದೇಶ್ ಖಾಲಿ ಆರೋಪಿಯನ್ನು 72 ಗಂಟೆಗಳಲ್ಲಿ ಬಂಧಿಸಿದೆ” ಎಂದು ಹೇಳಿದೆ. “ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಬಿಜೆಪಿ ಸಂಸದರ ವಿರುದ್ಧ ಬಿಜೆಪಿ ಯಾವುದೇ ಕ್ರಮ ಕೈಗೊಂಡಿಲ್ಲ” ಎಂದು ಟಿಎಂಸಿ ಪ್ರಶ್ನಿಸಿದೆ.