ಲೋಕಸಭಾ ಚುನಾವಣೆ ಹಿನ್ನೆಲೆ, ಏ.26 ರಂದು ರಾಜ್ಯದ 14 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ನಡೆದಿದೆ. ಎರಡನೇ ಹಂತದ ಮತದಾನ ಮೇ 7ರಂದು ನಡೆಯಲಿದೆ. ಮೊದಲ ಹಂತದ ಮತದಾನದ ಸಂದರ್ಭದಲ್ಲಿ ಎಸ್ಎಸ್ಟಿ ಮತ್ತು ಪೊಲೀಸ್ ಇಲಾಖೆ ಬರೋಬ್ಬರಿ 2,172 ಚುನಾವಣಾ ಅಕ್ರಮ ಪ್ರಕರಣಗಳನ್ನು ದಾಖಲು ಮಾಡಿದೆ.
ರಾಜ್ಯದಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಹಣ, ಮದ್ಯ, ಡ್ರಗ್ಸ್, ಚಿನ್ನಾಭರಣ ಹಾಗೂ ಉಚಿತ ಉಡುಗೊರೆಗಳನ್ನು ಎಸ್ಎಸ್ಟಿ ಮತ್ತು ಪೊಲೀಸ್ ಇಲಾಖೆ ಜಪ್ತಿ ಮಾಡಿದೆ. ಅಬಕಾರಿ ಇಲಾಖೆ 3,098 ಹೀನಸ್ ಪ್ರಕರಣಗಳನ್ನು ದಾಖಲಿಸಿದೆ. ಲೈಸೆನ್ಸ್ ಉಲ್ಲಂಘನೆ ಮಾಡಿದ್ದಕ್ಕೆ 4,789 ಪ್ರಕರಣ, ಎನ್ಡಿಪಿಎಸ್ ಕಾಯ್ದೆ ಅಡಿ 177, ಸೆಕ್ಷನ್ 15ರಡಿ 28,299 ಪ್ರಕರಣಗಳು ದಾಖಲಾಗಿವೆ. ಅಧಿಕಾರಿಗಳು ಒಟ್ಟು 1,916 ವಾಹನಗಳನ್ನು ಜಪ್ತಿ ಮಾಡಿದ್ದಾರೆ.
ಎಫ್ಎಸ್ಟಿ ತಂಡ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಕೋರಮಂಗಲದಲ್ಲಿ ₹18.82 ಲಕ್ಷ, ಕೋಲಾರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಕೆಜಿಎಫ್ನ ಬೇತಮಂಗಲದಲ್ಲಿ ₹47.56 ಲಕ್ಷ ಹಣ ವಶಕ್ಕೆ ಪಡೆದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಧರ್ಮದ ಆಧಾರದ ಮೇಲೆ ಮತಯಾಚನೆ ಮಾಡಿದ ತೇಜಸ್ವಿ ಸೂರ್ಯ: ಪ್ರಕರಣ ದಾಖಲು
ಮೈಸೂರಿನ ಕಾಳಿದಾಸನಹುಂಡಿ ಚೆಕ್ಪೋಸ್ಟ್ನಲ್ಲಿ ₹81.90 ಲಕ್ಷ, ಬೆಂಗಳೂರಿನ ರಾಯನ್ ಸರ್ಕಲ್ ಚೆಕ್ಪೋಸ್ಟ್ನಲ್ಲಿ ₹20 ಲಕ್ಷ, ಉಡುಪಿ ಜಿಲ್ಲೆ ಕುಂದಾಪುರದಲ್ಲಿ ₹43.34 ಲಕ್ಷ ಜಪ್ತಿ ಮಾಡಲಾಗಿದೆ. ಈ ನಡುವೆ, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಯಲಹಂಕದ ಮಾದನಾಯಕನಹಳ್ಳಿ ಬಳಿ ₹4.80 ಕೋಟಿ ಹಣವನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಮೊದಲ ಹಂತದ ಮತದಾನದಲ್ಲಿ ಶೇ.69 ರಷ್ಟು ಮತದಾನವಾಗಿದೆ. ಎರಡನೇ ಹಂತದ ಮತದಾನ ಮೇ 7 ರಂದು ನಡೆಯಲಿದೆ.