2020ರಲ್ಲಿ ಜಾರ್ಜ್ ಫ್ಲಾಯ್ಡ್ ಹತ್ಯೆಯ ಕಹಿ ಘಟನೆ ಮಾಸುವ ಮುನ್ನವೇ ಅಮೆರಿಕಾದಲ್ಲಿ ಮತ್ತೋರ್ವ ಕಪ್ಪು ವರ್ಣೀಯ ಪೊಲೀಸರ ದೌರ್ಜನ್ಯದಿಂದ ಮೃತಪಟ್ಟಿದ್ದಾರೆ. ಪೊಲೀಸರು ಆತನಿಗೆ ಕೈಕೊಳ ಹಾಕಿ, ಆತನ ಕುತ್ತಿಗೆ ಮೇಲೆ ಕಾಲಿಟ್ಟು ಹಿಂಸಿಸಿದ್ದಾರೆ. ಆತ ‘ನನಗೆ ಉಸಿರಾಡಲು ಸಾಧ್ಯವಾಗುತ್ತಿಲ್ಲ’ ಎಂದು ಹೇಳಿದರೂ, ಪೊಲೀಸರು ಆತನ ಕುತ್ತಿಗೆಯಿಂದ ಕಾಲು ತೆಗೆದಿಲ್ಲ, ಪರಿಣಾಮ ನಿತ್ರಾಣನಾಗಿದ್ದ ವ್ಯಕ್ತಿ, ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಮೃತ ವ್ಯಕ್ತಿಯನ್ನು 53 ವರ್ಷದ ಪ್ರಾಂಕ್ ಟೈಸನ್ ಎಂದು ಗುರುತಿಸಲಾಗಿದೆ. ಘಟನೆ ಸಂಬಂಧ ಅಮೆರಿಕಾದ ಕ್ಯಾಂಟನ್ ಪೋಲೀಸ್ ಇಲಾಖೆಯು ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದಾರೆ. ಅದರಲ್ಲಿ, ಬಾರ್ವೊಂದರಲ್ಲಿ ಪೊಲೀಸರು ಟೈಸನ್ ಅವರನ್ನು ಎಳೆದಾಡಿ, ಆತನನ್ನು ನೆಲಕ್ಕುರುಳಿಸಿ, ಆತನ ಭುಜದ ಮೇಲೆ ಮಂಡಿಯೂರಿ ಕುಳಿತು, ಆತನ ಕೈಗೆ ಕೈಕೊಳ ಹಾಕಿದ್ದಾರೆ. ಟೈಸನ್ ತನಗೆ ಉಸಿರಾಡಲು ಸಾಧ್ಯವಾಗುತ್ತಿಲ್ಲ ಎಂದರೂ, ಪೊಲೀಸರು ಆತನ ಮೇಲೆ ಕುಳಿತಿರುವುದು ಕಂಡುಬಂದಿದೆ.
ಘಟನೆಯು ಏಪ್ರಿಲ್ 18ರಂದು ನಡೆದಿದೆ ಎನ್ನಲಾಗಿದೆ. ಕಾರಿನಲ್ಲಿ ತೆರಳುತ್ತಿದ್ದ ವ್ಯಕ್ತಿ ರಸ್ತೆ ಬಲಿದ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದಿದ್ದರು ಎನ್ನಲಾಗಿದೆ. ಘಟನೆ 36 ನಿಮಿಷಗಳ ವಿಡಿಯೋದಲ್ಲಿ, ಅಪಘಾತ ಸ್ಥಳಕ್ಕೆ ಗಸ್ತು ಪೊಲೀಸರು ಬರುತ್ತಾರೆ. ಅಲ್ಲಿ, ಆ ವ್ಯಕ್ತಿ ಹತ್ತಿರ ಬಾರ್ವೊಂದಕ್ಕೆ ಓಡಿ ಹೋದರೆಂದು ಸ್ಥಳೀಯರು ಹೇಳುತ್ತಾರೆ. ಅಧಿಕಾರಿಗಳು ಬಾರ್ಗೆ ನುಗ್ಗಿ, ಅಲ್ಲಿ ಟೈಸನ್ನನ್ನು ಹಿಡಿಯಲು ಮುಂದಾಗಿತ್ತಾರೆ. ಅಧಿಕಾರಿಗಳು ಮತ್ತು ಟೈಸನ್ ನಡುವೆ ವಾಗ್ವಾದ ನಡೆಯುತ್ತದೆ.
ಅಧಿಕಾರಿಗಳು ಟೈಸನ್ನನ್ನು ನೆಲಕ್ಕೆ ಉರುಳಿಸಿ, ಆತನಿಗೆ ಕೈಕೋಳ ಹಾಕುತ್ತಾರೆ. ಓರ್ವ ಅಧಿಕಾರಿ ಟೈಸನ್ ಕುತ್ತಿಗೆಯ ಬಳಿ ಭುಜದ ಮೇಲೆ ಮುಂಡಿಯೂರಿ ಕುಳಿತಿರುವುದು ವಿಡಿಯೋದಲ್ಲಿ ಕಂಡುಬಂದಿದೆ.
Canton, Ohio
Bodycam footage of Frank Tyson pic.twitter.com/RvpE4Meuib
— The Daily Sneed™ (@Tr00peRR) April 26, 2024
ಸುಮಾರು 30 ಸೆಕೆಂಡ್ಗಳ ಕಾಲ ಅಧಿಕಾರಿ ಮೇಲೆ ಮಂಡಿಯೂರಿ ಕುಳಿತಿದ್ದರಿಂದ, ‘ನನಗೆ ಉಸಿರಾಡಲು ಸಾಧ್ಯವಾಗುತ್ತಿಲ್ಲ’ ಎಂದು ಪದೇ ಪದೇ ಟೈಸನ್ ಕೂಗುವುದು ವಿಡಿಯೋದಲ್ಲಿ ಸೆರೆಯಾಗಿದೆ. ಅಧಿಕಾರ ಮೇಲೆದ್ದ ಬಳಿಕ, ಟೈಸನ್ ಯಾವುದೇ ಚಲನೆ ಇಲ್ಲದೆ ಮಲಗಿರುವುದು ಕಾಣಿಸುತ್ತದೆ. ಸುಮಾರು ಆರು ನಿಮಿಷಗಳ ಬಳಿಕ, ಆತನನ್ನು ಅಧಿಕಾರಿಗಳು ಪರಿಶೀಲಿಸುತ್ತಾರೆ. ಬಳಿಕ, ಆ್ಯಂಬುಲೆನ್ಸ್ಗೆ ಕರೆ ಮಾಡುತ್ತಾರೆ. ಆತನನ್ನು ಆಸ್ಪತ್ರೆಗೆ ಕರೆದೊಯ್ಯುವುದು ವಿಡಿಯೋದಲ್ಲಿ ಕಂಡುಬಂದಿದೆ.
ಕ್ಲೀವ್ಲ್ಯಾಂಡ್ನಲ್ಲಿರುವ NBC ಅಂಗಸಂಸ್ಥೆಯಾದ WKYC ಪ್ರಕಾರ, ಟೈಸನ್ ಸ್ಥಳೀಯ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಟೈಸನ್ ಸಾವಿನ ಘಟನೆಯಲ್ಲಿ ಭಾಗಿಯಾಗಿರುವ ಕ್ಯಾಂಟನ್ ಪೊಲೀಸ್ ಇಲಾಖೆಯ ಅಧಿಕಾರಿಗಳನ್ನು ಬ್ಯೂ ಸ್ಕೋನೆಗ್ಗೆ ಮತ್ತು ಕ್ಯಾಮ್ಡೆನ್ ಬರ್ಚ್ ಎಂದು ಗುರುತಿಸಲಾಗಿದೆ. ಇಬ್ಬರನ್ನೂ ಆಡಳಿತಾತ್ಮಕ ರಜೆಯಲ್ಲಿ ಇರಿಸಲಾಗಿದೆ. ಓಹಿಯೋ ಬ್ಯೂರೋ ಆಫ್ ಕ್ರಿಮಿನಲ್ ಇನ್ವೆಸ್ಟಿಗೇಶನ್ (ಒಸಿಐ) ಘಟನೆಯ ಬಗ್ಗೆ ತನಿಖೆ ನಡೆಸುತ್ತಿದೆ ಎಂದು ವರದಿಯಾಗಿದೆ.
ಈ ಘಟನೆಯು ನಾಲ್ಕು ವರ್ಷಗಳ ಹಿಂದೆ ಮಿನ್ನಿಯಾಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜಾರ್ಜ್ ಫ್ಲಾಯ್ಡ್ನನ್ನು ಪೊಲೀಸರು ಹತ್ಯೆಗೈದಿದ್ದ ಘಟನೆಯನ್ನು ನೆನಪಿಸಿದೆ. ಆಗ, ಪೊಲೀಸ್ ಅಧಿಕಾರಿ ಡೆರೆಕ್ ಚೌವಿನ್ ಎಂಬಾತ ಫ್ಲಾಯ್ಡ್ನ ಕುತ್ತಿಗೆ ಮೇಲೆ 9 ನಿಮಿಷಗಳ ಕಾಲ ಮೊಣಕಾಲು ಹೂರಿ ಕುಳಿತಿದ್ದರಿಂದ ಫ್ಲಾಯ್ಡ್ ಸಾವನ್ನಪ್ಪಿದ್ದರು. ಆ ಘಟನೆಯ ವಿಡಿಯೋ ಕೂಡ ವೈರಲ್ ಆಗಿತ್ತು. ಪೊಲೀಸ್ ದೌರ್ಜನ್ಯ ಮತ್ತು ವರ್ಣಭೇದ ನೀತಿಯ ವಿರುದ್ಧ ವಿಶ್ವಾದ್ಯಂತ ಪ್ರತಿಭಟನೆಗಳು ನಡೆದಿದ್ದವು.