ದೇಶವು ಸ್ವಾತಂತ್ರ್ಯಗೊಂಡು 76ವರ್ಷಗಳು ಗತಿಸಿದರೂ ಸಹ ನಮ್ಮನ್ನು ಆಳಿರುವ ಕಾಂಗ್ರೆಸ್, ಬಿಜೆಪಿ ಹಾಗೂ ಸಮ್ಮಿಶ್ರ ಸರ್ಕಾರಗಳು ಜನಸಾಮಾನ್ಯರ ಜೀವನವನ್ನು ಮತ್ತಷ್ಟು ಅಧೋಗತಿಗೆ ಇಳಿಸಿವೆ ಎಂದು ಎಸ್.ಯು.ಸಿ.ಐ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಸಮಿತಿಯ ಸದಸ್ಯ ಕಾಮ್ರೇಡ್ ವಿ.ಜಿ ದೇಸಾಯಿ ಹೇಳಿದರು.
ಕಲಬುರಗಿ ನಗರದ ಓಂ ನಗರ, ಖರ್ಗೆ ವೃತ್ತ, ಗಂಜ್ ಹಾಗೂ ಎ.ಪಿ.ಎಂ.ಸಿ ಮಾರುಕ್ಕಟ್ಟೆಯಲ್ಲಿ ನಡೆದ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಕ್ಷದ ಸಭೆ ಉದ್ದೇಶಿಸಿ ಅವರು ಮಾತನಾಡಿದರು.
ಕೋಮುವಾದಿ, ಫ್ಯಾಸೀವಾದಿ, ಬಂಡವಾಳಶಾಹಿ ವಿರುದ್ಧ ಈ ಚುನಾವಣೆಯಲ್ಲಿ ಜನಪರ ಧ್ವನಿ ಮೊಳಗಬೇಕು. ಬಂಡವಾಳಶಾಹಿಗಳ ಏಜೆಂಟಗಳಾದ ಈ ಪಕ್ಷಗಳನ್ನು ತಿರಸ್ಕರಿಸಿ ಜನಹೋರಾಟದ ಮೂಲಕ ಹೊರಹೊಮ್ಮಿದ ನಮ್ಮ ಪಕ್ಷದ ಅಭ್ಯರ್ಥಿಯಾದ ಎಸ್.ಎಮ್.ಶರ್ಮಾ ರವರನ್ನು ಚುನಾಯಿಸಬೇಕೆಂದು ಮನವಿ ಮಾಡಿದರು.
ಜಿಲ್ಲಾ ಸಮಿತಿ ಸದಸ್ಯ ಕಾ.ಮಹೇಶ್ ಎಸ್.ಬಿ ಮಾತನಾಡುತ್ತಾ, ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ರೈತರ ಸಂಕಷ್ಟಕ್ಕೆ ಪರಿಹಾರ ಸಿಗುತ್ತಿಲ್ಲ. ರೈತರ ಹೆಸರಿನಲ್ಲಿ ಪ್ರಮಾಣ ವಚನ ತೆಗೆದುಕೊಂಡು ಅವರನ್ನು ಕಡೆಗಣಿಸುತ್ತಾರೆ ಹಾಗೂ ಗೋಲಿಬಾರ್ ಕೂಡಾ ನಡೆಸುತ್ತಾರೆ. ಹಾಗಾಗಿ ಕಾರ್ಮಿಕ ವಿರೋಧಿ, ರೈತರ ವಿರೋಧಿ ಪಕ್ಷಗಳನ್ನು ಸೋಲಿಸಬೇಕು ಹಾಗೂ ಈ ಸಮಸ್ಯೆಗಳಿಗೆ ಸಂಸತ್ತಿನಲ್ಲಿ ಧ್ವನಿ ಎತ್ತಲು ಕಾ.ಎಸ್.ಎಂ.ಶರ್ಮಾರವರನ್ನು ಗೆಲ್ಲಿಸಬೇಕೆಂದು ಮನವಿ ಮಾಡಿಕೊಂಡರು.
ಈ ಸಭೆಗಳನ್ನು ಉದ್ದೇಶಿಸಿ ಕಾ.ಮಹೇಶ್ ನಾಡಗೌಡ, ಕಾ.ಸ್ನೇಹಾ ಕಟ್ಟಿಮನಿ, ಮುಂತಾದವರು ಮಾತನಾಡಿದ್ದರು.
ಅಭ್ಯರ್ಥಿಯಾದ ಎಸ್.ಎಮ್.ಶರ್ಮ ಅವರು ಮಾತನಾಡಿ, ಕಲಬುರಗಿ ಜನರ ಸಮಸ್ಯೆಗಳನ್ನು ಹಾಗೂ ಜನಹೋರಾಟದ ಧ್ವನಿಯನ್ನು ಸಂಸತ್ತಿನಲ್ಲಿ ಪ್ರತಿಧ್ವನಿಸಲು ನಮ್ಮನ್ನು ಆಯ್ಕೆ ಮಾಡಬೇಕೆಂದು ಮನವಿ ಮಾಡಿದರು.
ಈ ಸಭೆಯಲ್ಲಿ ಪಕ್ಷದ ಕಾರ್ಯಕರ್ತರಾದ ಹಣಮಂತ ಎಸ್.ಎಚ್, ಸಂತೋಷ ಹಿರವೆ, ತುಳಜಾರಾಮ, ಪ್ರೀತಿ ದೊಡ್ಡಮನಿ, ಭೀಮಾಶಂಕರ ಆಂದೋಲ, ನಾಗರಾಜ್ ಮುಂತಾದವರು ಉಪಸ್ಥಿತರಿದ್ದರು.
ನಗರದ ಜನತೆಯಿಂದ ಅಭ್ಯರ್ಥಿಗೆ ಬೆಂಬಲ ನೀಡುತ್ತಾ ವೋಟು ಕೊಡುತ್ತೇವೆ ಎನ್ನುವ ಜೊತೆಗೆ ಈಗ ನೋಟು ಕೂಡಾ ಕೊಡುತ್ತೇವೆಂದು ಧನಸಹಾಯ ಮಾಡಿದ್ದು ವಿಶೇಷವಾಗಿತ್ತು.
