ಸಂಪತ್ತಿನ ಸಮಾನ ಹಂಚಿಕೆ ಎನ್ನುವುದು ಒಂದು ಉದಾತ್ತ ಚಿಂತನೆಯಾಗಿದೆ. ಇದು ನಮ್ಮ ಸಂವಿಧಾನದ ಆಶಯವೂ ಆಗಿದೆ. ಹಾಗೆ ನೋಡಿದರೆ, ಬಡವರ ಸಂಪತ್ತನ್ನು ಕಿತ್ತು ಶ್ರೀಮಂತರಿಗೆ ಕೊಟ್ಟವರು, ಬಡವರಿಗೆ ಬಹು ದೊಡ್ಡ ದ್ರೋಹ ಎಸಗಿದವರು ಪ್ರಧಾನಿ ಮೋದಿಯವರೇ. ಆದರೂ ವಾಟ್ಸ್ಯಾಪ್ ಯೂನಿವರ್ಸಿಟಿಯ ಮೂಲಕ, ಧರ್ಮ ಮತ್ತು ದೇಶ ಎಂಬ ಭಾವನಾತ್ಮಕ ವಿಷಯಗಳನ್ನು ಭಕ್ತರ ಮೆದುಳಿಗೆ ತುಂಬಿ, ಮುಸ್ಲಿಂ ಮತ್ತು ಕಾಂಗ್ರೆಸ್ ಬಗ್ಗೆ ದ್ವೇಷ ಬಿತ್ತುತ್ತಿದ್ದಾರೆ…
ಭಾರತೀಯ ಜನತಾ ಪಕ್ಷ ಸೃಷ್ಟಿಸಿರುವ ʼವಾಟ್ಸ್ಯಾಪ್ ಯೂನಿವರ್ಸಿಟಿʼಯ ಭಕ್ತರಿಂದ ಬಂದ ಒಂದು ಸುದ್ದಿ ಹೀಗಿತ್ತು: ಭಾರೀ ಪಿತೂರಿ, ಪಿತ್ರಾರ್ಜಿತ (inheritance tax) ತೆರಿಗೆಯ ಹಿಂದಿರುವವರು ಯಾರು?
ಮಾರ್ಚ್ 5, 2023ರಂದು ರಾತ್ರಿ 8 ಗಂಟೆಗೆ ಲಂಡನ್ನ ಹೋಟೆಲ್‌ನಲ್ಲಿ ಒಂದು ಸಭೆ ನಡೆಯಿತು. ಆ ಸಭೆಯಲ್ಲಿ ರಾಹುಲ್ ಗಾಂಧಿ, ಸ್ಯಾಮ್ ಪಿತ್ರೋಡ, ಅಮೆರಿಕಾದ ಸಿಐಎ ಡೆಪ್ಯುಟಿ ಡೆರೆಕ್ಟರ್ ಮತ್ತು ಐವರು ಭಾರತ ವಿರೋಧಿ ಪಾಕಿಸ್ತಾನಿಗಳು ಭಾಗವಹಿಸಿದ್ದರು.
ಪಿತ್ರಾರ್ಜಿತ ತೆರಿಗೆಯ ಹಿಂದೆ ಅಮೆರಿಕ, ಚೈನಾ ಮತ್ತು ಪಾಕಿಸ್ತಾನದ ಕೈವಾಡವಿದೆ. ಅಮೆರಿಕ ಸರ್ಕಾರ 9 ಸಾವಿರ ಟನ್ ಚಿನ್ನವನ್ನು ರಿಸರ್ವ್ ಇಟ್ಟುಕೊಂಡಿದೆ. ಭಾರತ 800 ಟನ್ ಚಿನ್ನವನ್ನು ಹೊಂದಿದೆ. ಆದರೆ ಭಾರತೀಯ ಸಮಾಜದಲ್ಲಿ 26 ಸಾವಿರ ಟನ್‌ನಷ್ಟು ಚಿನ್ನವಿದೆ. ಅದು ಭಾರತ ಸರ್ಕಾರದ ಸುಪರ್ದಿಯಲ್ಲಿರುವುದಕ್ಕಿಂತ ಮೂರು ಪಟ್ಟು ಹೆಚ್ಚು. ಇನ್ನು ನಮ್ಮ ಹಿಂದೂ ದೇವಸ್ಥಾನಗಳಲ್ಲಿ ಅದಕ್ಕಿಂತಲೂ ಹೆಚ್ಚಾಗಿದೆ. ಅವರು ನಮ್ಮ ದೇಶದ ಮೇಲೆ ಪಿತ್ರಾರ್ಜಿತ ತೆರಿಗೆ ಹೇರಿ, ನಮ್ಮ ಭಾರತೀಯ ಸಮಾಜವನ್ನು ಒಡೆದು, ನಮ್ಮ ಹಿಂದೂ ಕುಟುಂಬಗಳಲ್ಲಿರುವ ಚಿನ್ನವನ್ನು ಕಿತ್ತುಕೊಂಡು ಮುಸ್ಲಿಮರಿಗೆ ಮತ್ತು ನುಸುಳುಕೋರರಿಗೆ ಹಂಚುತ್ತಾರೆ. ನಮ್ಮ ವ್ಯಾಪಾರ ವ್ಯವಹಾರ ಉದ್ದಿಮೆಯಿಂದ ಶೇ. 85ರಷ್ಟು ತೆರಿಗೆ ಕಸಿಯುತ್ತಾರೆ. ನಮಗೆ ಉಳಿಯುವುದು ಶೇ. 15 ಮಾತ್ರ. ಇದು ಕಾಂಗ್ರೆಸ್ ಪಕ್ಷದ ಪಿತೂರಿ. ಈಗ ನಾವು ಎಚ್ಚರ ವಹಿಸದಿದ್ದರೆ, ನಾವು ಇರ್ತಿವೋ ಇಲ್ಲವೋ ಬಿಡಿ, ದೇಶ ಉಳಿಯುವುದಿಲ್ಲ. ಅದಕ್ಕಾಗಿ ಇದನ್ನು ಈಗಲೇ ಎಲ್ಲರಿಗೂ ಹಂಚಿ.
ಈ ಮೆಸೇಜ್ ಇಂಗ್ಲಿಷ್ನಲ್ಲಿದೆ. ಆ ಮೆಸೇಜನ್ನು ನಂಬಲಿಕ್ಕೆ ಬೇಕಾದ ದಿನಾಂಕ, ಸಮಯ, ಸ್ಥಳ ಮತ್ತು ಆ ಸಭೆಯಲ್ಲಿ ಭಾಗಿಯಾದ ವ್ಯಕ್ತಿಗಳನ್ನು ಹೆಸರಿಸಲಾಗಿದೆ. ಹಾಗೂ ಆ ಸಭೆಯಲ್ಲಿ ತೆಗೆದುಕೊಂಡು ನಿರ್ಣಯ ಸತ್ಯವೆಂದು ಸಾರಲು, ನಂಬಲು ಬೇಕಾದ ಹಿಂದೂಗಳು, ದೇವಸ್ಥಾನಗಳ ಮೇಲೆ ಮುಸ್ಲಿಮ್ ದೊರೆಗಳ ದಾಳಿಗಳ ಚರಿತ್ರೆಯನ್ನು ನೆನಪಿಸಲಾಗಿದೆ. ಸಾಲದು ಎಂದು ದೇಶ ಉಳಿಯುವುದಿಲ್ಲ ಎಂಬ ಎಚ್ಚರಿಕೆಯನ್ನೂ ನೀಡಲಾಗಿದೆ.
ಅಂದರೆ, ಧರ್ಮ ಮತ್ತು ದೇಶ ಎಂಬ ಭಾವನಾತ್ಮಕ ವಿಷಯಗಳನ್ನು ಭಕ್ತರ ಮೆದುಳಿಗೆ ತುಂಬಿ ಮುಸ್ಲಿಂ ಮತ್ತು ಕಾಂಗ್ರೆಸ್ ಬಗ್ಗೆ ದ್ವೇಷ ಬಿತ್ತಲಾಗಿದೆ.
ಕಳೆದ ವಾರವಷ್ಟೇ ಯೂ ಟ್ಯೂಬರ್ ಧ್ರುವ್ ರಾಠಿ, ವಾಟ್ಸ್ಯಾಪ್ ಯೂನಿವರ್ಸಿಟಿಗೆ ಬಲಿಯಾಗಿರುವ ಭಾರತದ ಬಗ್ಗೆ ಒಂದು ವಿಡಿಯೋ ಮಾಡಿದ್ದರು. ಅದರಲ್ಲಿ ಅವರು ನಾಲ್ಕು ಪ್ರಮುಖ ಅಂಶಗಳನ್ನು ಉಲ್ಲೇಖಿಸಿದ್ದರು. ಆರೆಸ್ಸೆಸ್ ಮತ್ತು ಬಿಜೆಪಿ ಭಾರತೀಯರನ್ನು ಭಾವನಾತ್ಮಕವಾಗಿ ಬಂಧಿಸಲು ಬಳಸುವ ಅಸ್ತ್ರಗಳು– ಮೊದಲಿಗೆ, ಹಿಂದೂ ಧರ್ಮದ ಬಗ್ಗೆ ಹೆಮ್ಮೆ ಹುಟ್ಟಿಸುವುದು. ಅಂದರೆ ಪ್ರಪಂಚದಲ್ಲಿ ನಮ್ಮ ಧರ್ಮವೇ ಶ್ರೇಷ್ಠ ಧರ್ಮ ಎಂದು ಗರ್ವ ಮತ್ತು ಅಹಂಕಾರವನ್ನು ಹುಟ್ಟಿಸುವುದು. ಎರಡನೆಯದು, ಸಾವಿರಾರು ವರ್ಷಗಳಿಂದ ಹಿಂದೂಗಳು ದಾಳಿಗೆ ಗುರಿಯಾಗಿದ್ದು, ಆಕ್ರಮಣ ಮತ್ತು ಅತ್ಯಾಚಾರಕ್ಕೆ ಬಲಿಯಾಗಿರುವುದು. ಮೂರನೆಯದು, ನೀವು ಈಗ ಅಪಾಯದಲ್ಲಿದ್ದೀರ. ಈ ಅಪಾಯ ತಂದೊಡ್ಡುತ್ತಿರುವವರು ಅಮೆರಿಕ, ಚೈನಾ, ಪಾಕಿಸ್ತಾನ. ಇವರ ಜೊತೆಗೆ ವಿರೋಧ ಪಕ್ಷಗಳಾದ ಕಾಂಗ್ರೆಸ್, ಆಪ್ ಮತ್ತು ತುಕ್ಡೆ ತುಕ್ಡೆ ಪಕ್ಷಗಳೆಲ್ಲ ಸೇರಿಕೊಂಡಿವೆ ಎಂದು ಭಯ ಹುಟ್ಟಿಸುವುದು. ನಾಲ್ಕನೆಯದು, ನಿಮ್ಮನ್ನು ರಕ್ಷಿಸುವವರು ಯಾರು– ಅದು ಮೋದಿ ಮಾತ್ರ. ಮೋದಿ ರಾಮನ ಅವತಾರ, ಕೃಷ್ಣನ ಅವತಾರ, ಹಿಂದೂಗಳನ್ನು ಬಚಾವು ಮಾಡುವುದು ಮೋದಿಯಿಂದ ಮಾತ್ರ ಸಾಧ್ಯ. ಹಾಗಾಗಿ ನೀವು ಮೋದಿಯನ್ನು–ಬಿಜೆಪಿಯನ್ನು ಬೆಂಬಲಿಸಿ ಎನ್ನುವುದು.
ಮೇಲಿನ ಮೆಸೇಜ್ ಮತ್ತು ಧ್ರುವ್ ರಾಠಿಯ ವಿಶ್ಲೇಷಣೆ– ಎರಡೂ ತಾಳೆಯಾಗುತ್ತವೆ. ಕಣ್ಮುಂದೆ ನಡೆಯುತ್ತಿರುವುದು ಕೂಡ ಅದೇ ಆಗಿದೆ.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಸುಳ್ಳುಗಾರರನ್ನು ಸೋಲಿಸುವ ಸಮಯ ಬಂದಿದೆ; ಮತದಾರರೇ ಮುಂದಾಗಬೇಕಿದೆ
ಅಸಲಿಗೆ ಈ ಪಿತ್ರಾರ್ಜಿತ ತೆರಿಗೆ, ಆಸ್ತಿ ಹಂಚಿಕೆ ಮತ್ತು ಮಹಿಳೆಯರ ಮಂಗಳಸೂತ್ರ ಕಿತ್ತುಕೊಂಡು ಮುಸ್ಲಿಮರಿಗೆ ಹಂಚುವುದು ಎಂಬ ಹಸೀ ಸುಳ್ಳನ್ನು ಬಹಿರಂಗವಾಗಿ ಹೇಳಿದವರು ಪ್ರಧಾನಿ ಮೋದಿಯವರು. ಇದಕ್ಕಾಗಿ ಅವರು ಕಾಂಗ್ರೆಸ್ಸಿನ ಪ್ರಣಾಳಿಕೆ, ರಾಹುಲ್ ಗಾಂಧಿಯವರ ಸಂಪತ್ತಿನ ಸಮಾನ ಹಂಚಿಕೆ ಮತ್ತು ಸ್ಯಾಮ್ ಪಿತ್ರೋಡನ ಹೇಳಿಕೆಯನ್ನು ತಮಗೆ ಬೇಕಾದಂತೆ ಬಳಸಿಕೊಂಡಿದ್ದರು.
ಕಾಂಗ್ರೆಸ್ಸಿನ ಪ್ರಣಾಳಿಕೆಯಲ್ಲಿ ಹಾಗೂ ರಾಹುಲ್ ಗಾಂಧಿ ಹೇಳಿಕೆಯಲ್ಲಿ ಎಲ್ಲೂ ಆಸ್ತಿ ತೆರಿಗೆ ಮತ್ತು ಮಂಗಳಸೂತ್ರದ ಬಗ್ಗೆ ಪ್ರಸ್ತಾಪವಿಲ್ಲ. ಹಾಗೆಯೇ ಇಂಡಿಯನ್ ಓವರ್ ಸೀಸ್ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್ ಪಿತ್ರೋಡ, ಅಮೆರಿಕದಲ್ಲಿ ಎಎನ್ಐ ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ, ಪಿತ್ರಾರ್ಜಿತ ತೆರಿಗೆ ಬಗ್ಗೆ ಚಿಂತನೆ ನಡೆಸಬಹುದು ಎಂದಿದ್ದರು. ಸ್ಯಾಮ್ ಪಿತ್ರೋಡರ ‘ಚಿಂತನೆ’ಯನ್ನು ಹೆಕ್ಕಿ ತೆಗೆದ ಮೋದಿಯವರು, ಅದನ್ನು ‘ಕಾಂಗ್ರೆಸ್ ಚಿತಾವಣೆ’ಯನ್ನಾಗಿ ಬಣ್ಣ ಕಟ್ಟಿ ಬಣ್ಣಿಸಿದ್ದರು.
ಅಂದರೆ ಭಕ್ತರಲ್ಲಿ ಭಯ ಬಿತ್ತಿದರು. ನೀವು ಅಪಾಯದಲ್ಲಿದ್ದೀರಿ ಎಂದು ಹೆದರಿಸಿದರು. ನಿಮ್ಮ ರಕ್ಷಣೆಗೆ ನಾನಿದ್ದೇನೆ ಎಂದರು.
ವಿಪರ್ಯಾಸವೆಂದರೆ, ಈಗ ಕಾಂಗ್ರೆಸ್ ಅಧಿಕಾರದಲ್ಲಿಲ್ಲ. ಕಾಯ್ದೆ-ಕಾನೂನು ರೂಪಿಸುವ ಹುದ್ದೆಯಲ್ಲಿ ಸ್ಯಾಮ್ ಪಿತ್ರೋಡ ಕೂಡ ಇಲ್ಲ. ಅಷ್ಟೇ ಅಲ್ಲ, ನಮ್ಮ ದೇಶದಲ್ಲಿ ಈ ಹಿಂದೆ ಜಾರಿಯಲ್ಲಿದ್ದ ಪಿತ್ರಾರ್ಜಿತ ತೆರಿಗೆ ಪದ್ಧತಿಯನ್ನು 1985ರಲ್ಲಿ ಅಧಿಕಾರದಲ್ಲಿದ್ದ ರಾಜೀವ್ ಗಾಂಧಿಯ ಕಾಂಗ್ರೆಸ್ ಸರ್ಕಾರ ರದ್ದುಗೊಳಿಸಿದ್ದು, ಮೋದಿಗೆ ಗೊತ್ತಿಲ್ಲದ ವಿಚಾರವಲ್ಲ.
ಆದರೂ ಓಟಿಗಾಗಿ, ಅಧಿಕಾರಕ್ಕಾಗಿ ಮೋದಿ ಸುಳ್ಳು ಹೇಳುತ್ತಲೇ ಇದ್ದಾರೆ. ಭಕ್ತರು ನಂಬುತ್ತಲೇ ಇದ್ದಾರೆ.
ಅಸಲಿಗೆ, ಸಂಪತ್ತಿನ ಸಮಾನ ಹಂಚಿಕೆ ಎನ್ನುವುದು ಒಂದು ಉದಾತ್ತ ಚಿಂತನೆಯಾಗಿದೆ. ಇದು ನಮ್ಮ ಸಂವಿಧಾನದ ಆಶಯವೂ ಆಗಿದೆ. ಹಾಗೆ ನೋಡಿದರೆ, ಬಡವರ ಸಂಪತ್ತನ್ನು ಕಿತ್ತು ಶ್ರೀಮಂತರಿಗೆ ಕೊಟ್ಟವರು, ಬಡವರಿಗೆ ಬಹು ದೊಡ್ಡ ದ್ರೋಹ ಎಸಗಿದವರು ಈ ನಮ್ಮ ಪ್ರಧಾನಿ ಮೋದಿಯವರೇ.
ಮೋದಿಯವರ ಹತ್ತು ವರ್ಷಗಳ ಆಡಳಿತದಲ್ಲಿ ಸಂಕಷ್ಟದಲ್ಲಿರುವ ರೈತರ ಸಾಲ ಮನ್ನಾ ಮಾಡದೆ ಶ್ರೀಮಂತ ಉದ್ಯಮಿಗಳ 16 ಲಕ್ಷ ಕೋಟಿ ಸಾಲ ಮನ್ನಾ ಮಾಡಿದರು. 2019ರಲ್ಲಿ ಶೇ. 30ರಷ್ಟಿದ್ದ ಕಾರ್ಪೊರೇಟ್ ತೆರಿಗೆಯನ್ನು ಶೇ. 22ಕ್ಕೆ ಇಳಿಸಿ, ಎರಡು ವರ್ಷಗಳಲ್ಲಿ 1.81 ಲಕ್ಷ ಕೋಟಿಯನ್ನು ಶ್ರೀಮಂತರ ಜೇಬು ತುಂಬಿಸಿದರು. ಹಾಗೆಯೇ, ಈ ಹತ್ತು ವರ್ಷಗಳಲ್ಲಿ ಅವರ ಆಪ್ತರಾದ ಅಂಬಾನಿಯ ಆಸ್ತಿ 350 ಪಟ್ಟು, ಅದಾನಿಯ ಆಸ್ತಿ 1225 ಪಟ್ಟು ಹೆಚ್ಚಾಗುವಂತೆ ಕಾಯ್ದೆಗಳನ್ನು ರೂಪಿಸಿದರು. 23 ಸಾರ್ವಜನಿಕ ಸ್ವಾಮ್ಯದ ಸಂಸ್ಥೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡಿದರು. ಭಾರತದ ಬಡವನ ತಲೆ ಮೇಲೆ ಸಾಲದ ಹೊರೆ ಹೊರಿಸಿದರು.
ಇನ್ನೆಷ್ಟು ದಿನ ಸಹಿಸುವುದು ಈ ಸೋಗಲಾಡಿಯನ್ನು?
