“ಕರ್ನಾಟಕದಲ್ಲಿ ಕಾಂಗ್ರೆಸ್, ಸರ್ಕಾರವನ್ನು ನಿರ್ವಹಿಸುತ್ತಿಲ್ಲ ವಸೂಲಿ ಗ್ಯಾಂಗ್ ಅನ್ನು ನಡೆಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ ಆರೋಪಿಸಿದ್ದು, ಕಾಂಗ್ರೆಸ್ ಲೂಟಿಕೋರ ಸರ್ಕಾರ, ಈ ಸರ್ಕಾರದ ಕೈಗೆ ಇಂಥಾ ದೊಡ್ಡ ದೇಶವನ್ನು ಕೊಡಬೇಕೆ” ಎಂದು ಬಾಗಲಕೋಟೆಯಲ್ಲಿ ಇಂದು ನಡೆದ ಸಮಾವೇಶದಲ್ಲಿ ಮಾತನಾಡಿ ಜನರನ್ನು ಪ್ರಶ್ನಿಸಿದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿರುವಾಗ ‘40 ಪರ್ಸೆಂಟ್ ಕಮಿಷನ್ ಸರ್ಕಾರ’ ಎಂದು ಇಡೀ ದೇಶದಲ್ಲೇ ಕುಖ್ಯಾತಿ ಗಳಿಸಿದೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ‘ಪೇ ಸಿಎಂ’ ಎಂದು ಕರೆಯುತ್ತಾರೆ’. ಮೋದಿ ಅವರು ರಾಮರಾಜ್ಯ ಮಾಡ್ತೀನಿ ಅಂದಿದ್ರು. ರಾವಣ ರಾಜ್ಯ ಮಾಡಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರದ ಆಡಳಿತ ವೈಖರಿಗೆ ಜನರು ಭ್ರಮನಿರಸನರಾಗಿದ್ದಾರೆ. ಆದರೂ ಕೂಡಾ ಮೋದಿ ಪ್ರಚಾರಕ್ಕೆ ಹೋದಲ್ಲೆಲ್ಲಾ ಕಾಂಗ್ರೆಸ್ ಭ್ರಷ್ಟ ಸರ್ಕಾರ, ಅಧಿಕಾರಕ್ಕೆ ಬಂದರೆ ಸಾಕು ಲೂಟಿ ಮಾಡುವುದೇ ಅವರ ಕೆಲಸವೆಂದು ಪುಂಕಾನುಪುಂಕವಾಗಿ ಪುಂಗುತ್ತಿದ್ದಾರೆ.
“ಕಳೆದ 10 ವರ್ಷಗಳಲ್ಲಿ ಕತ್ತಲಿನಲ್ಲಿದ್ದ 18 ಸಾವಿರ ಹಳ್ಳಿಗಳನ್ನು ವಿದ್ಯುತ್ ದೀಪಗಳಿಂದ ಬೆಳಗಿದೆ. ಶೇ.16ರಷ್ಟು ಜನರಿಗೆ ಮಾತ್ರ ಈ ಮೊದಲು ಜಲಜೀವನ್ ಮಿಷನ್ ಅಡಿ ನೀರು ತಲುಪುತ್ತಿತ್ತು. ಆದರೆ ಈಗ ಐದು ವರ್ಷಗಳಲ್ಲಿ ಶೇ.75ರಷ್ಟು ಜನರಿಗೆ ನೀರು ತಲುಪುತ್ತಿದೆ” ಎಂದು ಮೋದಿ ಸುಳ್ಳು ಭಾಷಣಗಳನ್ನು ಮಾಡುತ್ತಿದ್ದಾರೆ.
ಪ್ರಧಾನಮಂತ್ರಿ ಸೂರ್ಯ ಘರ್ ಮುಫ್ತ ಬಿಜಲಿ ಯೋಜನೆಯ ಮೂಲಕ ಬಡ ಕುಟುಂಬಗಳಿಗೆ ಉಚಿತ ವಿದ್ಯುತ್ ಪೂರೈಸುತ್ತೇವೆ ಎನ್ನುವುದು ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದು, ಕಳೆದ ವರ್ಷದ ಬಜೆಟ್‌ನಲ್ಲಿಯೇ ಘೋಷಿಸಿದ್ದ ಈ ಯೋಜನೆ ಸಂಪೂರ್ಣ ಉಚಿತ ಅಲ್ಲ. 1 ಕಿಲೋ ವ್ಯಾಟ್ ಉತ್ಪಾದಿಸುವ ರೂಫ್‌ಟಾಪ್ ಸೋಲಾರ್ ಪ್ಯಾನೆಲ್‌ಗೆ ₹50,000 ವೆಚ್ಚವಾಗುತ್ತದೆ. ಈ ಮೊತ್ತವನ್ನು ಶೇ.40ರಷ್ಟು ಹಣವನ್ನು ಖರೀದಿಸುವ ಕುಟುಂಬವೇ ಭರಿಸಬೇಕಾಗುತ್ತದೆ. ಬ್ಯಾಂಕ್‌ಗಳಿಂದ ಸಾಲ ಕೊಡಿಸಲಾಗುತ್ತಿದೆ. ಅಂದರೆ ಸೋಲಾರ್ ಪ್ಯಾನೆಲ್ ಅಳವಡಿಸುವ ವೆಚ್ಚದ ಹೊರೆಯನ್ನು ಬಡ ಕುಟುಂಬದ ಮೇಲೆ ಹೊರಿಸಲಾಗಿದೆ. ಮತ್ತೆ ಎಲ್ಲಿಯ ಉಚಿತ?
ಈವರೆಗಿನ ಯಾವುದೇ ಸರ್ಕಾರಗಳು ಕುಡಿಯುವ ನೀರನ್ನು ಮೂಲ ಸೌಕರ್ಯವಾಗಿ ಉಚಿತವಾಗಿ ನೀಡುತ್ತಿದ್ದರು. ಆದರೆ, ಕೇಂದ್ರ ಬಿಜೆಪಿ ಸರ್ಕಾರ ಜಲ ಜೀವನ್ ಮಿಷನ್ ಯೋಜನೆ ಹೆಸರಿನಲ್ಲಿ ಹಳ್ಳಿಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ತೆರೆದು ಆ ಮೂಲಕ ಹಣ ಲೂಟಿ ಮಾಡುತ್ತಿದ್ದಾರೆ. ಅವುಗಳೂ ಕೂಡಾ ಬಹುತೇಕ ಕಡೆ ದುರಸ್ತಿಗೆ ಬಂದಿದ್ದು, ಕಾರ್ಯಾಚರಣೆಯಲ್ಲಿಲ್ಲದೆ ಜನರು ಕುಡಿಯುವ ನೀರಿಗಾಗಿ ಪರಿತಪಿಸುತ್ತಿದ್ದಾರೆ. ಎಲ್ಲೆಡೆ ಬಿಂದಿಗೆ ಹಿಡಿದು ಪ್ರತಿಭಟನೆಗಳನ್ನು ನಡೆಸುತ್ತಿರುವುದು ಪ್ರಧಾನಿಯ ಗಮನಕ್ಕಿಲ್ಲವೇ?.
“ನಮ್ಮ ಸರ್ಕಾರ ಕರ್ನಾಟಕದಲ್ಲಿ ಹಲವು ವಿಮಾನ ನಿಲ್ದಾಣಗಳನ್ನು ನಿರ್ಮಿಸುತ್ತಿದೆ. ಈ ಪೈಕಿ ಒಂದು ವಿಜಯಪುರದಲ್ಲೂ ಸಿದ್ಧವಾಗುತ್ತಿದೆ. ಭಾಗಲ್ಪುರ ರೈಲು ನಿಲ್ದಾಣವನ್ನು ಅಮೃತ್ ನಿಲ್ದಾಣವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಭಾಗಲ್ಪುರ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಯನ್ನು ಸಹ ವಿಸ್ತರಿಸಲಾಗುತ್ತಿದೆ. ಇದು ಬಾದಾಮಿ ಪಟ್ಟದಕಲ್ಲು ಮತ್ತು ಐಹೊಳೆಯಂತಹ ಐತಿಹಾಸಿಕ ಸ್ಥಳಗಳಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ” ಎಂದು ಬಹುದೊಡ್ಡ ಸುಳ್ಳನ್ನು ಮೋದಿ ಹೇಳುತ್ತಿದ್ದಾರೆ.
ಕಳೆದ 8 ವರ್ಷಗಳಿಂದ ನೈಋತ್ಯ ರೈಲ್ವೆಯಲ್ಲಿ ಬಾಗಲಕೋಟೆ ಮತ್ತು ಕುಡಚಿ ನಡುವಣ ರೈಲ್ವೇ ಮಾರ್ಗವೇ ವಿಳಂಬವಾಗಿದೆ. 142 ಕಿಮೀ ಉದ್ದದ ಈ ಮಾರ್ಗದಲ್ಲಿ ಕೇವಲ 46 ಕಿಮೀ ಅಂದರೆ ಕೇವಲ ಶೇ.33ರಷ್ಟು ಮಾತ್ರ ಕಾಮಗಾರಿ ಪೂರ್ಣಗೊಂಡಿದೆ. 2010-11ರಲ್ಲಿ ಈ ಯೋಜನೆಗೆ ₹986 ಕೋಟಿ ವೆಚ್ಚದಲ್ಲಿ ಅನುಮೋದನೆ ನೀಡಲಾಗಿತ್ತು. ಆದರೆ ಈಗ ಇದರ ಒಟ್ಟಾರೆ ವೆಚ್ಚ ₹1649 ಕೋಟಿಗೆ ಏರಿದೆ.
ಆರಂಭದಲ್ಲಿ 2016ಕ್ಕೆ ಈ ಯೋಜನೆ ಪೂರ್ಣಗೊಳ್ಳಬೇಕೆಂಬ ಗಡವು ನಿಗದಿ ಮಾಡಲಾಗಿತ್ತು. ಈಗ ಈ ಯೋಜನೆ 2027ಕ್ಕೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಕರ್ನಾಟಕ ಸರ್ಕಾರ ಈ ಯೋಜನೆಗೆ ಉಚಿತವಾಗಿ ಭೂಮಿ ಹಾಗೂ ಯೋಜನೆಯ ವೆಚ್ಚದಲ್ಲಿ ಶೇ.50ರಷ್ಟು ಅನುದಾನ ನೀಡುತ್ತಿದ್ದರೂ ಕೂಡಾ ಮೋದಿ ಸರ್ಕಾರ ಈ ಯೋಜನೆ ಜಾರಿ ಮಾಡಲು ವಿಫಲವಾಗಿದೆ.
ಎಲ್ಲೆಡೆ ವಿಮಾನ ನಿಲ್ದಾಣಗಳನ್ನು ನಿರ್ಮಿಸುತ್ತಿದ್ದೇವೆಂದು ಹೇಳಿಕೊಳ್ಳುವ ಮೋದಿ ಮಹತ್ವಾಕಾಂಕ್ಷಿ ರೈಲ್ವೆ ಯೋಜನೆ 11 ವರ್ಷಗಳ ವಿಳಂಬ ಎದುರಿಸುತ್ತಿರುವುದೇಕೆ? ಇದೇ ಮೋದಿ ಸರ್ಕಾರದ ಸಮರ್ಥತೆ ಹಾಗೂ ಕರ್ನಾಟಕ ವಿರೋಧಿ ಧೋರಣೆಗೆ ಸಾಕ್ಷಿ.
“ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ದೇಶದ ಸಂಪತ್ತನ್ನು ಮರುಹಂಚಿಕೆ ಮಾಡುತ್ತದೆ. ರೈತರ ಮನೆಗಳು ಮತ್ತು ಭೂಮಿಯ ಸಮೀಕ್ಷೆ ನಡೆಸಿ ನಿಮ್ಮ ಮೇಲೆ ಪಿತ್ರಾರ್ಜಿತ ತೆರಿಗೆ ವಿಧಿಸುವುದಾಗಿ ಕಾಂಗ್ರೆಸ್ ಹೇಳುತ್ತಿದೆ. ಪ್ರತಿ ಕುಟುಂಬದ ಎಕ್ಸ್-ರೇಗಳನ್ನು ಹೊರತೆಗೆಯಲಾಗುವುದು. ಅಂದರೆ, ನಿಮ್ಮ ಎಲ್ಲ ಸಂಪತ್ತನ್ನು, ಇಂದು ನಿಮ್ಮ ಬಳಿ ಏನಿದೆಯೋ ಆ ಸಂಪತ್ತು ನೀವು ಸತ್ತಾಗ ನಿಮ್ಮ ಮಕ್ಕಳಿಗೆ ಬರುತ್ತದೆ. ಆದರೆ, ನೀವು ಸತ್ತ ನಂತರ ನಿಮ್ಮ ಸಂಪತ್ತು ಅರ್ಧ ನಿಮ್ಮ ಮಕ್ಕಳಿಗೆ ಸಿಕ್ಕಿದರೆ, ಇನ್ನರ್ಧ ಸಂಪತ್ತು ಸರ್ಕಾರದ ಪಾಲಾಗುತ್ತದೆ ಎಂಬುದು ಕಾಂಗ್ರೆಸ್ ಪ್ರಣಾಳಿಕೆಯಲ್ಲಿದೆ” ಎಂದು ಜನರಿಗೆ ಹಸಿ ಸುಳ್ಳುಗಳನ್ನು ಹೇಳುವ ಮೂಲಕ ಅವರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ.
ಕಾಂಗ್ರೆಸ್ ಪ್ರಣಾಳಿಕೆಯಲ್ಲಾಗಲಿ, ಕಾಂಗ್ರೆಸ್ ಭಾಷಣದಲ್ಲಾಗಲೀ ಆಸ್ತಿ ಹಂಚಿಕೆ ಹಾಗೂ ಪಿತ್ರಾರ್ಜಿತ ಆಸ್ತಿಗೆ ತೆರಿಗೆ ಕುರಿತು ಎಲ್ಲೂ ಉಲ್ಲೇಖವಾಗಿಲ್ಲ. ಈಗ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿಲ್ಲ. ಕಾಯ್ದೆ-ಕಾನೂನು ರೂಪಿಸುವ ಹುದ್ದೆಯಲ್ಲಿ ಸ್ಯಾಮ್ ಪಿತ್ರೋಡ ಕೂಡ ಇಲ್ಲ. ಅಷ್ಟೇ ಅಲ್ಲ, ನಮ್ಮ ದೇಶದಲ್ಲಿ ಈ ಹಿಂದೆ ಜಾರಿಯಲ್ಲಿದ್ದ ಪಿತ್ರಾರ್ಜಿತ ತೆರಿಗೆ ಪದ್ಧತಿಯನ್ನು 1985ರಲ್ಲಿ ಅಧಿಕಾರದಲ್ಲಿದ್ದ ರಾಜೀವ್ ಗಾಂಧಿಯ ಕಾಂಗ್ರೆಸ್ ಸರ್ಕಾರ ರದ್ದುಗೊಳಿಸಿದ್ದು, ಮೋದಿಗೆ ಗೊತ್ತಿಲ್ಲದ ವಿಚಾರವಲ್ಲ. ಆದರೂ ವೋಟಿಗಾಗಿ, ಅಧಿಕಾರಕ್ಕಾಗಿ ಮೋದಿ ಸುಳ್ಳು ಹೇಳುತ್ತಲೇ ಇದ್ದಾರೆ. ಭಕ್ತರು ನಂಬುತ್ತಲೇ ಇದ್ದಾರೆ.
ʼಸಂಪತ್ತಿನ ಸಮಾನ ಹಂಚಿಕೆʼ ಎನ್ನುವುದು ಒಂದು ಉದಾತ್ತ ಚಿಂತನೆಯಾಗಿದ್ದು, ಸಮಾಜಶಾಸ್ತ್ರಜ್ಞ ಕಾರ್ಲ್ ಮಾರ್ಕ್ಸ್ ಕಾಲದಿಂದಲೂ ಬಹುದೊಡ್ಡ ಚಿಂತನೆಯಾಗಿದೆ. ಅಂತೆಯೇ ನಮ್ಮ ಸಂವಿಧಾನದ ಆಶಯವೂ ಆಗಿದೆ. ವಾಸ್ತವದಲ್ಲಿ ನೋಡಿದರೆ, ದೇಶದ ಸಂಪತ್ತನ್ನು, ಬಡವರ ಸಂಪತ್ತನ್ನು ಕಿತ್ತು ದೇಶದ ನಂಬರ್ ಒನ್ ಶ್ರೀಮಂತರಿಗೆ ಕೊಟ್ಟವರು, ಬಡವರಿಗೆ ಬಹು ದೊಡ್ಡ ದ್ರೋಹ ಎಸಗಿದವರು ಇದೇ ನಮ್ಮ ಪ್ರಧಾನಿ ಮೋದಿಯವರೇ.
ಕರ್ನಾಟಕಕ್ಕೆ ಯುಪಿಎ ಸರ್ಕಾರ ಕೊಟ್ಟಿದ್ದು ಕಡಿಮೆ, ಎನ್ ಡಿ ಎ ಸರ್ಕಾರ ಎಷ್ಟೊಂದು ಕೊಟ್ಟಿದೆ ಎಂದು ಲೆಕ್ಕ ಹೇಳುತ್ತೀರಲ್ಲಾ? ನಮ್ಮ ಲೆಕ್ಕವನ್ನೂ ಕೇಳಿ. 2018-19ರಲ್ಲಿ ಕೇಂದ್ರ ಬಜೆಟ್ ಗಾತ್ರ ರೂ. 24,42,213 ಕೋಟಿ, ಕರ್ನಾಟಕಕ್ಕೆ ನೀಡಿದ್ದ ತೆರಿಗೆ ಪಾಲು ರೂ.35,895 ಕೋಟಿ ಮತ್ತು ಕೇಂದ್ರ ಪುರಸ್ಕೃತ ಯೋಜನೆಯ ಪಾಲು ರೂ. 16,082 ಕೋಟಿ. ಹೀಗೆ ಒಟ್ಟು ರೂ.46,288 ಕೋಟಿ ರಾಜ್ಯಕ್ಕೆ ಬಂದಿತ್ತು.
2023-24ನೇ ಸಾಲಿನ ಕೇಂದ್ರ ಬಜೆಟ್ ಗಾತ್ರ ರೂ.45,03,097 ಕೋಟಿ. ಆದರೆ ನಿಮ್ಮ ಸರ್ಕಾರ ಕರ್ನಾಟಕಕ್ಕೆ ತೆರಿಗೆ ಹಂಚಿಕೆ, ಕೇಂದ್ರ ಪುರಸ್ಕೃತ ಯೋಜನೆಯ ಪಾಲು ಸೇರಿ ನೀಡಿದ್ದು ಕೇವಲ ರೂ.55,529 ಕೋಟಿ. ಐದು ವರ್ಷಗಳಲ್ಲಿ ಬಜೆಟ್ ಗಾತ್ರ ಹೆಚ್ಚು ಕಡಿಮೆ ದುಪ್ಪಟ್ಟಾದರೂ ಕರ್ನಾಟಕಕ್ಕೆ ನೀಡುವ ಹಣವೂ ದುಪ್ಪಟ್ಟಾಗಬೇಕಿತ್ತು ಅಲ್ಲವೇ? ಅಂದರೆ ಕನಿಷ್ಠ ಒಂದು ಲಕ್ಷ ಕೋಟಿಯನ್ನಾದರೂ ನೀವು ನೀಡಬೇಕಾಗಿತ್ತಲ್ಲವೇ?
ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ಹತ್ತು ವರ್ಷಗಳ ಅವಧಿಯಲ್ಲಿ ಒಟ್ಟು 95,21,493 ಲಕ್ಷ ಕೋಟಿ ರೂಪಾಯಿಗಳ ಬಜೆಟ್ ರೂಪಿಸಿ ಖರ್ಚು ಮಾಡಿತ್ತು. ನಿಮ್ಮ ನೇತೃತ್ವದ ಎನ್ ಡಿಎ ಸರ್ಕಾರ ಹತ್ತು ವರ್ಷಗಳ ಅವಧಿಯಲ್ಲಿ ಒಟ್ಟು 282 ಲಕ್ಷ ಕೋಟಿ ರೂಪಾಯಿ ಗಾತ್ರದ ಬಜೆಟ್ ಮಾಡಿ ಖರ್ಚು ಮಾಡಿತ್ತು. ಅಂದರೆ ಬಜೆಟ್ ಗಾತ್ರ ಮೂರು ಪಟ್ಟು ಹೆಚ್ಚು. ಇದು ಸುಳ್ಳೇ? ಬಜೆಟ್ ಗಾತ್ರ ಮೂರು ಪಟ್ಟು ಹೆಚ್ಚಾದಾಗ ಸಾಧನೆಯೂ ಮೂರು ಪಟ್ಟು ಹೆಚ್ಚಾಗಬೇಕಿತ್ತಲ್ಲವೇ? ಹಾಗಾದರೆ ಮೋದಿ ಸಾಧನೆ ಎಲ್ಲಿದೆ?
2014ರ ಯುಪಿಎ ಸರ್ಕಾರದ ಕಾಲದಲ್ಲಿ ದೇಶದ ಸಾಲ 54 ಲಕ್ಷ ಕೋಟಿ ರೂಪಾಯಿಗಳಾಗಿತ್ತು, ಈಗ ನಿಮ್ಮದೇ ಸರ್ಕಾರ ಹೇಳುವ ಪ್ರಕಾರ ಸಾಲದ ಮೊತ್ತ ಕಳೆದ ಮಾರ್ಚ್ ವೇಳೆಗೆ 172.37 ಲಕ್ಷ ಕೋಟಿ ರೂಪಾಯಿಗಳಾಗಿರುವುದು ಸುಳ್ಳೇ? ಬಜೆಟ್ ಗಾತ್ರ ಮೂರು ಪಟ್ಟು ಹೆಚ್ಚಳ ಸಾಲ ಕೂಡಾ ಮೂರು ಪಟ್ಟು ಹೆಚ್ಚಳವಾಗಿದೆ.
“ಕಾಂಗ್ರೆಸ್ ಪಕ್ಷವು ಕರ್ನಾಟಕವನ್ನು ಲೂಟಿ ಮಾಡುವ ಎಟಿಎಂ ಮಾಡಿಕೊಂಡಿದ್ದು, ಕಡಿಮೆ ಸಮಯದಲ್ಲಿ ಸರ್ಕಾರದ ಖಜಾನೆ ಖಾಲಿ ಮಾಡಿದ್ದಾರೆ. ಮುಂದೊಂದು ದಿನ ಸರ್ಕಾರಕ್ಕೆ ತನ್ನ ನೌಕರರಿಗೆ ಸಂಬಳ ಕೊಡಲೂ ಹಣವಿರುವುದಿಲ್ಲ, ಜತೆಗೆ ನಿಮ್ಮ ಮಕ್ಕಳನ್ನೂ ಹಸಿವಿನಿಂದ ನರಳುವಂತೆ ಮಾಡುವುದರಲ್ಲಿ ಸಂಶಯವಿಲ್ಲ. ಕಾಂಗ್ರೆಸ್ ಮೊದಲೇ ಪ್ಲ್ಯಾನ್ ಮಾಡಿ ವಸೂಲಿ ಮಾಡಿ ಸರ್ಕಾರದ ಖಜಾನೆಯಿಂದ ತನ್ನ ತಿಜೋರಿಯನ್ನು ತುಂಬಿಕೊಳ್ಳುವ ಪ್ರಯತ್ನ ಮಾಡುತ್ತಿದೆ” ಎಂದು ಮೋದಿ ಮತ್ತಷ್ಟು ಸುಳ್ಳುಗಳನ್ನು ಹೇಳಿದ್ದಾರೆ.
ಭದ್ರಾ ಮೇಲ್ದಂಡೆ ಯೋಜನೆಗಾಗಿ ಚಿತ್ರದುರ್ಗ, ಬಳ್ಳಾರಿ, ವಿಜಯನಗರ, ತುಮಕೂರು, ದಾವಣಗೆರೆ, ಚಿಕ್ಕಮಗಳೂರು ಜಿಲ್ಲೆಗಳ ರೈತರು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಇದನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಿ 5300 ಕೋಟಿ ರೂಪಾಯಿ ಕೊಡುವ ಭರವಸೆಯನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2023-24ರ ಬಜೆಟ್ ನಲ್ಲಿಯೇ ಘೋಷಿಸಿದ್ದರು. ಆದರೆ, ಬಿಜೆಪಿ ಸರ್ಕಾರ ರೈತರು, ಬಡವರು, ಕಾರ್ಮಿಕರ ಪರ ಇರುವುದಾದರೆ 2023-24ರ ಬಜೆಟ್ ಹಣ ಏನಾಯಿತೆಂಬ ಶಂಕೆ ಬಂದೇ ಬರುತ್ತದೆ.
ಹುಬ್ಬಳ್ಳಿ ಧಾರವಾಡದ ಅವಳಿ ನಗರವೂ ಸೇರಿದಂತೆ ಕಿತ್ತೂರು ಕರ್ನಾಟಕದ ಜನರ ಭಾಗ್ಯದ ಬಾಗಿಲು ತೆರೆಯಬಲ್ಲ ಮಹದಾಯಿ ಯೋಜನೆಗೆ ಸುಪ್ರೀಂ ಕೋರ್ಟ್ ಹಸಿರು ನಿಶಾನೆ ತೋರಿಸಿ ವರ್ಷಗಳೇ ಆಗಿವೆ. ಆದರೆ ನಿಮ್ಮದೇ ನೇತೃತ್ವದ ಕೇಂದ್ರ ಸರ್ಕಾರದ ಪರಿಸರ ಸಚಿವಾಲಯ ಅನುಮತಿ ನೀಡದೆ ಸತಾಯಿಸುತ್ತಿರುವುದು ಸುಳ್ಳೇ? ಕೇಂದ್ರ ಸರ್ಕಾರದ ಸಹಯೋಗದ 61 ಯೋಜನೆಗಳಿಗೆ ಸಂಬಂಧಿಸಿದಂತೆ 23 ಇಲಾಖೆಗಳಿಗೆ ನಯಾಪೈಸೆ ಅನುದಾನ ಬಿಡುಗಡೆಯಾಗಿಲ್ಲ. ಕೃಷ್ಣಾ,ಕಾವೇರಿ, ಮೇಕೆದಾಟು ಯೋಜನೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗುತ್ತಿದೆ. ಇವುಗಳೆಲ್ಲವೂ ಅಭಿವೃದ್ಧಿಯ ಹೆಸರಿನಲ್ಲಿ ಬಜೆಟ್ ಘೋಷಣೆ ಮಾಡಿ ಅನುದಾನ ಬಿಡುಗಡೆ ಮಾಡದಿದ್ದರೆ, ಇದು ಕೂಡಾ ವಸೂಲಿ ಗ್ಯಾಂಗ್ ಅಲ್ಲವೇ ಮೋದಿಯವರೇ?
ಇದನ್ನೂ ಓದಿದ್ದೀರಾ? ಮೋದಿ ಸುಳ್ಳುಗಳು: ಭಾಗ 2 | ಬೇಟಿ ಬಚಾವೋ ಬೇಟಿ ಪಡಾವೋ ಎನ್ನುವ ಮೋದಿ ಮಹಿಳೆಯರ ರಕ್ಷಣೆಗೆ ನಿಂತಿದ್ದಾರೆಯೇ?
2024ರ ಚುನಾವಣೆ ಭಾರತದ ಭವಿಷ್ಯವನ್ನು ನಿರ್ಧರಿಸಲಿದೆ. ಈ ಚುನಾವಣೆಯು ಸ್ವಾವಲಂಬಿ ಭಾರತದ ಸಾಧನೆಗಾಗಿ ನಡೆಯುವ ಚುನಾವಣೆಯಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿನ ಸರ್ವಾಧಿಕಾರವನ್ನು ಕಿತ್ತೊಗೆಯಲು ದೇಶದ ಮತದಾರರು ಯಾವ ನಿರ್ಧಾರ ತಳೆಯುತ್ತಾರೆ ಕಾದು ನೋಡಬೇಕು.